ದುರ್ಗದ ಏಳು ಸುತ್ತಿನ ಕೋಟೆಗೆ ಲಗ್ಗೆ ಇಟ್ಟ ಪ್ರವಾಸಿಗರು; ಮುರುಘಾ ಮಠಕ್ಕೂ ದೌಡು!

By Kannadaprabha News  |  First Published Jan 2, 2023, 3:26 PM IST

ಐತಿಹಾಸಿಕ ಚಿತ್ರದುರ್ಗ ಕೋಟೆಗೆ ಹೊಸ ವರ್ಷದ ಮೊದಲ ದಿನವಾದ ಭಾನುವಾರ ಪ್ರವಾಸಿಗರು ಅಕ್ಷರಶಃ ಲಗ್ಗೆ ಹಾಕಿದ್ದರು. ಇತ್ತೀಚೆಗಿನ ವರ್ಷಗಳಲ್ಲಿ ಇಷ್ಟೊಂದು ಪ್ರಮಾಣಲ್ಲಿ ಪ್ರವಾಸಿಗರನ್ನು ಒಂದೇ ದಿನದಲ್ಲಿ ಕೋಟೆ ಕಂಡಿರಲಿಲ್ಲ.


ಚಿತ್ರದುರ್ಗ (ಜ.2) : ಐತಿಹಾಸಿಕ ಚಿತ್ರದುರ್ಗ ಕೋಟೆಗೆ ಹೊಸ ವರ್ಷದ ಮೊದಲ ದಿನವಾದ ಭಾನುವಾರ ಪ್ರವಾಸಿಗರು ಅಕ್ಷರಶಃ ಲಗ್ಗೆ ಹಾಕಿದ್ದರು. ಇತ್ತೀಚೆಗಿನ ವರ್ಷಗಳಲ್ಲಿ ಇಷ್ಟೊಂದು ಪ್ರಮಾಣಲ್ಲಿ ಪ್ರವಾಸಿಗರನ್ನು ಒಂದೇ ದಿನದಲ್ಲಿ ಕೋಟೆ ಕಂಡಿರಲಿಲ್ಲ. ಎಲ್ಲಿ ನೋಡಿದರೂ ಜನವೋ ಜನ. ಕೈಯಲ್ಲಿ ಕೇಕ್‌ ಹಿಡಿದುಕೊಂಡೇ ಮೆಟ್ಟಿಲು ಏರುತ್ತಿದ್ದ ಯುವಕರು, ಯುವತಿಯರ ಗುಂಪು ಕೇಕ್‌ ಕತ್ತರಿಸಿ ವರ್ಷಾಚರಣೆಗೆ ಜಾಗ ಹುಡುಕಾಟದಲ್ಲಿ ನಿರತರಾಗಿದ್ದ ದೃಶ್ಯ ಸಾಮಾನ್ಯವಾಗಿತ್ತು.

ದಾವಣಗೆರೆ, ಹಾವೇರಿ, ಚಿಕ್ಕಮಗಳೂರು, ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲೆಗಳಿಂದ ಹೆಚ್ಚು ಮಂದಿ ಪ್ರವಾಸಿಗರು ಆಗಮಿಸಿದ್ದರು. ಕೋಟೆ ಸಮೀಪದ ಬೇಕರಿಯಲ್ಲಿ ಕೇಕ್‌ ಖರೀದಿಸಿ ಕೋಟೆಯತ್ತ ಯುವಕರು ಹೆಜ್ಜೆ ಹಾಕುತ್ತಿದ್ದ ಚಿತ್ರ ಎಲ್ಲೆಡೆ ಕಂಡು ಬಂತು.

Tap to resize

Latest Videos

ಫಿಟ್‌ನೆಸ್‌ ತೋರಿಸಿದ ನಂತರ ಆಟೋದ ಮೀಟರ್‌ ಮಾಯ

ಜ. 1 ರಜಾ ದಿನವಾದ ಭಾನುವಾರ ಬಂದಿದ್ದರಿಂದ ಸಹಜವಾಗಿಯೇ ಪ್ರವಾಸಿಗರ ಸಂಖ್ಯೆ ಇಮ್ಮಡಿಯಾಗಿತ್ತು. ಟಿಕೆಟ್‌ ಪಡೆಯಲು ಕೋಟೆ ಮುಂಭಾಗದ ಪ್ರಾಚ್ಯ ವಸ್ತು ಇಲಾಖೆಯ ಕೌಂಟರ್‌ನಲ್ಲಿ ನೂಕು ನುಗ್ಗಲು ಉಂಟಾಗಿತ್ತು. ನೂಕಾಟ ತಪ್ಪಿಸಲು ತಾತ್ಕಾಲಿಕವಾಗಿ ಬ್ಯಾರಿಕೇಡ್‌ಗಳ ನಿರ್ಮಿಸಲಾಗಿತ್ತು. ರಾತ್ರಿಯಿಡಿ ಪ್ರಯಾಣ ಮಾಡಿಕೊಂಡು ಬಂದಿದ್ದ ಹಲವು ಮಂದಿ ಪ್ರವಾಸಿಗರು ಮುಂಜಾನೆ ಏಳು ಗಂಟೆಗೆ ಬೆಟ್ಟಏರಿದರು. ನಿಧಾನವಾಗಿ ಬಿಸಿಲು ಏರುತ್ತಿದ್ದಂತೆ ಪ್ರವಾಸಿಗರ ಸಂಖ್ಯೆಯಲ್ಲಿಯೂ ಹೆಚ್ಚಳವಾಗತೊಡಗಿತು. ಹತ್ತು ಗಂಟೆ ಸುಮಾರಿಗೆ ಕೋಟೆ ಒಳಗೆ ಹೋಗಲು ಸರಾಗ ಎನ್ನುವಂತಹ ಮಾತು ದೂರ ಸರಿದಿತ್ತು.

ಓಬವ್ವನ ಕಿಂಡಿ, ತುಪ್ಪದ ಕೊಳ ಆಕರ್ಷಣೆ:

ಹೊಸ ವರ್ಷ ಸಂಭ್ರಮಾಚರಣೆ ಹಿನ್ನೆಲೆ ಕೋಟೆಗೆ ದಾಂಗುಡಿ ಇಟ್ಟಿದ್ದ ಬಹುತೇಕ ಯುವಕ, ಯುವತಿಯರಲ್ಲಿ ಕೋಟೆ ಚರಿತ್ರೆ ತಿಳಿದುಕೊಳ್ಳುವ ಯಾವುದೇ ಆಸಕ್ತಿಗಳು ಇದ್ದಂತೆ ಕಂಡು ಬರಲಿಲ್ಲ. ಎಲ್ಲರಿಗೂ ಒನಕೆ ಓಬವ್ವ ಕಿಂಡಿ ನೋಡುವ, ತುಪ್ಪದ ಕೊಳ ಏರುವುದರ ಕಡೆ ಆಸಕ್ತಿ ಕೇಂದ್ರೀಕರಿಸಿದ್ದರು. ದಾರಿಯ ಮಧ್ಯೆ ಬರುವ ಉಯ್ಯಾಲೆ ಕಂಬ, ಏಕನಾಥೇಶ್ವರಿ ದೇವಸ್ಥಾನದ ಕಡೆ ಕಣ್ಣಾಯಿಸಿ ಹೋಗುತ್ತಿದ್ದುದು ವಿಶೇಷವಾಗಿತ್ತು.

ಜ್ಯೋತಿರಾಜ್‌ ಸಾಹಸ

ಚಿತ್ರದುರ್ಗ ಕೋಟೆ ಏರುವ ಪ್ರವಾಸಿಗರ ಕೆಲಕಾಲ ಹಿಡಿದಿಟ್ಟುಕೊಂಡು ಅವರನ್ನು ರೋಮಾಂಚನಗೊಳಿಸುವಲ್ಲಿ ಜ್ಯೋತಿರಾಜ್‌ ಯಶಸ್ವಿಯಾಗಿದ್ದ. ಕೋಟೆ ಏರುವ ಸಾಹಸಲ್ಲಿ ನಿಷ್ಣಾತನಾಗಿರುವ ಜ್ಯೋತಿರಾಜ್‌ ಉಡದಂತೆ ಕೋಟೆಗೋಡೆ ಏರುವ ಸಾಹಸ ಪ್ರದರ್ಶಿಸಿದ. ಉಸಿರು ಬಿಗಿ ಹಿಡಿದು ಪ್ರವಾಸಿಗರು ಆತನ ಸಾಹಸ ವೀಕ್ಷಿಸಿದ್ದು ವಿಶೇಷವಾಗಿತ್ತು. ಚಿತ್ರದುರ್ಗ ಕೋಟೆಯಲ್ಲಿ ಒಟ್ಟು ಹದಿನೆಂಟು ಮಂದಿ ಪ್ರವಾಸಿ ಗೈಡ್‌ಗಳಿದ್ದು ಇಷ್ಟೊಂದು ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸಿದರೂ ಅವರಿಗೆ ಅಷ್ಟಾಗಿ ಡಿಮ್ಯಾಂಡ್‌ ಕಂಡು ಬರಲಿಲ್ಲ.

ಚಿತ್ರದುರ್ಗದಲ್ಲಿ ರಾತ್ರಿ ವೇಳೆ ಆಟೋ-ಸುಲಿಗೆ; ಕಿಮೀಗೂ ನೂರು ರೂ. ಕೇಳ್ತಾರೆ!

ಮೂಲ ಸೌಲಭ್ಯದ ಕೊರತೆ:

ಕೋಟೆ ನೋಡಲು ಆಗಮಿಸಿದ್ದ ಪ್ರವಾಸಿಗರು ಎಂದಿನಂತೆ ಕುಡಿವ ನೀರು ಹಾಗೂ ಶೌಚಾಲಯ ಸಮಸ್ಯೆ ಎದುರಿಸಿದರು. ಕೋಟೆ ಪ್ರವೇಶಕ್ಕೆ ತಲೆಗೆ ಇಪ್ಪತ್ತೈದು ರುಪಾಯಿ ಪಡೆಯ ಲಾಗುತ್ತದೆ. ಆದರೆ ಕನಿಷ್ಠ ಶೌಚಾಲಯ ಸೌಲಭ್ಯ ಕಲ್ಪಿಸುವಲ್ಲಿ ಪ್ರಾಚ್ಯವಸ್ತು ಇಲಾಖೆ ವಿಫಲವಾಗಿದೆ ಎಂದು ವಿಜಯನಗರ ಜಿಲ್ಲೆಯ ಪ್ರವಾಸಿಗ ಕೊಟ್ರೇಶ್‌ ಕನ್ನಡಪ್ರಭಕ್ಕೆ ತಿಳಿಸಿದರು.

click me!