ಬೆಂಗಳೂರಲ್ಲಿ ಮೇ ತಿಂಗಳ ಮಳೆ 123 ವರ್ಷಗಳಲ್ಲೇ ದಾಖಲೆ..!

By Kannadaprabha NewsFirst Published Jun 2, 2023, 6:40 AM IST
Highlights

ಕಳೆದ 123 ವರ್ಷದಲ್ಲಿ ಈ ಬಾರಿಯ ಮೇ ತಿಂಗಳಿನಲ್ಲಿ ಸುರಿದಿದ್ದು ಮಹಾಮಳೆಯಾಗಿದೆ. ಇದಕ್ಕೂ ಹಿಂದಿನ ವರ್ಷಗಳ ಅಂಕಿ-ಅಂಶ ಹವಾಮಾನ ಇಲಾಖೆ ಬಳಿ ಇಲ್ಲ. 1901ರಿಂದ ಮಳೆಯ ಪ್ರಮಾಣ ದಾಖಲು ಮಾಡುವ ವ್ಯವಸ್ಥೆ ಆರಂಭಗೊಂಡಿದೆ. ಹೀಗಾಗಿ, 1,901ರ ನಂತರ ಮೇನಲ್ಲಿ ಸುರಿದ ಅತಿ ದೊಡ್ಡ ಮಳೆ ಇದಾಗಿದೆ.

ಬೆಂಗಳೂರು(ಜೂ.02):  ಕಳೆದ ಮೇ ತಿಂಗಳಿನಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದೆ. ಮೇ ತಿಂಗಳಲ್ಲಿ ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಭಾರಿ ಪ್ರಮಾಣ ಬಿಸಿಲು ಇರುತ್ತದೆ, ಆದರೆ ಈ ಬಾರಿ ಬಿಸಿಲಿಗಿಂತ ಹೆಚ್ಚು ಮಳೆ ಸುರಿದಿದ್ದು, ಹವಾಮಾನ ಇಲಾಖೆ ಪ್ರಕಾರ ಮೇ ತಿಂಗಳಲ್ಲಿ 13 ಸೆಂ.ಮೀ. ವಾಡಿಕೆ ಮಳೆಯಾಗುತ್ತದೆ. ಆದರೆ, ಈ ಬಾರಿ ಬರೋಬ್ಬರಿ 31 ಸೆಂ.ಮೀ ಮಳೆಯಾಗಿದ್ದು, ವಾಡಿಕೆ ಪ್ರಮಾಣಕ್ಕಿಂತ ಶೇಕಡ 239ರಷ್ಟು ಹೆಚ್ಚಾಗಿದೆ.

ಕಳೆದ 123 ವರ್ಷದಲ್ಲಿ ಈ ಬಾರಿಯ ಮೇ ತಿಂಗಳಿನಲ್ಲಿ ಸುರಿದಿದ್ದು ಮಹಾಮಳೆಯಾಗಿದೆ. ಇದಕ್ಕೂ ಹಿಂದಿನ ವರ್ಷಗಳ ಅಂಕಿ-ಅಂಶ ಹವಾಮಾನ ಇಲಾಖೆ ಬಳಿ ಇಲ್ಲ. 1901ರಿಂದ ಮಳೆಯ ಪ್ರಮಾಣ ದಾಖಲು ಮಾಡುವ ವ್ಯವಸ್ಥೆ ಆರಂಭಗೊಂಡಿದೆ. ಹೀಗಾಗಿ, 1,901ರ ನಂತರ ಮೇನಲ್ಲಿ ಸುರಿದ ಅತಿ ದೊಡ್ಡ ಮಳೆ ಇದಾಗಿದೆ.

ಮಳೆ ಮುನ್ಸೂಚನೆ: ಗುಡುಗು, ಸಿಡಿಲಿನಿಂದ ತಪ್ಪಿಸಿಕೊಳ್ಳೋದು ಹೇಗೆ?

66 ವರ್ಷದ ಹಿಂದೆ ಅಂದರೆ 1957ರ ಮೇ ತಿಂಗಳಿನಲ್ಲಿ ನಗರದಲ್ಲಿ 29 ಸೆಂ.ಮೀ ಮಳೆಯಾಗಿತ್ತು. ಅದು ವಾಡಿಕೆ ಪ್ರಮಾಣಕ್ಕಿಂತ ಶೇ.223ರಷ್ಟು ಹೆಚ್ಚಿನ ಮಳೆಯಾಗಿದೆ. ಇದು ಈವರೆಗಿನ ದಾಖಲೆಯಾಗಿತ್ತು. ಇದೀಗ ಹಳೆ ದಾಖಲೆ ಮುರಿದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮಹಾ ಮಳೆಗೆ ಕಾರಣ ಏನು?

ಕಳೆದ ಏಪ್ರಿಲ್‌ ಕೊನೆಯ ವಾರದಿಂದ ರಾಜ್ಯದಲ್ಲಿ ಗಾಳಿಯ ದಿಕ್ಕಿನ ಬದಲಾವಣೆ, ಟ್ರಫ್‌ ಕಂಡು ಬಂದ ಹಿನ್ನೆಲೆಯಲ್ಲಿ ನಗರದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದೆ. ಮೇ ತಿಂಗಳಿನಲ್ಲಿ ಒಂದು ದಿನ ಮಾತ್ರ ಭಾರೀ ಮಳೆಯಾಗಿದೆ. ಉಳಿದಂತೆ ಸಾಮಾನ್ಯ ಪ್ರಮಾಣ ಮಳೆಯಾಗಿದೆ. ಮಳೆಗೆ ಪೂರಕವಾದ ಉಷ್ಣಾಂಶ ಸೇರಿದಂತೆ ಎಲ್ಲ ರೀತಿಯ ವಾತಾವರಣ ಕಂಡು ಬಂದಿತ್ತು. ಪ್ರತಿ ದಿನ ಗುಡುಗು, ಮಿಂಚು ಸಹಿತ ಹೆಚ್ಚಿನ ಮಳೆ ದಿನಗಳ ಮೇನಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣ ಮಳೆ ಆಗಿದೆ ಎಂದು ಹವಾಮಾನ ಇಲಾಖೆಯ ತಜ್ಞ ಪ್ರಸಾದ್‌ ‘ಕನ್ನಡಪ್ರಭ’ಕ್ಕೆ ವಿವರಿಸಿದ್ದಾರೆ.

ಅಂಕಿ ಅಂಶ

*ಮೇ ತಿಂಗಳಲ್ಲಿ 12-13 ಸಾಮಾನ್ಯ ಮಳೆ ದಿನಗಳು
*1957ರ ಮೇ ತಿಂಗಳಿನಲ್ಲಿ 29 ಸೆಂ.ಮೀ
*2023ರ ಮೇ ನಲ್ಲಿ 31 ಸೆಂ.ಮೀ
*ಮೇ ತಿಂಗಳ ವಾಡಿಕೆ ಮಳೆ 13 ಸೆಂ.ಮೀ
*ಪ್ರಸಕ್ತ ಮೇ 30 ರಂದು ಭಾರೀ 7 ಸೆಂ.ಮೀ ಮಳೆ
*ಮೇನಲ್ಲಿನ ಈವರೆಗೆ ದಾಖಲೆ ಗರಿಷ್ಠ ಉಷ್ಣಾಂಶ 37.6 ಡಿಗ್ರಿ ಸೆಲ್ಸಿಯಸ್‌ (2013 ಮೇ 3)

click me!