ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಕೆಪಿಸಿಸಿ ರಾಜ್ಯ ಯುವ ಘಟಕದ ಅಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಲಪಾಡ್ ನೇತೃತ್ವದಲ್ಲಿ ಕಲ್ಬುರ್ಗಿಯಲ್ಲಿ ಎಂದು ಪ್ರತಿಭಟನೆ ನಡೆಯಿತು.
ವರದಿ: ಶರಣಯ್ಯ ಹಿರೇಮಠ, ಏಷ್ಯಾನೇಟ್ ಸುವರ್ಣ ನ್ಯೂಸ್ ಕಲಬುರಗಿ
ಕಲಬುರಗಿ (ಏ.09): ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಕೆಪಿಸಿಸಿ (KPCC) ರಾಜ್ಯ ಯುವ ಘಟಕದ ಅಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಲಪಾಡ್ (Mohammed Haris Nalapad) ನೇತೃತ್ವದಲ್ಲಿ ಕಲ್ಬುರ್ಗಿಯಲ್ಲಿ ಎಂದು ಪ್ರತಿಭಟನೆ (Protest) ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮೊಹಮ್ಮದ್ ನಲಪಾಡ್, ತೈಲ ಬೆಲೆ ಏರಿಕೆ ಮೂಲಕ ಸರ್ಕಾರ ಜನಸಾಮಾನ್ಯರ ಪಿಕ್ ಪಾಕೇಟ್ ಮಾಡುತ್ತಿದೆ. ಪಿಕ್ ಪಾಕೆಟ್ ಸರ್ಕಾರದ ವಿರುದ್ಧ ನಮ್ಮ ಪ್ರತಿಭಟನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತೈಲ ಬೆಲೆ ಮತ್ತು ಅಡುಗೆ ಅನಿಲ ಬೆಲೆ ಹೆಚ್ಚಳ ಖಂಡಿಸಿ ಕಾಂಗ್ರೆಸ್ (Congress) ಯುವ ಘಟಕದ ಕಾರ್ಯಕರ್ತರು ಕಲಬುರ್ಗಿ ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ಸರ್ಕಲ್ ನಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು. ಕೆಪಿಸಿಸಿ ರಾಜ್ಯ ಯುವ ಘಟಕದ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಸ್ವತಃ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಗ್ಯಾಸ್ ಸಿಲಿಂಡರ್ ತಲೆಮೇಲೆ ಹೊತ್ತುಕೊಂಡು, ಧರಣಿ ನಡೆಸಿದ ನಲಪಾಡ್, ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಪ್ರತಿಕೃತಿ ದಹನ ಕ್ಕೆ ಯತ್ನಿಸಿದರು. ಆದರೆ ಪೊಲೀಸರು ಇದಕ್ಕೆ ಅವಕಾಶ ನೀಡದೆ, ಪ್ರತಿಕೃತಿಗೆ ಬೆಂಕಿ ಹಚ್ಚುವುದನ್ನು ತಡೆದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ತೀವ್ರ ತಿಕ್ಕಾಟ ನಡೆಯಿತು.
ಪಿಕ್ ಪಾಕೇಟ್ ಸರಕಾರ: ಪ್ರತಿಭಟನೆ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ನಲಪಾಡ್, ರಾಜ್ಯಾಧ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಯುವ ಆಕ್ರೋಶ ಪ್ರತಿಭಟನೆ ನಡೆಸುತ್ತಿದ್ದೇವೆ. ಕೇಂದ್ರ ಮತ್ತು ರಾಜ್ಯದಲ್ಲಿರುವುದು ಪಿಕ್ ಪಾಕೆಟ್ ಸರಕಾರ. ಇವರು ಸಾಮಾನ್ಯ ಜನರ ಜೇಬಿನಿಂದ ಪಿಕ್ ಪಾಕೆಟ್ ಮಾಡ್ತಿದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪೆಟ್ರೋಲ್, ಡೀಸಲ್, ಅಡುಗೆ ಅನೀಲ ಸೇರಿದಂತೆ ಎಲ್ಲಾ ಬೆಲೆ ಏರಿಕೆಯಾಗುತ್ತಿದೆ. ಮೋದಿ ಸರಕಾರ ಬರೀ ಸುಳ್ಳು ಹೇಳುತ್ತಿದೆ. ಇಂತಹ ಸುಳ್ಳು ಸರಕಾರ ಸೋಲಿಸಿ, ಯುವ ಕಾಂಗ್ರೆಸ್ ಜೊತೆ ಕೈಜೋಡಿಸಿ ಎಂದು ಜನತೆಗೆ ಕರೆ ನೀಡಿದರು.
Mohammed Nalapad controversy ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ವಿರುದ್ಧ ಎಫ್‌ಐಆರ್!
ಪಂಚ ರಾಜ್ಯ ಚುನಾವಣೆ ಸಂದರ್ಭದಲ್ಲಿ ಕೇಂದ್ರ ಸರಕಾರ ದೇಶದಲ್ಲಿ ತೈಲ ಬೆಲೆ ಕಡಿಮೆ ಮಾಡಿತ್ತು. ಚುನಾವಣೆ ಮುಗಿಯುತ್ತಿದ್ದಂತೆಯೇ ಮತ್ತೆ 20 ರೂಪಾಯಿ ಹೆಚ್ಚಳ ಮಾಡಿದ್ದಾರೆ. ಇಂತಹ ಲೂಟಿಕೋರ, ಪಿಕ್ ಪಾಕೇಟ್ ಸರಕಾರಕ್ಕೆ ಜನ ಪಾಠ ಕಲಿಸಬೇಕಾಗಿದೆ ಎಂದರು. ಹಲಾಲ್, ಹಿಜಾಬ್, ಆಜಾನ್ ನಿನ್ನೆ ಮೊನ್ನೆ ಶುರುವಾಗಿರುವುದಲ್ಲ. ಬಿಜೆಪಿ, ಕೋಮುಭಾವನೆ ಯಾಕೆ ಮೂಡಿಸುತ್ತಿದೆ ಎನ್ನುವುದರ ಬಗ್ಗೆ ಜನ ಆಲೋಚಿಸಬೇಕಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಮೋದಿ ಬೆಲೆ ಏರಿಕೆ ಬಗ್ಗೆ ಒಮ್ಮೆಯಾದರೂ ಮಾತನಾಡಿದ್ದಾರಾ ? ಸಮಾಜವನ್ನು ಒಡೆಯಲು ಯತ್ನಿಸುತ್ತಿದೆ. ನಾವೆಲ್ಲಾ ಭಾರತೀಯರು, ನಾವೆಲ್ಲಾ ಒಂದೇ. ತಮ್ಮ ವೈಫಲ್ಯ ಮರೆಮಾಚಲು ಬಿಜೆಪಿಯವರು ಇದನ್ನು ಮಾಡುತ್ತಿದ್ದಾರೆ ಎಂದು ನಲಪಾಡ ಕಿಡಿಕಾರಿದರು.