ದಾವಣಗೆರೆ(ಮೇ.16): ಕಾರ್ಮಿಕ ಕಾಯ್ದೆಗಳ ಅಮಾನತು ವಿರೋಧಿಸಿ, ಎಪಿಎಂಸಿ ಕಾಯ್ದೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಒತ್ತಾಯಿಸಿ ಕರ್ನಾಟಕ ಜನಶಕ್ತಿ ಮತ್ತು ಕರ್ನಾಟಕ ಶ್ರಮಿಕ ಶಕ್ತಿ ಜಿಲ್ಲಾ ಘಟಕದಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಇಲ್ಲಿನ ಡಿಸಿ ಕಚೇರಿಯಲ್ಲಿ ಸಂಘಟನೆ ಮುಖಂಡರಾದ ಸತೀಶ ಅರವಿಂದ್‌, ಟಿ.ಶಫೀವುಲ್ಲಾ, ಜಬೀನಾ ಖಾನಂ, ಜಿ.ಜಿ.ನೂರುಲ್ಲಾ ನೇತೃತ್ವದಲ್ಲಿ ಜಿಲ್ಲಾ ಕಾರ್ಮಿಕ ಇಲಾಖೆ ಸಹಾಯಕ ಕಾರ್ಮಿಕ ಆಯುಕ್ತದ ಮುಖಾಂತರ ಸಿಎಂಗೆ ಮನವಿ ಅರ್ಪಿಸಿದ ತಮ್ಮ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಲಾಯಿತು.

ಸಂಘಟನೆ ಮುಖಂಡರು ಮಾತನಾಡಿ, ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಕಾರ್ಮಿಕ ವಿರೋಧಿ ಸುಗ್ರೀವಾಜ್ಞೆ ಜಾರಿಗೆ ತರಬಾರದು. ಕೊರೋನಾ ಸಂತ್ರಸ್ಥ ಎಲ್ಲಾ ಬಗೆಯ ಕಾರ್ಮಿಕರಿಗೆ ಮಾಸಿರ 10 ಸಾವಿರ ರು. ಹಾಗೂ ಸಮರ್ಪಕ ಆಹಾರ ಸಾಮಗ್ರಿ ನೀಡಬೇಕು ಎಂದು ಆಗ್ರಹಿಸಿದರು.

ಉದ್ದೇಶಿತ ಎಪಿಎಂಸಿ ಕಾಯ್ದೆ ತಿದ್ದುಪಡಿ ಕೈಬಿಡಬೇಕು.ಕೊರೋನಾ ಸಂಕಷ್ಟದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡದೇ, ಲಾಕ್‌ಡೌನ್‌ನ ಕಟ್ಟುನಿಟ್ಟಿನ ಕ್ರಮದಡಿ ಮದ್ಯ ಮಾರಾಟ ನಿಷೇಧಿಸಬೇಕು. ತಕ್ಷಣವೇ ರಾಜ್ಯಮಟ್ಟದ ಎಲ್ಲಾ ಕಾರ್ಮಿಕ ಸಂಘಟನೆಗಳೊಂದಿಗೆ ಸಮಾಲೋಚನೆ ಸಭೆ ನಡೆಸಿ, ಕಾರ್ಮಿಕರ ಸಮಸ್ಯೆ ಪರಿಹರಿಸಬೇಕು ಎಂದರು.

ವೈರಸ್‌ ಹಾವಳಿ ಪೂರ್ವದಲ್ಲೇ ಕೇಂದ್ರವು ಕಾರ್ಮಿಕ ಕಾಯ್ದೆಗಳ ಬದಲಾವಣೆ ಆರಂಭಿಸಿತ್ತು. 44 ಕೇಂದ್ರ ಕಾರ್ಮಿಕ ಕಾಯ್ದೆಗಳನ್ನು ಕೇವಲ 4 ಸಂಹಿತೆಯಾಗಿ ಬದಲಿಸಲು ಮುಂದಾಗಿತ್ತು. ದೇಶಾದ್ಯಂತ ಕಾರ್ಮಿಕರ ವಿರೋಧದ ಮಧ್ಯೆಯೂ ಕಾಯ್ದೆ ಬದಲಾವಣೆಗೆ ಕೇಂದ್ರ ಮುಂದಾಯಿತು. ಕಾಯ್ದೆ ಬದಲಾವಣೆಯಿಂದ ದೇಶದ ಕಾರ್ಮಿಕರು ಕಾನೂನಿನ ರಕ್ಷಣೆ ಕಳೆದುಕೊಂಡು, ಕಾರ್ಖಾನೆಗಳ ಜೀತದಾಳುಗಳಾಗಿದ್ದಾರೆಂಬುದು ಗೊತ್ತಿದ್ದರೂ ಕೇಂದ್ರವು ಬಂಡವಾಳ ಶಾಹಿಗಳ ಪರ ನಿರ್ಧಾರಕ್ಕೆ ಮುಂದಾಗಿತ್ತು ಎಂದು ಅವರು ಆರೋಪಿಸಿದರು.

ಆರ್ಥಿಕ ಸಂಕಷ್ಟದಿಂದ ಕೈಗಾರಿಕೋದ್ಯಮಿಗಳನ್ನು ಕಾಪಾಡಲು 1 ಸಾವಿರದಿಂದ 1200 ದಿನಗಳ ಕಾಲ ಅಂದರೆ 3 ವರ್ಷ ಕಾಲ ಎಲ್ಲಾ ಕಾರ್ಮಿಕ ಕಾಯ್ದೆ ಅಮಾನತುಗೊಳಿಸುವ ಸುಗ್ರೀವಾಜ್ಞೆಯನ್ನು ದೇಶಾದ್ಯಂತ ಜಾರಿಗೊಳಿಸಲು ಮುಂದಾಗಿದ್ದು ಸರಿಯಲ್ಲ ಎಂದು ಅವರು ಆಕ್ಷೇಪಿಸಿದರು.

ಕರ್ನಾಟಕದಲ್ಲಿ ಇನ್ನು ದಿನಕ್ಕೆ ‘2 ಶಿಫ್ಟ್‌’ನಲ್ಲಿ ಶಾಲೆ ಆರಂಭ?

ಕೊರೋನಾ ಕೇವಲ ನೆಪವಾಗಿದ್ದು, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಗುಜರಾತ್‌, ಮಧ್ಯ ಪ್ರದೇಶ ಸೇರಿದಂತೆ ಬಿಜೆಪಿ ಅಧಿಕಾರದ ರಾಜ್ಯಗಳಲ್ಲಿ ಸುಗ್ರೀವಾಜ್ಞೆ ಹೊರಡಿಸಲಾಗಿದೆ. ಅದೇ ಹಾದಿಯನ್ನು ನಮ್ಮ ರಾಜ್ಯ ಸರ್ಕಾರವೂ ತುಳಿಯಲು ಮುಂದಾಗಿದೆ. ಸಂಘಟಿತ, ಅಸಂಘಟಿತ ವಲಯದ ಕಾರ್ಮಿಕರು ಕೊನೆ ಇಲ್ಲದೇ ಸಂಕಷ್ಟಕ್ಕೆ ಗುರಿಯಾಗಿದ್ದಾರೆ ಎಂದು ಅವರು ದೂರಿದರು.

ಕಾಯಂ ಕೆಲಸವದರನ್ನು ಒಳಗೊಂಡು ಎಲ್ಲಾ ಕಾರ್ಮಿಕರು ಉದ್ಯೋಗದ ಭದ್ರತೆ ಕಳೆದುಕೊಳ್ಳಲಿದ್ದಾರೆ. ಕಾಯಂ ಕೆಲಸಗಾರಲೆಲ್ಲಾ ನಿಗದಿತ ಕೆಲಸದ ಕೂಲಿ ಆಳುಗಳಾಗಲಿದ್ದಾರೆ. ದಿನಕ್ಕೆ 8 ತಾಸಿನ ಬದಲು 12 ತಾಸು ಕೆಲಸ ಮಾಡಬೇಕಾಗುತ್ತದೆ. 8 ಗಂಟೆ ದುಡಿಮೆ, 8 ಗಂಟೆ ಮನರಂಜನೆ, 8 ತಾಸು ವಿಶ್ರಾಂತಿ ಎಂಬ ವಿಶ್ವ ಕಾರ್ಮಿಕ ಜೀವನ ಪದ್ಧತಿಯನ್ನೇ ಕೇಂದ್ರ, ರಾಜ್ಯ ಸರ್ಕಾರಗಳು ಧ್ವಂಸ ಮಾಡಲು ಹೊರಟಿವೆ ಎಂದು ಅವರು ಕಿಡಿಕಾರಿದರು.

ಸಂಘಟನೆ ಮುಖಂಡರಾದ ಸತೀಶ ಅರವಿಂದ್‌, ಟಿ.ಶಫೀವುಲ್ಲಾ, ಜಿ.ಬಿ.ನೂರುಲ್ಲಾ, ರಾಜಣ್ಣ, ಮಾರುತಿ, ಟೈಲರ್‌, ನೆರಳು ಬೀಡಿ ಕಾರ್ಮಿಕರ ಸಂಘಟನೆಯ ಜಬೀನಾ ಖಾನಂ, ಅನ್ವರ್‌, ರಹಮತ್ತುಲ್ಲಾ, ಅಣ್ಣಪ್ಪ ರಾಜಣ್ಣ ಸೇರಿದಂತೆ ಇತರರು ಪ್ರತಿಭಟನೆಯಲ್ಲಿದ್ದರು. ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಅರ್ಪಿಸಲಾಯಿತು.