ಭಾಲ್ಕಿ: ಪುನೀತ್‌ ಗುಣಗಾನ, 400ಕ್ಕೂ ಹೆಚ್ಚು ಜನರಿಂದ ರಕ್ತದಾನ

By Kannadaprabha NewsFirst Published Oct 30, 2022, 12:30 PM IST
Highlights

ಭಾಲ್ಕಿಯ ಬಿಕೆಐಟಿಯಲ್ಲಿ ಪುನೀತ್‌ ರಾಜಕುಮಾರ್‌ ಪುಣ್ಯಸ್ಮರಣೆ ನಿಮಿತ್ತ ನಡೆದ ಶಿಬಿರ, ಜಿಲ್ಲೆಯಲ್ಲಿ ಒಂದೇ ದಿನ ಅತೀ ಹೆಚ್ಚು ರಕ್ತ ಸಂಗ್ರಹದ ದಾಖಲೆ

ಭಾಲ್ಕಿ(ಅ.30):  ದಿನವಿಡೀ ಸರತಿ ಸಾಲಿನಲ್ಲಿ ನಿಂತು 400ಕ್ಕೂ ಹೆಚ್ಚು ಜನ ಸ್ವಯಂ ಪ್ರೇರಣೆಯಿಂದ ರಕ್ತ ನೀಡುವ ಮೂಲಕ ಜಿಲ್ಲೆಯಲ್ಲಿ ಹೊಸ ದಾಖಲೆ ಬರೆದಿದ್ದಾರೆ ಎಂದು ರಕ್ತನಿಧಿ​ ಅಧಿ​ಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭಾಲ್ಕಿಯ ಭೀಮಣ್ಣ ಖಂಡ್ರೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ (ಬಿಕೆಐಟಿ) ದಿ. ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಅವರ ಪ್ರಥಮ ಪುಣ್ಯಸ್ಮರಣೆ ನಿಮಿತ್ತ ಶಾಂತಿವರ್ಧಕ ಶಿಕ್ಷಣ ಸಂಸ್ಥೆ ವತಿಯಿಂದ ಶನಿವಾರ ಏರ್ಪಿಡಿಸಿದ್ದ ಶಿಬಿರದಲ್ಲಿ ನಿರೀಕ್ಷೆಗೂ ಮೀರಿ ರಕ್ತ ಸಂಗ್ರಹವಾಗಿದೆ.

ಇದುವರೆಗೂ ಅಲ್ಲಿಲ್ಲಿ ನಡೆಯುತ್ತಿದ್ದ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡುವ ಜನರು 100-200ರ ಗಡಿ ದಾಟುತ್ತಿರಲಿಲ್ಲ. ಆದರೆ, ಇಲ್ಲಿ ಇದೇ ಪ್ರಥಮ ಬಾರಿಗೆ ಯುವ ಮುಖಂಡ ಸಾಗರ ಖಂಡ್ರೆ ನೇತೃತ್ವದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಸಾವಿರಕ್ಕೂ ಅ​ಧಿಕ ಮಂದಿ ನೋಂದಣಿ ಮಾಡಿಸಿದ್ದರು ಎಂದು ರಕ್ತನಿಧಿ ಅಧಿಕಾರಿಗಳು ತಿಳಿಸಿದರು.

Puneeth Rajkumar ಕೈಗೆ ಹಣ ಕೊಡುತ್ತಿರಲಿಲ್ಲ; ಸ್ಟ್ರಿಕ್ಟ್‌ ತಾಯಿ ಬಗ್ಗೆ ಅಪ್ಪು ಮಾತನಾಡಿದ ವಿಡಿಯೋ ವೈರಲ್!

ಯುವ ಮುಖಂಡ ಸಾಗರ ಖಂಡ್ರೆ ಅಧ್ಯಕ್ಷತೆ ವಹಿಸಿ ಮಾತನಾಡಿ, ದಿ. ಪುನೀತ್‌ ರಾಜಕುಮಾರ್‌ ಈ ನಾಡು ಕಂಡ ಶ್ರೇಷ್ಠ ನಟ. ಅವರು ಕೇವಲ ನಟರಾಗಿ ಉಳಿಯದೇ ಅನೇಕ ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಜನರ ಮನಸ್ಸಲ್ಲಿ ಉಳಿದಿದ್ದಾರೆ. ಅಂತಹವರ ನೆನಪಿಗಾಗಿ ರಕ್ತದಾನ ಶಿಬಿರ ಏರ್ಪಡಿಸಿದ್ದೇವೆ. ನಿರೀಕ್ಷೆಗೂ ಮೀರಿ ಯುವಕ, ಯುವತಿಯರು ಸ್ವಯಂ ಪ್ರೇರಣೆಯಿಂದ ರಕ್ತದಾನ ಶಿಬಿರಕ್ಕೆ ಉತ್ಸುಕತೆ ತೋರಿರುವುದು ಖುಷಿ ತಂದು ಕೊಟ್ಟಿದೆ ಎಂದರು.
ಶಿಬಿರ ಉದ್ಘಾಟಿಸಿದ ಡಿವೈಎಸ್ಪಿ ಪ್ರಥ್ವಿಕ್‌ ಶಂಕರ್‌ ಮಾತನಾಡಿ, ಪುನೀತ್‌ ನೆನಪಿಗಾಗಿ ರಕ್ತದಾನ ಶಿಬಿರ ಏರ್ಪಡಿಸಿರುವುದು ಒಳ್ಳೆಯ ಆಲೋಚನೆ. ರಕ್ತದಾನದಿಂದ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಜನರ ಜೀವ ಉಳಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಹಲಬರ್ಗಾ ರಾಚೋಟೇಶ್ವರ ಮಠದ ಹಾವಗಿಲಿಂಗೇಶ್ವರ ಶಿವಾಚಾರ್ಯರು ಮಾತನಾಡಿ, ದಿ. ಪುನೀತ್‌ ರಾಜಕುಮಾರ ನಟರಾಗಿದ್ದರೂ ಸಮಾಜದ ಬಗ್ಗೆ ನಿಜವಾದ ಕಾಳಜಿ ಹೊಂದಿದ್ದರು. ಅವರ ಪ್ರೇರಣೆಯಿಂದ ಯುವ ಮುಖಂಡ ಸಾಗರ ಖಂಡ್ರೆ ನೇತೃತ್ವದಲ್ಲಿ ರಕ್ತದಾನ ಶಿಬಿರ ನಡೆದಿರುವುದು ಸಾರ್ಥಕತೆ ಮೂಡಿಸಿದೆ ಎಂದರು.

ಅಪ್ಪು ಪುಣ್ಯಸ್ಮರಣೆ: ಅಭಿಮಾನಿಗಳಿಂದ ಬಿರಿಯಾನಿ, ಬಾಡೂಟ ಸೇವೆ

ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್‌ ನ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಸಾನ್ನಿಧ್ಯ ವಹಿಸಿ ಮಾತನಾಡಿ, ಕ್ಷೇತ್ರದ ಜನತೆಗೆ ಹಿಂದಿನಿಂದಲೂ ಖಂಡ್ರೆ ಪರಿವಾರ ಒಳಿತನ್ನು ಮಾಡುತ್ತ ಬರುತ್ತಿದೆ. ಇದೀಗ ರಕ್ತದಾನ ಶಿಬಿರ ಆಯೋಜಿಸಿರುವುದು ಇದೊಂದು ಪುಣ್ಯದ ಕೆಲಸ ಸ್ವಯಂ ಪ್ರೇರಣೆಯಿಂದ ಜನ ರಕ್ತದಾನ ಮಾಡಲು ಮುಂದೆ ಬರುತ್ತಿರುವುದು ಸಂತಸ ತರಿಸಿದೆ ಎಂದು ತಿಳಿಸಿದರು. ನೂರಾರು ವಿದ್ಯಾರ್ಥಿಗಳು, ಯುವಕ, ಯುವತಿಯರು, ಅಭಿಮಾನಿಗಳು ರಕ್ತದಾನ ಮಾಡುವ ಮೂಲಕ ಪುನೀತ್‌ ಅವರ ಪ್ರಥಮ ಪುಣ್ಯ ಸ್ಮರಣೆಗೆ ಸಾಕ್ಷಿಯಾದರು.

ಈ ಸಂದರ್ಭದಲ್ಲಿ ಮಹಾಲಿಂಗ ಸ್ವಾಮಿ, ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಡಾ. ಗೀತಾ ಈಶ್ವರ ಖಂಡ್ರೆ, ಡಾ. ರಾಜೇಂದ್ರ ಜಾಧವ, ಡಾ. ಜ್ಞಾನೇಶ್ವರ ನಿರಗೂಡೆ ಸೇರಿದಂತೆ ಹಲವರು ಇದ್ದರು. ಬಸವರಾಜ ಕಾವಡಿ ನಿರೂಪಿಸಿದರು. ಪ್ರಾಚಾರ್ಯ ಡಾ. ನಾಗಶೆಟೆಪ್ಪ ಬಿರಾದಾರ್‌ ವಂದಿಸಿದರು.
 

click me!