ಬೆಂಗಳೂರಲ್ಲಿ ಬಡವರಿಗೆ ಮನೆ : ಸಿಎಂ ಗುಡ್ ನ್ಯೂಸ್

By Kannadaprabha NewsFirst Published Mar 9, 2020, 9:10 AM IST
Highlights

ಬೆಂಗಳೂರಿನ ಬಡಜನರಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಗುಡ್ ನ್ಯೂಸ್ ನೀಡಿದ್ದಾರೆ. ಇಲ್ಲಿ ಒತ್ತುವರಿಯಾದ ಜಾಗಗಳನ್ನು ತೆರವು ಮಾಡಿ ಬಡವರಿಗೆ ಮನೆ ನಿರ್ಮಾಣ ಮಾಡಲಾಗುವುದು ಎಂದು ಹೇಳಿದ್ದಾರೆ. 

ಬೆಂಗಳೂರು [ಮಾ.09]:  ನಗರದ ವಿವಿಧೆಡೆ ಒತ್ತುವರಿಯಾಗಿರುವ ಜಮೀನುಗಳನ್ನು ತೆರವುಗೊಳಿಸಿ ಬಡವರಿಗೆ ಮನೆ ನಿರ್ಮಿಸಿಕೊಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಭರವಸೆ ನೀಡಿದರು.

ರಾಜೀವಗಾಂಧಿ ವಸತಿ ನಿಗಮ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಲಕ್ಷ ಬಹುಮಹಡಿ ವಸತಿ ಯೋಜನೆಯಡಿ ನಿರ್ಮಿಸಲಿರುವ 932 ಮನೆಗಳ ವಸತಿ ಸಮುಚ್ಚಯ ಕಾಮಗಾರಿಗೆ ಭಾನುವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಸಾಕಷ್ಟುಸರ್ಕಾರಿ ಜಮೀನು ಒತ್ತುವರಿ ಮಾಡಲಾಗಿದ್ದು, ಈ ಜಮೀನನ್ನು ಸರ್ಕಾರದ ವಶಕ್ಕೆ ಪಡೆದು ಬಡವರಿಗೆ ಮನೆ ಹಾಗೂ ಸಾರ್ವಜನಿಕ ಉದ್ದೇಶಕ್ಕೆ ಬಳಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.

ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ 2021ರ ವೇಳೆಗೆ ದೇಶದ ಪ್ರತಿಯೊಬ್ಬರಿಗೂ ಮನೆ ನಿರ್ಮಿಸಿಕೊಡಬೇಕು ಎಂಬ ನಿಶ್ಚಯ ಮಾಡಿದ್ದಾರೆ. ಮುಂದಿನ 4-5 ವರ್ಷಗಳಲ್ಲಿ ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ರಾಜ್ಯ ಸರ್ಕಾರ ಎಲ್ಲ ಕುಟುಂಬಗಳಿಗೂ ಮನೆ ನಿರ್ಮಿಸಲಿದೆ. ಇದೀಗ ನಿರ್ಮಿಸುತ್ತಿರುವ ಒಂದು ಲಕ್ಷ ಮನೆ ನಿರ್ಮಾಣಕ್ಕೂ ಕೇಂದ್ರದ ಪಾಲಿದೆ ಎಂದು ಹೇಳಿದರು.

ಕಂದಾಯ ಸಚಿವ ಆರ್‌. ಅಶೋಕ್‌ ಮಾತನಾಡಿ, ಬಡವರಿಗೆ ಮನೆ ನಿರ್ಮಿಸಿಕೊಡಲು ಅವಶ್ಯವಿರುವ ಜಾಗವನ್ನು ಕಂದಾಯ ಇಲಾಖೆಯಿಂದ ನೀಡಲಾಗುತ್ತದೆ. ಸದ್ಯ ಹತ್ತು ಎಕರೆ ಜಾಗವನ್ನು ಮೀಸಲಿಡಲಾಗುತ್ತಿದೆ. ಮೂರೂವರೆ ಸಾವಿರ ಅರ್ಜಿಗಳು ಬಂದಿವೆ. ಮನೆಗಳನ್ನು ಮಾತ್ರವಲ್ಲದೆ, ಸ್ಮಶಾನ, ಶಾಲೆ, ಆಸ್ಪತ್ರೆಗಳನ್ನು ಸಹ ನಿರ್ಮಿಸುತ್ತೇವೆ. ದಾಸರಹಳ್ಳಿ ನನ್ನ ತಾಯಿಯ ಹುಟ್ಟೂರಾಗಿರುವುದರಿಂದ ವಿಶೇಷ ಕಾಳಜಿ ವಹಿಸಿ ಯೋಜನೆ ಕೈಗೊಳ್ಳಲಾಗುತ್ತದೆ ಎಂದರು.

ವಸತಿ ಸಚಿವ ವಿ.ಸೋಮಣ್ಣ, ಶಾಸಕ ಆರ್‌. ಮಂಜುನಾಥ್‌, ರಾಜೀವ್‌ ಗಾಂಧಿ ವಸತಿ ನಿಗಮ ವ್ಯವಸ್ಥಾಪಕ ನಿರ್ದೇಶಕ ಡಾ. ರಾಮ ಪ್ರಸಾದ್‌ ಮನೋಹರ್‌, ಕಾರ್ಯದರ್ಶಿ ಮನೋಜ್‌ ಕುಮಾರ್‌ ಮೀನಾ, ಬೆಂಗಳೂರು ನಗರ ಜಿಪಂ ಅಧ್ಯಕ್ಷ ಜಿ. ಮರಿಸ್ವಾಮಿ ಉಪಸ್ಥಿತರಿದ್ದರು.

ಮನೆಗಳ ನಿರ್ಮಾಣ ಕಾರ್ಯ ಹೇಗೆ?

ನೆಲ ಮಹಡಿ ಒಳಗೊಂಡ ಮೂರು ಅಂತಸ್ತಿನ ಬಹು ಮಹಡಿ ಕಟ್ಟಡಗಳಲ್ಲಿ ಆಸ್ಪತ್ರೆ, ಆಟದ ಮೈದಾನ, ಕೊಳಚೆ ನೀರು ಸಂಸ್ಕರಣ ಘಟಕ ಸೇರಿ ಅಗತ್ಯ ನಾಗರಿಕ ಸೌಲಭ್ಯಗಳ ಸಮುಚ್ಚಯಗಳಲ್ಲಿ ಇರಲಿವೆ. ಗಾಣಿಗರಹಳ್ಳಿ ಸರ್ವೆ ನಂ.74ರ 5 ಎಕರೆ ಜಮೀನಿನಲ್ಲಿ 1 ಬಿಎಚ್‌ಕೆ 796 ಹಾಗೂ 2 ಬಿಎಚ್‌ಕೆ 136 ಮನೆಗಳು ಸೇರಿ ಒಟ್ಟಾರೆ 932 ಮನೆಗಳನ್ನು ನಿರ್ಮಿಸಲಾಗುತ್ತದೆ.

BSYದು ದರಿದ್ರ ಸರ್ಕಾರ ಎಂದ ಸಿದ್ದರಾಮಯ್ಯಗೆ ಜಾರಕಿಹೊಳಿ ಟಾಂಗ್!..

1 ಬಿಎಚ್‌ಕೆಯ ಪ್ರತಿ ಮನೆಯನ್ನು 30 ಚ.ಮೀ ಹಾಗೂ 2 ಬಿಎಚ್‌ಕೆ 45 ಚ.ಮೀ. ವಿಸ್ತೀರ್ಣದಲ್ಲಿ ಮಲಗುವ ಕೋಣೆ, ಅಡುಗೆ ಮನೆ ಸೇರಿದಂತೆ ಪ್ರತ್ಯೇಕ ಸ್ಥಾನದ ಮನೆ, ಶೌಚಾಲಯ ಇರಲಿವೆ. ಕಾಂಕ್ರೀಟ್‌ ಗೋಡೆಗಳು, ನೆಲ ಹಾಸಿಗೆಗೆ ವೆಟ್ರಿಫೈಡ್‌ ಟೈಲ್ಸ್‌, ಗ್ರಾನೈಟ್‌ ಬಳಸಿ ಮನೆ ನಿರ್ಮಿಸಲಾಗುತ್ತದೆ. ಮಳೆ ನೀರು ಕೊಯ್ಲು, ಸೌರ ವಿದ್ಯುತ್‌ ಬೀದಿ ದೀಪಗಳನ್ನು ಅಳವಡಿಸಲಾಗುತ್ತದೆ.

click me!