ಬಳ್ಳಾರಿ ಜಿಲ್ಲೆ ವಿಭಜಿಸಿ ಮತ್ತೊಂದು ಜಿಲ್ಲೆ ಮಾಡುವುದಿಲ್ಲ ಎಂದ ಯಡಿಯೂರಪ್ಪ| ಬಿಎಸ್‌ವೈ ಹೇಳಿಕೆ ನಮಗೆ ಖುಷಿ ತಂದಿದೆ ಎಂದ ಸೋಮಶೇಖರ್ ರೆಡ್ಡಿ|ಲಕ್ಷ್ಮಣ ಸವದಿ ಬಗ್ಗೆ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದ ಸೋಮಶೇಖರ ರೆಡ್ಡಿ|
ಬಳ್ಳಾರಿ(ಫೆ.10): ಬಳ್ಳಾರಿ ಜಿಲ್ಲೆ ವಿಭಜಿಸಿ ವಿಜಯಗರ ಜಿಲ್ಲೆ ಮಾಡುವುದಿಲ್ಲ ಎಂಬ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೇಳಿಕೆಯಿಂದ ನಮಗೆ ಖುಷಿಯಾಗಿದೆ ಎಂದು ಶಾಸಕ ಸೋಮಶೇಖರ್ ರೆಡ್ಡಿ ಹೇಳಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬಳ್ಳಾರಿ ಜನರ ಅಪೇಕ್ಷೆ ಕೂಡ ಅಖಂಡ ಜಿಲ್ಲೆಯಾಗಿರೋದೆ ಆಗಿದೆ. ನಾನು ವಿಜಯನಗರ ಶಾಸಕ ಆನಂದ್ ಸಿಂಗ್ ಅವರಲ್ಲಿ ಇದನ್ನೆ ಮನವಿ ಮಾಡುತ್ತೇನೆ. ಹಂಪಿ, ತುಂಗಾಭದ್ರಾ ಜಲಾಶಯ ನಮ್ಮ ಹೆಮ್ಮೆಯಾಗಿವೆ. ಹೀಗಾಗಿ ನಾವು ಅಣ್ಣ ತಮ್ಮಂದಿರಾಗಿಯೇ ಇರೋಣ, ಜಿಲ್ಲೆಯ ವಿಭಜನೆ ಬೇಡ, ನಮ್ಮ ಬೇಡಿಕೆಗೆ ಮನ್ನಣೆ ಸಿಕ್ಕಿರೋದು ಸಂತಸವಾಗಿದೆ ಎಂದು ಹೇಳಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಬಳ್ಳಾರಿ ಜಿಲ್ಲಾ ಉಸ್ತುವಾರಿ ಮಂತ್ರಿಯನ್ನಾಗಿ ಶ್ರೀ ರಾಮುಲು ಅವರನ್ನು ಮಾಡಿದರೆ ಒಳ್ಳೆಯದು. ಆನಂದ್ ಸಿಂಗ್ ಅವರಿಗೂ ಕೊಟ್ರು ಒಳ್ಳೆಯದೇ, ಆದ್ರೇ ಶ್ರೀ ರಾಮುಲುಗೆ ಕೊಟ್ಟರೆ ಜನಾರ್ದನ ರೆಡ್ಡಿಯವರಂತೆ ಹೆಚ್ಚು ಅಭಿವೃದ್ಧಿ ಮಾಡುತ್ತಾರೆ. ಇಬ್ಬರಲ್ಲಿ ಯಾರಿಗಾದರೂ ಕೊಡಲಿ. ಸದ್ಯ ಡಿಸಿಎಂ ಲಕ್ಷ್ಮಣ್ ಸವದಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಹೆಚ್ಚು ಸಮಯ ಅವರು ಬಳ್ಳಾರಿಯಲ್ಲಿ ಇರುವುದಿಲ್ಲ. ಇಲ್ಲೇ ಉಳಿದು ಅಭಿವೃದ್ಧಿ ಮಾಡಿದರೆ ಒಳ್ಳೆಯದು. ಪರೋಕ್ಷವಾಗಿ ಲಕ್ಷ್ಮಣ ಸವದಿ ಬಗ್ಗೆ ಸೋಮಶೇಖರ ರೆಡ್ಡಿ ಅಸಮಾಧಾನ ಹೊರ ಹಾಕಿದ್ದಾರೆ.
ಶ್ರೀ ರಾಮುಲುಗೆ ಡಿಸಿಎಂ ಸ್ಥಾನದ ಬೇಡಿಕೆ ವಿಚಾರದ ಬಗ್ಗೆ ಮಾತನಾಡಿದ ಸೋಮಶೇಖರ್ ರೆಡ್ಡಿ, ಶ್ರೀರಾಮುಲು ಡಿಸಿಎಂ ಆಗಬೇಕು ಎನ್ನುವದು, ಜನಾರ್ದನ ರೆಡ್ಡಿ ಇಚ್ಛೆ ಅಷ್ಟೇ ಅಲ್ಲ, ಅದು ವಾಲ್ಮೀಕಿ ಸಮುದಾಯದ ಬೇಡಿಕೆಯಾಗಿದೆ. ಹಾಗೂ ರಾಜ್ಯದ ಜನರ ಬೇಡಿಕೆಯಾಗಿದೆ. ಡಿಸಿಎಂ ಆದ್ರೇ ಒಳ್ಳೆಯದಾಗುತ್ತಿತ್ತು. ಈ ವಿಚಾರದಲ್ಲಿ ನನಗೂ ಬೇಸರವಿದೆ ಎಂದು ತಿಳಿಸಿದ್ದಾರೆ.