ಮೈಸೂರು (ಮೇ.24): ಕೊರೋನಾ ನಿಯಂತ್ರಣದ ನಿಟ್ಟಿನಲ್ಲಿ ಕೋವಿಡ್ ಮಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜೂ. 1 ರಿಂದ 25 ರವರೆಗೆ ಯಾವ ವಾರ್ಡ್, ಗ್ರಾಪಂ ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರ ಕೋವಿಡ್ ಮುಕ್ತವಾಗುವುದೋ ಅಂತಹವರಿಗೆ ಪುರಸ್ಕಾರ ನೀಡಲು ಜಿಲ್ಲಾಡಳಿತ ತೀರ್ಮಾನಿಸಿದೆ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ನಗರ ಪ್ರದಶದಲ್ಲಿ ವಾರ್ಡ್, ಗ್ರಾಪಂ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಗುರುತಿಸಲಾಗಿದ್ದು, ಪ್ರತಿ ತಾಲೂಕಿನಿಂದ ಮೂರು ಗ್ರಾಪಂ, ಮೂರು ಪ್ರಾಥಮಿಕ ಆರೋಗ್ಯಕೇಂದ್ರ ಮತ್ತು ಮೂರು ವಾರ್ಡ್‌ಗಳನ್ನು ಆಯ್ಕೆ ಮಾಡಲಾಗುವುದು. ಇಲ್ಲಿನ ಆರೋಗ್ಯಾಧಿಕಾರಿ, ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಪಂ ಪಿಡಿಒ, ಕಾರ್ಯದರ್ಶಿ ಮುಂತಾದವರನ್ನು ಗುರುತಿಸಿ ಪ್ರಶಂಸನಾ ಪತ್ರವನ್ನು ಜು. 1 ರಂದು ನಡೆಯುವ ವೈದ್ಯರ ದಿನಾಚರಣೆ ದಿನ ನೀಡಲಾಗುವುದು ಎಂದರು.
ಮೈಸೂರಿನ ಕೋವಿಡ್ ಮಿತ್ರದ ಬಗ್ಗೆ ಮೋದಿಗೆ ಮಾಹಿತಿ: ರೋಹಿಣಿ .
ಪ್ರಸ್ತುತ ಎಚ್.ಡಿ. ಕೋಟೆ ತಾಲೂಕಿನ ಡಿ.ಬಿ. ಕುಪ್ಪೆ ಗ್ರಾಪಂ ಕೊರೋನಾ ಮುಕ್ತವಾಗಿದೆ. ಇಲ್ಲಿ ಸುಮಾರು 7 ಸಾವಿರ ಮಂದಿ ಇದ್ದರೂ ಯಾವುದೇ ಕೊರೋನಾ ಪ್ರಕರಣ ಪತ್ತೆಯಾಗಿಲ್ಲ. ಇಲ್ಲಿ ಏನೆಲ್ಲ ಕ್ರಮ ಕೈಗೊಂಡಿದ್ದಾರೆ ಎಂಬುದನ್ನು ನೋಡಿ ಅನುಸರಿಸಬೇಕು. ಅಂತೆಯೇ ಇತರ ಗ್ರಾಪಂಗಳು ತಮ್ಮ ವ್ಯಾಪ್ತಿಯಲ್ಲಿ ಕೊರೋನಾ ಮುಕ್ತಗೊಳಿಸಲು ಶ್ರಮಿಸಬೇಕು ಎಂದು ಅವರು ಹೇಳಿದರು.