
ಮಂಡ್ಯ(ಆ.30): KRS ಜಲಾಶಯಕ್ಕೆ ಬಾಗಿನ ಅರ್ಪಿಸಲು ಆಗಮಿಸಿದ್ದ ಸಂಸದೆ ಸುಮಲತಾಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಕುರ್ಚಿ ಬಿಟ್ಟುಕೊಟ್ಟು ಅಚ್ಚರಿಕೆ ಕಾರಣರಾದರು.
ಬಾಗಿನ ಅರ್ಪಿದ ನಂತರ ಜೆಡಿಎಸ್ ಶಾಸಕರು ನೇರವಾಗಿ ವೇದಿಕೆಗೆ ತೆರಳಿದರು. ಮುಖ್ಯಮಂತ್ರಿ ಪಕ್ಕದಲ್ಲೇ ಕುಳಿತಿದ್ದ ಶಾಸಕ ಎ.ಎಸ್.ರವೀಂದ್ರ ಶ್ರೀಕಂಠಯ್ಯ ಸಂಸದೆ ಸುಮಲತಾ ಆಗಮಿಸಿದರು. ಈ ವೇಳೆ ಶಾಸಕ ರವೀಂದ್ರ ಅಕ್ಕ ಇಲ್ಲೇ ಬನ್ನಿ ಕುಳಿತುಕೊಳ್ಳಿ ಎಂದೇಳಿ ಅವರಿಗೆ ತಾವು ಕುಳಿತಿದ್ದ ಕುರ್ಚಿ ಬಿಟ್ಟುಕೊಟ್ಟು ಮತ್ತೊಂದು ಕುರ್ಚಿಯಲ್ಲಿ ಕುಳಿತರು. ರಾಜಕೀಯವಾಗಿ ದಿ.ಅಂಬರೀಷ್ ಅವರನ್ನು ವಿರೋಧಿಸಿಕೊಂಡೇ ಬಂದಿದ್ದ ಶಾಸಕ ರವೀಂದ್ರ ಶ್ರೀಕಂಠಯ್ಯ ಕಳೆದ ಸಂಸತ್ ಚುನಾವಣೆಯಲ್ಲಿಯೂ ಸುಮಲತಾ ಸ್ಪರ್ಧೆಯನ್ನು ವಿರೋಧಿ ಹೇಳಿಕೆಗಳನ್ನು ನೀಡಿದ್ದರು. ಗುರುವಾರ ನಡೆದ ಈ ಘಟನೆ ವೇದಿಕೆ ಮುಂದೆ ಕುಳಿತಿದ್ದ ಜನರಿಗೆ ಅಚ್ಚರಿ ಮೂಡಿಸಿತು.
ಕುಮಾರಸ್ವಾಮಿ ಮೇಲೆ ಆಪ್ತರ ಮುನಿಸು: ಜೆಡಿಎಸ್ ಪೀಸ್ ಪೀಸ್..?
ಚಪ್ಪಾಳೆ, ಶಿಳ್ಳೆ:
ಬಾಗಿನ ಅರ್ಪಿಸಿದ ನಂತರ ನಡೆದ ವೇದಿಕೆ ಕಾರ್ಯಕ್ರಮದ ಸ್ವಾಗತ ಭಾಷಣದ ವೇಳೆ ಸಂಸದೆ ಸುಮಲತಾ ಅವರು ಮೈಸೂರು ಸಂಸದ ಪ್ರತಾಪ್‌ಸಿಂಹ ಹಾಗೂ ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡರ ಹೆಸರನ್ನು ಹೇಳುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಚಪ್ಪಾಳೆ, ಶಿಳ್ಳೆ ಹಾಕಿದರು. ಈ ವೇಳೆ ಜೆಡಿಎಸ್ ಶಾಸಕರು ಮುಜುಗರಕ್ಕೆ ಒಳಗಾದರು.
ಹಾರಕ್ಕೆ ಕೊರಳೊಡ್ಡಿದ ಸಂಸದೆ
ಸಂಸದೆಯಾಗಿ ಇದೇ ಮೊದಲ ಬಾರಿಗೆ ಕಾವೇರಿಗೆ ಬಾಗಿನ ಸಲ್ಲಿಕೆ ಸಮಾರಂಭದಲ್ಲಿ ಸುಮಲತಾ ಪಾಲ್ಗೊಂಡು ಕಾವೇರಿಗೆ ಬಾಗಿನ ಸಲ್ಲಿಸಿದರು. ಎನ್.ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ಸಂಸದರಾಗಿದ್ದ ಅಂಬರೀಷ್ ಅವರು ಪ್ರತ್ಯೇಕವಾಗಿ ಕಾವೇರಿ ಮಾತೆಗೆ ಬಾಗಿನ ಸಲ್ಲಿಸಿದ್ದರು. ಆ ವೇಳೆ ಪತಿಯೊಂದಿಗೆ ಸುಮಲತಾ ಕೂಡ ಭಾಗವಹಿಸಿದ್ದರು.
ಸಿದ್ದರಾಮಯ್ಯ ಬಗ್ಗೆ ಎಲ್ಲಾ ಹೇಳ್ತೇನೆ ಎಂದು ಬಾಂಬ್ ಸಿಡಿಸಿದ MTB ನಾಗರಾಜ್
ಲೋಕಸಭಾ ಚುನಾವಣೆ ವೇಳೆ ತಮಗೆ ಹಾರ-ತುರಾಯಿ ಹಾಕಬೇಡಿ ಎಂದು ಕಾರ್ಯರ್ತರು, ಅಭಿಮಾನಿಗಳಿಗೆ ತಿಳಿಸಿದ್ದರು. ಅದು ಮುಂದುವರೆದುಕೊಂಡು ಬಂದಿತ್ತು. ಆದರೆ, ಕೆಆರ್‌ಎಸ್‌ನಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಕಾರ್ಯಕರ್ತರು ತಂದಿದ್ದ ಬೃಹತ್ ಗ್ರಾತ್ರದ ಹಾರಕ್ಕೆ ಅನಿವಾರ್ಯವಾಗಿ ಕೊರಳೊಡ್ಡಬೇಕಾಯಿತು.
ಸಿಎಂ ಮುಖದಲ್ಲಿ ನಗು ಮಾಯ
ಮುಖ್ಯಮಂತ್ರಿಯಾದ ನಂತರ 2ನೇ ಬಾರಿಗೆ ತವರು ಜಿಲ್ಲೆಗೆ ಆಗಮಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಮುಖದಲ್ಲಿ ನಗು ಮಾಯವಾಗಿತ್ತು. ಅತ್ಯಂತ ಗಂಭೀರವದನರಾಗಿಯೇ 25 ನಿಮಿಷದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಕಾವೇರಿ ಮಾತೆಯ ಪ್ರತಿಮೆಗೆ ಪೂಜೆ ಸಲ್ಲಿಸಲು ಸಿಎಂ ಹೋಗುವ ವೇಳೆ ಜೆಡಿಎಸ್ ಶಾಸಕರಾದ ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಕೆ.ಟಿ.ಶ್ರೀಕಂಠಯ್ಯ ಅವರು ಸಿಎಂಗೆ ದಾರಿ ಬಿಟ್ಟು ಪಕ್ಕದಲ್ಲಿ ನಿಂತಿದ್ದರು. ಅವರನ್ನು ನೋಡಿಯೂ ನೋಡದಂತೆ ಸಿಎಂ ಕಾವೇರಿ ಮಾತೆ ಪ್ರತಿಮೆ ಬಳಿ ತೆರಳಿ ಪೂಜೆ ಸಲ್ಲಿಸಿದರು.