ಧಾರವಾಡ: ಕೊರೋನಾ ಓಡಿಸಲು ಗ್ರಾಮಸ್ಥರಿಂದ ಸ್ವಯಂ ದಿಗ್ಬಂಧನ!

By Kannadaprabha News  |  First Published May 24, 2021, 11:29 AM IST

* ಧಾರವಾಡ ಜಿಲ್ಲೆಯ 30ಕ್ಕೂ ಹೆಚ್ಚು ಹಳ್ಳಿಗಳು ಸ್ವಯಂ ಲಾಕ್‌ಡೌನ್‌
* ಊರು ಸಂಪರ್ಕಿಸುವ ರಸ್ತೆಗಳು ಬಂದ್‌, ಊರಿಂದ ಊರಿಗೆ ಹೋಗುವುದು, ಬರುವುದಕ್ಕೆ ನಿರ್ಬಂಧ
* ಕೊರೋನಾ ನಿಯಂತ್ರಣಕ್ಕೆ ಮತ್ತೆ ಗ್ರಾಮಗಳು ಲಾಕ್‌
 


ಬಸವರಾಜ ಹಿರೇಮಠ

ಧಾರವಾಡ(ಮೇ.24): ​ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಮಿತಿ ಮೀರುತ್ತಿರುವ ಕೋವಿಡ್‌ ಸೋಂಕಿನ ಕೊಂಡಿಯನ್ನು ಕಳಚಲು ಇದೀಗ ಜಿಲ್ಲೆಯ 30ಕ್ಕೂ ಹೆಚ್ಚು ಗ್ರಾಮಗಳು ಸ್ವಯಂ ಲಾಕ್‌ಡೌನ್‌ ಘೋಷಣೆಯ ಮೊರೆ ಹೋಗಿವೆ.

Latest Videos

undefined

ಆರಂಭದಲ್ಲಿ ಹು-ಧಾ ಅವಳಿ ನಗರಕ್ಕೆ ಸೀಮಿತವಾಗಿದ್ದ ಕೋವಿಡ್‌-19 ಎರಡನೇ ಅಲೆಯು ಕಳೆದ 15-20 ದಿನಗಳ ಅಂತರದಲ್ಲಿ ಏಕಾಏಕಿ ಗ್ರಾಮೀಣ ಪ್ರದೇಶಕ್ಕೆ ದಾಂಗುಡಿ ಇಟ್ಟಿದೆ. ನಿತ್ಯ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ 300ಕ್ಕೂ ಹೆಚ್ಚು ಕೋವಿಡ್‌ ಪಾಸಿಟಿವ್‌ ಪ್ರಕರಣಗಳು ದಾಖಲಾಗುತ್ತಿವೆ. ಇದಕ್ಕಿಂತ ಬೇಸರದ ಸಂಗತಿ ಏನೆಂದರೆ ಕೋವಿಡ್‌ ಕಾರಣದಿಂದ ಸಾಲು-ಸಾಲು ಸಾವುಗಳು ಸಂಭವಿಸುತ್ತಿವೆ. ಈ ಕಾರಣದಿಂದ ಗ್ರಾಮಗಳಲ್ಲಿ ತೀವ್ರ ಆತಂಕ ಶುರುವಾಗಿದೆ. ಅತಿ ಹೆಚ್ಚು ಪ್ರಕರಣಗಳು ದಾಖಲಾಗುವ ಗ್ರಾಮಗಳು ಮಾತ್ರವಲ್ಲದೇ, ಮುನ್ನೆಚ್ಚರಿಕೆ ಕ್ರಮಗಳ ಭಾಗವಾಗಿ ಕೆಲವು ಗ್ರಾಮಸ್ಥರು ತಮ್ಮ ತಮ್ಮ ಊರುಗಳಿಗೆ ತಾವೇ ಬೇಲಿ ಹಾಕಿಕೊಳ್ಳುವ ಮೂಲಕ ಕೋವಿಡ್‌ ಸೋಂಕಿನ ವಿರುದ್ಧ ಹೋರಾಡಲು ಸಜ್ಜಾಗಿದ್ದಾರೆ.

"

ಯಾವ್ಯಾವ ಗ್ರಾಮಗಳು?:

ಧಾರವಾಡ ತಾಲೂಕಿನ ಕ್ಯಾರಕೊಪ್ಪ, ಹಳ್ಳಿಗೇರಿ, ಗರಗ, ಅಮ್ಮಿನಬಾವಿ, ಕನಕೂರು, ಹೆಬ್ಬಳ್ಳಿ ಗ್ರಾಮಗಳು ಸ್ವಯಂ ಲಾಕ್‌ಡೌನ್‌ ಘೋಷಿಸಿವೆ. ಅದೇ ರೀತಿ ಹುಬ್ಬಳ್ಳಿ ತಾಲೂಕು ಅಂಚಟಗೇರಿ, ದೇವರಹುಡಿಹಾಳ, ಹಳಿಯಾಳ, ಕಟ್ನೂರ, ರಾಯನಾಳ, ಶಿರಗುಪ್ಪಿ, ವರೂರ, ಬ್ಯಾಹಟ್ಟಿ, ಅದರಗುಂಚಿ, ಅಣ್ಣಿಗೇರಿಯ ಭದ್ರಾಪುರ, ಇಬ್ರಾಹಿಂಪುರ, ನಲವಡಿ, ಸಾಸ್ವಿಹಳ್ಳಿ, ಶಲವಡಿ, ಶಿಶ್ವಿನಹಳ್ಳಿ, ತುಪ್ಪದ ಕುರಹಟ್ಟಿಇನ್ನು ನವಲಗುಂದ ತಾಲೂಕಿನ ಅಳಗವಾಡಿ, ಬೆಳೆಹಾರ, ಬೆಳವಟಗಿ, ಗುಡಿಸಾಗರ, ಹಾಳಕುಸುಗಲ, ಹೆಬ್ಬಾಳ, ಜಾವೂರ, ಕಾಲವಾಡ, ಮೊರಬ, ಖನ್ನೂರ, ಶಿರಕೋಳ, ಶಿರೂರ, ತಡಹಾಳ, ತಿರ್ಲಾಪುರ, ಯಮನೂರ ಗ್ರಾಮಸ್ಥರು ತಮ್ಮೂರಿಗೆ ಸ್ವಯಂ ದಿಗ್ಬಂಧನ ಹೇರಿಕೊಂಡಿದ್ದಾರೆ. ಇದರೊಂದಿಗೆ ಕಲಘಟಗಿ ಹಾಗೂ ಕುಂದಗೋಳ ತಾಲೂಕುಗಳ 10ಕ್ಕೂ ಹೆಚ್ಚು ಗ್ರಾಮಸ್ಥರು ತಮ್ಮೂರಿಗೆ ನಿರ್ಬಂಧ ಹಾಕಿದ್ದಾರೆ.

ಬ್ಲ್ಯಾಕ್‌ ಫಂಗಸ್‌: ಬೇರೆ ಜಿಲ್ಲೆಯವರಿಗೆ ಹುಬ್ಬಳ್ಳಿ ಕಿಮ್ಸ್‌ನಲ್ಲಿ ಚಿಕಿತ್ಸೆ ಇಲ್ಲ..!

ಯಾವ ರೀತಿ ನಿರ್ಬಂಧ?:

ಜಿಲ್ಲೆಯ 30ಕ್ಕೂ ಹೆಚ್ಚು ಗ್ರಾಮಗಳು ತಮ್ಮ ಗ್ರಾಪಂ ಕಾರ್ಯಪಡೆಯ ಸಲಹೆ ಮೇರೆಗೆ ಸ್ವಯಂ ಲಾಕ್‌ಡೌನ್‌ ಘೋಷಣೆ ಮಾಡಿವೆ. ಆಯಾ ಗ್ರಾಮಗಳಲ್ಲಿರುವ ಕೋವಿಡ್‌ ಸಂಖ್ಯೆಗೆ ಅನುಗುಣವಾಗಿ 3ರಿಂದ 14 ದಿನಗಳ ವರೆಗೆ ನಿರ್ಬಂಧ ಹೇರಿಕೊಂಡಿವೆ. ಈ ಸಮಯದಲ್ಲಿ ಬೇರೆ ಗ್ರಾಮಸ್ಥರು ತಮ್ಮೂರಿಗೆ ಬರುವಂತಿಲ್ಲ. ತಮ್ಮೂರಿನವರು ಬೇರೆ ಊರಿಗೆ ಹೋಗುವಂತಿಲ್ಲ. ಗ್ರಾಮಕ್ಕೆ ಸಂಪರ್ಕಿಸುವ ಎಲ್ಲ ರಸ್ತೆಗಳನ್ನು ಕಟ್ಟಿಗೆ ಹಾಗೂ ಇತರ ವಸ್ತುಗಳಿಂದ ಬಂದ್‌ ಮಾಡಿಕೊಳ್ಳಲಾಗಿದೆ. ಜತೆಗೆ ಗ್ರಾಮದಲ್ಲೂ ಒಟ್ಟೊಟ್ಟಿಗೆ ಜನ ಸೇರುವಂತಿಲ್ಲ. ಮನೆಯಲ್ಲಿಯೇ ಇದ್ದುಕೊಂಡು ಕೋವಿಡ್‌ ಹಬ್ಬದಂತೆ ನೋಡಿಕೊಳ್ಳಬೇಕು ಎಂದು ಗ್ರಾಪಂಗಳು ಆದೇಶ ಮಾಡಿವೆ. ಈ ಎಲ್ಲವನ್ನು ಗ್ರಾಪಂ ಸದಸ್ಯರು, ಪಿಡಿಒ ಹಾಗೂ ಕಾರ್ಯಪಡೆಯ ಸದಸ್ಯರು ನಿರ್ವಹಿಸುತ್ತಿದ್ದಾರೆ.

ಉಳಿದ ಗ್ರಾಮಗಳಿಗೆ ಮಾದರಿ:

ಕೋವಿಡ್‌-19 ಮೊದಲ ಅಲೆಯ ಸಮಯದಲ್ಲೂ ಗ್ರಾಮೀಣ ಭಾಗಕ್ಕೆ ವಕ್ಕರಿಸಿಕೊಂಡ ಸೋಂಕು ಓಡಿಸಲು ಗ್ರಾಮಸ್ಥರು ಕಳೆದ ಬಾರಿಯೂ ಇದೇ ತಂತ್ರ ಹೂಡಿದ್ದರು. ಅದು ಯಶಸ್ವಿಯೂ ಆಗಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿಯೂ ಗ್ರಾಮಸ್ಥರು ತಮ್ಮ ಜನರನ್ನು ಉಳಿಸಿಕೊಳ್ಳಲು ಸ್ವಯಂ ನಿರ್ಬಂಧ ಹೇರಿಕೊಂಡಿದ್ದು ಉತ್ತಮ ನಿರ್ಧಾರ. ಈ ಗ್ರಾಮಗಳ ನಿರ್ಧಾರ ಉಳಿದ ಗ್ರಾಮಸ್ಥರಿಗೂ ಮಾದರಿ ಹೌದು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

click me!