ನಾನು ಎಂದೂ ಹೇಡಿಯಂತೆ ಬದುಕುವುದಿಲ್ಲ ಯಾವುದಕ್ಕೂ ಜಗ್ಗುವುದಿಲ್ಲ. ನನ್ನೊಂದಿಗೆ ಅವಳಿ ತಾಲೂಕಿನ ಜನರ ಶ್ರಿರಕ್ಷೆ ಇದೆ, ಮಗನ ಸಾವಿನ ತನಿಖಾ ಸಮಗ್ರ ವರದಿಗಾಗಿ ಕಾಯುತ್ತಿದ್ದೇನೆ ಎಂದು ಸಿ.ಎಂ. ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಹೊನ್ನಾಳಿ (ನ.12): ನಾನು ಎಂದೂ ಹೇಡಿಯಂತೆ ಬದುಕುವುದಿಲ್ಲ ಯಾವುದಕ್ಕೂ ಜಗ್ಗುವುದಿಲ್ಲ. ನನ್ನೊಂದಿಗೆ ಅವಳಿ ತಾಲೂಕಿನ ಜನರ ಶ್ರಿರಕ್ಷೆ ಇದೆ, ಮಗನ ಸಾವಿನ ತನಿಖಾ ಸಮಗ್ರ ವರದಿಗಾಗಿ ಕಾಯುತ್ತಿದ್ದೇನೆ ಎಂದು ಸಿ.ಎಂ. ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು. ಪಟ್ಟಣದ ಅಗಳ ಮೈದಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಅನುದಾನ ಮತ್ತು ಸರ್ಕಾರದ ವಿವಿಧ ಯೋಜನೆಗಳ ಅರ್ಹ ಫಲಾನುಭಗಳಿಗೆ ಸವಲತ್ತುಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅವಳಿ ತಾಲೂಕಿನಲ್ಲಿ ಮಳೆ ಹಾನಿಯಿಂದ ನೆಲಕ್ಕುರುಳಿದ 3243 ಮನೆಗಳಿಗೆ 131 ಕೋಟಿ ರು. ಅನುದಾನ ಮಂಜೂರು ಮಾಡಿಸಿ ಮನೆ ಹಾನಿಯಾದರಿಗೆ ಪರಿಹಾರ ನೀಡಲಾಗಿದೆ ಎಂದು ಹೇಳಿದರು. ಕಳೆದ ತಿಂಗಳು ಅತಿಯಾದ ಮಳೆಯಿಂದ ಅವಳಿ ತಾಲುಕುಗಳಲ್ಲಿ ಅನೇಕ ಮನೆಗಳು ಧರೆಗುರುಳಿದವು. ಸರ್ಕಾರದಿಂದ.ಕೆಟಗರಿಗನುಗುಣವಾಗಿ 50 ಸಾವಿರ, 3ಲಕ್ಷ ಹಾಗೂ 5 ಲಕ್ಷ ರು. ಆದೇಶ ಪತ್ರ ವಿತರಿಸಿ ಹಂತಹಂತವಾಗಿ ಹಣ ಬಿಡುಗಡೆಗೊಳಿಸಲಾಗಿದೆ ಎಂದರು. ಪಕ್ಷದವರು ರೇಣುಕಾಚಾರ್ಯ ರಾತ್ರೋರಾತ್ರಿ ಹಳ್ಳಿಗಳಿಗೆ ತೆರಳಿ ಜೆಸಿಬಿಯಿಂದ ಮನೆ ಬೀಳಿಸಿ ತಮಗೆ ಬೇಕಾದವರಿಗೆ ಪರಿಹಾರ ನೀಡಿದ್ದಾರೆ. ಪ್ರತಿ ಮನೆ ಪರಿಹಾರಕ್ಕೆ 50 ಸಾವಿರ ಹಣ ಪಡೆದಿದ್ದಾರೆ ಎಂದು ಆರೋಪಿಸಿದರು. ನಾನೇದರೂ ಫಲಾನುಭಗಳಿಂದ ಹಣ ಪಡೆದಿದ್ದರೆ ನನ್ನನ್ನು ನೇಣಿಗೇರಿಸಲಿ ಎಂದು ನೇರವಾಗಿ ಸವಾಲೆಸೆದರು.
ತನಿಖೆ ಪೂರ್ಣವಾದ ಬಳಿಕ ಪ್ರಕರಣದ ಸ್ಪಷ್ಟತೆ: ಸಿಎಂ ಬಸವರಾಜ ಬೊಮ್ಮಾಯಿ
ನನ್ನ ತಮ್ಮನ ಮಗನ ಸಾವಿನ ದುಃಖದಲ್ಲಿದ್ದರೆ ಕೆಲವರು ಸಾವಿನ ಮನೆಗೆ ವ್ಯಂಗ್ಯವಾಡುವ ಹವ್ಯಾಸ ರೂಢಿಸಿಕೊಂಡು ರೇಣುಕಾಚಾರ್ಯ ಗಿಮಿಕ್ ಮಾಡುತ್ತಿದ್ದಾರೆ ಎಂದು ಹೇಳುತ್ತಾ ವಿಕೃತಿ ಮೆರೆಯುತ್ತಿದ್ದಾರೆ. ಇದಕ್ಕೆ ನಾನು ತಲೆ ಕೆಡಿಸೊಳ್ಳುವುದಿಲ್ಲ ಎಂದರು. ಎರಡು ಬಾರಿ ಶಾಸಕರಾಗಿ ತಾಲೂಕಿಗೆ ಗುರುತರವಾದ ಒಂದೂ ಕೆಲಸ ಮಾಡದೇ ಈಗ ಜನರ ಬಳಿ ತೆರಳುವ ಮಾಜಿ ಶಾಸಕರು ನಾಟಕ ಪ್ರಾರಂಭಿಸಿದ್ದಾರೆ. ಅವರ ಕೆಲಸ ಏನಿದ್ದರೂ ಮೊಸಳೆ ಕಣ್ಣೀರು ಸುರಿಸುವುದಾಗಿದೆ ಎಂದು ದೂರಿದರು. ಕಾರ್ಯಕ್ರಮದಲ್ಲಿ 775 ಹೋಲಿಗೆಯಂತ್ರಗಳು, 28 ಅಂಗವಿಕಲರಿಗೆ ತ್ರಿಚಕ್ರವಾಹನ, ಮೀನುಗಾರಿಗೆ ಇಲಾಖೆಯಿಂದ 27 ಬಲೆಗಳು, ಗಂಗಾ ಕಲ್ಯಾಣ ಯೋಜನೆಯಲ್ಲಿ 65 ಪಂಪ್ ಸೆಟ್‌ಗಳು ಹೀಗೆ ಕೆಲ ಇಲಾಖೆಗಳಿಂದ ವಿವಿಧ ಸೌಲಭ್ಯಗಳನ್ನು ವಿತರಿಸಲಾಯಿತು.
ಚಂದ್ರು ಸಾವಿನ ತನಿಖೆ ವೈಫಲ್ಯಕ್ಕೆ ಗರಂ ಆಗಿದ್ದೆ; ರೇಣುಕಾಚಾರ್ಯ
ಉಪಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ, ಹೊನ್ನಾಳಿ, ನ್ಯಾಮತಿ ತಾಲೂಕು ತಹಸೀಲ್ದಾರರಾದ ರಶ್ಮಿ, ರೇಣುಕಾ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ರಮೇಶ್, ಪುರಸಭೆ ಅಧ್ಯಕ್ಷ ರಂಗನಾಥ ಮಾತನಾಡಿದರು. ಬಗರ್ ಹುಕುಂ ಸಮಿತಿ ತಾಲೂಕು ಅಧ್ಯಕ್ಷ ಕೆ.ಇ. ನಾಗರಾಜ್, ಸದಸ್ಯ ಮಹಾಂತೇಶ್, ಕೆಎಸ್‌ಡಿಎಲ್ ನಿರ್ದೇಶಕ ಶಿವು ಹುಡೇದ, ಭೂ ಅಭಿವೃದ್ಧಿ ನಿಗಮದ ನಿರ್ದೇಶಕ ಅಜೇಯ್, ತಾಂಡಾ ಅಭಿವೃದ್ಧಿ ನಿಗಮದ ನಿರ್ದೇಶಕ ಮಾರುತಿನಾಯ್ಕ, ದಿಶಾ ನಿರ್ದೇಶಕ ಮಂಜುನಾಥ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು. ತಾಪಂ ಇಒ ರಾಮಾಭೋವಿ ಸ್ವಾಗತಿಸಿದರು. ಗ್ರಾಮ ಲೆಕ್ಕಿಗ ಗಣೇಶ್ ನಿರೂಪಿಸಿದರು.