ಧಾರವಾಡ (ಸೆ.19): ಮಾಜಿ ಸಚಿವ ಎನ್.ಎಚ್. ಕೋನರಡ್ಡಿ ಅವರು ತಮ್ಮ ರಾಜಕೀಯ ಭವಿಷ್ಯದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲಿದ್ದಾರೆಯೇ?
ಸಂಘಟನೆ ಕೊರತೆಯಿಂದ ಇತ್ತೀಚೆಗೆ ನಡೆದ ಹು-ಧಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್ ಬರೀ ಒಂದೇ ಸ್ಥಾನ ಪಡೆದಿತ್ತು. ಇದರಿಂದ ಬೇಸತ್ತು ಎನ್.ಎಚ್. ಕೋನರಡ್ಡಿ ಅವರು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜಿನಾಮೆ ನೀಡಿ ಜೆಡಿಎಸ್‌ನಿಂದ ಅಂತರ ಕಾಯ್ದುಕೊಳ್ಳುವ ಮೂಲಕ ಪಕ್ಷ ತೊರೆಯುವ ಸುಳಿವು ನೀಡಿದ್ದಾರೆ ಎನ್ನಲಾಗುತ್ತಿದೆ.
ಉತ್ತರ ಕರ್ನಾಟಕ (ಮುಂಬೈ ಕರ್ನಾಟಕ) ಭಾಗದಲ್ಲಿ ಜೆಡಿಎಸ್ ತುಸು ಅಸ್ತಿತ್ವ ಇದೆ ಎಂದರೆ ಅದು ಬಸವರಾಜ ಹೊರಟ್ಟಿ, ರಾಜಣ್ಣ ಕೊರವಿ ಹಾಗೂ ಎನ್.ಎಚ್. ಕೋನರಡ್ಡಿ ಅವರಿಂದ. ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಸಂಘಟನೆಯೇ ಇಲ್ಲ. ಬಸವರಾಜ ಹೊರಟ್ಟಿಅವರು ವಿಧಾನ ಪರಿಷತ್ ಸಭಾಪತಿಯಾದ ಬಳಿಕ ಯಾವುದೇ ಪಕ್ಷಕ್ಕೂ ಸೇರದೆ ರಾಜಕೀಯದಲ್ಲೂ ಪಾಲ್ಗೊಳ್ಳುವಂತಿಲ್ಲ.
ದೇವೇಗೌಡ್ರು ಕ್ರಮಕ್ಕೆ ಸೂಚಿಸಿದ ಬೆನ್ನಲ್ಲೇ ಡಿಕೆಶಿ ಭೇಟಿಯಾದ ಜೆಡಿಎಸ್ ಶಾಸಕ
ಹುಬ್ಬಳ್ಳಿಯಲ್ಲಿದ್ದ ರಾಜಣ್ಣ ಕೊರವಿ ಇತ್ತೀಚೆಗೆ ಬಿಜೆಪಿ ಸೇರಿ ಮತ್ತೆ ಪಾಲಿಕೆ ಸದಸ್ಯರೂ ಅದರು. ಕೋನರಡ್ಡಿ ಒಬ್ಬರೇ ಪಕ್ಷಕ್ಕಾಗಿ ಇಷ್ಟುವರ್ಷಗಳ ಕಾಲ ತುಂಬ ಶ್ರಮಿಸಿದ್ದಾರೆ. ಬೇಸರದ ಸಂಗತಿ ಏನೆಂದರೆ, ಜೆಡಿಎಸ್ ಏನೆಲ್ಲ ಹೋರಾಟ, ಪ್ರಯತ್ನ ಮಾಡಿದರೂ ಮತಗಳಾಗಿ ಪರಿವರ್ತನೆಯಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕೋನರಡ್ಡಿ ಅವರು ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ತುಸು ಅಂತರದಲ್ಲಿ ಸೋಲು ಕಂಡಿದ್ದಾರೆ. ಈ ಬಾರಿಯೂ ಜೆಡಿಎಸ್‌ನಿಂದ ಸ್ಪರ್ಧಿಸಿದರೆ, ಸಚಿವರಾಗಿರುವ ಶಂಕರ ಪಾಟೀಲ ಮುನೇನಕೊಪ್ಪ ಅವರ ಎದುರು ಗೆಲವು ಅಸಾಧ್ಯ ಎಂದರಿತು, ಕಾಂಗ್ರೆಸ್ ಸೇರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದರೆ, ಕಾಂಗ್ರೆಸ್, ಜೆಡಿಎಸ್ ಎರಡೂ ಮತಗಳನ್ನು ಪಡೆಯುವ ಮೂಲಕ ಸುಲಭವಾಗಿ ಜಯ ಸಾಧಿಸಬಹುದು ಎಂಬ ಲೆಕ್ಕಾಚಾರವನ್ನು ಕೋನರಡ್ಡಿ ಇಟ್ಟುಕೊಂಡಿದ್ದಾರೆ ಎಂದು ಅವರ ಆಪ್ತ ವಲಯದಿಂದ ತಿಳಿದು ಬಂದಿದೆ.
2023ರ ವಿಧಾನಸಭಾ ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಬಾಕಿ ಇದ್ದು, ಈಗಿನಿಂದಲೇ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಜೆಡಿಎಸ್ ವರಿಷ್ಠರಾದ ದೇವೇಗೌಡರ ಒಪ್ಪಿಗೆ ಮೇರೆಗೆ ಈಗಾಗಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಒಂದು ಸುತ್ತಿನ ಮಾತುಕತೆ ಆಗಿದೆ ಎಂಬ ಮಾಹಿತಿ ಇದೆ.
ಈ ಕುರಿತು ಪತ್ರಿಕೆಗೆ ಪ್ರತಿಕ್ರಿಯಿಸಿದ ಕೋನರಡ್ಡಿ, ಮುಖ್ಯಮಂತ್ರಿ ಬೊಮ್ಮಾಯಿ, ಸಿದ್ದರಾಮಯ್ಯ ಇವರೆಲ್ಲರೊಂದಿಗೆ ಮೊದಲಿನಿಂದಲೂ ಒಡನಾಟ ಹೊಂದಿದ್ದೇನೆ. ಅಂದ ಮಾತ್ರಕ್ಕೆ ನಾನು ಬಿಜೆಪಿಗೋ ಅಥವಾ ಕಾಂಗ್ರೆಸ್ಸಿಗೋ ಸೇರುತ್ತೇನೆ ಎಂದಲ್ಲ. ಪಾಲಿಕೆ ಚುನಾವಣೆಯಲ್ಲಿ ಹೀನಾಯ ಸೋಲಾದ ಕಾರಣ ಹೊಣೆ ಹೊತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದೇನೆಯೇ ಹೊರತು ಕಾಂಗ್ರೆಸ್ ಸೇರುವುದಕ್ಕಲ್ಲ. ಮುಂದಿನ ವಿಧಾನಸಭಾ ಚುನಾವಣೆ ಇನ್ನೂ ದೂರ ಇದೆ. ಪಕ್ಷ ಬದಲಿಸುವುದರ ಬಗ್ಗೆ ಈಗೇಕೆ ಚರ್ಚೆ? ಸಮಯ ಸಂದರ್ಭ ಬಂದಾಗ ಏನು ಮಾಡಬೇಕು ಎಂಬುದರ ಬಗ್ಗೆ ದೇವೇಗೌಡರ ಜತೆಗೆ ಮಾತನಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ. ನಾನಂತೂ ಬಿಜೆಪಿ ಮಾತ್ರ ಸೇರುವುದಿಲ್ಲ ಎನ್ನುವ ಮೂಲಕ ಕಾಂಗ್ರೆಸ್ ಸೇರುವ ಬಗ್ಗೆ ಸಣ್ಣದಾಗಿ ಕೋನರಡ್ಡಿ ಸುಳಿವು ಬಿಟ್ಟುಕೊಟ್ಟರು.