* ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಮಾದರಿ ಶಾಲೆ ನಿರ್ಮಾಣ
* ಮಂಡಳಿ ಸರ್ವ ಸದಸ್ಯರ ಸಭೆಯಲ್ಲಿ ನಿರ್ಣಯ
* 45 ಕೋಟಿ ರೂಪಾಯಿ ಕ್ರಿಯಾ ಯೋಜನೆಗೆ ಅನುಮತಿ
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ, (ಮೇ.16): ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಮಾದರಿ ಶಾಲೆ ನಿರ್ಮಾಣಕ್ಕೆ ಮಂಡಳಿಯ ಸರ್ವ ಸದಸ್ಯರ ಸಭೆಯಲ್ಲಿ ನಿರ್ಣಯಿಸಲಾಯಿತು.
ಚಿತ್ರದುರ್ಗ ನಗರದ ತಮಟಕಲ್ಲು ರಸ್ತೆಯಲ್ಲಿರುವ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಮಂಡಳಿ ಅಧ್ಯಕ್ಷ ಎನ್.ಇ.ಜೀವನಮೂರ್ತಿ ಅಧ್ಯಕ್ಷತೆಯಲ್ಲಿ ಮಂಡಳಿಯ ಸರ್ವ ಸದಸ್ಯರ ಸಭೆ ಜರುಗಿತು. ಸಭೆಯಲ್ಲಿ 2021-22 ನೇ ಸಾಲಿನ ವಾರ್ಷಿಕ ಆಡಳಿತ ವರದಿ, 2022-23 ನೇ ಸಾಲಿನ ಕ್ರಿಯಾ ಯೋಜನೆ ಹಾಗೂ 2015-16 ರಿಂದ 2020-21ನೇ ಸಾಲಿನ ವರಗಿನ ವಾರ್ಷಿಕ ಲೆಕ್ಕಪತ್ರಗಳ ತಪಾಸಣಾ ವರದಿಗಳನ್ನು ಅನುಮೋದಿಸಿ, ಇತರೆ ವಿಷಯಗಳನ್ನು ಚರ್ಚಿಸಲಾಯಿತು.
ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅನುದಾನದಲ್ಲಿ ಮಾದರಿ ಶಾಲೆಗಳನ್ನು ನಿರ್ಮಿಸುವ ಕುರಿತು ವಿಧಾನ ಪರಿಷತ್ ಶಾಸಕ ಕೆ.ಎಸ್.ನವೀನ್ ಸಭೆಯಲ್ಲಿ ವಿಷಯನ್ನು ಮಂಡಿಸಿದರು. ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶದಲ್ಲಿ ಮಾದರಿ ಶಾಲೆ ನಿರ್ಮಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಂದ ವರದಿ ಪಡೆದುಕೊಂಡು, ಸೂಕ್ತವಾದ ಸ್ಥಳ ಆಯ್ಕೆ ಮಾಡಿ ಶಾಲೆ ನಿರ್ಮಿಸಲಾಗುವುದು ಎಂದು ತಿಳಿಸಿದರು. ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಪರಿಶಿಷ್ಟ ಜಾತಿ ಹಾಗೂ ಪಂಗಡ, ಹಿಂದುಳಿದ ವರ್ಗದವರು ಹೆಚ್ಚಾಗಿ ವಾಸಿಸುವ ಪ್ರದೇಶದಲ್ಲಿ ಮಾದರಿ ಶಾಲೆ ನಿರ್ಮಿಸುವಂತೆ ಸಲಹೆ ನೀಡಿದರು. ಮುಂದಿನ ದಿನಗಳಲ್ಲಿ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ವ್ಯಾಪ್ತಿಯ ಎಲ್ಲಾ ತಾಲೂಕಿನಲ್ಲಿಯೂ ಮಾದರಿ ಶಾಲೆ ನಿರ್ಮಿಸಲು ಯೋಜನೆ ರೂಪಿಸಬೇಕು ಎಂದರು.
BIG 3 Impact: 20 ವರ್ಷದ ಸಮಸ್ಯೆ 1 ವರ್ಷದಲ್ಲಿ ಕ್ಲೀಯರ್: ಚಿತ್ರದುರ್ಗದ ಮಲ್ಲಾಪುರ ಕೆರೆಗೆ ತಡೆಗೋಡೆ ನಿರ್ಮಾಣ
45 ಕೋಟಿ ರೂಪಾಯಿ ಕ್ರಿಯಾ ಯೋಜನೆಗೆ ಅನುಮತಿ:
ಈ ಬಾರಿ ಆಯವ್ಯಯದಲ್ಲಿ ಸರ್ಕಾರ 45 ಕೋಟಿ ರೂಪಾಯಿಗಳನ್ನು ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಗೆ ನೀಡಿದೆ. ಈ ಅನುದಾನದಲ್ಲಿ 34.15 ಕೋಟಿ ರೂಪಾಯಿಗಳನ್ನು ಬಂಡವಾಳ ವೆಚ್ಚವಾಗಿ, ಮಂಡಳಿಯ ಈ ಹಿಂದೆ ಕೈಗೊಂಡ ಕಾಮಗರಿಗಳಿಗೆ, ವಿಶೇಷ ಘಟಕ ಯೋಜನೆಯಡಿ 7.18 ಕೋಟಿ ರೂಪಾಯಿ ಹಾಗೂ ಗಿರಿಜನ ಉಪಯೋಜನೆಯಡಿ 3.12 ಕೋಟಿ ರೂಪಾಯಿಗಳನ್ನು ಹೊಸ ಕಾಮಗಾರಿಗಳಿಗೆ ವೆಚ್ಚ ಮಾಡಲು ಮಂಡಳಿ ಅಧ್ಯಕ್ಷ ಎನ್.ಇ.ಜೀವನಮೂರ್ತಿ ವಿಷಯ ಮಂಡಿಸಿದರು. ಸಭೆಯಲ್ಲಿ ಉಪಸ್ಥಿತರಿದ್ದ ಸದಸ್ಯರು ಪ್ರಸ್ತಾವಕ್ಕೆ ಅನುಮೋದನೆ ನೀಡಿದರು.
ಕಾಮಗಾರಿಗಳ ಪರಿಶೀಲನೆಗೆ ತಂಡ ರಚನೆ:
ಮಂಡಳಿ ಅನುದಾನದಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆಯನ್ನು ಮಂಡಳಿ ಅಧ್ಯಕ್ಷರು ಒಬ್ಬರೇ ಮಾಡಲು ಕಷ್ಟ ಸಾಧ್ಯ. ಈ ಹಿನ್ನಲೆಯಲ್ಲಿ ಮಂಡಳಿ ಕಾರ್ಯದರ್ಶಿಯನ್ನು ಒಳಗೊಂಡಂತೆ ಅಧಿಕಾರಿಗಳ ತಂಡ ರಚಿಸಿ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಸಭೆಯಲ್ಲಿ ತಿಳಿಸಿದರು. ಮಂಡಳಿ ಅನುದಾನದಿಂದ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳ ನಾಮ ಫಲಕದಲ್ಲಿ ಕಡ್ಡಾಯವಾಗಿ ಮಂಡಳಿ ಹೆಸರು ನಮೂದಿಸುವಂತೆ ಅಧ್ಯಕ್ಷಕರು ಸೂಚನೆ ನೀಡಿದರು.
.5 ಕೋಟಿ ನಬಾರ್ಡ್ ಅನುದಾನಕ್ಕೆ ಬೇಡಿಕೆ:
ಈ ಹಿಂದೆ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಗೆ ನಬಾರ್ಡ್‍ನಿಂದ ಅನುದಾನ ತರಲಾಗಿತ್ತು. ಇದೇ ರೀತಿ ಪ್ರತಿ ಕ್ಷೇತ್ರಕ್ಕೆ 5 ಕೋಟಿ ರೂಪಾಯಿಗಳ ಅನುದಾನವನ್ನೂ ನಬಾರ್ಡ್‍ನಿಂದ ತರಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಸುವಂತೆ ಚಿತ್ರದುರ್ಗ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಸಭೆಯಲ್ಲಿ ತಿಳಿಸಿದರು. ಮಂಡಳಿಯಿಂದ ನಿರ್ಮಿಸಿರುವ ಚೆಕ್ ಡ್ಯಾಂಗಳಲ್ಲಿ ತುಂಬಿರುವ ಹೂಳು ತೆಗೆಯಲು ನರೇಗಾದಲ್ಲಿ ಪ್ರಾವಧಾನ ನೀಡಬೇಕು. ಮಂಡಳಿಯ ವಾರ್ಷಿಕ ಲೆಕ್ಕಪತ್ರ ವರದಿ ಹಾಗೂ ಆಡಿಟ್‍ಗಳನ್ನು ಆಯಾ ವರ್ಷವೇ ಪೂರ್ಣಗೊಳಿಸಬೇಕು. ಇದನ್ನು ವಾರ್ಷಿಕ ಸಭೆಯಲ್ಲಿ ಮಂಡಿಸಬೇಕು ಎಂದು ವಿಧಾನ ಪರಿಷತ್ ಶಾಸಕ ಕೆ.ಎ.ತಿಪ್ಪೇಸ್ವಾಮಿ ಸೂಚನೆ ನೀಡಿದರು. ಬ್ಯಾಡಗಿ ಶಾಸಕ ವಿರುಪಾಕ್ಷ ಬಳ್ಳಾರಿ ಮಾತನಾಡಿ, ಆಯಾ ವರ್ಷದ ಅನುದಾನವನ್ನು ಆಯಾ ವರ್ಷದಲ್ಲಿಯೇ ಬಳಸಿಕೊಳ್ಳಬೇಕು. ಕಾಮಗಾರಿಗಳ ಅನುಷ್ಠಾನ ತಡವಾದರೆ ಜನರಿಗೆ ಯೋಜನೆಗಳು ತಲುಪುವುದಿಲ್ಲ. ಯೋಜನೆಯ ವೆಚ್ಚವು ಅಧಿಕವಾಗುವುದು. ಅಧಿಕಾರಿಗಳು ಈ ಕುರಿತು ಎಚ್ಚರ ವಹಿಸಬೇಕು ಎಂದರು.....,