Chitradurga: ಕಾರ್ಮಿಕರ ಆರೋಗ್ಯ ಕಾಳಜಿಗೆ ಸಂಚಾರಿ ಕ್ಲಿನಿಕ್: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

By Govindaraj SFirst Published Jul 4, 2022, 9:36 PM IST
Highlights

ನೋಂದಾಯಿತ ಕಟ್ಟಡ ಕಾರ್ಮಿಕರು ಮತ್ತು ಅವರ ಅವಲಂಬಿತರ ಆರೋಗ್ಯ ಸೇವೆಗೆ ಸಂಚಾರಿ ಆರೋಗ್ಯ ಕ್ಲಿನಿಕ್ ಅತ್ಯಾಧುನಿಕ ಸವಲತ್ತುಗಳನ್ನು ಹೊಂದಿದೆ ಎಂದು ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ (ಜು.04): ನೋಂದಾಯಿತ ಕಟ್ಟಡ ಕಾರ್ಮಿಕರು ಮತ್ತು ಅವರ ಅವಲಂಬಿತರ ಆರೋಗ್ಯ ಸೇವೆಗೆ ಸಂಚಾರಿ ಆರೋಗ್ಯ ಕ್ಲಿನಿಕ್ ಅತ್ಯಾಧುನಿಕ ಸವಲತ್ತುಗಳನ್ನು ಹೊಂದಿದೆ ಎಂದು ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಇಂದು ಕಾರ್ಮಿಕರ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಲ್ಯಾಣ ಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ ಶ್ರಮಿಕ್ ಸಂಜೀವಿನಿ-ಸಂಚಾರಿ ಆರೋಗ್ಯ ಕ್ಲಿನಿಕ್ ಸೇವೆಯ ವಾಹನಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. 

ಕಟ್ಟಡ ಕಾರ್ಮಿಕರ ಜೀವನ ಸುಧಾರಣೆಗೆ ಅನುಕೂಲವಾಗುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರವು ಹತ್ತು ಹಲವು ಯೋಜನೆಗಳನ್ನು ಜಾರಿ ಮಾಡಲಾಗಿದ್ದು, ಅದರಂತೆ ಕಟ್ಟಡ ನಿರ್ಮಾಣ ಮತ್ತು ಇತರೆ ಕಾರ್ಮಿಕರಿಗೆ ಉತ್ತಮ ಆರೋಗ್ಯ ಸೇವೆ ನೀಡುವ ಜೊತೆಗೆ ಅವರಿದ್ದಲ್ಲಿಗೇ ಚಿಕಿತ್ಸಾಲಯವನ್ನು ಕೊಂಡೊಯ್ಯುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿದ್ದು, ಕಟ್ಟಡ ಕಾರ್ಮಿಕರ ಆರೋಗ್ಯ ಕಾಳಜಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು. 

ಚಿತ್ರದುರ್ಗದ ಡಿಆರ್‌ಡಿಒ ವೈಮಾನಿಕ ಪರೀಕ್ಷಾ ಕೇಂದ್ರಕ್ಕೆ ಸಚಿವ ಎ.ನಾರಾಯಣ ಸ್ವಾಮಿ ಭೇಟಿ

ಸಂಚಾರಿ ಆರೋಗ್ಯ ಕ್ಲಿನಿಕ್ ವಾಹನವು ಚಿತ್ರದುರ್ಗ ತಾಲ್ಲೂಕು ವ್ಯಾಪ್ತಿಯ 17 ಗ್ರಾಮಗಳಿಗೆ ಕಾರ್ಮಿಕರು ಇರುವಲ್ಲಿಗೆಯೇ ಈ ವಾಹನವು ತೆರಳಿ, ಕಾರ್ಮಿಕರು ಹಾಗೂ ಅವರ ಅವಲಂಭಿತರಿಗೆ ಉಚಿತ ಆರೋಗ್ಯ ಸೇವೆ ನೀಡುವ ಮೂಲಕ ಕಾರ್ಮಿಕರ ಹಿತ ರಕ್ಷಣೆಗೆ ಸರ್ಕಾರವು ಬದ್ಧವಾಗಿದೆ ಎಂದು ಹೇಳಿದರು. ಸಂಚಾರಿ ಆರೋಗ್ಯ ಕ್ಲಿನಿಕ್ ಅತ್ಯಾಧುನಿಕ ಸವಲತ್ತುಗಳನ್ನು ಹೊಂದಿದೆ. ಆಧುನಿಕ ಸ್ಟ್ರೆಚ್ಚರ್, ಬೆಡ್, ಆಕ್ಸಿಜನ್ ಪರಿಕರಗಳು, ವ್ಹೀಲ್ ಚೇರ್, ಪ್ರಯೋಗಾಲಯ ಸಲಕರಣೆಗಳು, ಸಿಬ್ಬಂದಿಗೆ ಆಸನದ ವ್ಯವಸ್ಥೆ, ಅವಶ್ಯಕ ವೈದ್ಯಕೀಯ ಪರಿಕರಗಳನ್ನು ಹೊಂದಿದೆ. 

ಈ ವಾಹನದಲ್ಲಿ ಓರ್ವ ವೈದ್ಯ, ನರ್ಸ್, ಫಾರ್ಮಸಿಸ್ಟ್, ಲ್ಯಾಬ್ ಟೆಕ್ನಿಷಿಯನ್, ಎಎನ್‍ಎಮ್, ಚಾಲಕ ಮತ್ತು ಸಹಾಯಕ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ ಎಂದರು. ಸಂಚಾರಿ ಆರೋಗ್ಯ ಕ್ಲಿನಿಕ್‍ನ ವೈದ್ಯ ಡಾ.ಬಸವ ಕಿರಣ ಮಾತನಾಡಿ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಕಲಬುರಗಿ ಪ್ರಾದೇಶಿಕ ವ್ಯಾಪ್ತಿಯ ಚಿತ್ರದುರ್ಗ ಜಿಲ್ಲೆಯಲ್ಲಿ ಸಂಚಾರಿ ಆರೋಗ್ಯ ಕ್ಲಿನಿಕ್‍ಗಳ ಸೇವೆಗಳನ್ನು ಒದಗಿಸಲು ಯುನೈಟೆಡ್ ಸೋಶಿಯಲ್ ವೆಲಫೆರ್ ಅಸೋಶಿಯೇಷನ್ ಬೆಳಗಾವಿಗೆ ಮಂಜೂರುಮಾಡಿ ಕಾರ್ಯಾದೇಶ ನೀಡಲಾಗಿದೆ ಎಂದರು. 

ಪ್ರಾಥಮಿಕ ಆರೋಗ್ಯ ಸೇವಾ ಕೇಂದ್ರದ ವ್ಯಾಪ್ತಿಯಲ್ಲಿರುವಂಹತ ಎಲ್ಲ ಆರೋಗ್ಯ ಸೇವೆಗಳು ಸಂಚಾರಿ ಆರೋಗ್ಯ ಕ್ಲಿನಿಕ್ ಮೂಲಕ ಸೇವೆ ನೀಡಲಾಗುವುದು. ಬಿ.ಪಿ, ರಕ್ತ ಪರೀಕ್ಷೆ, ಇಸಿಜಿ ಪರೀಕ್ಷೆ ಹಾಗೂ ಎಲ್ಲ ರೀತಿಯ ಪ್ರಯೋಗಾಲಯ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಸ್ಥಳದಲ್ಲಿಯೇ ಪರೀಕ್ಷೆಗಳನ್ನು ಕೈಗೊಂಡು ವರದಿ ಮತ್ತು ಚಿಕಿತ್ಸೆ ನೀಡಿ ಔಷಧಿ ನೀಡಲಾಗುವುದು. ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇದ್ದರೆ ಉನ್ನತೀಕರಿಸಿದ ಆಸ್ಪತ್ರೆಗಳಿಗೆ ಶಿಫಾರಸ್ಸು ಮಾಡಲಾಗುವುದು ಎಂದು ತಿಳಿಸಿದರು. ಸೋಮವಾರದಿಂದ ಶನಿವಾರದವರೆಗೆ ನಿಗದಿತ ಅವಧಿಯಲ್ಲಿ ನಿಗಧಿತ ಪ್ರದೇಶಗಳಿಗೆ ಸಂಚಾರಿ ಕ್ಲಿನಿಕ್ ಜಿಲ್ಲೆಯಲ್ಲಿ ಎರಡು ವರ್ಷಗಳ ಕಾಲ ಭೇಟಿ ನೀಡಲಿದೆ. 

ಜಾನುವಾರುಗಳ ದೊಡ್ಡಿಯಂತಾದ ಚಿತ್ರದುರ್ಗ ನಗರ ಪಾರ್ಕ್ ಗಳು!

ಚಿತ್ರದುರ್ಗ ತಾಲ್ಲೂಕಿನಲ್ಲಿ ಸೋಮವಾರ ಬೆಳಿಗ್ಗೆ ಹೊಸ ಕಲ್ಲಹಳ್ಳಿ, ಹಳೇಕಲ್ಲಹಳ್ಳಿ, ಮಧ್ಯಾಹ್ನ ಲಿಂಗಾವರಹಟ್ಟಿ, ಮಂಗಳವಾರ ಬೆಳಿಗ್ಗೆ ಕಾಸವರಹಟ್ಟಿ, ಮಧ್ಯಾಹ್ನ ಗುಡ್ಡದರಂಗವ್ವನಹಳ್ಳಿ, ಬುಧವಾರ ಬೆಳಿಗ್ಗೆ ಮಲ್ಲಾಪುರ, ದ್ಯಾಮವ್ವನಹಳ್ಳಿ, ಮಧ್ಯಾಹ್ನ ಮದಕರಿಪುರ, ಗುರುವಾರ ಬೆಳಿಗ್ಗೆ ಬಚ್ಚಬೋರನಹಟ್ಟಿ, ಮಧ್ಯಾಹ್ನ ಮಠದಹಟ್ಟಿ, ಕಾವಡಿಗರಹಟ್ಟಿ, ಶುಕ್ರವಾರ ಬೆಳಿಗ್ಗೆ ಇಂಗಳದಾಳ್, ಕ್ಯಾದಿಗೆರೆ, ಮಧ್ಯಾಹ್ನ ದೊಡ್ಡಸಿದ್ದವ್ವನಹಳ್ಳಿ, ಶನಿವಾರ ಬೆಳಿಗ್ಗೆ ಜಾನುಕೊಂಡ, ಸಿದ್ದಾಪುರ, ಮಧ್ಯಾಹ್ನ ದಂಡಿನಕುರುಬರಹಟ್ಟಿ ಗ್ರಾಮಗಳಿಗೆ ಭೇಟಿ ನೀಡಲಿದೆ ಎಂದರು.

click me!