ಕಲಬುರಗಿ ರೇಲ್ವೆ ವಿಭಾಗೀಯ ಕಚೇರಿ ಯೋಜನೆ ವಿಚಾರ ಪ್ರಿಯಾಂಕ್ ಖರ್ಗೆ, ಡಾ.ಉಮೇಶ ಜಾಧವ್ ಮಧ್ಯೆ ವಾಗ್ವಾದಕ್ಕೆ ಕಾರಣವಾಯಿತು| ಕಲಬುರಗಿ ರೇಲ್ವೆ ವಿಭಾಗೀಯ ಕಚೇರಿ ಯೋಜನೆ 2013ರಲ್ಲಿ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ರೇಲ್ವೆ ಸಚಿವರಾಗಿದ್ದಾಗ ಮಂಜೂರಾದ ಯೋಜನೆ| ಈಗ ಖರ್ಗೆಯವರು ಹೋದ ಮೇಲೆ ಜಿಲ್ಲೆಯ ರೈಲು ಯೋಜನೆಗಳೇ ಅನಾಥವಾಗಿವೆ ಎಂದ ಪ್ರಿಯಾಂಕ್ ಖರ್ಗೆ|
ಕಲಬುರಗಿ(ಅ.2): ಬಹು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಕಲಬುರಗಿ ರೇಲ್ವೆ ವಿಭಾಗೀಯ ಕಚೇರಿ ಯೋಜನೆ ವಿಚಾರ ಇದೀಗ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಸಂಸದ ಡಾ.ಉಮೇಶ ಜಾಧವ್ ಮಧ್ಯೆ ವಾಗ್ವಾದಕ್ಕೆ ಕಾರಣವಾದ ಪ್ರಸಂಗಕ್ಕೆ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಕೇಂದ್ರ ಸರ್ಕಾರಿ ಸಂಬಂಧಿತ ಯೋಜನೆಗಳ ಪ್ರಗತಿ ಪರಿಶೀಲನೆಯ ದಿಶಾ ಸಭೆ ಸಾಕ್ಷಿಯಾಯ್ತು.
ಸಭೆ ಆರಂಭದಲ್ಲೇ ಕಲಬುರಗಿ ಸಂಬಂಧಿತ ರೈಲು ಯೋಜನೆಗಳ ಪರಿಶೀಲನಾ ಚರ್ಚೆಯ ಸಂದರ್ಭದಲ್ಲಿ ಮಾಜಿ ಸಚಿವ, ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಕಲಬುರಗಿ ರೇಲ್ವೆ ವಿಭಾಗೀಯ ಕಚೇರಿ ವಿಚಾರದಲ್ಲಿ ಸಂಸದರ ಭಿನ್ನ ಹೇಳಿಕೆಗಳನ್ನು ನೇರವಾಗಿ ಪ್ರಸ್ತಾಪಿಸಿ ವಿಷಯದ ಚರ್ಚೆಗೆ ಮುನ್ನುಡಿ ಬರೆದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ಹಂತದಲ್ಲಿ ಸಂಸದ ಡಾ. ಉಮೇಶ ಜಾಧವ್ ಇದನ್ನೆಲ್ಲ ನಂತರ ನೋಡೋಣ ಎಂದು ತೆರೆ ಎಳೆಯುವ ಯತ್ನ ಮಾಡಿದರೂ ಪಟ್ಟು ಬಿಡದ ಪ್ರಿಯಾಂಕ್ ಖರ್ಗೆ ಈ ಬಗ್ಗೆ ಸಭೆಯಲ್ಲಿ ಹೇಳಿಕೆ ಕೊಡಬೇಕು ಎಂದಾಗ ವಾಗ್ವಾದ ಶುರುವಾಯ್ತು.
ಕಲಬುರಗಿ ರೇಲ್ವೆ ವಿಭಾಗೀಯ ಕಚೇರಿ ಯೋಜನೆ 2013ರಲ್ಲಿ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ರೇಲ್ವೆ ಸಚಿವರಾಗಿದ್ದಾಗ ಮಂಜೂರಾದ ಯೋಜನೆ. ಈಗ ಖರ್ಗೆಯವರು ಹೋದ ಮೇಲೆ ಜಿಲ್ಲೆಯ ರೈಲು ಯೋಜನೆಗಳೇ ಅನಾಥವಾಗಿವೆ. ಯಾಕೆ ಹೀಗೆ? ವಿಭಾಗೀಯ ಕಚೇರಿ ಮಂಜೂರಾಗಿಲ್ಲ ಅಂತೀರಿ, ನಂತರ ಪತ್ರಕರ್ತರು ಅದರ ಬಗ್ಗೆ ತೀಕ್ಷ್ಣವಾದಂತಹ ಚರ್ಚೆ ಮಾಡಿದಾಗ ಆ ಯೋಜನೆ ಸ್ಥಾಪನೆಗೆ ಬದ್ಧ ಅಂತೀರಿ? ಹಣಕಾಸು ಸಚಿವರಿಗೆ ಮನವಿ ಕೊಟ್ಟಿದ್ದೀರಿ, ಈಗ ಆ ಯೋಜನೆಯ ಬಗ್ಗೆ ನಿಮ್ಮ ನಿಲುವೇನು ಎಂದು ಪ್ರಿಯಾಂಕ್ ನೇರ ವಾಗಿ ಸಂಸದರಿಗೆ ಪ್ರಶ್ನಿಸಿದಾಗ ಸಂಸದರು ತುಸು ಕೆರಳಿದಂತೆ ಕಂಡುಬಂದರು.
ಆದಾಗ್ಯೂ ಸಾವರಿಸಿಕೊಂಡು ಉತ್ತರಿಸಲು ಮುಂದಾದ ಡಾ.ಜಾಧವ್ ಆ ಯೋಜನೆ ಬಗ್ಗೆ ನನಗೆ ತುಂಬಾ ಬದ್ಧತೆ ಇದೆ. ಅದನ್ನು ನಾವು ಮಾಡುತ್ತೇವೆ. ಸಂಬಂಧಪಟ್ಟವರೊಂದಿಗೆ ಮಾತನಾಡಿರುವೆ, ರೇಲ್ವೆ ರಾಜ್ಯ ಸಚಿವರಿಗೂ ಹೇಳಿದ್ದೇವೆ. ರಾಯಚೂರು ಸಂಸದರೂ ಅಲ್ಲಿಗೆ ಹೋಗಿ ಮನವಿ ಮಾಡಿದ್ದಾರೆ. ನಾವೆಲ್ಲರೂ ಸೇರಿ ಮಾಡೋಣ ಎಂದರು.
ಇಂತಹ ಪ್ರಗತಿಗೆ ಬೆಂಬಲವಾಗಿಯೇ ಇರ್ತೇವೆ
ನಾವು ಇಂತಹ ಪ್ರಗತಿಗೆ ಬೆಂಬಲವಾಗಿಯೇ ಇರ್ತೇವೆ, ನೀವು ನಮ್ಮ ಸಹಾಯ, ಸಹಕಾರ ಕೇಳಿದರೆ ನಾವು ಸದಾ ಸಿದ್ಧ ಎಂದು ಮಾಜಿ ಸಚಿವ ಪ್ರಿಯಾಂಕ್ ಹೇಳಿದಾಗ ಅದಕ್ಕೂ ಸ್ಪಂದಿಸಿದ ಸಂಸದರು ನಿಮ್ಮ ಅಗತ್ಯ ಕಂಡರೆ ನಾವು ನಿಮ್ಮ ಸಹಕಾರ ಸಹ ಕೇಳುತ್ತೇವೆ. ಸ್ವಲ್ಪ ಸಮಯ ಕೊಡಿ ಎಂದು ವಿಭಾಗೀಯ ಕಚೇರಿ ಸ್ಥಾಪನೆ ವಿಚಾರ, ಅದರ ಸದ್ಯದ ಸ್ಥಿತಿಗತಿ ಬಗ್ಗೆ ಈಗ ಬೇಡ, ಮತ್ತೊಮ್ಮೆ ವಿವರವಾಗಿ ಚರ್ಚಿಸೋಣ ಎಂದು ಚರ್ಚೆಗೆ ತೆರೆ ಎಳೆದರು.
ನಿಧಾನ ಕಾಮಗಾರಿಗೆ ಡಾ.ಜಾಧವ್ ಗರಂ:
ಬಿದ್ದಾಪುರ ಹತ್ತಿರದ ಆರ್‌ಒಬಿ ಹಾಗೂ ಜೇವರ್ಗಿ ಕಾಲೋನಿಯ ಮದರ್ ತೆರೆಸಾ ಕಾಲೇಜು ಬಳಿಯ ಆರ್‌ಒಬಿ ಕಾಮಗಾರಿಗಳು 5 ವರ್ಷದಿಂದ ನನೆಗುದಿಗೆ ಬಿದ್ದಿರುವ ಬಗ್ಗೆ ಸಭೆಯಲ್ಲಿ ಡಾ.ಜಾಧವ್ ಅಧಿಕಾರಿಗಳನ್ನು ಪ್ರಶ್ನಿಸಿ ಗರಂ ಆದರು.
ಅಫಜಲ್ಪುರ ರಸ್ತೆ ಆರ್ ಒಬಿಯಂತೂ ಜನರ ಬದುಕನ್ನೇ ನರಕವಾಗಿಸಿದೆ. ಓಡಾಡಲು ಆಗದೆ ಜನ ಅನ್ಯ ರಸ್ತೆ ಕೇಳುತ್ತಿದ್ದಾರೆ. ಸಂದಿಗೊಂದಿ ಸುತ್ತಾಡುತ್ತ ಮನೆ ಹೋಗುತ್ತಿದ್ದಾರೆ, ನಿಮ್ಮ ಮನೆಗಳು ಅದೇ ದಾರಿಯಲ್ಲಿ ಇರಬೇಕಿತ್ತು, ಆಗ ನೋವು ಗೊತ್ತಾಗುತ್ತಿತ್ತು ಎಂದು ಪಿಡಬ್ಲೂಡಿಯ ಮುಕ್ತಾರೋದ್ದೀನ್‌ಗೆ ತರಾಟೆಗೆ ತೆಗೆದುಕೊಂಡರು. ಜೇವರ್ಗಿ ರಸ್ತೆ ಹಾಗೂ ಅಫಜಲ್ಪುರ ಆರ್‌ಒಬಿಗಳಿಗೆ ಹಣಕಾಸು ಹೊಂದಿಕೆಯಲ್ಲಿ ತೊಂದರೆಯಾಗಿದೆ. ರೇಲ್ವೆಯವರ ಭಾಗ ದಲ್ಲಿಯೂ ಕೆಲಸ ಸಾಗಿದೆ. 2 ದಿನದ ಹಿಂದಷ್ಟೇ ಇಲ್ಲಿ ರಸ್ತೆ ನಿರ್ಮಾಣ ಸಾಗಿದೆ, ಬೇಗ ಕೆಲಸ ಮಾಡಿ ಮುಗಿಸುತ್ತೇವೆ ಎಂದು ಎಂಜಿನಿಯರ್ ಸಮ ಜಾಯಿಷಿ ನೀಡಿ ಬಚಾವ್ ಆದರು.
ಕುಲಾಲಿ ರೇಲ್ವೆ ಕೆಳ ಸೇತುವೆ ಯೋಜನೆಯೂ ನನೆದುಗಿದೆ ಬಿದ್ದ ಬಗ್ಗೆ ಶಾಸಕ ಎಂವೈಪಿ ಪ್ರಶ್ನಿಸಿದಾಗಲೂ ಎಂಜಿನಿಯರ್‌ಗಳು ನೂರಾರು ಕಾರಣ ಹೇಳಿದಾಗ ಸಚಿವ ಪ್ರಿಯಾಂಕ್ ರೇಲ್ವೆ ಯೋಜನೆಗಳು ಅನಾಥವಾಗಿವೆ ಎನ್ನಲು ಇದೇ ಕನ್ನಡಿ ಎಂದು ಟೀಕಿಸಿದರು.
ಜಿಲ್ಲಾಧಿಕಾರಿ ಶರತ್ ಮಾತನಾಡಿ, ಈ ಸಭೆ ಮಹತ್ವದ್ದು ಎಂಬುದು ರೇಲ್ವೆಯವರಿಗೆ ಗೊತ್ತಿಲ್ಲವೆ? ನಾವೇನು ಕಾಲಹರಣ ಮಾಡಲು ಬಂದಿಲ್ಲ. ಜನನಾಯಕರಿಗೆ ಮಾಹಿತಿ ಕೊಡುವಾಗ ಹೀಗೆಲ್ಲಾ ರದ್ದಿ ಪೇಪರ್ ಬಳಸುತ್ತಿದ್ದಾರೆ? ಪೇಪರ್ ಉಳಿತಾಯದ ಕ್ರ ಮವೋ, ಉಡಾಫೆಯೋ ಎಂದರು. ಮುಂದಿ ನ ಸಭೆಗಳಲ್ಲಿ ಹೀಗೆ ಬಂದಲ್ಲಿ ನಿಮಗೆ ಇಲ್ಲಿಂ ದಲೇ ಹೊರ ಹಾಕಬೇಕಾಗುತ್ತದೆ ಎಂದರು.
ಕಲಬುರಗಿ ಸವಲತ್ತು ಅನಾಥ: ಪ್ರಿಯಾಂಕ್ ಕಿಡಿ
ಡಾ . ಮಲ್ಲಿಕಾರ್ಜುನ ಖರ್ಗೆ ರೇಲ್ವೆ ಸಚಿವರಾಗಿದ್ದಾಗ ಭಾಗಕ್ಕೆ ದೊರಕುತ್ತಿದ್ದ ಗಮನ ಈಗ ದೊರಕುತ್ತಿಲ್ಲ, ಸಭೆಗೆ ಬಂದಿದ್ದಾರೆ ರೇಲ್ವೆ ಇಲಾಖೆಯವರು, ರದ್ದಿ ಪೇಪರ್‌ನಲ್ಲಿ ಮಾಹಿತಿ ತಂದು ನಮಗೆ ಕೊಟ್ಟಿದ್ದಾರೆ, ಇಂಕ್ ಎರಡೂ ಕಡೆ ಕಾಣುತ್ತಿದೆ. ಯೋಜನೆಯ ಮಾಹಿತಿ ಗೊತ್ತಾಗುತ್ತಿಲ್ಲ ಎಂದು ತಮ್ಮ ಕೈಯಲ್ಲಿದ್ದಂತಹ ಪೇಪರ್ ತೋರಿಸುತ್ತ ಕಿಡಿ ಕಾರಿದ ಅವರು, ರೇಲ್ವೆ ಇಲಾಖೆಯವರು ದಿಶಾ ಸಭೆಗೆ ಬಂದಿದ್ದಾರೋ ಅಥವಾ ನಮ್ಮನ್ನೆಲ್ಲ ದಿಕ್ಕು ತಪ್ಪಿಸುತ್ತಿದ್ದಾರೋ ಗೊತ್ತಿಲ್ಲ, ಇಂತಹ ಬೇಜವಾಬ್ದಾರಿತನ ಇದ್ರೆ ರೇಲ್ವೆಯನವರಿಗೆ ಯಾಕೆ ಕರೀಬೇಕು? ಇದೇನು ಹುಡುಗಾಟಿಕೆಯೋ, ಸಭೆಯೋ ಎಂದು ವಾಗ್ದಾಳಿ ವಾಗ್ದಾಳಿ ನಡೆಸಿದರು.
ಸಚಿವ ಅಂಗಡಿ ಗಮನಕ್ಕೂ ತರ್ತೀವಿ
ಸಂಸದ ಡಾ. ಜಾಧವ್ ಮಾತನಾಡಿ, ರೇಲ್ವೆ ಇಲಾಖೆಯ ಹಿರಿಯ ಅದಿಕಾರಿಗಳು, ಮೂರು ವಲಯಗಳ ಬಗ್ಗೆ, ಅಲ್ಲಿನ ಯೋಜನೆಗಳ ಬಗ್ಗೆ ಮಾಹಿತಿ ಇರುವವರು ಬಂದಲ್ಲಿ ಉತ್ತಮ, ಹೀಗೆಲ್ಲಾ ಸಿದ್ಧತೆ ಇಲ್ಲದೆ ಬಂದರೆ
ಸಭೆಯಲ್ಲಿ ಕೇಳಿಬಂದ ಜಾಣ್ಣುಡಿ
ಸಭೆ ಆರಂಭವಾಗುತ್ತಿದ್ದಂತೆಯೇ ನರೇಗಾ ಹಣ ಬಂದಿಲ್ಲ, ರೇಲ್ವೆಗೆ ಹಣ ಇಲ್ಲ, ವಿಭಾಗದ ಬಗ್ಗೆ ಕೇಂದ್ರ ಮೌನ ಎಂದು ಪಟ್ಟಿ ಮಾಡಿದ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹಿಂಗೆಲ್ಲಾ ಆಗ್ತಾ ಹೋದ್ರೆ ಕೇಂದ್ರ ಯಾಕಿರಬೇಕ್ರಿ? ನಾವೇ ಹಣಾ ಕೊಡಬೇಕಾ ಎಲ್ಲಾದಕು. ದೇಶದಲ್ಲೇ ಕೇಂದ್ರದ ರೇಲ್ವೆ ಯೋಜನೆಗಳಿಗೆ ಶೇ.50 ರಷ್ಟು ಅನುದಾನ ಭರಿಸುವ ರಾಜ್ಯ ಕರ್ನಾಟಕ, ಆದರೆ ನಮಗೆ ಕೇಂದ್ರ ರೇಲ್ವೆಯಲ್ಲಿ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಹೇಳುವ ಮೂಲಕ ಪ್ರಿಯಾಂಕ್ ಕೇಂದ್ರಕ್ಕೆ ಮಾತಿನಲ್ಲೇ ಟಾಂಗ್ ನೀಡುವ ಯತ್ನ ಮಾಡಿದರು. ಆಗ ಡಾ. ಉಮೇಶ ಜಾಧವ್ ಮಾತನಾಡುತ್ತ ನೋಡೋಣ, ನಾವಿದ್ದೀವಲ್ಲರಿ, ಕೇಂದ್ರದಿಂದ ಹಣ ತರೋಣ ಎಂದು ಹೇಳಿ ಸಮಜಾಯಿಷಿ ನೀಡಿದರು.
ಅಕ್ಕ ಸಂತ್ರ ಅಮಾಸಿ ನಿಲ್ಲೋದಿಲ್ರಿ ಅಂದ್ರು ಜಾಧವ್
ನಗರದ ಆರ್‌ಒಬಿ 2 ಕಾಮಗಾರಿಗಳು 5 ವರ್ಷದಿಂದ ತೆವಳುತ್ತಿರುವ ಬಗ್ಗೆ ಪಿಡಬ್ಲೂಡಿ ಎಂಜಿನಿಯರ್ ಮುಕ್ತಾರದ್ದೀನ್ ಅವರಿಂದ ಸಂಸದಡಾ. ಜಾಧವ್ ಸಂಪೂರ್ಣ ಮಾಹಿತಿ ಕೇಳಿದಾಗ ಅವರು ನೀಡುವಲ್ಲಿ ತಡವರಿಸಿದರು. ಹಿಂದೆ ನಾನಿರಲಿಲ್ಲ ಸಾರ್ ಎದರು. ಆಗ ತಕ್ಷಣ ಅಕ್ಕ ಸತ್ತರ ಅಮಾಸಿ ನಿಲ್ಲೋದಿಲ್ಲರಿ, ನಾನೂ ಬಂದು 3 ತಿಂಗಳಾಯ್ತು, ಈ ಇಂದೆ ನಾನಿರಲಿಲ್ಲ ಅಂದ್ರ ಹೆಂಗೆ? ನಾವು ಬಂದಾದ ಮ್ಯಾಗ ಅಲ್ಲಿನ ಮಾಹಿತಿ ಅರಿತು ಕೆಲಸ ಮಾಡಬೇಕು, ಕೆಲಸ ಬೇಗ ಮುಗಿಸಬೇಕು ಎಂದು ಮಾತಿನಲ್ಲೇ ತಿವಿದರು.
ಕುಡ್ಡರಾಗ ಮೆಳ್ಳಗಣ್ಣ ಶ್ರೇಷ್ಠ ಅಂದ್ರು ಪ್ರಿಯಾಂಕ್ ರಸ್ತೆ ಕಾಮಗಾರಿಗಳು ತುಂಬ ವಿಳಂಬವಾಗತ್ತಿವೆ ಎಂಬ ವಿಚಾರ ಸಿಆರ್‌ಎಫ್ ಅನುದಾನದ ಹಂತದಲ್ಲಿ ಚರ್ಚೆಗೆ ಬಂತು. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿಯೂ ವಿಳಂಬವಾಗುತ್ತಿದೆ ಎಂಬ ಮಾತು ಕೇಳಿ ಬಂದಾಗ ಮಾಜಿ ಸಚಿವ ಖರ್ಗೆ ಪಿಎಂಜಿಎಸ್‌ವೈನವರಿಗೆ ಕೆಲ್ಸ ಆಗಿಲ್ಲ, ಕೆಲವು ರಸ್ತೆ ನಿರ್ಮಾಣ ಯೋಜನೆ ಇವರಿಗೆ ವಹಿಸಿ ಅನ್ಯ ವಿಬಾಗಗಳ ಹೊರೆ ತಪ್ಪಿಸಬಹುದಲ್ಲ ಎಂದಾಗ ಡಿಸಿ ಶರತ್ ಇವರು ಕೆಲ್ಸ ಮಾಡ್ತಾರೆ ಅತೀರಾ? ಎಂದಾಗ ತಕ್ಷಣ ಪ್ರಿಯಾಂಕ್ ಖರ್ಗೆ ಕುಡ್ಡರಲ್ಲಿ ಮೆಳ್ಳುಗಣ್ಣು ಶ್ರೇಷ್ಠ ಸಾರ್ ಎಂದು ರಾಗ ಎಳೆದಾಗ ಸಭೆಯಲಿ ನಗೆಯ ಅಲೆ ತೇಲಿಬಂತು.