ಬಿಜೆಪಿ ಸರ್ಕಾರಕ್ಕೂ ಬೆಳಗಾವಿ ರಾಜಕಾರಣ ಸವಾಲು| ಜಿಲ್ಲಾ ಬಿಜೆಪಿಯಲ್ಲಿ ಮೂರು ಶಕ್ತಿ ಕೇಂದ್ರಗಳು| ಈ ಮೂವರಲ್ಲಿ ಉಸ್ತುವಾರಿ ಆಗುವವರು ಯಾರು?| ಡಿಸಿಎಂ ಸವದಿಯಿಂದ ಉಸ್ತುವಾರಿ ಸ್ಥಾನದ ಮೇಲೆ ಕಣ್ಣು| ನೀರಾವರಿ ಖಾತೆ ಸಿಗದಿದ್ದರೆ ರಮೇಶ್ ಕೂಡ ಕೇಳ್ತಾರ ಈ ಸ್ಥಾನ?|
ಜಗದೀಶ ವಿರಕ್ತಮಠ
ಬೆಳಗಾವಿ(ಫೆ.10): ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರಕ್ಕೆ ತೀವ್ರ ಕಗ್ಗಂಟಾಗಿದ್ದ, ಕೊನೆಗೆ ಸರ್ಕಾರದ ಪತನಕ್ಕೂ ಕಾರಣವಾದ ಬೆಳಗಾವಿ ರಾಜಕೀಯ ಈಗ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೂ ತಲೆನೋವಾಗುವ ಸಾಧ್ಯತೆ ಇದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಸಚಿವ ಸಂಪುಟ ವಿಸ್ತರಣೆ ವೇಳೆ ಬೆಳಗಾವಿ ಜಿಲ್ಲೆಯ ಶಾಸಕರಾದ ರಮೇಶ್ ಜಾರಕಿಹೊಳಿ, ಶ್ರೀಮಂತ ಪಾಟೀಲ ಅವರಿಗೆ ಮಾತ್ರ ಸಚಿವ ಸ್ಥಾನ ನೀಡಿ, ಶಾಸಕರಾದ ಉಮೇಶ ಕತ್ತಿ, ಮಹೇಶ ಕುಮಟಳ್ಳಿ ಅವರನ್ನು ಕೈಬಿಟ್ಟಿರುವುದು ಈಗಾಗಲೇ ತೀವ್ರ ಚರ್ಚೆಗೆ ಕಾರಣವಾಗಿದೆ. ಇದರ ಬೆನ್ನಲ್ಲೇ ಈಗ ಹೊಸದಾಗಿ ಸಚಿವರಾದವರಿಗೆ ಯಾವ ಖಾತೆ ನೀಡಬೇಕು ಮತ್ತು ಯಾರನ್ನು ಜಿಲ್ಲಾ ಉಸ್ತುವಾರಿಯಾಗಿಯನ್ನಾಗಿ ನೇಮಿಸಬೇಕು ಎಂಬ ಸಂದಿಗ್ಧದಲ್ಲಿ ಯಡಿಯೂರಪ್ಪ ಸಿಕ್ಕಿಹಾಕಿಕೊಂಡಿದ್ದಾರೆ. ಈ ಪರಿಸ್ಥಿತಿಯನ್ನು ಮುಖ್ಯಮಂತ್ರಿ ಹಾಗೂ ಬಿಜೆಪಿ ವರಿಷ್ಠರು ಹೇಗೆ ನಿಭಾಯಿಸುತ್ತಾರೆ? ಜಿಲ್ಲೆಯವರನ್ನೇ ನೇಮಿಸುತ್ತಾರಾ? ಅಥವಾ ಹೊರಗಿನವರಾದ ಹಾಲಿ ಉಸ್ತುವಾರಿ ಜಗದೀಶ್ ಶೆಟ್ಟರ್ ಅವರನ್ನೇ ಮುಂದುವರಿಸುತ್ತಾರಾ ಎಂಬುದು ಇದೀಗ ಕುತೂಹಲದ ಪ್ರಶ್ನೆ.
ಮೂರು ಶಕ್ತಿ ಕೇಂದ್ರಗಳು:
ಬೆಳಗಾವಿ ಬಿಜೆಪಿ ಜಿಲ್ಲಾ ರಾಜಕೀಯದ ಮೇಲೆ ಹಿಡಿತ ಸಾಧಿಸಲು ಹಿಂದಿನಿಂದಲೂ ಉಮೇಶ ಕತ್ತಿ ಮತ್ತು ಲಕ್ಷ್ಮಣ ಸವದಿ ನಡುವೆ ಪೈಪೋಟಿ ಇತ್ತು. ಆದರೆ, ಈಗ ಕಾಂಗ್ರೆಸ್‌ನಿಂದ ಬಂದಿರುವ ರಮೇಶ ಜಾರಕಿಹೊಳಿ ಕೂಡ ಉಸ್ತುವಾರಿ ಸ್ಥಾನಕ್ಕಾಗಿ ಪೈಪೋಟಿ ನೀಡಲಿದ್ದಾರೆ. ಈ ಮೂಲಕ ಜಿಲ್ಲಾ ಬಿಜೆಪಿಯಲ್ಲಿ ಮೂರು ಶಕ್ತಿಕೇಂದ್ರಗಳು ಸೃಷ್ಟಿಯಾದಂತಾಗಿದೆ. ಹಾಗೆ ನೋಡಿದರೆ ಮೊದಲಿಂದಲೂ ಲಕ್ಷ್ಮಣ ಸವದಿ ಮತ್ತು ಉಮೇಶ್ ಕತ್ತಿ ಅವರಿಗೆ ಅಷ್ಟಕ್ಕಷ್ಟೆ. ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡರೂ ಸವದಿ ಅವರು ಹೈಕಮಾಂಡ್‌ನ ಆಶೀರ್ವಾದದೊಂದಿಗೆ ಉಪ ಮುಖ್ಯಮಂತ್ರಿಯಾಗಿದ್ದಾರೆ. ಸದ್ಯದಲ್ಲೇ ಎದುರಾಗಲಿರುವ ಪರಿಷತ್ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಹೀಗಾಗಿ ಸಹಜವಾಗಿಯೇ ಅವರು ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಇನ್ನೊಂದು ಕಡೆ ಜಿಲ್ಲೆಯ ಹಿರಿಯ ಶಾಸಕರಾಗಿದ್ದರೂ ಕತ್ತಿ ಅವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಸೋತರೂ ಸವದಿ ಸಚಿವರಾದರು, ಎಂಟು ಬಾರಿ ಗೆದ್ದರೂ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಸಹಜವಾಗಿಯೇ ಅಸಮಾಧಾನಗೊಂಡಿದ್ದ ಕತ್ತಿ ಅವರು ಹಲವು ಬಾರಿ ಬಹಿರಂಗವಾಗಿಯೇ ಸವದಿ ವಿರುದ್ಧ ಹೇಳಿಕೆ ನೀಡಿದ್ದರು. ಏತನ್ಮಧ್ಯೆ, ಸಚಿವರಾಗಿ ರಮೇಶ್ ಜಾರಕಿಹೊಳಿ ಅವರು ಜಿಲ್ಲಾ ಬಿಜೆಪಿ ರಾಜಕೀಯಕ್ಕೆ ಪ್ರವೇಶಿಸಿದ್ದಾರೆ. ಹೀಗಾಗಿ ಕತ್ತಿ ಮತ್ತು ಜಾರಕಿಹೊಳಿ ಒಂದಾಗಿ ಸವದಿ ಅವರ ಪ್ರಾಬಲ್ಯಕ್ಕೆ ಸೆಡ್ಡು ಹೊಡೆದರೂ ಅಚ್ಚರಿ ಇಲ್ಲ.
ಚುನಾವಣೆ ವೇಳೆ ಘೋಷಿಸಿದ್ದರು:
ಉಪ ಚುನಾವಣೆ ಸಂದರ್ಭದಲ್ಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರನ್ನೇ ಜಿಲ್ಲಾ ಉಸ್ತುವಾರಿ ಮಾಡುವುದಾಗಿ ಘೋಷಿಸಿದ್ದರು. ಆದರೆ ಪ್ರಸ್ತುತ ರಾಜಕೀಯ ಸನ್ನಿವೇಶ ಬದಲಾಗಿದೆ. ಉಮೇಶ ಕತ್ತಿಗೆ ಮೊದಲೇ ಸಚಿವ ಸ್ಥಾನ ಸಿಕ್ಕಿಲ್ಲ. ಹೀಗಾಗಿ ತಮ್ಮ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿರುವ ಸವದಿ ಉಸ್ತುವಾರಿಯಾದರೆ ಕತ್ತಿ ಅಸಮಾಧಾನ ಹೆಚ್ಚಾಗಬಹುದು. ಇನ್ನು ಜಾರಕಿಹೊಳಿ ತಾವು ಬಯಸಿದ ನೀರಾವರಿ ಖಾತೆ ಸಿಗದೇ ಹೋದರೆ ಉಸ್ತುವಾರಿ ಸ್ಥಾನವನ್ನಾದರೂ ಕೇಳುವ ಸಾಧ್ಯತೆ ಇಲ್ಲದಿಲ್ಲ. ಜಾರಕಿಹೊಳಿ ಬೇಡಿಕೆಗೆ ಶಾಸಕರಾದ ಮಾಮನಿ, ಶ್ರೀಮಂತ ಪಾಟೀಲ, ಕುಮಟಳ್ಳಿ ಜತೆಗೆ ಕತ್ತಿಯಿಂದಲೂ ಬೆಂಬಲ ಸಿಗಬಹುದು ಎಂಬ ನಿರೀಕ್ಷೆ ಇದೆ.
ಪರಿಷತ್ ತಲೆನೋವು:
ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಲಕ್ಷ್ಮಣ ಸವದಿ ಅವರು ಸದ್ಯದಲ್ಲೇ ನಡೆಯಲಿರುವ ವಿಧಾನಪರಿಷತ್ ಚುನಾವಣೆ ಕಣಕ್ಕಿಳಿದಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಅವರು ಈ ಚುನಾವಣೆಯಲ್ಲಿ ಗೆದ್ದರೆ ಮಾತ್ರ ಸಚಿವರಾಗಿ ಮುಂದುವರಿಯಬಹುದು, ಜಿಲ್ಲಾ ಉಸ್ತುವಾರಿ ಕನಸು ಈಡೇರಿಸಿಕೊಳ್ಳಬಹುದು. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿರುವ ಸವದಿ ಪ್ರತಿಸ್ಪರ್ಧಿ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಇಕ್ಕಟ್ಟಿನಲ್ಲಿ ಯಡಿಯೂರಪ್ಪ ಅವರಿದ್ದಾರೆ. ಸಚಿವ ಸಂಪುಟ ವಿಸ್ತರಣೆಯ ಗೊಂದಲವನ್ನು ತಕ್ಕಮಟ್ಟಿಗೆ ಯಶಸ್ವಿಯಾಗಿ ನಿಭಾಯಿಸಿರುವ ಯಡಿಯೂರಪ್ಪ ಅವರು ಈ ಸವಾಲನ್ನೂ ಯಶಸ್ವಿಯಾಗಿಯೇ ನಿಭಾಯಿಸುತ್ತಾರೆ ಎನ್ನುವ ನಿರೀಕ್ಷೆ ಬೆಂಬಲಿಗರದು.