ವಾಡಿಕೆಗಿಂತ ಹೆಚ್ಚು ಸುರಿದ ಮಳೆ; ಮಲೆನಾಡ ರೈತರ ಮೊಗದಲ್ಲಿ ಸಂತಸ

By Suvarna News  |  First Published May 21, 2024, 11:51 PM IST

ಕಳೆದೊಂದು ವಾರದಿಂದ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ನಿರಂತರವಾಗಿ ಸುರಿದ ಮಳೆಯಿಂದ ಈ ವರ್ಷ ಪೂರ್ತಿ ಅನುಭವಿಸಿದ ಬರದ ಛಾಯೆ ಅಳಿಸಿದಂತಾಗಿದ್ದು, ರೈತರು ಬೆಳೆಗಾರರ ಮೊಗದಲ್ಲಿ ಸಂತಸ ಮೂಡಿದೆ.


ವರದಿ : ಆಲ್ದೂರು ಕಿರಣ್ 

ಚಿಕ್ಕಮಗಳೂರು (ಮೇ.21): ಕಳೆದೊಂದು ವಾರದಿಂದ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ನಿರಂತರವಾಗಿ ಸುರಿದ ಮಳೆಯಿಂದ ಈ ವರ್ಷ ಪೂರ್ತಿ ಅನುಭವಿಸಿದ ಬರದ ಛಾಯೆ ಅಳಿಸಿದಂತಾಗಿದ್ದು, ಮೇ ಮಾಹೆಯಲ್ಲಿ ವಾಡಿಕೆಗಿಂತಲೂ ಬಹುತೇಕ ದುಪ್ಪಟ್ಟು ಪ್ರಮಾಣದಲ್ಲಿ ಮಳೆ ಸುರಿದಿದೆ.ಬಯಲು, ಮಲೆನಾಡು ಹಾಗೂ ಅರೆಮಲೆನಾಡು ಪ್ರದೇಶಗಳಿಗೆ ಹದವಾಗಿ ಮಳೆ ಸುರಿದಿರುವುದು ವಿಶೇಷ. ಇದರಿಂದ ಇಡೀ ಜಿಲ್ಲೆಯಲ್ಲಿ ರೈತರು, ಬೆಳೆಗಾರರು ನಿಟ್ಟುಸಿರುಬಿಟ್ಟಿದ್ದು ಕೃಷಿ ಹಾಗೂ ತೋಟಗಾರಿಕೆ ಚಟುವಟಿಕೆಗಳಿಗೆ ಚಾಲನೆ ನೀಡಿದ್ದಾರೆ.

Latest Videos

undefined

ಪ್ರಕೃತಿಗೆ ಹೊಸ ಕಳೆ

ಒಂದು ವಾರದ ಹಿಂದಷ್ಟೇ ಬಿರುಬೇಸಿಗೆ, ಬರದಿಂದ ತತ್ತರಿಸಿ ಮುಗಿಲನ್ನೇ ದಿಟ್ಟಿಸುವ ಪರಿಸ್ಥಿತಿ ಇತ್ತು. ಆದರೆ ನಾಲ್ಕೈದು ದಿನಗಳಿಂದ ಸುರಿದ ಮಳೆಯಿಂದ ಸದಾ ಬರಗಾಲ ಎದುರಿಸುವ ಬಯಲು ಭಾಗದಲ್ಲೇ ಮೊದಲ ಕೆರೆ ತುಂಬಿ ಕೋಡಿ ಹರಿದಿದೆ.ಭೀಕರ ಬಿಸಿಲು, ಬಿಸಿಗಾಳಿಯಿಂದಾಗಿ ಬೆಂಗಾಡಿನಂತಾಗಿದ್ದ ಅಜ್ಜಂಪುರ ತಾಲ್ಲೂಕು ಹಾಗೂ ಕಡೂರು, ತರೀಕೆರೆ ತಾಲ್ಲೂಕಿನಲ್ಲೂ ವ್ಯಾಪಕವಾಗಿ ಹದಮಳೆ ಆಗಿದ್ದು, ಬರಕ್ಕೆ ಸಿಕ್ಕಿ ಹೈರಾಣಾಗಿದ್ದ ಜನರಿಗೆ ಸಮಾಧಾನ ತಂದಿದೆ. ಬಿಸಿಲ ಧಗೆ ಇಳಿಮುಖವಾಗಿ ವಾತಾವರಣದಲ್ಲೂ ತಂಪು ಆವರಿಸಿಕೊಂಡಿದೆ. ಒಣಗಿ ನಿಂತಿದ್ದ ಅಡಿಕೆ, ತೆಂಗು ಸೇರಿದಂತೆ ಗಿಡ, ಮರಗಳಲ್ಲಿ ಚೇತರಿಕೆ ಕಾಣಿಸಿಕೊಂಡಿದೆ. ಎಲ್ಲೆಡೆ ಪ್ರಕೃತಿಗೆ ಹೊಸ ಕಳೆ ಬಂದಂತಾಗಿದೆ.ಮನುಷ್ಯರಷ್ಟೇ ಅಲ್ಲದೆ ಪ್ರಾಣಿ-ಪಕ್ಷಿಗಳಿಗೂ ನಾಲ್ಕೈದು ದಿನಗಳ ಮಳೆ ಮುದ ನೀಡಿದೆ. ಮುತ್ತೋಡಿ, ಭದ್ರಾ ಅಭಯಾರಣ್ಯ ಸೇರಿದಂತೆ ಪಶ್ಚಿಮಘಟ್ಟ ಪ್ರದೇಶದ ಅರಣ್ಯ ಪ್ರದೇಶದಲ್ಲೂ ಭಾರೀ ಮಳೆಯಾಗಿ ಹಳ್ಳ, ಕೊಳ್ಳಗಳಲ್ಲಿ ನೀರು ಹರಿಯುತ್ತಿರುವುದರಿಂದ ಪ್ರಾಣಿಗಳಿಗೂ ಕುಡಿಯುವ ನೀರಿನ ದಾಹ ತೀರಿದಂತಾಗಿದೆ.

ಮಳೆಗೆ ಉರುಳಿ ಬಿದ್ದ ಹಂಪಿಯ ಸಾಲು ಮಂಟಪಗಳು 

ಕೋಡಿಬಿದ್ದ ಕೆರೆ

ಭಾರೀ ಮಳೆಯಿಂದಾಗಿ ಬಯಲು ಭಾಗದ ವಿ.ಯರದಕೆರೆ ಗ್ರಾಮದ ದೊಡ್ಡಮ್ಮ ದೇವಿ ಕೆರೆ ತುಂಬಿ ಕೋಡಿ ಬಿದ್ದಿದ್ದು, ಜಿಲ್ಲೆಯಲ್ಲಿ ಭರ್ತಿಯಾದ ಮೊದಲ ಕೆರೆ ಎನಿಸಿದೆ.ಕಡೂರು ತಾಲೂಕಿನ ಹೇಮಗಿರಿ, ಕೆರೆಸಂತೆ ಭಾಗದಲ್ಲಿ ಭಾರೀ ಮಳೆ ಸುರಿದಿದ್ದು, ಹನಿ ನೀರಿಗೂ ಹಾಹಾಕಾರ ಪಡುತ್ತಿದ್ದ ಬಯಲು ಸೀಮೆ ಜನರಲ್ಲಿ ಸಂತಸ ಉಕ್ಕಿಸಿದೆ.ಇದೇ ವೇಳೆ ಕೆರೆಸಂತೆ, ಅಂಚೆ ಸೋಮನಹಳ್ಳಿ ಭಾಗದಲ್ಲಿ ವರುಣನ ಅಬ್ಬರದಿಂದಾಗಿ ಶುಂಠಿ ಬೆಳೆ ನೀರುಪಾಲಾಗಿದ್ದು, ರೈತರನ್ನು ಚಿಂತಾಕ್ರಾಂತನ್ನಾಗಿಸಿದೆ.

ಚಾರ್ಮಾಡಿ ಘಾಟ್ ನಲ್ಲಿ ಮಳೆ : 

ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್, ಬಾಳೂರು, ಬಣಕಲ್, ಸೇರಿದಂತೆ ಸುತ್ತಮುತ್ತ ಧಾರಾಕಾರ ಮಳೆಯಾಗಿದೆ. ಸಂಜೆ 6 ಗಂಟೆ ವೇಳೆಗೆ ಆರಂಭವಾದ ಮಳೆ ಸಾಧಾರಣವಾಗಿ ಆರಂಭವಾಗಿ ಸುಮಾರು ಒಂದು ಗಂಟೆಗಳ ಕಾಲ ಭಾರೀ ಮಳೆ ಸುರಿದಿದೆ. ಕಳೆದ 10-12 ದಿನಗಳಿಂದ ಜಿಲ್ಲಾದ್ಯಂತ ದಾಖಲೆಯ ಭಾರೀ ಮಳೆ ಸುರಿದರೂ ಕೂಡ ಮೂಡಿಗೆರೆ ತಾಲೂಕಿನ ಮಳೆ ಪ್ರಮಾಣ ಸ್ವಲ್ಪ ಕಡಿಮೆಯೇ ಇತ್ತು. ಆದರೆ, ನಿನ್ನೆ ಹಾಗೂ ಇಂದು ಸಂಜೆ ಸುಮಾರು ಒಂದು ಗಂಟೆಗೂ ಹೆಚ್ಚು ಹೊತ್ತು ಭಾರೀ ಸುರಿದಿದೆ. ಚಾರ್ಮಾಡಿ ಘಾಟಿಯಲ್ಲೂ ಧಾರಾಕಾರ ಮಳೆ ಸುರಿಯುತ್ತಿರೋದ್ರಿಂದ ಹಾವು-ಬಳುಕಿನ ಮೈಕಟ್ಟಿನ ರಸ್ತೆಯಲ್ಲಿ ವಾಹನ ಸವಾರರು ವಾಹನ ಚಾಲನೆ ಮಾಡಲು ಪರದಾಡುವಂತಾಗಿದೆ. ಕೆಲ ವಾಹನಗಳ ಚಾಲಕರು ವರುಣನ ಅಬ್ಬರದ ಎದುರು ಡ್ರೈವ್ ಮಾಡಲಾಗದೆ ವಾಹನಗಳನ್ನ ರಸ್ತೆ ಬದಿ ನಿಲ್ಲಿಸಿ ಮಳೆ ಕಡಿಮೆಯಾದ ಬಳಿಕ ಮುಂದೆ ಹೋಗುತ್ತಿದ್ದಾರೆ. ಜಿಲ್ಲೆಯಲ್ಲಿ ಮಳೆ ಆರಂಭವಾದರೆ ಮೊದಲು ಸುರಿಯೋದೆ ಚಾರ್ಮಾಡಿ ಘಾಟ್ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ. ಆದರೆ, ಈ ಬಾರಿ ಚಾರ್ಮಾಡಿ ಘಾಟಿಯ ತಪ್ಪಲು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲೂ ಮಳೆ ಪ್ರಮಾಣ ಕಡಿಮೆ ಇತ್ತು

ಸೂಕ್ಷ್ಮ ಬೆಟ್ಟ ಕೊರೆದು ಲೇಔಟ್ ನಿರ್ಮಿಸುತ್ತಿರುವ ಕರ್ನಾಟಕ ಗೃಹ ನಿರ್ಮಾಣ ಮಂಡಳಿ

ವಾಡಿಕೆಗಿಂತ ಹೆಚ್ಚು ಮಳೆ

ಮೇ ತಿಂಗಳ ವಾಡಿಕೆ ಪ್ರಮಾಣಕ್ಕಿಂತ ಬಹುತೇಕ ದುಪ್ಪಟ್ಟು ಪ್ರಮಾಣದ ಮಳೆ ಕೇವಲ ನಾಲ್ಕೈದು ದಿನದಲ್ಲಿ ಸುರಿದು ದಾಖಲೆ ನಿರ್ಮಿಸಿದೆ. ಮೇ 1 ರಿಂದ 21 ರ ವರೆಗಿನ ಜಿಲ್ಲೆಯ ಸರಾಸರಿ ವಾಡಿಕೆ ಮಳೆ ಪ್ರಮಾಣ 132 ಮಿ.ಮೀ. ಆಗಿದೆ. ಆದರೆ ಕಳೆದ ಐದು ದಿನಗಳಲ್ಲಿ ಸರಾಸರಿ 231ಮಿ.ಮೀ.ನಷ್ಟು ಮಳೆ ಸುರಿದಿದೆ.

click me!