Monkey Fever: ಮಂಗನ ಕಾಯಿಲೆಗೆ ಸಿದ್ದಾಪುರ ಮೂಲದ ವೃದ್ಧೆ ಬಲಿ: 7 ಸೋಕಿಂತರು ಪತ್ತೆ

By Govindaraj S  |  First Published Apr 20, 2022, 9:55 PM IST

ಕೊರೊನಾ ಕಾಟದ ಬಳಿಕ ಕೊಂಚ ನೆಮ್ಮದಿಯಲ್ಲಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಇದೀಗ ಪ್ರತೀ ವರ್ಷದ ಹರಕೆಯಂತೆ ಕಾಯಿಲೆಯೊಂದು ವಕ್ಕರಿಸಿಕೊಂಡಿದೆ.


ಭರತ್‌ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಉತ್ತರಕನ್ನಡ (ಏ.20): ಕೊರೊನಾ ಕಾಟದ ಬಳಿಕ ಕೊಂಚ ನೆಮ್ಮದಿಯಲ್ಲಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಇದೀಗ ಪ್ರತೀ ವರ್ಷದ ಹರಕೆಯಂತೆ ಕಾಯಿಲೆಯೊಂದು ವಕ್ಕರಿಸಿಕೊಂಡಿದೆ. ಪ್ರತೀ ವರ್ಷ ಕಾಣಿಸಿಕೊಳ್ಳುವ ಈ ಕಾಯಿಲೆ ಒಬ್ಬರನ್ನಾದ್ರೂ ಬಲಿ ಪಡೆದುಕೊಂಡ ಬಳಿಕವೇ ನಿಯಂತ್ರಣಕ್ಕೆ ಬರುತ್ತಿದ್ದು, ಈ ಬಾರಿಯೂ ಎಂಟ್ರಿಯಾದಂತೆ ಒಂದು ಜೀವವನ್ನು ಬಲಿ ಪಡೆದಿದೆ. ಈ‌ ಕಾರಣದಿಂದ ಜಿಲ್ಲೆಯ ಮಲೆನಾಡು ಹಾಗೂ ಕರಾವಳಿ ಭಾಗದ ಜನರಲ್ಲಿ ಆತಂಕ ಮನೆ ಮಾಡಿದ್ದು, ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಗೆ ಈ ವೈರಸ್ ತಲೆ ನೋವಾಗಿ ಕಾಡತೊಡಗಿದೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ.

Tap to resize

Latest Videos

ಕಳೆದ ಕೆಲವು ವರ್ಷಗಳಿಂದ ಉತ್ತರಕನ್ನಡ ಜಿಲ್ಲೆಯಲ್ಲಿ ಕಾಣಿಸಿಕೊಳ್ಳುತ್ತಿರೋ ಕ್ಯಾಸನೂರ್ ಫಾರೆಸ್ಟ್ ಡಿಸೀಸ್ (ಕೆಎಫ್‌ಡಿ) ಅಂದರೆ ಮಂಗನಕಾಯಿಲೆ ಈ ಬಾರಿ ಮತ್ತೆ ತನ್ನ ಪ್ರಭಾವ ಬೀರತೊಡಗಿದೆ. ಸಿದ್ಧಾಪುರ ತಾಲೂಕಿನ ಕಾನ್ಸೂರು ಪಿಎಚ್‌ಸಿಯ ದೇವಿಸರ ಹಾಗೂ ಅಂಬಳ್ಳಿಯಲ್ಲಿ 3, ಕೋರ್ಲಕೈ ಪಿಎಚ್‌ಸಿಯ ನೊಗಳ್ಳಿಯಲ್ಲಿ 1, ಬಿಳಗಿ ಪಿಎಚ್‌ಸಿಯ ಕಿಲಾರದಲ್ಲಿ 1, ಹಲಗೇರಿಯಲ್ಲಿ 1, ಸಿದ್ಧಾಪುರ ನಗರದ ಪಿಎಚ್‌ಸಿಯ ಕೋಲ್‌ಸಿರ್ಸಿಯಲ್ಲಿ 1 ಹಾಗೂ ಹೊನ್ನಾವರ ತಾಲೂಕಿನ ಗೇರುಸೊಪ್ಪದಲ್ಲಿ 1 ಪ್ರಕರಣ ಕಾಣಿಸಿಕೊಂಡಿದೆ. ಅಲ್ಲದೇ, ಹಲಗೇರಿ ನಿವಾಸಿ 85ವರ್ಷದ ವೃದ್ಧೆ ಜಾನಕಿ ವೀರಭದ್ರ‌ ಹೆಗಡೆ ಅವರನ್ನು ಕೆಎಫ್‌ಡಿ ಬಲಿ ಪಡೆದುಕೊಂಡಿದೆ.‌ 

Shivamogga: ತೀರ್ಥಹಳ್ಳಿಯ ಇಬ್ಬರು ಮಹಿಳೆಯರಿಗೆ ಮಂಗನ ಕಾಯಿಲೆ ಸೋಂಕು!

ಜಾನಕಿಯವರಿಗೆ ಜ್ವರ ಕಾಣಿಸಿಕೊಂಡಿದ್ದ ಕಾರಣ 11ನೇ ತಾರೀಕಿನಂದು ಸಿದ್ಧಾಪುರ ತಾಲೂಕು ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿದ್ದರು.‌ 14ನೇ ತಾರೀಕಿನಂದು ಬಂದ ಪರೀಕ್ಷೆಯ ಫಲಿತಾಂಶದಲ್ಲಿ ಅವರಿಗೆ ಕೆಎಫ್‌ಡಿ ಇರೋದು ಪತ್ತೆಯಾಗಿದ್ದರಿಂದ‌ ಕೂಡಲೇ ಅವರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದನೆ ದೊರೆಯದ ಕಾರಣ ಅವರನ್ನು 16ನೇ ತಾರೀಕಿನಂದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೃದ್ಧೆ ಕೆಎಫ್‌ಡಿ ಸಂಬಂಧಿಸಿದ ವ್ಯಾಕ್ಸಿನ್ ಪಡೆದುಕೊಂಡಿರಲಿಲ್ಲ.‌ ಈ ಕಾರಣದಿಂದ ನ್ಯುಮೋನಿಕ್ ಗುಣಲಕ್ಷಣಗಳು ಬೆಳೆದು ಬುಧವಾರ ಬೆಳಗ್ಗೆ 5.30ಕ್ಕೆ ಮೃತರಾಗಿದ್ದಾರೆ. 

ಕಳೆದ ವರ್ಷ 54 ಜನರನ್ನು ಕಾಡಿ ಅದರಲ್ಲಿ ಒಬ್ಬರನ್ನು ಬಲಿ ಪಡೆದಿದ್ದ ಮಂಗನಕಾಯಿಲೆ ಈ ಬಾರಿ ಎಂಟ್ರಿಕೊಡುತ್ತಲೇ ವೃದ್ಧೆಯ ಸಾವಿಗೆ ಕಾರಣವಾಗಿದೆ. ವೃದ್ಧೆ ಕೆಎಫ್‌ಡಿಗೆ ಬಲಿಯಾದ ವಿಚಾರ ಸಿದ್ಧಾಪುರ ಹಾಗೂ ಹೊನ್ನಾವರ ವ್ಯಾಪ್ತಿಯ ಜನರನ್ನು ಇನ್ನಷ್ಟು ಚಿಂತೆಗೀಡು ಮಾಡುವಂತೆ ಮಾಡಿದ್ದು, ಜನರು ಕಾಡು ಪ್ರದೇಶಕ್ಕೆ ತೆರಳಲು ಹೆದರುವಂತಾಗಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ವೈರಸ್ ಕಾಣಿಸಿಕೊಂಡ ಪ್ರದೇಶದಲ್ಲಿ ಶೇ. 50ರಷ್ಟು ವ್ಯಾಕ್ಸಿನೇಷನ್ ವಿತರಿಸಿದ್ದು, ಮನೆ‌ ಮನೆ ವ್ಯಾಪ್ತಯಲ್ಲಿ ಔಷಧಿ ಸ್ಪ್ರೇ‌ ಮಾಡಿ ಜನರಿಗೆ ಡಿ.ಎಂ.ಪಿ ಆಯಿಲ್ ಅನ್ನು ಕೂಡಾ ವಿತರಣೆ ಮಾಡುತ್ತಿದೆ. 

ಅಂದಹಾಗೆ, ದನಕರುಗಳಿಗೆ ಮೇವು ತರಲು ಕಾಡಿಗೆ ಹೋದವರು ಹಾಗೂ ಅರಣ್ಯ ಭಾಗದಲ್ಲಿರುವ ಮನೆಗಳಿಗೆ ಭೇಟಿ ನೀಡಿದವರಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ಕೆಎಫ್‌ಡಿ ವೈರಸ್ ಕಾಣಿಸಿಕೊಳ್ಳುತ್ತಿದ್ದಂತೇ ಆಶಾ ಕಾರ್ಯಕರ್ತೆಯರ ಮೂಲಕ ಮನೆ ಮನೆಯ ಸರ್ವೆ ನಡೆಯುತ್ತಿದ್ದು, ಜನರನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ಕರಪತ್ರಗಳನ್ನು ಕೂಡಾ ನೀಡಲಾಗುತ್ತಿದೆ. ಅಲ್ಲದೇ, ಜನರಿಗೆ ಡಿ.ಪಿ.ಎಂ. ಆಯಿಲ್ ವಿತರಣೆ ಪ್ರಕ್ರಿಯೆ ಕೂಡಾ ಮುಂದುವರಿದಿದೆ. ಆದರೆ, ಜಿಲ್ಲಾಡಳಿತಕ್ಕೆ ಪ್ರಮುಖವಾಗಿ ಎದುರಾಗುತ್ತಿರುವ ಸಮಸ್ಯೆಯಂದ್ರೆ ಜನರು ವ್ಯಾಕ್ಸಿನ್ ಪಡೆಯಲು ಹಿಂದೇಟು ಹಾಕುತ್ತಿರುವುದು. ವ್ಯಾಕ್ಸಿನ್ ಪಡೆದಂತೇ ನೋವು ಹಾಗೂ ಇತರ ಸಮಸ್ಯೆ ಕಾಣಿಸಿಕೊಳ್ಳುತ್ತದೆಂದು ಸಬೂನು ನೀಡುವ ಹಲವರು ಕೆಎಫ್‌ಡಿ ನಿರೋಧಕ ವ್ಯಾಕ್ಸಿನ್ ಪಡೆಯುತ್ತಿಲ್ಲ. 

ಮತ್ತೆ ಶುರುವಾಯ್ತು ಮಂಗನ ಕಾಯಿಲೆ ಆತಂಕ..!

ಈ ಎಲ್ಲಾ ಪ್ರಕರಣ ಸಂಬಂಧಿಸಿ ಈಗಾಗಲೇ ಎರಡು ಬಾರಿ ಸಭೆ ನಡೆಸಲಾಗಿದ್ದು, ಸಿದ್ಧಾಪುರ ಎಸಿ ಸ್ಥಳಕ್ಕೆ ಕೂಡಾ ಭೇಟಿ ನೀಡಿದ್ದಾರೆ. ವೈರಸ್ ಹತ್ತಿಕ್ಕಲು ನಡೆಯುವ ಸಿದ್ಧತೆಯ ಬಗ್ಗೆ ಮತ್ತಷ್ಟು ಗಮನ ಹರಿಸಲಾಗುವುದು ಅಂತಾರೆ ಜಿಲ್ಲಾಧಿಕಾರಿ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು.  ಒಟ್ಟಿನಲ್ಲಿ ಕಳೆದ ಬಾರಿ ಶಿರಸಿ, ಸಿದ್ಧಾಪುರ ಭಾಗದಲ್ಲಿ ಮಾತ್ರವಿದ್ದ ಕೆಎಫ್‌ಡಿ ವೈರಸ್, ಈ ಬಾರಿ ಹೊನ್ನಾವರದಲ್ಲೂ ಕಾಣಿಸಿಕೊಂಡಿದೆ. ಈ ವೈರಸ್ ಇನ್ನಷ್ಟು ಹೆಚ್ಚು ಜನರಿಗೆ ಹಬ್ಬದಂತೆ ತಡೆಯುವ ನಿಟ್ಟಿನಲ್ಲಿ ಕೆಎಫ್‌ಡಿ ವೈರಸ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ವ್ಯಾಪ್ತಿಯ ಜನರೆಲ್ಲರೂ ಕಡ್ಡಾಯವಾಗಿ ವ್ಯಾಕ್ಸಿನೇಷನ್ ಪಡೆದು, ಡಿ.ಪಿ.ಎಂ. ತೈಲ ಬಳಸಿಕೊಳ್ಳಬೇಕಿದೆ. ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಇನ್ನಷ್ಟು ಹೆಚ್ಚಿನ ಕ್ರಮ ಕೈಗೊಂಡು ಶೀಘ್ರದಲ್ಲಿ ಈ ವೈರಸ್ ಹಬ್ಬದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಿದೆ. 

click me!