Air Taxi Service: ಹುಬ್ಬಳ್ಳಿಯಲ್ಲಿ ‘ಏರ್‌ ಟ್ಯಾಕ್ಸಿ’ ಸೇವೆ ಶೀಘ್ರ

By Kannadaprabha NewsFirst Published Dec 4, 2021, 1:18 PM IST
Highlights

*  ಒಂದು ಊರಿನಿಂದ ಇನ್ನೊಂದು ಊರಿಗೆ ತ್ವರಿತ ವಿಮಾನ ಸಂಚಾರದ ಸೇವೆ 
*  ಉಡಾನ್‌ ಯೋಜನೆ ಅಡಿ ಉತ್ತಮ ಸಾಧನೆ ಮಾಡಿದ ಹುಬ್ಬಳ್ಳಿ ನಿಲ್ದಾಣ 
*  ಈ ಸೇವೆಯಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ 

ಮಯೂರ ಹೆಗಡೆ

ಹುಬ್ಬಳ್ಳಿ(ಡಿ.04):  ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ(Hubballi Airport) ‘ಏರ್‌ ಟ್ಯಾಕ್ಸಿ’(Air Taxi) ಸೇವೆ ಲಭ್ಯವಾಗುವ ಸಾಧ್ಯತೆ ಇದೆ. ಹರಿಯಾಣ(Haryana) ಮೂಲದ ಕಂಪನಿಯೊಂದು ಈ ಸೇವೆಗಾಗಿ ಹುಬ್ಬಳ್ಳಿಯಲ್ಲಿ ರಾತ್ರಿ ನಿಲುಗಡೆಗೆ ಡಿಜಿಸಿಎ ಮೂಲಕ ಪರವಾನಗಿ ಪಡೆದಿದೆ.

ಉಡಾನ್‌(Udaan) ಯೋಜನೆ ಅಡಿ ಉತ್ತಮ ಸಾಧನೆ ಮಾಡಿರುವ ಹುಬ್ಬಳ್ಳಿ ನಿಲ್ದಾಣದಲ್ಲಿ ಸದ್ಯ ಖಾಸಗಿ ವಿಮಾನಗಳ(Private Flights) ಮೂಲಕ ಗಣ್ಯರು ಸಂಚರಿಸುತ್ತಿದ್ದಾರೆ. ಅದರ ಹೊರತಾಗಿ ಖಾಸಗಿ ಸಂಸ್ಥೆಯಿಂದಲೆ ‘ಏರ್‌ ಟ್ಯಾಕ್ಸಿ’ ಸೇವೆ ಇರಲಿಲ್ಲ. ಇದೀಗ ‘ಏರ್‌ ಟ್ಯಾಕ್ಸಿ’ ಸೇವೆ ಆರಂಭವಾಗುವ ಸಾಧ್ಯತೆ ಇದೆ. ಅಂದುಕೊಂಡಂತೆ ನಡೆದರೆ ವಾಣಿಜ್ಯ ನಗರಿಗೆ ಮತ್ತೊಂದು ಗರಿ ಮೂಡಿದಂತಾಗಲಿದೆ.

ಹುಬ್ಬಳ್ಳಿ(Hubballi) ನಿಲ್ದಾಣದಲ್ಲಿ ಪ್ರತಿನಿತ್ಯ ವಿಮಾನಗಳ ಸಂಚಾರ ಇದ್ದರೂ ರಾತ್ರಿ ವೇಳೆ ಪಾರ್ಕಿಂಗ್‌ಗೆ ಯಾವುದೆ ಅವಕಾಶ ಇರಲಿಲ್ಲ. ಸ್ಟಾರ್‌ ಏರ್‌(Star Air), ಇಂಡಿಗೋ(Indigo) ಸೇರಿ ಕೆಲ ಕಂಪನಿಗಳು ಈ ಮೊದಲೆ ರಾತ್ರಿ ನಿಲುಗಡೆಗೆ ಪರವಾನಗಿ ಕೋರಿದ್ದು, ಡಿಜಿಸಿಐ (Directorate General of Civil Aviation) ಒಪ್ಪಿಗೆಗೆ ಕಾಯುತ್ತಿವೆ. ಈ ನಡುವೆ ಹರಿಯಾಣದ ಗುರಗಾಂವ್‌(Gurugram) ಮೂಲದ ‘ಏರ್‌ ಟ್ಯಾಕ್ಸಿ’ ಹೆಸರಿನ ಸಂಸ್ಥೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ರಾತ್ರಿ ಪಾರ್ಕಿಂಗ್‌ಗೆ ಅನುಮತಿ ಪಡೆದಿದೆ.

Hubballi: ಮತ್ತಷ್ಟು ಸುಂದರವಾಗಲಿದೆ ಏರ್‌ಪೋರ್ಟ್‌

ಹುಬ್ಬಳ್ಳಿ ನಿಲ್ದಾಣದಲ್ಲಿ ಏಕಕಾಲಕ್ಕೆ ಏಳು ವಿಮಾನಗಳನ್ನು ಪಾರ್ಕಿಂಗ್‌ ಮಾಡಲು ಅವಕಾಶ ಇದೆ. ಆದರೆ, ಈವರೆಗೆ ಈ ಸೌಲಭ್ಯ ಬಳಕೆ ಆಗಿರಲಿಲ್ಲ. ಈಗ ರಾತ್ರಿ ನಿಲುಗಡೆಗೆ ಪರವಾನಗಿ ದೊರೆತಿರುವ ಕಾರಣ ‘ಏರ್‌ ಟ್ಯಾಕ್ಸಿ’ ಸಂಸ್ಥೆಗೆ ಅನುಕೂಲವಾಗಿದ್ದು, ಜನತೆಗೆ ಅಗತ್ಯ ಸೇವೆ ಕಲ್ಪಿಸಬಹುದು. ಇದರೊಂದಿಗೆ ಮುಂದೆ ವಿಮಾನಯಾನ ಸಂಸ್ಥೆಗಳು ಕೂಡ ಪಾರ್ಕಿಂಗ್‌ ಸೌಲಭ್ಯಕ್ಕಾಗಿ ಡಿಜಿಸಿಎ ಜತೆಗೆ ಹೆಚ್ಚಿನ ಚರ್ಚೆ ನಡೆಸಲು ಅನುಕೂಲವಾಗಲಿದೆ. ಇದರ ಜತೆಗೆ ನಗರದಿಂದ ವಿಮಾನಯಾನ ಸೌಲಭ್ಯ, ಪ್ರಯಾಣಿಕರ(Passengers) ಸಂಖ್ಯೆ ಕೂಡ ಹೆಚ್ಚಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಅಧಿಕಾರಿಗಳು.

ಈಚೆಗಷ್ಟೇ ನಾಲ್ಕು ಪ್ರಯಾಣಿಕರಿಗೆ ಸೇವೆ ಒದಗಿಸುವ ಸಾಮರ್ಥ್ಯದ ಚಾರ್ಟರ್‌ ಫ್ಲೈಟ್‌(Charter Flight) ನಿಲುಗಡೆಗೆ ‘ಏರ್‌ ಟ್ಯಾಕ್ಸಿ’ ಪರವಾನಗಿ ಪಡೆದಿದೆ. ಕಂಪನಿ ನಿಗದಿತ ವೇಳಾಪಟ್ಟಿ ರೂಪಿಸಿಕೊಂಡು ಅದರಂತೆ ಕಾರ್ಯ ನಿರ್ವಹಿಸಲಿದೆಯೆ ಅಥವಾ ಪ್ರಯಾಣಿಕರ ಲಭ್ಯತೆ ಮೇರೆಗೆ ಸೇವೆ ಒದಗಿಸಲಿದೆಯೆ ಎಂಬುದು ಇನ್ನಷ್ಟೆ ತಿಳಿಯಬೇಕಿದೆ. ಈವರೆಗೆ ನಮ್ಮನ್ನು ‘ಏರ್‌ ಟ್ಯಾಕ್ಸಿ’ ಸಂಸ್ಥೆ ಸಂಪರ್ಕಿಸಿಲ್ಲ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣ ನಿರ್ದೇಶಕ ಪ್ರಮೋದ ಠಾಕ್ರೆ ತಿಳಿಸಿದ್ದಾರೆ.

‘ಏರ್‌ ಟ್ಯಾಕ್ಸಿ’ ಹುಬ್ಬಳ್ಳಿಯಲ್ಲಿ ನಿಗದಿತ ವೇಳಾಪಟ್ಟಿ ಬದಲಾಗಿ ಪ್ರಯಾಣಿಕರ ಬೇಡಿಕೆ ಮೇರೆಗೆ ಬಾಡಿಗೆ ಮಾದರಿಯಲ್ಲಿ ಸೇವೆ ಸಲ್ಲಿಸಬಹುದು. ಮುಂದೆ ಹೆಚ್ಚಿನ ಬೇಡಿಕೆ ಬಂದ ನಂತರ ನಿಗದಿತ ವೇಳಾಪಟ್ಟಿ ರೂಪಿಸಬಹುದು ಎಂದು ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Hubballi| ಉತ್ತರ ಕರ್ನಾಟಕದ ಮೊದಲ ವೈಮಾನಿಕ ಕಾರ್ಗೋ ಸೇವೆ ಆರಂಭ

ಏನಿದು ‘ಏರ್‌ ಟ್ಯಾಕ್ಸಿ’?

ಒಂದು ಊರಿನಿಂದ ಇನ್ನೊಂದು ಊರಿಗೆ ತ್ವರಿತವಾಗಿ ವಿಮಾನಯಾನದ ಮೂಲಕ ತೆರಳಲು ನೆರವಾಗುವುದೆ ‘ಏರ್‌ ಟ್ಯಾಕ್ಸಿ’. ಚಾರ್ಟರ್‌ ಫ್ಲೈಟ್‌ ಮಾದರಿಯ ಚಿಕ್ಕ ವಿಮಾನ ಇದಾಗಿದ್ದು, ಪೈಲಟ್‌ ಸೇರಿ ಐದು ಜನ ಮಾತ್ರ ಇದರಲ್ಲಿ ಸಂಚರಿಸಬಹುದು. ಸದ್ಯ ಇದರ ಸೇವೆ ಮೊದಲು ಚಂಡಿಘಡದಲ್ಲಿ ಪ್ರಾರಂಭವಾಗಿದೆ. ಹುಬ್ಬಳ್ಳಿಯಲ್ಲಿ ಈ ಸೇವೆ ಪ್ರಾರಂಭವಾದರೆ ಬೆಂಗಳೂರು, ಮಂಗಳೂರು, ಮೈಸೂರು, ಬೆಳಗಾವಿ, ಕಲಬುರಗಿ ಸೇರಿ ಇತರ ನಗರಗಳಿಗೆ ತ್ವರಿತವಾಗಿ ಹೋಗಲು ಅನುಕೂಲವಾಗಲಿದೆ.

ಗುರಗಾಂವ್‌ ಮೂಲದ ‘ಏರ್‌ ಟ್ಯಾಕ್ಸಿ’ ಕಂಪನಿಯು ಹುಬ್ಬಳ್ಳಿ ನಿಲ್ದಾಣದಲ್ಲಿ ರಾತ್ರಿವೇಳೆ ಪಾರ್ಕಿಂಗ್‌ಗೆ ಪರವಾನಗಿ ಪಡೆದಿದೆ. ಅವರು ಇಲ್ಲಿಂದ ಚಟುವಟಿಕೆ ಪ್ರಾರಂಭಿಸಿದರೆ, ‘ಏರ್‌ ಟ್ಯಾಕ್ಸಿ’ ಸೇವೆ ಪ್ರಾರಂಭ ಆದಂತಾಗಲಿದೆ ಅಂತ ಹುಬ್ಬಳ್ಳಿ ವಿಮಾನ ನಿಲ್ದಾಣ ನಿರ್ದೇಶಕ ಪ್ರಮೋದ ಠಾಕ್ರೆ ತಿಳಿಸಿದ್ದಾರೆ.  
 

click me!