ಮದ್ಯ ಮಾರಾಟಕ್ಕೂ ಮೊಬೈಲ್‌ ವ್ಯಾನ್‌! ಮನೆ ಬಾಗಿಲಿಗೇ ಬಾಟಲ್

By Kannadaprabha NewsFirst Published May 16, 2020, 11:36 AM IST
Highlights

ಪ್ರಸ್ತುತ ಮದ್ಯ ಮಾರಾಟಕ್ಕೆ ಜಿಲ್ಲೆಯಲ್ಲಿ ಯಾವುದೇ ತೊಂದರೆ ಇಲ್ಲವಾದರೂ ಗ್ರಾಮೀಣ ಪ್ರದೇಶದಲ್ಲಿ ಮದ್ಯ ಸಿಗುವುದು ಕಷ್ಟ. ಈ ಕಾರಣದಿಂದಾಗಿ ಮೊಬೈಲ್‌ ವ್ಯಾನ್‌ ಮೂಲಕ ಗ್ರಾಮಗಳಲ್ಲಿ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡುವ ವ್ಯವಸ್ಥಿತ ಜಾಲ ಹಬ್ಬಿದೆ. ಮೊಬೈಲ್‌ ಮದ್ಯ ಮಾರಾಟ ವಾಹನವನ್ನು ಸಿದ್ಧಪಡಿಸಿಕೊಂಡಿರುವ ಮದ್ಯ ಅಕ್ರಮ ಮಾರಾಟಗಾರರು ಮನೆ ಬಾಗಿಲಿಗೇ ಮದ್ಯ ಸಾಗಾಟ ಮಾಡುವ ತಂತ್ರವನ್ನು ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ.

ಚಿಕ್ಕಬಳ್ಳಾಪುರ(ಮೇ 16): ಪ್ರಸ್ತುತ ಮದ್ಯ ಮಾರಾಟಕ್ಕೆ ಜಿಲ್ಲೆಯಲ್ಲಿ ಯಾವುದೇ ತೊಂದರೆ ಇಲ್ಲವಾದರೂ ಗ್ರಾಮೀಣ ಪ್ರದೇಶದಲ್ಲಿ ಮದ್ಯ ಸಿಗುವುದು ಕಷ್ಟ. ಈ ಕಾರಣದಿಂದಾಗಿ ಮೊಬೈಲ್‌ ವ್ಯಾನ್‌ ಮೂಲಕ ಗ್ರಾಮಗಳಲ್ಲಿ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡುವ ವ್ಯವಸ್ಥಿತಿ ಜಾಲ ಹಬ್ಬಿದೆ. ಮೊಬೈಲ್‌ ಮದ್ಯ ಮಾರಾಟ ವಾಹನವನ್ನು ಸಿದ್ಧಪಡಿಸಿಕೊಂಡಿರುವ ಮದ್ಯ ಅಕ್ರಮ ಮಾರಾಟಗಾರರು ಮನೆ ಬಾಗಿಲಿಗೇ ಮದ್ಯ ಸಾಗಾಟ ಮಾಡುವ ತಂತ್ರವನ್ನು ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ.

ರಾಜ್ಯಗಳ ನಡುವೆ ಗಡಿಯೇ ಇಲ್ಲ!

ಬಾಗೇಪಲ್ಲಿ ತಾಲೂಕಿನ ಬಿಳ್ಳೂರು ಆಂಧ್ರದ ಗಡಿಗೆ ಹೊಂದಿಕೊಂಡಿದ್ದು, ಈ ಗ್ರಾಮಕ್ಕೆ ಹೋಗಬೇಕಾದರೆ ಎರಡು ಬಾರಿ ಆಂಧ್ರ ಪ್ರವೇಶ ಮಾಡಬೇಕು. ನಂತರ ಕರ್ನಾಟಕಕ್ಕೆ ಸೇರುತ್ತೇವೆ. ರಸ್ತೆಯೇ ಆಂಧ್ರದ ಮೂಲಕ ಸಾಗುವುದರಿಂದ ಈ ಭಾಗದಲ್ಲಿ ಆಂಧ್ರ ಮತ್ತು ರಾಜ್ಯದ ಗಡಿ ನಿಯಂತ್ರಣ ಎಂಬುದದೇ ಇಲ್ಲವಾಗಿದೆ. ಹಾಗಾಗಿ ಈ ಪ್ರದೇಶದಲ್ಲಿರುವ ಮದ್ಯದ ಅಂಗಡಿಗಳನ್ನು ತೆರೆಯಲು ಇನ್ನೂ ಸರ್ಕಾರ ಅನುಮತಿ ನೀಡಿಲ್ಲ.

ಮದ್ದೇಪಲ್ಲಿ ಕ್ರಾಸ್‌ ಅಲ್ಲ, ಜುಗಾರಿ ಕ್ರಾಸ್‌!

ಈ ಬಿಳ್ಳೂರಿಗೆ ಹೋಗುವ ಮಾರ್ಗದಲ್ಲಿ ಮದ್ದೇಪಲ್ಲಿ ಕ್ರಾಸ್‌ ಸಿಗುತ್ತದೆ. ಇದು ಅಕ್ಷರಶಃ ಜುಗಾರಿ ಕ್ರಾಸ್‌ ಆಗಿ ಬದಲಾಗಿದ್ದು, ಇಲ್ಲಿ ಜೂಜು, ಮದ್ಯ, ಕಳ್ಳು ಸೇರಿದಂತೆ ಎಲ್ಲ ಅಕ್ರಮಗಳ ಅವಾಸ ಸ್ಥಾನವಾಗಿದೆ ಎಂಬುದು ಸ್ಥಳೀಯರ ಆರೋಪವಾಗಿದೆ. ಇಂತಹ ಆಯಕಟ್ಟಿನ ಜಾಗದಲ್ಲಿ ಮದ್ಯದ ಅಂಗಡಿಯೊಂದನ್ನು ತೆರೆಯಲಾಗಿದ್ದು, ಪ್ರಸ್ತುತ ಇದು ಸರ್ಕಾರದ ಲೆಕ್ಕದಲ್ಲಿ ಇನ್ನೂ ಬಾಗಿಲು ತೆಗೆದಿಲ್ಲ.

ಕಾರ್ಮಿಕ ಕಾಯ್ದೆ ಅಮಾನತು ವಿರುದ್ಧ ದಾವಣಗೆರೆಯಲ್ಲಿ ಪ್ರತಿಭಟನೆ

ಆದರೆ ಈ ಬಾರ್‌ ಮುಂದೆಯೇ ಪ್ರತಿನಿತ್ಯ ಮದ್ಯ ಅಕ್ರಮ ಮಾರಾಟ ಯಥೇಚ್ಛವಾಗಿ ನಡೆಯುತ್ತಿದೆ. ಮಾರುತಿ ವ್ಯಾನ್‌ನಲ್ಲಿ ಎಲ್ಲ ಬಗೆಯ ಮದ್ಯವನ್ನೂ ಜೋಡಿಸಿಕೊಂಡು ಬಾರ್‌ ಮುಂದೆ ನಿಲ್ಲಿಸಲಾಗುತ್ತದೆ. ಆಂಧ್ರ ಮತ್ತು ಕರ್ನಾಟಕದ ಮದ್ಯ ಈ ಭಾಗದ ಮದ್ಯ ಪ್ರಿಯರು ಈ ವ್ಯಾನ್‌ ಬಳಿ ಬಂದು ಅಗತ್ಯ ಮದ್ಯ ಖರೀದಿಸುತ್ತಿದ್ದಾರೆ. ಆದರೆ ಸ್ಥಳದಲ್ಲಿ ಸೇವಿಸಲು ಮಾತ್ರ ಅವಕಾಶ ಕಲ್ಪಿಸಿಲ್ಲ ಎಂಬುದೇ ಸಮಾಧಾನದ ವಿಚಾರ.

ಪ್ರತಿ ಬಾಟಲ್‌ಗೆ .100 ಹೆಚ್ಚು ಬೆಲೆ

ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನದವರೆಗೂ ಮದ್ದೇಪಲ್ಲಿ ಕ್ರಾಸ್‌ನ ಈ ಬಾರ್‌ ಮುಂದೆ ನಿಲ್ಲುವ ಮದ್ಯ ವಾಹನ ನಂತರ ಗ್ರಾಮಗಳತ್ತ ಸಾಗುತ್ತದೆ. ಹೊಲದಲ್ಲಿ ಕೆಲಸ ಮಾಡುವವರು, ರಸ್ತೆಯಲ್ಲಿ ಹೋಗುವವರು, ಹಳ್ಳಿಯ ಬೇಜಾರು ಕಟ್ಟೆಯ ಮೇಲೆ ಕೂತವರಿಗೆ ಸ್ಥಳಕ್ಕೇ ಮದ್ಯ ಸರಬರಾಜು ಮಾಡುವ ವ್ಯವಸ್ಥೆಯನ್ನು ಈ ಮದ್ಯ ವಾಹನ ಮಾಡುತ್ತಿದೆ.

ಶುಕ್ರವಾರ ಕನ್ನಡಪ್ರಭ ಸ್ವತಃ ಈ ವಾಹನದಿಂದ ಮದ್ಯ ಖರೀದಿಸಿ, ಫೆäಟೋವನ್ನೂ ತೆಗೆಯಲಾಗಿದ್ದು, ಇದು ಪತ್ರಿಕೆಯಲ್ಲಿ ಬರುತ್ತದೆ ಎಂಬ ವಿಚಾರ ಬಹಿರಂಗವಾಗುತ್ತಿದ್ದಂತೆ ಮಾಲೀಕರೂ ಕರೆ ಮಾಡಿ ಸುದ್ದಿ ಬರೆಯದಂತೆ ಗೋಗೆರೆದ ಘಟನೆಯೂ ನಡೆಯಿತು. ಗ್ರಾಮೀಣ ಪ್ರದೇಶದಲ್ಲಿ ಇವೆಲ್ಲವೂ ಸಾಮಾನ್ಯ ನೋಡಿ ನೋಡದಂತೆ ಹೋಗಬೇಕು ಎಂದು ಮಾಲೀಕರು ಮನವಿಯನ್ನೂ ಮಾಡಿದರು.

ಮಾಲೀಕರು ಹೇಳಿದ್ದೇನು?

ಮದ್ದೇಪಲ್ಲಿ ಕ್ರಾಸ್‌ನಲ್ಲಿರುವ ಬಾರ್‌ ಮಾಲೀಕರು ಇದೇ ಬಾಗೇಪಲ್ಲಿ ಕ್ಷೇತ್ರದ ಶಾಸಕರ ಸಂಬಂಧಿಯಾಗಿದ್ದು, ಇವರ ಕುಮ್ಮಕ್ಕಿನಿಂದಲೇ ಇಲ್ಲಿ ಮಾರುತಿ ವ್ಯಾನ್‌ನಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ ಇದೇ ಶಾಸಕರ ಸಂಬಂಧಿ ಕನ್ನಡಪ್ರಭಕ್ಕೆ ಕರೆ ಮಾಡಿ, ಸುದ್ದಿ ಮಾಡುವುದು ಬೇಡ, ಕೈಬಿಡುವಂತೆ ಮನವಿ ಮಾಡಿದ್ದು ವಿಶೇಷ.

ಮದ್ಯವನ್ನು ವಾಹನದಲ್ಲಿ ತುಂಬಿಕೊಂಡು ಮಾರಾಟ ಮಾಡುತ್ತಿರುವ ವಿಚಾರ ಅಬಕಾರಿ ಇಲಾಖೆ ಅಧಿಕಾರಿಗಳಿಗೂ ತಿಳಿದಿದ್ದು, ಶಾಸಕರ ಸಂಬಂಧಿಯಾದ ಕಾರಣ ಜಾಣಕುರುತನ ಪ್ರದರ್ಶಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಲಾಕ್‌ಡೌನ್‌ನಿಂದ ಮದ್ಯ ಸಿಗದೆ ಗ್ರಾಮಗಳಲ್ಲಿ ಜಗಳಗಳು ಸ್ಥಗಿತಗೊಂಡಿದ್ದವು. ಆದರೆ ಈಗ ಮತ್ತೆ ಆರಂಭವಾಗಿವೆ ಎಂದು ಮಹಿಳೆಯರು ಅಳಲು ತೋಡಿಕೊಂಡಿದ್ದಾರೆ.

ಅಶ್ವತ್ಥನಾರಾಯಣ ಎಲ್‌.

click me!