ಸ್ಕೂಟರ್’ನಲ್ಲೇ 26 ಸಾವಿರ ಕಿಮೀ ಸುತ್ತಿದ ತಾಯಿ, ಮಗ..!

By Web DeskFirst Published Sep 18, 2018, 10:44 PM IST
Highlights

ತಾಯಿಯನ್ನು ತಮ್ಮ ಹಳೆಯ ಸ್ಕೂಟರ್‌ನಲ್ಲಿ ಕೂರಿಸಿಕೊಂಡು 6 ರಾಜ್ಯಗಳಲ್ಲಿ 9 ತಿಂಗಳಲ್ಲಿ 26 ಸಾವಿರ ಕಿ.ಮೀ. ಪ್ರಯಾಣಿಸುವ ಮೂಲಕ ಹೊಸದೊಂದು ದಾಖಲೆ ಸ್ಥಾಪಿಸಿದ್ದಾರೆ. ಮೈಸೂರಿನ ಡಿ.ಕೃಷ್ಣಕುಮಾರ ಅವರೇ ಆಧುನಿಕ ಶ್ರವಣಕುಮಾರ ಎಂಬ ಕೀರ್ತಿಗೆ ಪಾತ್ರವಾಗಿರುವವರು.

ಶಿವಮೊಗ್ಗ[ಸೆ.18]: ಪುರಾಣದಲ್ಲಿನ ಶ್ರವಣಕುಮಾರ ತನ್ನ ತಂದೆ- ತಾಯಿಯನ್ನು ಬುಟ್ಟಿಯಲ್ಲಿ ಹೊತ್ತು ತೀರ್ಥಯಾತ್ರೆ ಮಾಡಿಸಿದ. ಆದರೆ, ಇಲ್ಲೊಬ್ಬ ಆಧುನಿಕ ಶ್ರವಣಕುಮಾರ ಇದ್ದಾರೆ. ಅವರು ತಾಯಿಯನ್ನು ತಮ್ಮ ಹಳೆಯ ಸ್ಕೂಟರ್‌ನಲ್ಲಿ ಕೂರಿಸಿಕೊಂಡು 6 ರಾಜ್ಯಗಳಲ್ಲಿ 9 ತಿಂಗಳಲ್ಲಿ 26 ಸಾವಿರ ಕಿ.ಮೀ. ಪ್ರಯಾಣಿಸುವ ಮೂಲಕ ಹೊಸದೊಂದು ದಾಖಲೆ ಸ್ಥಾಪಿಸಿದ್ದಾರೆ. ಮೈಸೂರಿನ ಡಿ.ಕೃಷ್ಣಕುಮಾರ ಅವರೇ ಆಧುನಿಕ ಶ್ರವಣಕುಮಾರ ಎಂಬ ಕೀರ್ತಿಗೆ ಪಾತ್ರವಾಗಿರುವವರು. ಗಂಡನನ್ನು ಕಳೆದುಕೊಂಡ ತನ್ನ ತಾಯಿ ಚೂಡಾರತ್ನ ಅವರ ಆಸೆ ಈಡೇರಿಕೆಗೆ ಇಂಥದೊಂದು ಸ್ಕೂಟರ್ ಯಾತ್ರೆ ನಡೆಸಿದ್ದಾರೆ. ‘ಮಾತೃ ಸೇವಾ ಸಂಕಲ್ಪ’ದ ಹೆಸರಿನಡಿ ಈ ಯಾತ್ರೆಯನ್ನು ಯಶಸ್ವಿಯಾಗಿ ಪೂರೈಸುವತ್ತ ಸಾಗಿದ್ದಾರೆ.

ಇವರು ಮೂಲತಃ ಮೈಸೂರಿನವರು. ಕೂಡು ಕುಟುಂಬ. ತಂದೆ ದಕ್ಷಿಣಾಮೂರ್ತಿ, ತಾಯಿ ಚೂಡಾರತ್ನ. ನಾಲ್ಕು ವರ್ಷಗಳ ಹಿಂದೆ ತಂದೆ ತೀರಿಕೊಂಡರು. ಅದುವರೆಗೆ ಗಂಡ, ಮನೆಗಷ್ಟೇ ಸೀಮಿತವಾಗಿದ್ದ ಚೂಡಾರತ್ನ ಇತ್ತೀಚೆಗೆ ಮಾತಿನ ನಡುವೆ ತಾನು ಬೇಲೂರು ಹಳೆಬೀಡು ಕೂಡ ನೋಡಿಲ್ಲ ಎಂದರು. ಇದನ್ನು ಮನಸ್ಸಿಗೆ ಹಚ್ಚಿಕೊಂಡ ಕೃಷ್ಣಕುಮಾರ್ 70 ವರ್ಷದ ತಾಯಿ ಆಸೆ ಈಡೇರಿಸಬೇಕೆಂದು ಪಣತೊಟ್ಟರು. 13 ವರ್ಷ ಖಾಸಗಿ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 39 ವರ್ಷದ ಬ್ರಹ್ಮಚಾರಿ ಕೃಷ್ಣಕುಮಾರ್ ತಾಯಿ ತೀರ್ಥಯಾತ್ರೆಗೆ ಹಣ ಜೋಡಿಸಿಟ್ಟಿದ್ದರು. ತಮ್ಮ ತಂದೆಯ ಸ್ಕೂಟರ್‌ನಲ್ಲಿಯೇ ಯಾತ್ರೆ ಮಾಡುವ ನಿರ್ಧಾರಕ್ಕೂ ಬಂದರು.

ಯಾತ್ರೆಗೆ ಮುನ್ನ ತಾಯಿಯನ್ನು ಸ್ಕೂಟರ್‌ನಲ್ಲಿ ಕೂರಿಸಿಕೊಂಡು ಮೈಸೂರು ಸುತ್ತಮುತ್ತಲಿನ ಹಲವಾರು ಪ್ರದೇಶಗಳಿಗೆ ಕರೆದೊಯ್ದರು. ತಾಯಿ ಆರಾಮವಾಗಿ ಕೂರಬಲ್ಲರು ಎಂಬುದನ್ನು ಮನದಷ್ಟು ಮಾಡಿಕೊಂಡರು. ಬಳಿಕ ಯಾತ್ರೆಯ ಸ್ವರೂಪವನ್ನು ನಿಶ್ಚಯಿಸಿಕೊಂಡರು. ಉತ್ತರಾಯಣದ ಪುಣ್ಯ ಕಾಲದಲ್ಲಿಯೇ ಈ ಯಾತ್ರೆಗೆ ಸಂಕಲ್ಪ ಮಾಡಿದರು. ಜ.16ರಂದು ಮೈಸೂರಿನಿಂದ ತಮ್ಮ ತಂದೆಯ 20 ವರ್ಷದ ಹಳೆಯ ಬಜಾಜ್ ಸ್ಕೂಟರ್‌ನಲ್ಲಿ 70 ವರ್ಷದ ತಾಯಿಯೊಂದಿಗೆ ಯಾತ್ರೆ ಆರಂಭಗೊಂಡಿತು. ಕಡಿಮೆ ಲಗ್ಗೇಜ್ ಕಟ್ಟಿಕೊಂಡು ಮೊದಲು ಹೋಗಿದ್ದು ಊಟಿಗೆ. ಬಳಿಕ ಕೇರಳಕ್ಕೆ ಹೋಗಿ ನಂತರ ತಮಿಳುನಾಡು, ಅಲ್ಲಿಂದ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಅಲ್ಲಿಂದ ಮರಳಿ ತಿಂಗಳ ಹಿಂದೆ ಕರ್ನಾಟಕ ಪ್ರವೇಶ ಮಾಡಿದ್ದಾರೆ.

ಕೇರಳದಲ್ಲಿ ಪಾಲಕ್ಕಾಡ್, ತ್ರಿಶೂರ್, ಗುರುವಾಯೂರು, ಶಬರಿಮಲೈ, ಬೇಕಲ್ ಕೋಟೆ, ಆನಂದಾಶ್ರಮ, ತಮಿಳುನಾಡಿನ ಶಿವಕಾಶಿ, ಕನ್ಯಾಕುಮಾರಿ, ತಂಜಾವೂರು, ಕುಂಭಕೋಣಂ, ರಾಮೇಶ್ವರ, ತಿರುವಣ್ಣಾಾಮಲೈ, ಮಧುರೈ ಮೀನಾಕ್ಷಿ, ಆಂಧ್ರಪ್ರದೇಶದ ಕದರಿ, ಓಂಗಲ್, ಜಿಲ್ಲಲು ಮುಡಿ ಅಮ್ಮ, ಆಂಧ್ರಪ್ರದೇಶದ ಗುಂಟೂರು, ವಿಜಯವಾಡ, ತಿರುಪತಿ, ಹೈದರಾಬಾದ್, ಮಹಾರಾಷ್ಟ್ರದ ಸಜ್ಜನಗಡ, ಪೂನಾ, ಔರಂಗಾಬಾದ್, ಅಜಂತಾ, ಎಲ್ಲೋರ, ಭೀಮಾಶಂಕರ, ಮಹಾಬಲೇಶ್ವರ, ತೆಲಂಗಾಣದ ಕುರುವಾಪುರಂ, ರಾಜಮಂಡ್ರಿ, ಸಿಂಹಾಚಲಂ, ಕರ್ನಾಟಕದ ಬಾದಾಮಿ, ಪಟ್ಟದ ಕಲ್ಲು, ಹೂವಿನಹಡಗಲಿ, ಅಂಜನಾದ್ರಿ ಮೊದಲಾದವುಗಳನ್ನು ವೀಕ್ಷಿಸಿದ್ದಾರೆ. ತಮ್ಮ ಯಾತ್ರೆಯ ಪರಿಕ್ರಮದಲ್ಲಿ ಶಿವಮೊಗ್ಗದಲ್ಲಿ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಅವರು 1 ದಿನಕ್ಕೆ ಇಂತಿಷ್ಟೇ ಕಿ.ಮೀ. ಕ್ರಮಿಸಬೇಕು ಎಂಬು ನೀತಿ ನಿಯಮಗಳೇನೂ ನಮಗಿರಲಿಲ್ಲ. ಹೇಗೆ ಸಾಧ್ಯವೋ ಹಾಗೆ. ಅತಿ ಹೆಚ್ಚು ಎಂದರೆ ಔರಂಗಬಾದ್‌ನಿಂದ ಪೂನಾ ತನಕ 230 ಕಿ.ಮೀ. ಪ್ರಯಾಣ ಮಾಡಿದ್ದು ಇದೆ. ಯಾವುದಾದರು ಸ್ಥಳ ಇಷ್ಟವಾಯಿತೆಂದರೆ ಅಲ್ಲೇ ಮೂರ್ನಾಲ್ಕು ದಿನ ಉಳಿದುಕೊಂಡು ಸುತ್ತಮುತ್ತಲಿನ ಪ್ರದೇಶಗಳನ್ನು ನೋಡಿದ್ದೂ ಇದೆ. ಸಾಧ್ಯವಾದಷ್ಟು ಬೆಳಗ್ಗೆ 10 ರವರೆಗೆ ಪ್ರಯಾಣ ಮುಗಿಸಿ, ಸಂಜೆ 4 ಗಂಟೆಯ ಮೇಲೆ ಮತ್ತೆ ಆರಂಭಿಸುತ್ತಿದ್ದೆವು. ಆ ನಡುವೆ ವೀಕ್ಷಣೆ ಇರುತ್ತಿತ್ತು ಎನ್ನುತ್ತಾರೆ.

ಇದುವರೆಗೆ 26 ಸಾವಿರ ಕಿ.ಮೀ. ಸಾಗಿ ಬಂದಿದ್ದೇವೆ. ಎಲ್ಲಿಯೂ ಯಾವುದೇ ಸಮಸ್ಯೆ ಎದುರಾಗಿಲ್ಲ. ಹೋದ ಕಡೆಯಲ್ಲೆಲ್ಲಾ ದೇವಸ್ಥಾನ, ಮಠ, ಮಂದಿರ ಹಾಗೂ ಸ್ನೇಹಿತರ ಮನೆಗಳಲ್ಲಿ ವಾಸ್ತವ್ಯ. ಈ ತನಕ ಒಂದು ಟೈರ್ ಪಂಚರ್ ಆಗಿದ್ದು ಬಿಟ್ಟರೇ ಬೇರೇನು ತೊಂದರೆ ಆಗಿಲ್ಲ ಎನ್ನುತ್ತಾರೆ ಕೃಷ್ಣ ಪ್ರಸಾದ್. ತಾಯಿ ಸೇವೆಯ ಮುಂದೆ ಯಾವುದೂ ಇಲ್ಲ. ಬದುಕಿನ ಕೊನೆಯ ದಿನಗಳವರೆಗೂ ಯಾವೊಂದು ಆಪೇಕ್ಷೆಯನ್ನೂ ಮಾಡದ ತಾಯಿಯನ್ನು ಈ ಸಂದರ್ಭದಲ್ಲಾದರೂ ಯಾತ್ರಾ ಸ್ಥಳಗಳಿಗೆ ಕರೆದೊಯ್ಯಬೇಕು ಎನಿಸಿತು. ಹೀಗಾಗಿ ಯಾತ್ರೆಗೆ ಕರೆದೊಯ್ಯುತ್ತಿದ್ದೇನೆ. ಈ ಪ್ರವಾಸಕ್ಕೆ ಯಾರದೇ ವೈಯಕ್ತಿಕ ಅಥವಾ ಯಾವುದೇ ಸಂಘ, ಸಂಸ್ಥೆಗಳ ನೆರವು ಪಡೆದಿಲ್ಲ. ಇವರ ತಾಯಿ ಸೇವೆಯನ್ನು ನೋಡಿ ಅನೇಕ ಕಡೆ ಸಂಘ, ಸಂಸ್ಥೆಗಳು ಸನ್ಮಾನಿಸಿವೆ. ಜನ ಅಪಾರ ಪ್ರೀತಿ ತೋರಿಸಿದ್ದಾರೆ ಎಂದು ಹೇಳುತ್ತಾರೆ.

ವರದಿ: ಗೋಪಾಲ್ ಯಡಗೆರೆ, ಕನ್ನಡಪ್ರಭ

click me!