2 ಲಕ್ಷ ಲಂಚ ಸಮೇತ ಸಿಕ್ಕಿಬಿದ್ದ ಇನ್ಸ್‌ಪೆಕ್ಟರ್‌

By Kannadaprabha NewsFirst Published Sep 19, 2021, 8:08 AM IST
Highlights

*  ಜಮೀನು ಡೀಲ್‌ ಕೇಸಲ್ಲಿ 10 ಲಕ್ಷಕ್ಕೆ ಬೇಡಿಕೆ
*  8 ಲಕ್ಷ ಪಡೆದಿದ್ದರೂ ಉಳಿಕೆ ಹಣಕ್ಕೆ ಬೇಡಿಕೆ
*  ಬೇಸತ್ತ ಜಮೀನು ಮಾಲೀಕನಿಂದ ಎಸಿಬಿಗೆ ದೂರು
 

ಬೆಂಗಳೂರು(ಸೆ.19):  ಜಮೀನು ಅತಿಕ್ರಮ ಪ್ರವೇಶ ಪ್ರಕರಣ ಸಂಬಂಧ ಭೂ ಮಾಲೀಕರೊಬ್ಬರಿಂದ .10 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು 8 ಲಕ್ಷ ಸ್ವೀಕರಿಸಿದ ಆರೋಪದ ಮೇರೆಗೆ ಚಿಕ್ಕಜಾಲ ಠಾಣೆ ಇನ್ಸ್‌ಪೆಕ್ಟರ್‌ ಎಸ್‌.ಆರ್‌.ರಾಘವೇಂದ್ರ ಠಾಣೆಯಲ್ಲೇ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಬಲೆಗೆ ಶನಿವಾರ ಬಿದ್ದಿದ್ದಾರೆ.

ಚಿಕ್ಕಜಾಲ ಸಮೀಪ ವ್ಯಕ್ತಿಯೊಬ್ಬರಿಗೆ ಸೇರಿದ 5 ಎಕರೆ ಭೂಮಿಯಲ್ಲಿ ಕೆಲವರು ಅಕ್ರಮವಾಗಿ ಪ್ರವೇಶಿಸಿ ಫಲಕಗಳನ್ನು ನೆಟ್ಟಿದ್ದರು. ಈ ಫಲಕಗಳನ್ನು ತೆರವುಗೊಳಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಚಿಕ್ಕಜಾಲ ಠಾಣೆಯಲ್ಲಿ ಸದರಿ ಜಮೀನು ಮಾಲೀಕರು ದೂರು ನೀಡಿದ್ದರು. ಈ ದೂರು ಸ್ವೀಕರಿಸಿದ ಇನ್ಸ್‌ಪೆಕ್ಟರ್‌ ರಾಘವೇಂದ್ರ, ನೀವು .10 ಲಕ್ಷ ನೀಡಿದರೆ ಜಮೀನಿನಲ್ಲಿರುವ ಫಲಕಗಳನ್ನು ತೆರವುಗೊಳಿಸುವುದಾಗಿ ಬೇಡಿಕೆ ಇಟ್ಟಿದ್ದರು. ಇದಕ್ಕೆ ಸಮ್ಮತಿಸಿ .8 ಲಕ್ಷ ಅನ್ನು ಇನ್ಸ್‌ಪೆಕ್ಟರ್‌ಗೆ ಭೂ ಮಾಲೀಕರು ಕೊಟ್ಟಿದ್ದರು.

ಇನ್ನುಳಿದ .2 ಲಕ್ಷ ಕೊಡುವಂತೆ ಭೂ ಮಾಲೀಕರಿಗೆ ಇನ್ಸ್‌ಪೆಕ್ಟರ್‌ ಒತ್ತಾಯಿಸಿದ್ದರು. ಇದರಿಂದಾಗಿ ಸದರಿ ವ್ಯಕ್ತಿ ಎಸಿಬಿಗೆ ದೂರು ಕೊಟ್ಟಿದ್ದರು. ಅಂತೆಯೆ ಠಾಣೆಯಲ್ಲಿ ಶನಿವಾರ ಜಮೀನು ಮಾಲೀಕರಿಂದ .2 ಲಕ್ಷ ಹಣ ಸ್ವೀಕರಿಸುವಾಗ ಇನ್ಸ್‌ಪೆಕ್ಟರ್‌ ರಾಘವೇಂದ್ರ ಹಾಗೂ ಅವರ ದಲ್ಲಾಳಿ ರಾಘವೇಂದ್ರನನ್ನು ಟ್ರ್ಯಾಪ್‌ ಮಾಡಿ ಎಸಿಬಿ ತಂಡವು ಬಂdiದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಫೋನ್ ಪೇ ಮೂಲಕ ಲಂಚ : ಪಿಎಸ್‌ಐ ಅಮಾನತು

ರಾಜಕೀಯಕ್ಕೆ ಇಳಿಯಲು ಸಿದ್ಧತೆ:

ತುಮಕೂರು ಜಿಲ್ಲೆ ಪಾವಗಡ ತಾಲೂಕಿನಲ್ಲಿ ಸಾಮಾಜಿಕ ಚಟುವಟಿಕೆ ನೆಪದಲ್ಲಿ ಭವಿಷ್ಯ ರಾಜಕೀಯ ಜೀವನ ಕಟ್ಟಿಕೊಳ್ಳಲು ಇನ್ಸ್‌ಪೆಕ್ಟರ್‌ ರಾಘವೇಂದ್ರ ತಯಾರಿ ನಡೆಸಿದ್ದಾರೆ. ಇದಕ್ಕಾಗಿ ‘ಪಾವಗಡ ತಾಲೂಕು ಸಮಗ್ರ ಸೇವಾಭಿವೃದ್ಧಿ ಟ್ರಸ್ಟ್‌’ ಸ್ಥಾಪಿಸಿರುವ ರಾಘವೇಂದ್ರ, ಕೊರೋನಾ ಕಾಲದಲ್ಲಿ ಹಳ್ಳಿಗಳಲ್ಲಿ ಉಚಿತ ದಿನಸಿ ಹಾಗೂ ಮಾಸ್ಕ್‌ ವಿತರಣೆ, ಲಸಿಕೆ ಜಾಗೃತಿ ಅಭಿಯಾನ ಸೇರಿದಂತೆ ಕಾರ್ಯಕ್ರಮಗಳ ಮೂಲಕ ಸಕ್ರಿಯವಾಗಿದ್ದರು.

9 ತಿಂಗಳಲ್ಲೇ ಇಬ್ಬರು ಇನ್ಸ್‌ಪೆಕ್ಟರ್‌ ಬಲೆಗೆ

9 ತಿಂಗಳ ಅವಧಿಯಲ್ಲಿ ಇದೇ ಜಮೀನು ವಿಚಾರವಾಗಿ ಚಿಕ್ಕಜಾಲ ಠಾಣೆಯ ಇಬ್ಬರು ಇನ್ಸ್‌ಪೆಕ್ಟರ್‌ಗಳು ಎಸಿಬಿ ಬಲೆಗೆ ಬಿದ್ದಿದ್ದಾರೆ. ಈ ಮೊದಲು ಜಮೀನು ಮಾಲೀಕರಿಂದ ಲಂಚ ಸ್ವೀಕರಿಸುವಾಗ ಇನ್ಸ್‌ಪೆಕ್ಟರ್‌ ಯಶವಂತ್‌ ಸಿಕ್ಕಿಬಿದ್ದಿದ್ದರು. ಈ ಘಟನೆ ಬಳಿಕ ಆ ಠಾಣೆಗೆ ವರ್ಗಾವಣೆಗೊಂಡಿದ್ದ ರಾಘವೇಂದ್ರ ಅವರ ಪಾಲಿಗೂ ಭೂ ಕಂಟಕವಾಗಿ ಪರಿಣಮಿಸಿದೆ. ತಮಾಷೆ ಸಂಗತಿ ಅಂದರೆ ಜಮೀನು ಮಾಲೀಕರಿಂದ ಎರಡು ಕಂತಿನಲ್ಲಿ ತಲಾ .4 ಲಕ್ಷ ರು ಲಂಚ ಸ್ವೀಕರಿಸುವಾಗ ರಾಘವೇಂದ್ರ, ‘ನನ್ನ ಮೇಲೆ ಎಸಿಬಿಗೆ ದೂರು ಕೊಡಬೇಡಿ. ನಿಮಗೆ ಅನುಕೂಲ ಮಾಡಿಕೊಡುತ್ತೇನೆ. ನಿಮ್ಮನ್ನು ನಂಬಿದ್ದೀನಿ ನೀವು ಹಿಂದೆ ಮಾಡಿದಂತೆ ನನ್ನನ್ನು ಸಹ ಟ್ರ್ಯಾಪ್‌ ಮಾಡೋದಿಲ್ಲ ತಾನೇ’ ಎಂದಿದ್ದರು ಎನ್ನಲಾಗಿದೆ.

click me!