
ಕೊಪ್ಪಳ (ನ.24): ಭತ್ತ ಕೊಯ್ಯುವ ಯಂತ್ರವನ್ನು (Paddy Harvester) ಹೊತ್ತುಕೊಂಡು ಸಾಗುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಕೆಸರಟ್ಟಿ ಬಳಿಯ ಕಾಲುವೆಗೆ ಉರುಳಿ ಬಿದ್ದಿತ್ತು. ಕಾಲುವೆಗೆ ಬಿದ್ದಿದ್ದ ಲಾರಿಯನ್ನು ಮೇಲೆತ್ತುವ ಕಾರ್ಯಾಚರಣೆಯನ್ನು ವೀಕ್ಷಿಸಲು ಬಂದಿದ್ದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಕಾಲು ಜಾರಿ ನೀರು ಪಾಲಾಗಿರುವ ದಾರುಣ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕೆಸರಟ್ಟಿ ಗ್ರಾಮದ ಬಳಿ ನಡೆದಿದೆ.
ನೀರು ಪಾಲಾದ ವ್ಯಕ್ತಿಯನ್ನು ಕೆಸರಟ್ಟಿ ಗ್ರಾಮದ ನಿವಾಸಿ ನಾಗಪ್ಪ ಉಪ್ಪಾರ್ ಎಂದು ಗುರುತಿಸಲಾಗಿದೆ. ಕಾಲುವೆಯ ರಭಸವಾದ ನೀರಿನಲ್ಲಿ ನಾಗಪ್ಪ ಕೊಚ್ಚಿ ಹೋಗಿದ್ದು, ಅವರಿಗಾಗಿ ತೀವ್ರ ಶೋಧ ಕಾರ್ಯ ಮುಂದುವರಿದಿದೆ.
ಭತ್ತ ಕೊಯ್ಯುವ ಯಂತ್ರವನ್ನು (Paddy Harvester) ಹೊತ್ತುಕೊಂಡು ಸಾಗುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಕೆಸರಟ್ಟಿ ಬಳಿಯ ಕಾಲುವೆಗೆ ಉರುಳಿ ಬಿದ್ದಿತ್ತು. ನೀರಿನಲ್ಲಿ ಮುಳುಗಿದ್ದ ಲಾರಿ ಹಾಗೂ ಭತ್ತ ಕೊಯ್ಯುವ ಯಂತ್ರವನ್ನು ಕ್ರೇನ್ ಸಹಾಯದಿಂದ ಮೇಲೆತ್ತುವ ಕಾರ್ಯಾಚರಣೆ ನಡೆಯುತ್ತಿತ್ತು. ಈ ರಕ್ಷಣಾ ಕಾರ್ಯಾಚರಣೆಯನ್ನು ವೀಕ್ಷಿಸಲು ಸ್ಥಳೀಯ ಗ್ರಾಮಸ್ಥರು ಕಾಲುವೆಯ ದಂಡೆಯ ಮೇಲೆ ಜಮಾಯಿಸಿದ್ದರು. ಇದೇ ವೇಳೆ ಲಾರಿ ಮೇಲೆತ್ತುವುದನ್ನು ನೋಡಲು ಬಂದಿದ್ದ ಕೆಸರಟ್ಟಿ ಗ್ರಾಮದ ನಾಗಪ್ಪ ಉಪ್ಪಾರ್ ಅವರು ಆಕಸ್ಮಿಕವಾಗಿ ನೀರಿಗೆ ಬಿದ್ದು ಕೊಚ್ಚಿ ಹೋಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಗಂಗಾವತಿ ಗ್ರಾಮೀಣ ಠಾಣೆಯ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದ್ದಾರೆ. ಕಾಲುವೆಯಲ್ಲಿ ನೀರಿನ ಹರಿವು ಹೆಚ್ಚಿರುವ ಕಾರಣ ನಾಗಪ್ಪ ಉಪ್ಪಾರ್ ಪತ್ತೆಗಾಗಿ ನುರಿತ ಈಜುಗಾರರು ಹಾಗೂ ರಕ್ಷಣಾ ತಂಡದ ನೆರವಿನೊಂದಿಗೆ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ಈ ಘಟನೆ ಸಂಬಂಧ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳದಲ್ಲಿ ಗ್ರಾಮಸ್ಥರು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.