
ಆನಂದ್ ಎಂ. ಸೌದಿ
ಯಾದಗಿರಿ(ಅ.28): ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಂದಾಯ ಗ್ರಾಮ ಘೋಷಣೆ ಕುರಿತು ಅಂತಿಮ ಅಧಿಸೂಚನೆ ಹೊರಡಿಸದಿದ್ದರೂ ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಸಾವಿರಾರು ತಾಂಡಾ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಇದರಿಂದ 3 ಸಾವಿರಕ್ಕೂ ಹೆಚ್ಚು ಕುಟುಂಬಗಳು ಇದೀಗ ಅತಂತ್ರ ಸ್ಥಿತಿಗೆ ಸಿಲುಕಿದಂತಾಗಿದೆ.
ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಯಾದಗಿರಿಯಲ್ಲಿ ಗುರುವಾರ ನಡೆಸಿದ ಪ್ರಗತಿ ಪರಿಶೀಲನಾ ಸಭೆಯ ವೇಳೆ ಹಿಂದಿನ ಸರ್ಕಾರದ ಈ ಎಡವಟ್ಟು ಬೆಳಕಿಗೆ ಬಂದಿದೆ. ಯಾದಗಿರಿ ಜಿಲ್ಲೆಯಲ್ಲಿ 85 ತಾಂಡಾ/ಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿಸುವ ನಿಟ್ಟಿನಲ್ಲಿ 12,400 ಕುಟುಂಬಗಳಿಗೆ ಜ.19ರಂದು ಕಲಬುರಗಿ ಜಿಲ್ಲೆ ಮಳಖೇಡದಲ್ಲಿ ಪ್ರಧಾನಿ ಮೋದಿ ಅವರ ಉಪಸ್ಥಿತಿಯಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ ಹಕ್ಕುಪತ್ರ ನೀಡಲಾಗಿತ್ತು. ಆದರೆ ಇದರಲ್ಲಿ 24 ತಾಂಡಾ/ಹಟ್ಟಿಗಳ 3,257 ಕುಟುಂಬಗಳಿಗೆ ಅಂತಿಮ ಅಧಿಸೂಚನೆಯೇ ಆಗದೆಯೇ ಹಕ್ಕುಪತ್ರ ನೀಡಲಾಗಿದೆ. ಈ ಕುರಿತು ಸಚಿವ ಕೃಷ್ಣಬೈರೇಗೌಡ ಅವರು ಪ್ರಶ್ನಿಸಿದಾಗ, ರಾಜಕೀಯ ಒತ್ತಡಕ್ಕೆ ಮಣಿದು ತರಾತುರಿಯಲ್ಲಿ ಹಕ್ಕುಪತ್ರಗಳನ್ನು ವಿತರಿಸಲಾಗಿದೆ ಎಂದು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.
ಅಕ್ರಮ ಮರಳು ದಂಧೆ ಚಿತ್ರೀಕರಿಸಿದ್ದಕ್ಕೆ ಥಳಿಸಿ ಕೃಷ್ಣಾ ನದಿಗೆ ಎಸೆಯಲು ಯತ್ನ!
ಅಂತಿಮ ಅಧಿಸೂಚನೆ ಆಗಿಲ್ಲದ ಕಾರಣ ಹಕ್ಕುಪತ್ರ ಪಡೆದವರು ಅತಂತ್ರ ಸ್ಥಿತಿಗೆ ತಲುಪುವಂತಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಸಚಿವರು, ಜನವರಿ ಅಂತ್ಯದೊಳಗೆ ಈ ಬಗ್ಗೆ ವರದಿ ಸಲ್ಲಿಸುವಂತೆ ಮತ್ತು ಆಗ ನೀಡಿದ್ದ ಹಕ್ಕುಪತ್ರ ಕಾನೂನುಬದ್ಧವಾಗುವಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಯಾದಗಿರಿ ತಾಲೂಕಿನ 6, ಶಹಾಪುರ ತಾಲೂಕಿನ 10, ಹುಣಸಗಿ ತಾಲೂಕಿನ 7 ಹಾಗೂ ಗುರುಮಠಕಲ್ ತಾಲೂಕಿನ 1 ತಾಂಡಾ ಸೇರಿ ಒಟ್ಟು 24 ಕಡೆ ನೀಡಿದ್ದ ಹಕ್ಕುಪತ್ರಕ್ಕೆ ಅಂತಿಮ ಅಧಿಸೂಚನಯೇ ಅಗಿಲ್ಲ. ಯಾದಗಿರಿ ಜಿಲ್ಲೆ ಅಷ್ಟೇ ಇಲ್ಲ, ಇನ್ನುಳಿದ ಜಿಲ್ಲೆಗಳಲ್ಲೂ ಇಂತಹ ಪ್ರಮಾದಗಳು ಆಗಿರಬಹುದಾದ ಮಾತುಗಳು ಕೇಳಿ ಬರುತ್ತಿವೆ.
ಬಿಜೆಪಿ ಸರ್ಕಾರದ ದಾಖಲೆ ಖ್ಯಾತಿಯ ಕಾರ್ಯಕ್ರಮ
ಕಂದಾಯ ಇಲಾಖೆಗೆ ಸೇರದ ಕಾರಣ ಕಂದಾಯೇತರ ಜನವಸತಿ ಪ್ರದೇಶದ ನಿವಾಸಿಗಳು ಅಭಿವೃದ್ಧಿ ಯೋಜನೆಗಳಿಂದ ವಂಚಿತರಾಗುತ್ತಿದ್ದರು. ಹೀಗಾಗಿ ಕರ್ನಾಟಕ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ತಂದು ತಾಂಡಾ-ಗೊಲ್ಲರಹಟ್ಟಿ ಸೇರಿ ವಿವಿಧ ಪ್ರದೇಶಗಳನ್ನು ಕಂದಾಯ ಗ್ರಾಮ ಎಂದು ಘೋಷಿಸಲು ನಿರ್ಧರಿಸಲಾಗಿತ್ತು.
ಶಹಾಪುರದಲ್ಲಿ ಮಳೆ ಕೊರತೆ: ಬೆಳೆ ಉಳಿಸಿಕೊಳ್ಳಲು ರೈತರ ಪರದಾಟ
ಅದರಂತೆ ಬೊಮ್ಮಾಯಿ ನೇತೃತ್ವದ ಹಿಂದಿನ ಬಿಜೆಪಿ ಸರ್ಕಾರವಧಿಯಲ್ಲಿ ಜ.19 ರಂದು ಕಲಬುರಗಿ ಜಿಲ್ಲೆ ಮಳಖೇಡದಲ್ಲಿ ಯಾದಗಿರಿ, ಕಲಬುರಗಿ, ಬೀದರ್ ಹಾಗೂ ರಾಯಚೂರು ಜಿಲ್ಲೆಗಳ ಸುಮಾರು 250 ತಾಂಡಾಗಳ 50 ಸಾವಿರ ಕುಟುಂಬಗಳಿಗೆ ಪ್ರಧಾನಿ ಸಮ್ಮುಖದಲ್ಲಿ ನಡೆದ ದಾಖಲೆ ಖ್ಯಾತಿಯ ಕಾರ್ಯಕ್ರಮದಲ್ಲಿ ಹಕ್ಕುಪತ್ರ ವಿತರಿಸಲಾಗಿತ್ತು. ಈ ರೀತಿ ಒಂದೇ ಕಡೆ ಇಷ್ಟೊಂದು ಪ್ರಮಾಣದಲ್ಲಿ ಹಕ್ಕು ಪ್ರತ್ರ ವಿತರಿಸಿದ್ದು ಇದೇ ಮೊದಲು ಎಂಬ ಹೆಗ್ಗಳಿಕೆಗೆ ಆ ಕಾರ್ಯಕ್ರಮ ಪಾತ್ರವಾಗಿತ್ತು.
ಅಂತಿಮ ಅಧಿಸೂಚನೆ ಆಗದಿದ್ದರೂ ತರಾತುರಿಯಲ್ಲಿ ಸಾವಿರಾರು ಕುಟುಂಬಗಳಿಗೆ ಹಕ್ಕುಪತ್ರ ಕೊಡಲಾಗಿದೆ. ಅದು ಮಾನ್ಯ ಆಗುವುದಿಲ್ಲ. ಇದು ಹಕ್ಕುಪತ್ರ ಪಡೆದವರನ್ನು ಅತಂತ್ರರಾಗಿಸಿದಂತೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.