Covid19 Vaccine: ಬೆಂಗ್ಳೂರಲ್ಲಿ ಒಂದೇ ದಿನ 89,000+ ಮಂದಿಗೆ ಲಸಿಕೆ

By Kannadaprabha News  |  First Published Dec 5, 2021, 6:18 AM IST

*   ಏಕಾಏಕಿ ಲಸಿಕೆಗಾಗಿ ಮುಗಿಬಿದ್ದ ಜನ
*   ಹೆಚ್ಚಿನ ಕೇಂದ್ರಗಳಲ್ಲಿ 400+ ಲಸಿಕೆ ನೀಡಿದ ಸಿಬ್ಬಂದಿ
*   ಈವರೆಗೆ ಲಸಿಕೆ ಪಡೆದವರು 1.43 ಕೋಟಿ
 


ಬೆಂಗಳೂರು(ಡಿ.05):  ಒಮಿಕ್ರೋನ್‌(Omicron) ವೈರಾಣು ಪತ್ತೆ ಹಿನ್ನೆಲೆಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಲಸಿಕೆ ಪಡೆಯುವವರ ಸಂಖ್ಯೆ ದಿನೇದಿನೇ ಏರಿಕೆಯಾಗುತ್ತಿದ್ದು, ಶನಿವಾರ ಬರೋಬ್ಬರಿ 89 ಸಾವಿರಕ್ಕೂ ಅಧಿಕ ಮಂದಿ ಲಸಿಕೆ ಪಡೆದುಕೊಂಡಿದ್ದಾರೆ. ನಗರದ ಕೆ.ಆರ್‌.ಮಾರುಕಟ್ಟೆ, ದಾಸಪ್ಪ ಆಸ್ಪತ್ರೆ, ಸಿಂಗಸಂದ್ರ, ಅಮೃತಹಳ್ಳಿ, ಬೇಗುರು, ಮಲ್ಲತ್ತಹಳ್ಳಿ, ಕೆ.ಎಸ್‌.ಲೇಔಟ್‌, ತಣಿಸಂದ್ರ, ಪುಟ್ಟೇನಹಳ್ಳಿ, ಕೋಣನಕುಂಟೆ, ಉಲ್ಲಾಳು, ರಾಜಾಜಿನಗರ, ಲಗ್ಗೆರೆ, ಮಹಮ್ಮದ್‌ಸಾಬ್‌ ಪಾಳ್ಯ, ಗೊಟ್ಟಿಗೆರೆ ಸರ್ಕಾರಿ ಶಾಲೆ, ಮಹಾಲಕ್ಷ್ಮಿ ಲೇಔಟ್‌, ರಾಜ್‌ಗೋಪಾಲ ನಗರ, ಕಾಮಾಕ್ಷಿಪಾಳ್ಯ, ದೊಡ್ಡಕನಹಳ್ಳಿ ಸರ್ಕಾರಿ ಶಾಲೆ, ಕಾಡುಗೋಡಿ ನ್ಯೂ ಬಿಬಿಎಂಪಿ ಕಚೇರಿ, ಹೊಂಗಸಂದ್ರ ಸರ್ಕಾರಿ ಶಾಲೆ, ಕೊತ್ತನೂರು ನಾರಾಯಣಪುರ, ಮನ್ವರ್ತಪೇಟೆ ಸೇರಿದಂತೆ ವಿವಿಧ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 400ಕ್ಕಿಂತ ಹೆಚ್ಚು ಡೋಸ್‌ಗಳನ್ನು ವಿತರಿಸಲಾಗಿದೆ.

ಒಮಿಕ್ರೋನ್‌ ವೈರಾಣು ಭೀತಿಯಿಂದ ಲಸಿಕಾ ಕೇಂದ್ರಗಳತ್ತ ಧಾವಿಸುತ್ತಿರುವ ಜನರು ಲಸಿಕೆಗಾಗಿ(Vaccine) ಮುಗಿಬಿದ್ದಿದ್ದಾರೆ. ಶನಿವಾರ ಒಂದೇ ದಿನ 89,440 ಜನರು ಲಸಿಕೆ ಪಡೆದುಕೊಂಡಿದ್ದಾರೆ. ಈವರೆಗೆ ಬಿಬಿಎಂಪಿ(BBMP) ವ್ಯಾಪ್ತಿಯಲ್ಲಿ 1,43,14,925 ಡೋಸ್‌ ಲಸಿಕೆ ನೀಡಲಾಗಿದ್ದು, 81,62,614 ಮೊದಲ ಡೋಸ್‌, 61,52,311 ದ್ವಿತೀಯ ಡೋಸ್‌ ಲಸಿಕೆ ಪಡೆದುಕೊಂಡಿದ್ದಾರೆ.

Latest Videos

undefined

Covid19 Vaccine: ಒಮಿಕ್ರೋನ್‌ ಮೇಲೆ ಲಸಿಕೆ ಎಷ್ಟು ಪರಿಣಾಮಕಾರಿ? ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದ್ದೇನು?

ಇದುವರೆಗೆ 18-44 ವಯೋಮಿಯ ಒಳಗಿನವರಿಗೆ 96,37,758 ಡೋಸ್‌, 45-60 ವರ್ಷದೊಳಗಿನವರಿಗೆ 29,70,296 ಡೋಸ್‌ ಹಾಗೂ 60 ವರ್ಷ ಮೇಲ್ಪಟ್ಟವರಿಗೆ 17,06,871 ಡೋಸ್‌ ಲಸಿಕೆ ನೀಡಲಾಗಿದೆ. ಈ ಪೈಕಿ 78,61,126 ಪುರುಷರು ಮತ್ತು 64,50,539 ಮಹಿಳೆಯರು ಲಸಿಕೆ ಪಡೆದುಕೊಂಡಿದ್ದಾರೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ. ಇನ್ನು ಮೊದಲ ಮತ್ತು ದ್ವಿತೀಯ ಡೋಸ್‌ ಲಸಿಕೆ ಪಡೆಯಲು ಬಾಕಿ ಉಳಿದವರ ಪತ್ತೆಗೆ ಮನೆ ಮನೆ ಸಮೀಕ್ಷೆಯನ್ನು ಬಿಬಿಎಂಪಿ ನಡೆಸುತ್ತಿದ್ದು, ಲಸಿಕೆ ಕುರಿತು ಜಾಗೃತಿಯನ್ನು ಮುಂದುವರೆಸಿದೆ. ಹಾಗೆಯೇ ಸಂಪೂರ್ಣ ಲಸಿಕೆ ಪಡೆಯದವರಿಗೆ ಸಾರ್ವಜನಿಕ ಸ್ಥಳ ಪ್ರವೇಶವನ್ನು ನಿರ್ಬಂಧಿಸಿದೆ.

5.60 ಲಕ್ಷ ದಂಡ ವಸೂಲಿ

ಒಮಿಕ್ರೋನ್‌ ವೈರಾಣು ಪತ್ತೆ ಹಿನ್ನೆಲೆಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್‌ ಮಾರ್ಗಸೂಚಿ(Covid Guideline) ಉಲ್ಲಂಘಿಸುವವರ ಮೇಲೆ ತೀವ್ರ ನಿಗಾ ವಹಿಸಿರುವ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಕೇವಲ ಹತ್ತು ದಿನಗಳಲ್ಲಿ .5.60 ಲಕ್ಷ ದಂಡ(Fine) ವಸೂಲಿ ಮಾಡಿದೆ.

ನ.21ರಿಂದ ಈವರೆಗೂ ಮಾಸ್ಕ್‌(Mask) ಧರಿಸದ ಹಾಗೂ ಸಾಮಾಜಿ ಅಂತರ ಕಾಯ್ದುಕೊಳ್ಳದ 2,241 ಪ್ರಕರಣಗಳನ್ನು ಮಾರ್ಷಲ್‌ಗಳು ಪತ್ತೆ ಮಾಡಿದ್ದು, .5.60 ಲಕ್ಷ ವಸೂಲಿ ಮಾಡಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮಾರ್ಗಸೂಚಿ ನಿಯಮಗಳನ್ನು ಉಲ್ಲಂಘಿಸಿದ ಆರೋಪದಡಿ ಕಳೆದ 2020 ಮೇ ತಿಂಗಳಿನಿಂದ ಈವರೆಗೆ 33 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು .1.48 ಕೋಟಿ ದಂಡ ಸಂಗ್ರಹಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆರೋಗ್ಯ ಸಿಬ್ಬಂದಿಗೆ ಬೂಸ್ಟರ್‌ ಡೋಸ್‌: ಪ್ರಸ್ತಾವನೆ

ಒಮಿಕ್ರೋನ್‌ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಎಲ್ಲ ಆರೋಗ್ಯ ಸಿಬ್ಬಂದಿಗೆ ಬೂಸ್ಟರ್‌ ಡೋಸ್‌(Booster Dose) ನೀಡುವ ಅಗತ್ಯವಿದ್ದು, ಈ ಕುರಿತು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ(Central Ministry of Health) ಪತ್ರ ಬರೆಯಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.

ಒಮಿಕ್ರೋನ್‌ ಸೋಂಕಿತರ ಸಂಖ್ಯೆ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಿಬ್ಬಂದಿಗೆ ಜೀವನಿರೋಧಕ ಶಕ್ತಿಯ ಅವಶ್ಯಕತೆ ಹೆಚ್ಚಿದೆ. ಹೀಗಾಗಿ ಬೂಸ್ಟರ್‌ ಡೋಸ್‌ ನೀಡಬೇಕೆಂದು ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಅಭಿಪ್ರಾಯ ಪಟ್ಟಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ(Government of Karnataka) ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತಾ ತಿಳಿಸಿದರು.

ಶನಿವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ(Basavaraj Bommai) ಅವರು ಕೇಂದ್ರ ಸರ್ಕಾರ(Cerntral Government) ಹಾಗೂ ಆರೋಗ್ಯ ಸಚಿವಾಲಯಕ್ಕೆ ಪತ್ರ ಬರೆದು ಬೂಸ್ಟರ್‌ ಡೋಸ್‌ಗೆ ಅನುಮತಿ ಕೇಳಿದ್ದಾರೆ. ಕೇಂದ್ರ ಅನುಮತಿ ನೀಡಿದರೆ ಆರೋಗ್ಯ ಸಿಬ್ಬಂದಿಗೆ ಬೂಸ್ಟರ್‌ ಡೋಸ್‌ ಸಿಗಲಿದೆ ಎಂದರು.

Omicron ಭೀತಿ: ವ್ಯಾಕ್ಸಿನ್‌ಗೆ ಮುಗಿಬಿದ್ದ ಜನ, ಬೆಂಗ್ಳೂರಲ್ಲಿ ಲಸಿಕಾ ಕೇಂದ್ರ ಸಂಖ್ಯೆ ಹೆಚ್ಚಳ

ಒಮಿಕ್ರೋನ್‌ ಸೋಂಕಿಗೆ ಸಂಬಂಧಿಸಿದಂತೆ ಇಡೀ ವಿಶ್ವದಲ್ಲಿ ಕಳೆದ ಹತ್ತು ದಿನಗಳಿಂದ ಕಠಿಣ ನಿಯಮ ಜಾರಿಗೆ ತರಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದೊಂದು ತಿಂಗಳಿನಿಂದಲೂ ಯಾರಾದರೂ ವಿದೇಶದಿಂದ ನಗರಕ್ಕೆ ವಾಪಸ್‌ ಆದರ ಪತ್ತೆ ಕಾರ್ಯವನ್ನು ನಿರಂತರವಾಗಿ ನಡೆಸಲಾಗುತ್ತಿದೆ. ಹಾಗೆಯೇ ರಾಜ್ಯ ಸರ್ಕಾರ ಆದೇಶ ಮಾಡಿದ ದಿನದಿಂದಲೇ ಎಲ್ಲ ಮಾರ್ಗ ಸೂಚನೆಗಳನ್ನು ಪಾಲನೆ ಮಾಡುವ ಕೆಲಸ ಆರಂಭಿಸಿದ್ದೇವೆ. ಪೂರ್ಣ ಪ್ರಮಾಣದಲ್ಲಿ ಲಸಿಕೆ ಪಡೆಯುವಂತೆ ಜಾಗೃತಿ ಮೂಡಿಸುವ ಕಾರ್ಯವನ್ನು ಎಂಟು ವಲಯಗಳಲ್ಲೂ ನಿರಂತರವಾಗಿ ನಡೆಸುತ್ತಿದ್ದು, ಮನೆ ಮನೆಗೆ ಹೋಗಿ ಲಸಿಕೆ ಪಡೆಯದವರ ಪತ್ತೆಗೆ ಕ್ರಮವಹಿಸಿದ್ದೇವೆ ಎಂದು ಹೇಳಿದರು.

ಮಾಸ್ಕ್‌ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದನ್ನು ಕಡ್ಡಾಯವಾಗಿ ಪಾಲಿಸಬೆಕು. ಈ ಮೂಲಕ ಕೋವಿಡ್‌ ಸೋಂಕಿನಿಂದ ಪಾರಾಗಲು ಸಾಧ್ಯ. ಪ್ರಮುಖ ಜನದಟ್ಟಣೆ ಪ್ರದೇಶಗಳಲ್ಲಿ ಮಾಸ್ಕ್‌ ಧರಿಸದೆ ತಿರುಗಾಡುವವರ ವಿರುದ್ಧ ಕಟ್ಟೆಚ್ಚರ ವಹಿಸಿದ್ದು, ಮಾರ್ಷಲ್‌ಗಳ ಮೂಲಕ ದಂಡ ವಸೂಲು ಮಾಡುವ ಕಾರ್ಯ ಮಾಡಲಾಗುತ್ತಿದೆ ಎಂದರು.
 

click me!