ಪಿಎಸ್‍ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಸಚಿವರು ಇಲ್ಲವೆ ಬಿಜೆಪಿ ಮುಖಂಡರ ಕೈವಾಡವಿದ್ದರೆ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಗಾಳಿಯಲ್ಲಿ ಗುಂಡು ಹೊಡೆಯುವ ಬದಲು ದಾಖಲೆಗಳನ್ನು ಬಿಡುಗಡೆ ಮಾಡಲಿ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಸವಾಲು ಹಾಕಿದ್ದಾರೆ.
ವರದಿ: ವರದರಾಜ್, ದಾವಣಗೆರೆ
ದಾವಣಗೆರೆ (ಮೇ.07): ಪಿಎಸ್‍ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ (PSI Recruitment Scam) ಸಚಿವರು ಇಲ್ಲವೆ ಬಿಜೆಪಿ (BJP) ಮುಖಂಡರ ಕೈವಾಡವಿದ್ದರೆ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಗಾಳಿಯಲ್ಲಿ ಗುಂಡು ಹೊಡೆಯುವ ಬದಲು ದಾಖಲೆಗಳನ್ನು ಬಿಡುಗಡೆ ಮಾಡಲಿ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ (MP Renukacharya) ಸವಾಲು ಹಾಕಿದ್ದಾರೆ. ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರು 2 ಬಾರಿ ಸಿಎಂ ಆಗಿದ್ದವರು. ಜೊತೆಗೆ ಮಾಜಿ ಪ್ರಧಾನಿಯ ಪುತ್ರರೂ ಹೌದು. ನಮ್ಮ ಸಚಿವರು ಇಲ್ಲವೇ ಯಾರೇ ಇದ್ದರೂ ದಾಖಲೆಗಳನ್ನು ಬಿಡುಗಡೆ ಮಾಡಬೇಕು ಎಂದು ಸವಾಲು ಎಸೆದರು. ಬುಟ್ಟಿಯಲ್ಲಿ ಹಾವಿದೆ ಎಂದು ಹೆದರಿಸುವುದು ಬೇಡ. ಕುಮಾರಸ್ವಾಮಿ ಗಾಳಿಯಲ್ಲಿ ಗುಂಡು ಹಾರಿಸುವ ಸ್ವಭಾವದವರು. ಯಾವಾಗಲು ಹಿಟ್ ಅಂಡ್ ರನ್ ಮಾಡುವುದೇ ಅವರ ವೃತ್ತಿಯಾಗಿದೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ ರೇಣುಕಾಚಾರ್ಯ: ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ರೇಣುಕಾಚಾರ್ಯ, ಭ್ರಷ್ಟಾಚಾರದ ಬಗ್ಗೆ ಮಾತನಾಡಲು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರುಗಳಿಗೆ ಯಾವುದೇ ನೈತಿಕತೆ ಇಲ್ಲ.ನಿಮ್ಮ ಕಾಲದಲ್ಲಿ ಎಷ್ಟು ಹಗರಣಗಳು ನಡೆದಿದ್ದವು. ಸಮಾಜ ಕಲ್ಯಾಣ ಸಚಿವರಾಗಿದ್ದ ಆಂಜನೇಯ ಅವರು ಹಾಸಿಗೆ ದಿಂಬು ಖರೀದಿಯಲ್ಲಿ ಕೋಟ್ಯಂತರ ಅವ್ಯವಹಾರ ನಡೆಸಿದರು. ನೀವು ಅವರ ರಾಜೀನಾಮೆ ಪಡೆದಿದ್ದೀರ? ಎಂದು ಪ್ರಶ್ನಿಸಿದರು. ನಿಮ್ಮ ಅಧಿಕಾರ ಅವಧಿಯಲ್ಲಿ ನಡೆಯಬಾರದ ಹಗರಣಗಳೆಲ್ಲವೂ ನಡೆದದ್ದನ್ನು ಮುಚ್ಚಿ ಹಾಕಿದ್ದೀರಿ.
PSI Recruitment Scam: ದಾವಣಗೆರೆ, ಧಾರವಾಡದಲ್ಲೂ ಸಿಐಡಿ ಪೊಲೀಸರಿಂದ ಬೇಟೆ?
ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ, ಆರ್ಕಾವತಿ ರೀಡೋ, ಹೋಬ್ಲೆಟ್ ವಾಚ್, ಒಂದೇ ಎರಡೇ ಎಂದು ಹರಿಹಾಯ್ದರು. ಭೂತದ ಬಾಯಲ್ಲಿ ಭಗವದ್ಗೀತೆ ಎಂಬಂತೆ ಮಾಡಬಾರದೆನ್ನಲ್ಲ ಮಾಡಿ ತಿಹಾರ್ ಜೈಲಿಗೆ ಹೋಗಿದ್ದ ಡಿಕೆಶಿ ನಮ್ಮ ಸರ್ಕಾರದ ಬಗ್ಗೆ ಮಾತನಾಡುವುದೇ ಹಾಸ್ಯಸ್ಪದ. ನೀವು ಮೊದಲು ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕೆ ಉಳಿಸಿಕೊಂಡಿದ್ದೀರೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಿ ಎಂದು ತಿರುಗೇಟು ನೀಡಿದರು. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಿಡಿದು ಎಲ್ಲರ ಕಾಲದಲ್ಲೂ ಒಂದಲ ಒಂದು ರೀತಿ ಹಗರಣಗಳು ನಡೆದೇ ಇವೆ. ಕಾಂಗ್ರೆಸ್ ಭ್ರಷ್ಟಾಚಾರ ಆಡಳಿತ ಕೊಟ್ಟಿದ್ದರೆ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರವನ್ನು ಏಕೆ ಕಳೆದುಕೊಳ್ಳುತ್ತಿತ್ತು ಪ್ರಶ್ನೆ ಮಾಡಿದರು.
ಹಣ ಕೊಡುವ ಸಂಸ್ಕೃತಿ ಕಾಂಗ್ರೆಸ್‍ನವರದು ಬಿಜೆಪಿಯವರದಲ್ಲ: ಬಿಜೆಪಿಯಲ್ಲಿ ಸಿಎಂ ಸ್ಥಾನದಿಂದ ಹಿಡಿದು ಸಚಿವ ಸ್ಥಾನಕ್ಕಾಗಲಿ ಹಣ ಕೊಡುವ ಸಂಸ್ಕೃತಿ ನಮ್ಮ ಪಕ್ಷದಲ್ಲಿ ಇಲ್ಲ ಎಂದು ಸ್ಪಷಪಡಿಸಿದರು. ಕಾಂಗ್ರೆಸ್‍ನಲ್ಲಿ ಲಗೋಟೆ ಸಂಸ್ಕೃತಿ. ಕಾಂಗ್ರೆಸ್‍ನಲ್ಲಿ ಹಣ ಕೊಟ್ಟರೆ ಯಾರಿಗೆ ಬೇಕಾದರೂ ಮಂತ್ರಿ ಸ್ಥಾನ ಕೊಡುತ್ತಾರೆ. ಬಿಜೆಪಿಯಲ್ಲಿ ಕಾರ್ಯಕರ್ತರನ್ನು ಗುರುತಿಸಿ ಬೆಳೆಸುತ್ತಾರೆ. ಇದು ನಮ್ಮ ಪಕ್ಷದ ಸಂಸ್ಕೃತಿ ಎಂದು ಹೇಳಿದರು. ನಾವು ನಾವು ಕಚ್ಚಾಡುತ್ತಾ ಹೋದರೆ ಕಾರ್ಯಕರ್ತರಿಗೆ ದುಡಿದವರಿಗೆ, ಪಕ್ಷಕ್ಕಾಗಿ ತ್ಯಾಗ ಮಾಡಿದವರಿಗೆ ನೋವಾಗುತ್ತದೆ. ಪಕ್ಷದಲ್ಲಿ ಸಾಮರಸ್ಯ ಇಲ್ಲ ಎಂದು ಅಸಮಾಧಾನಪಟ್ಟುಕೊಳ್ಳುತ್ತಾರೆ. ನಮಗೆ ಸಂಘರ್ಷ ಬೇಡ ಎಂದು ಮನವಿ ಮಾಡಿದರು.
ಸಿಎಂ ಬೊಮ್ಮಾಯಿ ಅವರನ್ನು ಸರ್ವಾನುಮತದಿಂದಲೇ ಆಯ್ಕೆ ಮಾಡಲಾಗಿದೆ. ಹಿರಿಯರ ನಿರ್ಣಯದಂತೆ ಹಾಗೂ ಶಾಸಕಾಂಗ ಸಭೆಯಲ್ಲಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು. ಬೊಮ್ಮಾಯಿ ಅಥವಾ ಯಡಿಯೂರಪ್ಪ ಅವರು ಸಿಎಂ ಆದಾಗಲೂ ಲಾಬಿ ಮಾಡಿ ನಾಯಕರಾದವರಲ್ಲ. ಯಾರಿಗೂ ಕೂಡ ಹಣ ಕೊಟ್ಟವರಲ್ಲ. ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಮಹಾನ್ ನಾಯಕರು ನಮ್ಮ ಯಡಿಯೂರಪ್ಪನವರು. ಒಂದು ಕಾಲದಲ್ಲಿ ಭಾರತೀಯ ಜನತಾ ಪಾರ್ಟಿಗೆ ಕುಡಿಯಲು ನೀರು ಕೊಡುತ್ತಿರಲಿಲ್ಲ. ಸಂಘ ಪರಿವಾರದಿಂದ ಬಂದಂತಹ ಪಾರ್ಟಿಯನ್ನು ನಾವು ನಾವೇ ಟೀಕಿಸುತ್ತಾ ಹೋದರೆ ಪಕ್ಷದ ವರ್ಚಸ್ಸು ಕಡಿಮೆಯಾಗುತ್ತದೆ ಅಸಮಾಧಾನ ವ್ಯಕ್ತಪಡಿಸಿದರು.
ಬಸವನಗೌಡ್ ಪಾಟೀಲ್ ಹೆ ಕಿವಿ ಮಾತು ಹೇಳಿದ ರೇಣುಕಾಚಾರ್ಯ: ಬಸನಗೌಡ ಪಾಟೀಲ್ ಯತ್ನಾಳ್ ಇಂತಹ ಪಕ್ಷದ ವಿರುದ್ಧ ಈ ರೀತಿ ಮಾತನಾಡಬಾರದು. ಅವರು ಹಿರಿಯರು. ಕೇಂದ್ರದಲ್ಲಿ ಸಚಿವರಾಗಿ ಕೆಲಸ ಮಾಡಿದ್ದವರು. ಅವರ ಹೇಳಿಕೆ ನಮ್ಮೆಲ್ಲರಿಗೂ ಮುಜುಗರ ವುಂಟು ಮಾಡುತ್ತದೆ. ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ಅಷ್ಟಕ್ಕೂ ಯತ್ನಾಳ್ ಅವರು, ಬಿಜೆಪಿ ಮುಖಂಡರೆಂದೂ ಹೇಳಿಲ್ಲ. ದೆಹಲಿಯಿಂದ ಕೆಲವು ನಾಯಕರು ಬಂದಿದ್ದರು ಎಂದು ಹೇಳಿದ್ದಾರೆ. ಯಾರೇ ಆಗಲಿ, ದಯವಿಟ್ಟು ಈ ರೀತಿ ಮಾತನಾಡಬಾರದು ಎಂದು ಮನವಿ ಮಾಡಿದರು. ಮುಖ್ಯಮಂತ್ರಿ ಬೊಮ್ಮಾಯಿ ನಾಯಕತ್ವ ಯಾವುದೇ ಕಾರಣಕ್ಕೂ ಬದಲಾವಣೆಯಾಗುವುದಿಲ್ಲ. ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಸಚಿವ ಸಂಪುಟ ವಿಸ್ತರಣೆಯನ್ನು ಹೈಕಮಾಂಡ್ ತೀರ್ಮಾನಿಸುತ್ತಾರೆ.
PSI recruitment scam ಗೃಹ ಸಚಿವರ ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯ
ನಾನು ಜ್ಯೋತಿಷಿ ಅಥವಾ ಪಂಚಾಂಗ ನೋಡಲು ಬರುವುದಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೌಜನ್ಯಕ್ಕಾದರೂ ಶಾಸಕ ಭೇಟಿ ಮಾಡಿ ಅವಕಾಶ ಕೇಳಬಹುದಿತ್ತಲ್ಲ. ಸಾಮಾಜಿಕ ಜಾಲತಾಣ ನೋಡಕು ಬರಲ್ಲ, ವೈರಲ್ ಮಾಡುವುದಕ್ಕೂ ಬರುವುದಿಲ್ಲ. ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು ನಮ್ಮನ್ನು ದಾರಿ ತಪ್ಪಿದಾಗ ಎಚ್ಚರಪಡಿಸುತ್ತವೆ. ಸೋಶಿಯಲ್ ಮೀಡಿಯಾದಲ್ಲಿ ನಾವೇನೇ ಮಾತನಾಡಿದರೂ ನೇರವಾಗಿ ಜನರಿಗೆ ತಲುಪುತ್ತದೆ. ಹಾಗಾಗಿ ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕು ಎಂದರು. ಹಾಸನ, ಮಂಡ್ಯ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಬಿಜೆಪಿಯ ನಾಯಕತ್ವ ಒಪ್ಪಿಕೊಂಡು ಸೇರುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿ ಮೆಚ್ಚಿ ಬರುತ್ತಿದ್ದಾರೆ.ಮುಂದಿನ ದಿನಗಳಲ್ಲಿ ಇನ್ನು ಕೆಲವರು ಪಕ್ಷಕ್ಕೆ ಬರಲಿದ್ದಾರೆ ಎಂಬ ಸುಳಿವನ್ನು ರೇಣುಕಾಚಾರ್ಯ ನೀಡಿದರು.