
ಬೆಂಗಳೂರು (ನ.24): ಬಂಜಾರಾ ಸಮಾಜದ ಆರಾಧ್ಯ ದೈವ ಹಾಗೂ ಧರ್ಮಗುರು ಸಂತ ಶ್ರೀ ಸೇವಾಲಾಲ ಮಹಾರಾಜರ ಪವಿತ್ರ ಜನ್ಮಸ್ಥಾನವಾದ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪ (ಭಾಯಾಗಡ್) ಮಹಾಮಠ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಔರಾದ್ (ಬಿ) ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವ ಪ್ರಭು ಬಿ. ಚವ್ಹಾಣ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಬೆಂಗಳೂರಿನಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.
ಸಂತ ಶ್ರೀ ಸೇವಾಲಾಲ ಮಹಾರಾಜರು ಬಂಜಾರಾ ಸಮಾಜದ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಜೀವನಕ್ಕೆ ಅಮೂಲ್ಯ ಮಾರ್ಗದರ್ಶನ ನೀಡಿದ ಮಹಾನ್ ಸಂತರಾಗಿದ್ದಾರೆ. ಸಮಾಜದಲ್ಲಿ ಏಕತೆ, ಸಹಬಾಳ್ವೆ, ಸತ್ಯ, ಧರ್ಮ, ಮಾನವೀಯತೆ ಹಾಗೂ ಪ್ರಕೃತಿ ಪ್ರೇಮದ ಮೌಲ್ಯಗಳನ್ನು ಸಾರಿದ ಅವರ ಆದರ್ಶಗಳು ಇಂದಿಗೂ ಕೋಟ್ಯಂತರ ಭಕ್ತರಿಗೆ ಪ್ರೇರಣೆಯಾಗಿವೆ. ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪ (ಭಾಯಾಗಡ್) ಸಂತ ಶ್ರೀ ಸೇವಾಲಾಲ ಮಹಾರಾಜರ ಜನ್ಮಸ್ಥಾನವಾಗಿದ್ದು, ಬಂಜಾರಾ ಸಮಾಜದ ಪಾಲಿಗೆ ಅತ್ಯಂತ ಪವಿತ್ರ ಹಾಗೂ ಐತಿಹಾಸಿಕ ಧಾರ್ಮಿಕ ಕ್ಷೇತ್ರವಾಗಿದೆ.
ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಪ್ರಭು ಬಿ. ಚವ್ಹಾಣ ಅವರು ಸತತ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದ ಅಜಾತಶತ್ರು ನಾಯಕರಾಗಿದ್ದು, ಎರಡು ಬಾರಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ಹಿಂದೆ ಪಶುಸಂಗೋಪನಾ ಸಚಿವರಾಗಿ ರಾಜ್ಯದ ರೈತರು, ಪಶುಪಾಲಕರು ಹಾಗೂ ಗ್ರಾಮೀಣ ಜನರ ಹಿತಕ್ಕಾಗಿ ಹಲವು ಜನಪರ ಕಾರ್ಯಗಳನ್ನು ಕೈಗೊಂಡಿದ್ದ ಅವರು, ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬಂಜಾರಾ ಸಮಾಜದ ಪ್ರಭಾವಿ ನಾಯಕರಾಗಿರುವ ಪ್ರಭು ಚವ್ಹಾಣ ಅವರು ಸಮಾಜದ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಪ್ರಗತಿಗೆ ಸದಾ ಬೆಂಬಲವಾಗಿ ನಿಂತಿದ್ದಾರೆ. ಸಮಾಜದ ಪರಂಪರೆ, ಸಂಸ್ಕೃತಿ ಮತ್ತು ಗುರುಗಳ ಆದರ್ಶಗಳಿಗೆ ಗೌರವ ನೀಡುತ್ತಾ, ಸಮಾಜದ ಸಂಘಟನೆ ಹಾಗೂ ಅಭಿವೃದ್ಧಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಭಾಯಾಗಡ್ ಮಹಾಮಠದ ಅಭಿವೃದ್ಧಿಗೆ ಬಿ.ವೈ. ವಿಜಯೇಂದ್ರ ಶುಭಹಾರೈಕೆ
ಅಪಾರ ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವ ಹೊಂದಿರುವ ಸಂತ ಶ್ರೀ ಸೇವಾಲಾಲ ಮಹಾರಾಜರ ಪವಿತ್ರ ಜನ್ಮಸ್ಥಾನದ ಮಹಾಮಠ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಪ್ರಭು ಚವ್ಹಾಣ ಅವರ ಮೇಲಿರುವ ಸಮಾಜದ ಅಪಾರ ವಿಶ್ವಾಸ ಹಾಗೂ ಗೌರವಕ್ಕೆ ಸಾಕ್ಷಿಯಾಗಿದೆ. ಈ ಮಹತ್ವದ ಜವಾಬ್ದಾರಿಯ ಮೂಲಕ ಭಾಯಾಗಡ್ ಮಹಾಮಠದ ಸಮಗ್ರ ಅಭಿವೃದ್ಧಿ, ಭಕ್ತರಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಹಾಗೂ ಸಂತ ಶ್ರೀ ಸೇವಾಲಾಲ ಮಹಾರಾಜರ ಸಂದೇಶ ಮತ್ತು ತತ್ವಾದರ್ಶಗಳನ್ನು ದೇಶದಾದ್ಯಂತ ಮತ್ತಷ್ಟು ವ್ಯಾಪಕವಾಗಿ ಪಸರಿಸುವ ಕಾರ್ಯಕ್ಕೆ ಹೊಸ ವೇಗ ದೊರೆಯಲಿದೆ. ಪ್ರಭು ಚವ್ಹಾಣ ಅವರ ನೇತೃತ್ವದಲ್ಲಿ ಪವಿತ್ರ ಭಾಯಾಗಡ್ ಕ್ಷೇತ್ರವು ಮತ್ತಷ್ಟು ಅಭಿವೃದ್ಧಿ ಹೊಂದಲಿ ಎಂದು ಬಿ.ವೈ. ವಿಜಯೇಂದ್ರ ಅವರು ಹೃತ್ಪೂರ್ವಕವಾಗಿ ಶುಭ ಕೋರಿದರು.