ಕೋಟೆನಾಡು ಚಿತ್ರದುರ್ಗ ಅಂದ್ರೆ ಸಾಕು ಬರದನಾಡು ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ರಾತ್ರಿ ಸುರಿದ ಅಕಾಲಿಕ ಮಳೆ ಕೋಟೆನಾಡಿನ ರೈತರ ಬದುಕನ್ನೇ ಅತಂತ್ರಗೊಳಿಸಿದೆ.
ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ (ಏ.20): ಕೋಟೆನಾಡು ಚಿತ್ರದುರ್ಗ (Chitradurga) ಅಂದ್ರೆ ಸಾಕು ಬರದನಾಡು ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ರಾತ್ರಿ ಸುರಿದ ಅಕಾಲಿಕ ಮಳೆ (Rain) ಕೋಟೆನಾಡಿನ ರೈತರ (Farmers) ಬದುಕನ್ನೇ ಅತಂತ್ರಗೊಳಿಸಿದೆ. ಈ ಕುರಿತು ಒಂದು ವರದಿ ಇಲ್ಲಿದೆ.
ನೆಲಕ್ಕೆ ಬಿದ್ದಿರೋ ಮೆಕ್ಕೆಜೋಳ. ಕೈಗೆ ಬಂದ ಬೆಳೆಯನ್ನು ಕಳೆದುಕೊಂಡು ಕಂಗಾಲಾದ ರೈತ. ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು, ಕೋಟೆನಾಡು ಚಿತ್ರದುರ್ಗ ತಾಲ್ಲೂಕಿನ ಬೆಳಗಟ್ಟ ಗ್ರಾಮದ ಮಹಂತೇಶ್ ಎಂಬ ರೈತನ ಜಮೀನು. ಹೌದು! ಹಲವು ವರ್ಷಗಳಿಂದ ಮಳೆಯಿಲ್ಲದೇ, ಬರಗಾಲದಿಂದ ತತ್ತರಿಸಿದ ಅನ್ನದಾತರಿಗೆ ನಿನ್ನೆ ಏಕಾಏಕಿ ಸುರಿದ ಮಳೆ ಮಾರಕವಾಗಿ ಪರಿಣಮಿಸಿದೆ. ಅದರಲ್ಲೂ ಈ ಮಹಂತೇಶ್ ಎಂಬ ರೈತ ತಮ್ಮ ಐದು ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆದಿದ್ದೂ, ಇನ್ನೂ ಕೆಲವೇ ದಿನಗಳಲ್ಲಿ ಕಟಾವಿಗೆ ಬರುವ ಸಾಧ್ಯತೆ ಇತ್ತು.
ಆದರೆ ರಾತ್ರಿ ಸುರಿದ ಗಾಳಿ ಮಳೆಯಿಂದಾಗಿ ಜಮೀನಲ್ಲಿದ್ದ ಸಂಪೂರ್ಣ ಬೆಳೆ ನೆಲಕಚ್ಚಿದೆ. ಹೀಗಾಗಿ ರೈತನ ಕೈಗೆ ಸಿಕ್ಕ ತುತ್ತು ಬಾಯಿಗೆ ಸಿಗದಂತಾಗಿ ಸಾಲ ಸೂಲ ಮಾಡಿ ಮೆಕ್ಕೆಜೋಳ ಬೆಳೆದಿದ್ದ ರೈತ ಬಾರಿ ಆತಂಕಕ್ಕೆ ಸಿಲುಕಿದ್ದಾರೆ. ಸಾಲಗಾರರ ಕಾಟ ತಾಳಲಾರದೆ ಕಂಗಾಲಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು, ಹೊಳಲ್ಕೆರೆ, ಹೊಸದುರ್ಗ ಹಾಗು ಚಿತ್ರದುರ್ಗ ತಾಲ್ಲೂಕಿನಾದ್ಯಂತ ಸುರಿದಿರೋ ಮಳೆಯಿಂದಾಗಿ ಹಲವರು ರೈತರು ಬೆಳೆದಿದ್ದ ಮೆಕ್ಕೆಜೋಳ ಸಂಪೂರ್ಣ ನಾಶವಾಗಿದೆ. ಹೀಗಾಗಿ ಸಾಲದ ಹಣ ತೀರಿಸಲು ರೈತರು ಯೋಚಿಸುವಂತಾಗಿ ದಿಕ್ಕು ತೋಚದಂತಾಗಿದ್ದಾರೆ.
ಬಂಜರು ಭೂಮಿಯಲ್ಲಿ ಹಿಮಾಚಲ ಸೇಬು ಬೆಳೆದು ಅಚ್ಚರಿ ಮೂಡಿಸಿದ ಚಿತ್ರದುರ್ಗದ ರೈತ
ಹೀಗಾಗಿ ಸರ್ಕಾರದಿಂದ ಪರಿಹಾರ ಒದಗಿಸುವಂತೆ ಆಗ್ರಹಿಸಿದ್ದಾರೆ. ಒಟ್ಟಾರೆ ಅಕಾಲಿಕ ಮಳೆಗೆ ಕೋಟೆನಾಡಲ್ಲಿ ಬೆಳೆದಿದ್ದ ಮೆಕ್ಕೆಜೋಳ ಹಾನಿಯಾಗಿದೆ. ಹೀಗಾಗಿ ಮೆಕ್ಕೆಜೋಳದಿಂದ ಲಾಭ ಗಳಿಸುವ ನಿರೀಕ್ಷೆಯಲ್ಲಿದ್ದ ರೈತ ಸಂಕಷ್ಟಕ್ಕೆ ಸಿಲುಕುವಂತಾಗಿದ್ದೂ, ರೈತರ ಸ್ಥಿತಿ ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿದೆ. ಆದ್ದರಿಂದ ನೊಂದ ರೈತರಿಗೆ ಸೂಕ್ತ ಪರಿಹಾರ ಒದಗಿಸುವ ಮೂಲಕ ನೊಂದ ರೈತರ ಆತಂಕ ಶಮನಗೊಳಿಸಬೇಕಿದೆ.
ಕರ್ನಾಟಕದಲ್ಲಿ ಅಕಾಲಿಕ ಮಳೆ, ಎಲ್ಲೆಲ್ಲಿ ಸುರಿಯಲಿದ್ದಾನೆ ಮಳೆರಾಯ: ಬೆಳಗಾವಿ, ವಿಜಯಪುರ, ಧಾರವಾಡ, ಶೃಂಗೇರಿ ಸೇರಿ ಸೋಮವಾರ ಹಲವೆಡೆ ಅಕಾಲಿಕ ಮಳೆಯಾಗಿದ್ದು, ಹಾನಿ ಸಂಭವಿಸಿದೆ. ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಅಡವಿ ಸಂಗಾಪುರದಲ್ಲಿ ಭಾರಿ ಗಾಳಿ ಜತೆಗೆ ಆಲಿಕಲ್ಲು ಮಳೆಯಾಗಿದ್ದು, ಸುಮಾರು ಅರ್ಧ ಗಂಟೆವರೆಗೆ ಮಳೆಯಾಗಿದೆ. ಪರಿಣಾಮ ಒಣ ದ್ರಾಕ್ಷಿ ಮಾಡಲೆಂದು ಶೆಡ್‌ನಲ್ಲಿ ಇಟ್ಟಿದ್ದ ಅಪಾರ ಪ್ರಮಾಣದ ದ್ರಾಕ್ಷಿ ಹಾನಿಗೀಡಾಗಿದೆ.
ಬಸವನ ಬಾಗೇವಾಡಿ ತಾಲೂಕಿನ ಕೆಲ ಕಡೆಗಳಲ್ಲೂ ಮಳೆಯಾಗಿದೆ. ಇನ್ನು ಬೆಳಗಾವಿ ನಗರದ ಸುತ್ತಮುತ್ತ ಬಿರುಗಾಳಿ ಸಮೇತ ಮಳೆ ಸುರಿದಿದ್ದರಿಂದ ಪಂತಬಾಳೇಕುಂದ್ರಿ, ಕಣಬರ್ಗಿ ಮತ್ತಿತರ ಕಡೆಗಳಲ್ಲಿ ಮನೆಯ ಮೇಲೆ ಹಾಕಲಾಗಿದ್ದ ತಗಡಿನ ಚಾವಣಿ ಹಾರಿಹೋಗಿವೆ. ಪಂತಬಾಳೇಕುಂದ್ರಿಯಲ್ಲಿ ಚಾವಣಿ ಬಾಳೇಶಿ ಮಲಕಣ್ಣವರ ಎಂಬುವವರ ಕಾರಿನ ಮೇಲೆ ಬಿದ್ದು, ಕಾರಿನ ಗಾಜುಗಳು ಪುಡಿ ಪುಡಿಯಾಗಿವೆ. ತಾಲೂಕಿನ ಅಗಸಗಿ ಗ್ರಾಮದ ಬಳಿ ಶಿವಾಜಿ ಅಪ್ಪಯ್ಯ ಬಚ್ಚೆನಟ್ಟಿ ಎಂಬುವರಿಗೆ ಸೇರಿದ ಎರಡು ಮೇವಿನ ಬಣವೆಗಳು ಸಿಡಿಲು ಬಡಿದು ಬೆಂಕಿಗಾಹುತಿಯಾಗಿವೆ.
ಧರ್ಮ ದಂಗಲ್ ನಡುವೆ ಭಾವೈಕ್ಯತೆಯ ಸಿದ್ದೇಶ್ವರ ಸ್ವಾಮಿ ಜಾತ್ರೆ!
ಶೃಂಗೇರಿ ತಾಲೂಕಿನ ವಿವಿಧೆಡೆ ಗುಡುಗು ಸಹಿತ ಸಾಧಾರಣ ಮಳೆಯಾಗಿದೆ. ತಾಲೂಕಿನಾದ್ಯಂತ ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದು, ಅಡಕೆ, ಕಾಫಿತೋಟಗಳಿಗೆ ಮಳೆಯಿಂದ ಅನುಕೂಲವಾಗಿದೆ. ಧಾರವಾಡ ನಗರ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಸಾಯಂಕಾಲ ತುಂತುರು ಮಳೆಯಾಗಿದ್ದು, ಜೋರಾದ ಗಾಳಿ ಇತ್ತು. ಆದರೆ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ.