ಜನರ ದುರಾಸೆಯಿಂದ ಆರ್ಥಿಕ ಅಪರಾಧ ಹೆಚ್ಚಳ

By Kannadaprabha NewsFirst Published Sep 15, 2019, 9:26 AM IST
Highlights

ಜನರ ದುರಾಸೆಯಿಂದ ನಗರದಲ್ಲಿ ಆರ್ಥಿಕ ಅಪರಾಧಗಳು ಹೆಚ್ಚಾಗುತ್ತಿವೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದಾರೆ. 

ಬೆಂಗಳೂರು [ಸೆ.15]:  ಅಧಿಕ ಗಳಿಕೆ, ದುರಾಸೆ, ಆಮಿಷಗಳಿಂದ ರಾಜ್ಯದಲ್ಲಿ ಆರ್ಥಿಕ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು ಜನರು ಜಾಗೃತರಾಗಬೇಕು ಎಂದು ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಹೇಳಿದರು.

ಬ್ರಾಹ್ಮೀ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ನಿಯಮಿತ ರಾಜಾಜಿನಗರದ ಶ್ರೀ ಶಂಕರ ಸೇವಾ ಸಮಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ರಜತ ಮಹೋತ್ಸವ’ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಆರ್ಥಿಕ ಅಪರಾಧಗಳ ಹೆಚ್ಚಳಕ್ಕೆ ಜನಸಾಮಾನ್ಯರೇ ನೇರ ಕಾರಣಕರ್ತರು. ಹೆಚ್ಚಿನ ಸಂಪಾದನೆ, ಬಡ್ಡಿಯ ಆಸೆಯಿಂದ ಪತ್ರ, ದಾಖಲೆಗಳಿಲ್ಲದೆ ಹಣ ಹೂಡಿಕೆ ಮಾಡುತ್ತಾರೆ. ಮೋಸ, ವಂಚನೆಗೆ ಬಲಿಯಾದ ನಂತರ ಪೊಲೀಸ್‌ ಠಾಣೆಯ ಮೆಟ್ಟಿಲೇರುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ವಿಶೇಷವಾಗಿ ಬೆಂಗಳೂರು ಮೋಸಗಾರರ ನಗರವಾಗಿ ಮಾರ್ಪಡುತ್ತಿದೆ. ರಾಜಧಾನಿಯಲ್ಲಿ ಭಾರಿ ಪ್ರಮಾಣದಲ್ಲಿ ಆರ್ಥಿಕ ಅವ್ಯವಹಾರಗಳು ನಡೆಯುತ್ತಿವೆ. ಇಲ್ಲಿನ ಜನರು ದುರಾಸೆಯಿಂದ ವಂಚಕರ ಬಲೆಗೆ ಬೀಳುತ್ತಿದ್ದಾರೆ. ಬಸವನಗುಡಿಯಲ್ಲಿ ಆರ್ಥಿಕ ಅಪರಾಧ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಜನಸಾಮಾನ್ಯರಿಗೆ ಸರಿಯಾಗಿ ಸೇವೆ ಲಭ್ಯವಾಗುವುದಿಲ್ಲ. ನಕಲಿ ದಾಖಲೆಗಳ ಸೃಷ್ಟಿಯಿಂದ ವಂಚನೆ ಹೆಚ್ಚಾಗುತ್ತಿದೆ. ಇದು ಬ್ಯಾಂಕ್‌ಗಳಿಗೆ ಇರುವ ದೊಡ್ಡ ಸವಾಲಾಗಿದೆ. ಇಂಥ ಸಂದರ್ಭದಲ್ಲಿ ಸಹಕಾರ ಬ್ಯಾಂಕ್‌ಗಳು ಆರ್ಥಿಕ ಶಿಸ್ತು ಕಾಪಾಡಿಕೊಂಡು ಹೋಗಬೇಕು ಎಂದು ಹೇಳಿದರು.

ಇದೇ ವೇಳೆ ‘ರಜತ ಲಕ್ಷ್ಮಿ’ ವಿಶೇಷ ಕ್ಯಾಷ್‌ ಸರ್ಟಿಫಿಕೇಟ್‌ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ 22 ಮಂದಿ ಬ್ಯಾಂಕ್‌ನ ಹಿರಿಯ ಸದಸ್ಯರಿಗೆ ಗೌರವಾರ್ಪಣೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.

ಕಾರ್ಯಕ್ರಮದಲ್ಲಿ ಬೆಂಗಳೂರು ಪ್ರಾಂತ ಸಹಕಾರ ಸಂಘಗಳ ಜಂಟಿ ನಿಬಂಧಕ ಎಂ.ಡಿ.ನರಸಿಂಹಮೂರ್ತಿ, ಸಹಕಾರ ಸಂಘಗಳ ಅಪರ ನಿಬಂಧಕ ಕೆ.ಎಸ್‌.ನವೀನ್‌, ಬ್ರಾಹ್ಮೀ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ಅಧ್ಯಕ್ಷ ಆರ್‌. ಲಕ್ಷ್ಮೇಕಾಂತ್‌, ಉಪಾಧ್ಯಕ್ಷ ಕೆ.ರಾಮ್‌ಪ್ರಸಾದ್‌, ನಿರ್ದೇಶಕ ಶ್ಯಾಮಪ್ರಸಾದ್‌, ಪದಾಧಿಕಾರಿಗಳು ಇನ್ನಿತರರು ಇದ್ದರು.

click me!