ಗಂಗಾವತಿ: ಹಸುಗೂಸು ಬಿಟ್ಟು ತಾಯಿ ಪರಾರಿ

By Kannadaprabha News  |  First Published Sep 19, 2021, 9:04 AM IST

*  ಕೊಪ್ಪಳ ಜಿಲ್ಲೆಯ ಗಮಗಾವತಿ ನಗರದಲ್ಲಿ ನಡೆದ ಘಟನೆ
*  ತಾಯಿಯ ಹುಡುಕಾಟಕ್ಕೆ ಖಾಸಗಿ ಆಸ್ಪತ್ರೆ ಸಿಬ್ಬಂದಿಗಳ ಹರಸಾಹಸ
*  ಜಿಲ್ಲಾಸ್ಪತ್ರೆಗೆ ಮಗು ದಾಖಲು


ಗಂಗಾವತಿ(ಸೆ.19): ಆಗ ತಾನೇ ಹುಟ್ಟಿದ ಗಂಡು ಮಗುವನ್ನು ಬಿಟ್ಟು ತಾಯಿ ಆಸ್ಪತ್ರೆಯಿಂದ ಪರಾರಿಯಾದ ಘಟನೆ ಶುಕ್ರವಾರ ಸಂಜೆ ನಡೆದಿದ್ದು, ಶನಿವಾರ ಬೆಳಕಿಗೆ ಬಂದಿದೆ.

ಕಾರಟಗಿ ತಾಲೂಕಿನ ಮೈಲಾಪುರದ ನೀಲಮ್ಮ ಆಟೋದಲ್ಲಿ ಗಂಗಾವತಿಯ ಖಾಸಗಿ ಆಸ್ಪತ್ರೆಗೆ ಶುಕ್ರವಾರ ಸಂಜೆ ಬರುವಾಗ ಹೆರಿಗೆ ನೋವು ಕಾಣಿಸಿಕೊಂಡು ಆಟೋದಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾರೆ. ಬಳಿಕ ಇವರೊಂದಿಗೆ ಇದ್ದ ಇನ್ನೋರ್ವ ಮಹಿಳೆ ಜುಲೈ ನಗರದಲ್ಲಿರುವ ಡಾ. ಅಮರ್‌ ಮಕ್ಕಳ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ವೈದ್ಯರು 7 ತಿಂಗಳಲ್ಲಿ ಮಗು ಜನಿಸಿದ್ದು 1800 ಗ್ರಾಂ ಇದೆ. ತೂಕ ಕಡಿಮೆ ಇರುವುದರಿಂದ ಐಸಿಯುನಲ್ಲಿ ಚಿಕಿತ್ಸೆ ನೀಡಬೇಕು ಎಂದು ಹೇಳಿದ್ದಾರೆ. ವೈದ್ಯರು ಮಗುವನ್ನು ಐಸಿಯುಗೆ ಕರೆದುಕೊಂಡು ಹೋಗುತ್ತಿದ್ದಂತೆ ನೀಲಮ್ಮ ಆಸ್ಪತ್ರೆಯಿಂದ ಪರಾರಿಯಾದರೆ, ಇವಳೊಂದಿಗೆ ಬಂದಿದ್ದ ಇನ್ನೋರ್ವ ಮಹಿಳೆ ಸಹ ಔಷಧಿ ತರುವ ನೆಪದಲ್ಲಿ ಅಲ್ಲಿಂದ ಕಾಲ್ಕತ್ತಿದ್ದಾರೆ.

Tap to resize

Latest Videos

ತಾಯಿಯ ಹುಡುಕಾಟಕ್ಕೆ ಹರಸಾಹಸ:

ಐಸಿಯುನಲ್ಲಿ ಮಗುವಿಗೆ ಚಿಕಿತ್ಸೆ ನೀಡಿ ಹೊರಬಂದ ವೈದ್ಯರು, ಆಸ್ಪತ್ರೆಯ ಸಿಬ್ಬಂದಿ ನೀಲಮ್ಮಳನ್ನು ಹುಡುಕಾಡಿದ್ದಾರೆ. ಅಲ್ಲಿ ಕಾಣಿಸದೆ ಇರುವುದರಿಂದ ನಗರದ ಎಲ್ಲ ಆಸ್ಪತ್ರೆಗಳಲ್ಲಿ ಪರಿಶೀಲಿಸಿದ್ದಾರೆ. ಆಗ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಹಿತಿ ಲಭ್ಯವಾಗುತ್ತಿದ್ದಂತೆ ಡಾ. ಅಮರ್‌ ಮಕ್ಕಳ ಆಸ್ಪತ್ರೆಯ ವೈದ್ಯರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ತಪ್ಪಿಸಿಕೊಳ್ಳುವ ಯತ್ನ:

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ನೀಲಮ್ಮನನ್ನು ಮಗುವಿರುವ ಆಸ್ಪತ್ರೆಗೆ ಕರೆತಂದು ವಿಚಾರಿಸಿದ್ದಾರೆ. ಈ ವೇಳೆ ನನ್ನದು ಆದಾಪುರ, ಬೈರಾಪುರ, ಮೈಲಾಪುರ ಎಂದು ಹೇಳಿದ್ದಾಳೆ. ನನಗೆ ತಂದೆ-ತಾಯಿ ಇಲ್ಲ. ನಾನು ಗದ್ದೆ ಕೆಲಸಕ್ಕೆ ಹೋಗುವಾಗ ಶರಣಪ್ಪ ಬೈರಾಪುರ ಪರಿಚಯವಾಗಿದ್ದು ಅವರನ್ನು ಪ್ರೀತಿಸಿ ಮದುವೆಯಾಗಿದ್ದೆ. ಅವರು ನನ್ನನ್ನು ಬಿಟ್ಟು ಹೋಗಿ ಎರಡು ತಿಂಗಳು ಕಳೆದಿವೆ. ಈ ಮಗುವನ್ನು ಆರೈಕೆ ಮಾಡಲು ನನ್ನಿಂದ ಆಗದು. ನನಗೆ ಮಗು ಬೇಡವೇ ಬೇಡ. ನನ್ನ ಬಿಟ್ಟು ಬಿಡಿ ಎಂದು ಅಧಿಕಾರಿಗಳಿಗೆ ಕೈ ಮುಗಿದಿದ್ದಾರೆ.

ಪೊದೆಯಲ್ಲಿ ನವಜಾತ ಹೆಣ್ಣು ಶಿಶು ಶವ ಪತ್ತೆ : ಹುಟ್ಟಿದ ಕೂಡಲೆ ಎಸೆದಿರುವ ದುರುಳರು

ಜಿಲ್ಲಾಸ್ಪತ್ರೆಗೆ ಮಗು ದಾಖಲು:

ಮಗು ಅವಧಿ ಪೂರ್ವದಲ್ಲಿಯೇ ಜನಿಸಿದ್ದರಿಂದ ಹೆಚ್ಚಿನ ಚಿಕಿತ್ಸೆ ಅವಶ್ಯವೆಂದು ವೈದ್ಯರು ತಿಳಿಸಿದ್ದರಿಂದ ತಾಯಿ ಮತ್ತು ಮಗುವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹೆಚ್ಚಿನ ಚಿಕಿತ್ಸೆಗೆ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು, ತಾಯಿಯ ವಿಚಾರಣೆ ಬಳಿಕ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಇಲಾಖೆ ತಿಳಿಸಿದೆ.

ಗಂಗಾವತಿಯ ಡಾ. ಅಮರ್‌ ಮಕ್ಕಳ ಆಸ್ಪತ್ರೆಯಲ್ಲಿ ಮಗು ಬಿಟ್ಟು ಹೋದ ತಾಯಿಯ ಕರೆತಂದು ಮಾಹಿತಿ ಕೇಳಿದರೂ ಸರಿಯಾಗಿ ಉತ್ತರಿಸುತ್ತಿಲ್ಲ. ಮಗು ಅವಧಿ ಪೂರ್ವದಲ್ಲಿಯೇ ಜನಸಿದ್ದರಿಂದ ಆರೋಗ್ಯ ಮೇಲೆ ನಿಗಾವಹಿಸಲಾಗಿದೆ. ತೂಕ ಕಡಿಮೆ ಇರುವುದರಿಂದ ಹೆಚ್ಚಿನ ಚಿಕಿತ್ಸೆಗೆ ವೈದ್ಯರ ಸಲಹೆ ಮತ್ತು ಪೊಲೀಸ್‌ ಇಲಾಖೆ ಮಾರ್ಗದರ್ಶನದಲ್ಲಿ ಕೊಪ್ಪಳ ಜಿಲ್ಲಾಸ್ಪತ್ರೆಗೆ ಕಳಿಸಿಕೊಡಲಾಗಿದೆ ಎಂದು ಗಂಗಾವತಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಗಂಗಪ್ಪ ತಿಳಿಸಿದ್ದಾರೆ.  
 

click me!