ವಾನರ ಸೇನೆ ದಾಳಿಗೆ ಕೂಡಿಗೆ ಭಾಗದ ಜನ ಹೈರಾಣು
ಅಂಗಡಿ ಮುಂಗಟ್ಟುಗಳಿಗೆ ನುಗ್ಗಿ ತಿಂಡಿ ತಿನಿಸು ಕ್ಷಣದಲ್ಲೇ ಮಾಯ
ಬೆಕ್ಕು, ನಾಯಿಯಂತ ಸಾಕು ಪ್ರಾಣಿಗಳ ಕೊಲ್ಲುತ್ತಿರುವ ಕೋತಿ
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಮಾ.27): ಕಪಿ ಅಂದ್ರೇನೆ ಚೇಷ್ಟೆ ಮಾಡುವ ಪ್ರಾಣಿ ಅಂತ ಗೊತ್ತೇ ಇದೆ ಅಲ್ವಾ. ಆದರೆ ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಕೂಡಿಗೆ ಭಾಗದಲ್ಲಿ ವಾನರ ಗುಂಪು ಕೊಡುತ್ತಿರುವ ಕಾಟಕ್ಕೆ ಜನ ಸುಸ್ತೋ ಸುಸ್ತಾಗಿದ್ದಾರೆ. ಸಾಕು ಪ್ರಾಣಿಗಳಾದ ಬೆಕ್ಕು, ನಾಯಿ, ಮೇಕೆ ಮುಂತಾದವುಗಳ ಮರಿಗಳ ಮೇಲೆ ದಾಳಿ ಮಾಡಿ ಸಾಯಿಸುತ್ತಿವೆ.
ಹೌದು ಇತ್ತೀಚೆಗೆ ಕೂಡಿಗೆ ವ್ಯಾಪ್ತಿಯಲ್ಲಿ ಮಂಗಗಳ ಗುಂಪಿನ ಕಾಟಕ್ಕೆ ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ನರಕ ಯಾತನೆ ಅನುಭವಿಸುವಂತೆ ಆಗಿದೆ. ಪ್ರತಿನಿತ್ಯ ಇಲ್ಲಿನ ಮುಖ್ಯ ರಸ್ತೆಯಲ್ಲಿ ಅಡ್ಡಾಡುವ ಮಂಗಗಳ ಗುಂಪು ಕೂಡಿಗೆ ಸರ್ಕಲ್ ವ್ಯಾಪ್ತಿಯಲ್ಲಿನ ಹೋಟೆಲ್, ದಿನಸಿ ಅಂಗಡಿ ಹಾಗೂ ಬೇಕರಿಗಳಿಗೆ ನುಗ್ಗಿ ದಾಂಧಲೆ ನಡೆಸುತ್ತಿವೆ. ಬೇಕರಿಗಳಿಗೆ ನುಗ್ಗಿ ಕೈಗೆ ಸಿಕ್ಕಿದ್ದನ್ನೆಲ್ಲಾ ಎತ್ತಿಕೊಂಡು ಓಡುತ್ತವೆ. ಕೈಗೆ ಸಿಕ್ಕ ವಸ್ತುಗಳ ಎತ್ತಿಕೊಂಡು ಓಡಿದರೆ ಪರವಾಗಿಲ್ಲ. ಅಂಗಡಿ ಮುಂಗಟ್ಟುಗಳ ಮುಂಭಾಗ ನಿತಂತ ಸಾರ್ವಜನಿಕರ ಮೇಲೂ ದಾಳಿ ಮಾಡುವುದು, ಕಚ್ಚಿ ಗಾಯಗೊಳಿಸುತ್ತಿವೆ.
undefined
ಕೊಡವ ಸ್ವಾಯತ್ತ ಲ್ಯಾಂಡ್ ಬೇಡಿಕೆಗೆ ಅಭಿವೃದ್ಧಿ ನಿಗಮ ಕೊಡುಗೆ
ದಿನಕ್ಕೆ ಎರಡು ಬಾರಿ ನಿರಂತರ ದಾಳಿ : ಜೊತೆಗೆ ವಾಸದ ಮನೆಗಳಿಗೂ ನುಗ್ಗುವ ಅವುಗಳು ಜನರಿಗೆ ಇನ್ನಿಲ್ಲದ ತೊಂದರೆ ಕೊಡುತ್ತಿವೆ. ಇವುಗಳನ್ನು ಓಡಿಸಲು ಪ್ರಯತ್ನಿಸುವ ಜನರ ಮೇಲೆ ಅಪಾಯಕಾರಿಯಾಗಿ ಅಟ್ಯಾಕ್ ಮಾಡುತ್ತಿವೆ. ಅಲ್ಲದೆ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳ ಮೇಲೂ ದಾಳಿ ಮಾಡುತ್ತಿವೆ. ಇದರಿಂದ ವಿದ್ಯಾರ್ಥಿಗಳು ರಸ್ತೆಯಲ್ಲಿ ಓಡಾಡುವುದು ದುಸ್ಥರ ಎನ್ನುವಂತಾಗಿದೆ. ಸಾಮಾನ್ಯವಾಗಿ ಬೆಳಿಗ್ಗೆ ಏಳರಿಂದ 8 ಗಂಟೆ ಹೊತ್ತಿಗೆ ದಾಳಿ ಶುರು ಮಾಡಿದರೆ ಮಧ್ಯಾಹ್ನ 2 ಗಂಟೆಯ ತನಕ ನಿರಂತರವಾಗಿ ದಾಳಿ ಮುಂದುವರಿಸುತ್ತವೆ. ಸಂಜೆ 4 ಗಂಟೆಯವರೆಗೆ ಸುಮ್ಮನಿರುವ ಇವು ಮತ್ತೆ ಪುನಃ ಸಂಜೆ 4 ಗಂಟೆಯಿಂದ ತಮ್ಮ ಹಾವಳಿ ಮತ್ತು ಕಿಟಲೆ ಶುರು ಮಾಡುತ್ತವೆ.
ಸಾಕು ಪ್ರಾಣಿಗಳ ಮರಿ ಮೇಲೆ ದಾಳಿ: ಇಷ್ಟೇ ಅಲ್ಲ ಸಾಕು ಪ್ರಾಣಿಗಳಾದ ಬೆಕ್ಕು, ನಾಯಿ, ಮೇಕೆ ಮುಂತಾದವುಗಳ ಮರಿಗಳ ಮೇಲೆ ದಾಳಿ ಮಾಡಿ ಪ್ರಾಣವನ್ನು ಕಳೆಯುತ್ತಿವೆ. ಇದರಿಂದ ಸಾರ್ವಜನಿಕರು ತೀವ್ರ ಆತಂಕಗೊಳ್ಳುವಂತೆ ಆಗಿದೆ. ಅಂಗಡಿ ಮುಂಗಟ್ಟುಗಳ ಮಾಲೀಕರು ಹೆದರಿ ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಿಟ್ಟು ಬೇರೆ ಕಡೆಗೆ ಶಿಫ್ಟ್ ಮಾಡುವ ನಿರ್ಧಾರಕ್ಕೂ ಬಂದಿದ್ದಾರೆ. ಈ ಮಂಗಗಳ ಉಪಟಳದ ಬಗ್ಗೆ ಸ್ಥಳೀಯ ಕೂಡಿಗೆ ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿಗೆ ಮತ್ತು ಅರಣ್ಯ ಇಲಾಖೆಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
Kodagu: ಬೆರಳಿಗೆ ಹಾಕಿದ್ದ ಉಂಗುರ ನುಂಗಿ ಸಾವನ್ನಪ್ಪಿದ 8 ತಿಂಗಳ ಮಗು: ಪಾಲಕರ ಆಕ್ರಂದನ
ಅರಣ್ಯ ಇಲಾಖೆಯ ಪಟಾಕಿ ಸದ್ದಿಗೂ ಬಗ್ಗದ ಪಡೆ: ಒಂದೆರಡು ಬಾರಿ ಬಂದಿರುವ ಅರಣ್ಯ ಇಲಾಖೆ ಸಿಬ್ಬಂದಿ ಪಟಾಕಿ ಹೊಡೆಯಿರಿ ಹೋಗುತ್ತವೆ ಎಂದು ಸಬೂಬು ಹೇಳಿ ಹೋಗುತ್ತಾರೆ ಎಂದು ಕೋತಿಗಳ ದಾಳಿಯಿಂದ ತಮ್ಮ ಮುದ್ದಿನ ಬೆಕ್ಕಿನ ಮರಿಯನ್ನೇ ಕಳೆದುಕೊಂಡಿರುವ ಕೂಡಿಗೆ ನಿವಾಸಿ ಪವಿತ್ರ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೂಡಿಗೆ ವೃತ್ತದಲ್ಲಿ ನಿಂತಿದ್ದ ತಾಯಿ ಮಗುವಿನ ಮೇಲೆ ದಾಳಿ ಮಾಡಿ ಕಚ್ಚಿ ಗಾಯಗೊಳಿಸಿದೆ. ಅರಣ್ಯ ಇಲಾಖೆ ಸಿಬ್ಬಂದಿ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ವಾನರ ಸೈನ್ಯದಿಂದ ಮುಂದೆ ಮಕ್ಕಳು ಅಥವಾ ಮಹಿಳೆಯರಿಗೆ ಯಾವುದಾದರೂ ಅನಾಹುತ ಸಂಭವಿಸುವ ಅಪಾಯವಿದ್ದು ಕೂಡಲೇ ಅರಣ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸಬೇಕಾಗಿದೆ. ಇಲ್ಲದಿದ್ದಲ್ಲಿ ಮುಂದಾಗುವ ಎಲ್ಲಾ ಅನಾಹುತಗಳಿಗೆ ಮತ್ತು ವರ್ತಕರ ನಷ್ಟಗಳಿಗೆ ಗ್ರಾಮ ಪಂಚಾಯಿತಿಯ ಮತ್ತು ಅರಣ್ಯ ಇಲಾಖೆ ನೇರ ಹೂಣೆಯಾಗಬೇಕಾಗುತ್ತದೆ ಎಂದು ಇಲ್ಲಿನ ಸಾರ್ವಜನಿಕರು ಮತ್ತು ವರ್ತಕರು ಎಚ್ಚರಿಸಿದ್ದಾರೆ.