ತನಿಖೆ ಪೂರ್ಣವಾದ ಬಳಿಕ ಪ್ರಕರಣದ ಸ್ಪಷ್ಟತೆ: ಸಿಎಂ ಬಸವರಾಜ ಬೊಮ್ಮಾಯಿ
- ತನಿಖೆ ಪೂರ್ಣವಾಗದೇ ಯಾವುದೇ ತೀರ್ಮಾನ ಬೇಡ
- ಪೊಲೀಸ್ ಇಲಾಖೆಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೂಚನೆ
- ಎಂ.ಆರ್.ಚಂದ್ರು ನಿಧನ ಹಿನ್ನೆಲೆ ರೇಣುಕಾಚಾರ್ಯ ನಿವಾಸಕ್ಕೆ ಭೇಟಿ, ಸಾಂತ್ವಾನ
ದಾವಣಗೆರೆ (ನ.10) : ಹೊನ್ನಾಳಿಯ ಎಂ.ಆರ್.ಚಂದ್ರಶೇಖರ ಸಾವಿನ ಪ್ರಕರಣವನ್ನು ಎಲ್ಲಾ ಕೋನಗಳಿಂದಲೂ ತನಿಖೆ ನಡೆಸುವವರೆಗೂ ಪೊಲೀಸರು ಯಾವುದೇ ತೀರ್ಮಾನಕ್ಕೂ ಬರಬಾರದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.
ಪಾಲಿಕೆ ಭ್ರಷ್ಟಾಚಾರ: ಬೈರತಿ ಪಾತ್ರ ತನಿಖೆಯಾಗಲಿ; ಕಾಂಗ್ರೆಸ್ ಪ್ರತಿಭಟನೆ
ಹೊನ್ನಾಳಿಯಲ್ಲಿ ಬುಧವಾರ ಶಾಸಕ ಎಂ.ಪಿ.ರೇಣುಕಾಚಾರ್ಯ, ಸಹೋದರ ಎಂ.ಪಿ.ರಮೇಶ ಹಾಗೂ ಕುಟುಂಬಕ್ಕೆ ಚಂದ್ರು ನಿಧನದ ಹಿನ್ನೆಲೆಯಲ್ಲಿ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಚಂದ್ರು ಮರಣೋತ್ತರ ಪರೀಕ್ಷೆ ವರದಿ ಇನ್ನು 2 ದಿನಗಳಲ್ಲೇ ಬರಲಿದೆ ಎಂದರು. ಮರಣೋತ್ತರ ಪರೀಕ್ಷೆ ವರದಿ, ವಿಧಿ ವಿಜ್ಞಾನ ವರದಿ ಆಧಾರ ಹಾಗೂ ಮರು ಸೃಷ್ಟಿ(ರಿಕ್ರಿಯೇಷನ್ ಆಫ್ ಸೀನ್ ಆಫ್ ಕ್ರೈಂ)ಯ ತನಿಖೆ ಆಗಬೇಕು. ಎಲ್ಲಾ ತನಿಖೆಗಳೂ ಮುಗಿದಾಗ ಮಾತ್ರ ಚಂದ್ರಶೇಖರ ಸಾವಿನ ಪ್ರಕರಣದ ನಿಖರತೆ ಸ್ಪಷ್ಟವಾಗಿ ತಿಳಿಯಲಿದೆ. ಮರಣೋತ್ತರ ಪರೀಕ್ಷೆ ನಂತರ ಪ್ರತ್ಯೇಕ ತನಿಖಾ ತಂಡದ ಅಗತ್ಯತೆ ಬಗ್ಗೆ ತೀರ್ಮಾನಿಸಲಾಗುವುದು ಎಂದು ತಿಳಿಸಿದರು.
ಅನುಮಾನಗಳ ಪ್ರಶ್ನೆಗಳಿವೆ:
ಕಾರು, ಪಾರ್ಥಿವ ಶರೀರ ಸಿಕ್ಕ ನಂತರ ಸಾಕಷ್ಟುಪ್ರಶ್ನೆ, ಊಹಾಪೋಹ ಎದ್ದಿವೆ. ಎಲ್ಲದಕ್ಕೂ ತನಿಖೆ ಬಳಿಕವೇ ಉತ್ತರ ಸಿಗಲಿದೆ. ಚಂದ್ರಶೇಖರನ ಮೃತದೇಹವು ಹಿಂಬದಿ ಸೀಟ್‌ನಲ್ಲಿ ಇದ್ದುದು, ಕಾರಿನ ಎದುರು ಭಾಗ ನಜ್ಜುಗುಜ್ಜಾಗಿದೆ. ಹಿಂಭಾಗಕ್ಕೆ ಹೇಗೆ ಹಾನಿಯಾಯಿತೆಂಬ ಪ್ರಶ್ನೆಗಳ ಕಾರಣಕ್ಕೆ ಚಂದ್ರು ಕೊಲೆ ಆಗಿದೆಯೇ ಎಂಬ ಅನುಮಾನ ಒಂದು ಕಡೆಯಾದರೆ, ಸ್ಥಳದಲ್ಲಿ ಕಾರು ಗುದ್ದಿರುವ ಸನ್ನಿವೇಶ, ಮತ್ತಿತರೆ ಗಮನಿಸಿದಾಗ ಇದೊಂದು ಅಪಘಾತವೆಂಬ ಅನುಮಾನವೂ ಇದೆ. ಈ ಸನ್ನಿವೇಶದಲ್ಲಿ ಯಾವುದೇ ತೀರ್ಮಾನಕ್ಕೆ ಬರಬಾರದು ಎಂದು ಹೇಳಿದರು.
ಎಫ್‌ಎಸ್‌ಎಲ್ ವರದಿ ಸಿಗಲಿ:
ಪ್ರಕರಣದ ಕುರಿತಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಅಗತ್ಯ ಸೂಚನೆ ನೀಡಿದ್ದು, ಸಂಪೂರ್ಣ ತನಿಖೆ, ನಿಖರ ಕಾರಣ ಪತ್ತೆಯಾಗುವವರೆಗೂ ಯಾವುದೇ ತೀರ್ಮಾನಕ್ಕೆ ಬರಬಾರದು. ಯಾವುದೇ ಪ್ರಕರಣದಲ್ಲಿ ಸಾಕ್ಷ್ಯಾಧಾರ ಅತೀ ಮುಖ್ಯ. ಚಂದ್ರು ಹಿಂದಿನ ಸೀಟಿಗೆ ಯಾಕೆ ಬಂದ ಎಂಬ ಪ್ರಶ್ನೆ ಇದೆ. ಆತನ ತಲೆಯಲ್ಲಿ ಕೂದಲು ಹೋಗಿರುವುದು, ಕಾರಿನ ಮುಂದಿನ ಗಾಜು ಒಡೆದಿರುವುದು, ಹಿಂದಿನ ಗಾಜಿಗೆ ಏನೂ ಆಗಿಲ್ಲದಿರುವುದು ಮೇಲ್ನೋಟಕ್ಕೆ ಜನ ಸಾಮಾನ್ಯರಿಗೆ ಕಾಡುವ ಪ್ರಶ್ನೆಗಳಾಗಿವೆ. ತನಿಖಾಧಿಕಾರಿಗಳಿಗೆ ಮರಣೋತ್ತರ ಪರೀಕ್ಷೆ ವರದಿ, ಅದಕ್ಕೆ ಬೆಂಬಲವಾಗಿ ಎಫ್‌ಎಸ್‌ಎಲ್ ವರದಿ ಸಿಗಬೇಕು ಎಂದು ವಿವರಿಸಿದರು.
ಮೃತ ಚಂದ್ರು ತಂದೆ ಎಂ.ಪಿ.ರಮೇಶ್, ತಾಯಿ, ರೇಣುಕಾಚಾರ್ಯ ಸೇರಿದಂತೆ ಚಂದ್ರು ಕುಟುಂಬಕ್ಕೆ ಇದು ಭರಿಸಲಾಗದ ದುಃಖ. ಚಂದ್ರುವನ್ನು ರೇಣುಕಾಚಾರ್ಯ ತುಂಬಾ ಹಚ್ಚಿಕೊಂಡಿದ್ದರು. ಸಿವಿಲ್ ಇಂಜಿನಿಯರ್ ಆದ ಚಂದ್ರು ಕ್ಷೇತ್ರದಲ್ಲೇ ಕೆಲಸ ಮಾಡಿಕೊಂಡು, ಬಡವರಿಗೆ ನೆರವಿನ ಹಸ್ತ ಚಾಚುತ್ತ ಸಜ್ಜನಿಕೆಯಿಂದಲೇ ಜನಪ್ರಿಯನಾಗಿದ್ದ ಚಂದ್ರು ಶಾಸಕ ರೇಣುಕಾಚಾರ್ಯರ ಅರ್ಧಭಾರ ಹೊತ್ತಿದ್ದ. ಅಂತಹವನನ್ನು ಕಳೆದುಕೊಂಡಿದ್ದು ದುರ್ದೈವದ ಸಂಗತಿ ಎಂದು ವಿಷಾದಿಸಿದರು.
ರಾಜನಹಳ್ಳಿ ಶ್ರೀ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ, ಸಚಿವರಾದ ಗೋವಿಂದ ಕಾರಜೋಳ, ಬಿ.ಎ.ಬಸವರಾಜ ಭೈರತಿ, ವಿಪ ಸದಸ್ಯ ಎನ್.ರವಿಕುಮಾರ, ಶಾಸಕ ಎಂ.ಪಿ.ರೇಣುಕಾಚಾರ್ಯ, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಮೃತ ಚಂದ್ರು ತಂದೆ ಎಂ.ಪಿ.ರಮೇಶ ಸೇರಿ ಕುಟುಂಬ ವರ್ಗದವರಿದ್ದರು. ಇದಕ್ಕೂ ಮುನ್ನ ಸಿಎಂ ಬೊಮ್ಮಾಯಿ ರೇಣುಕಾಚಾರ್ಯ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದರು. ಮೃತ ಚಂದ್ರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಇದೇ ವೇಳೆ ಶಾಸಕ ರೇಣುಕಾಚಾರ್ಯ ಘಟನೆ ಬಗ್ಗೆ, ಘಟನಾ ಸ್ಥಳದ ಫೋಟೋಗಳ ಸಮೇತ ಸಿಎಂ ಬಸವರಾಜ ಬೊಮ್ಮಾಯಿ ಬಳಿ ಚರ್ಚಿಸಿದರು.
ಚಂದ್ರು ಅಸಹಜ ಸಾವಿನ ಬಗ್ಗೆ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ. ಮುಖ್ಯಮಂತ್ರಿಯಾಗಿ ನಾನು ಇಲ್ಲಿಗೆ ಬಂದಿಲ್ಲ. ರೇಣುಕಾಚಾರ್ಯನ ಸಹೋದರನಾಗಿ ಬಂದಿದ್ದೇನೆ. ನಿರಂತರವಾಗಿ ರೇಣುಕಾಚಾರ್ಯ ಜೊತೆಗೆ ಸಂಪರ್ಕದಲ್ಲಿದ್ದೆ. ಆದರೂ, ಮನಸ್ಸು ತಡೆಯಲಾಗದೇ ಬಂದಿದ್ದೇನೆ. ಚಂದ್ರು ಸಾವು ದೊಡ್ಡ ಯಕ್ಷಪ್ರಶ್ನೆಯಾಗಿ ನಮ್ಮೆಲ್ಲರನ್ನೂ ಕಾಡುತ್ತಿದೆ.
ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ಪುತ್ರನ ಸಾವಿನಲ್ಲೂ ರಾಜಕಾರಣ ಮಾಡುವವನು ನಾನಲ್ಲ; ಎಂ.ಪಿ.ರೇಣುಕಾಚಾರ್ಯ
ಸಾವಿನಲ್ಲಿ ರಾಜಕಾರಣ ಮಾಡುವವನು ನಾನಲ್ಲ, ನನಗೆ ಪ್ರಚಾರದ ಅವಶ್ಯಕತೆ ಇಲ್ಲ. ಕ್ಷೇತ್ರದ ಜನರಿಗೆ ನಾನು ಮಾಡಿರುವ ಕೆಲಸಗಳ ಬಗ್ಗೆ ಗೊತ್ತಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು
ತಮ್ಮ ಸಹೋದರನ ಪುತ್ರನ ಸಾವಿನ ಹಿನ್ನೆಲೆಯಲ್ಲಿ ಬುಧವಾರ ಮುಖ್ಯಮಂತ್ರಿ, ಸಚಿವರು ಹಾಗೂ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಹೊನ್ನಾಳಿಯ ತಮ್ಮ ನಿವಾಸಕ್ಕೆ ಭೇಟಿ ನೀಡಿ ಸಾಂತ್ವಾನ ಹೇಳಿದ ಬಳಿಕ ವೇದಿಕೆಯಲ್ಲಿ ಮಾತನಾಡಿ, ಚಂದ್ರು ಸಾವಿನ ಬಗ್ಗೆ ಓವರ್ ಸ್ಪೀಡಿನಿಂದ ಆಗಿರಬಹುದಾದ ಅಪಘಾತ ಎಂದು ಪೊಲೀಸ್ ವರಿಷ್ಠಾಧಿಕಾರಿ ನೀಡಿದ ಹೇಳಿಕೆ ತಮಗೆ ಬೇಸರ ತಂದಿದೆ. ಮುಖ್ಯಮಂತ್ರಿಯವರು ಸಮಗ್ರ ಮತ್ತು ನಿಖರ ತನಿಖೆಯ ಭರವಸೆ ನೀಡಿದ್ದಾರೆ ಎಂದರು.
900 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ:
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ತಮ್ಮ ನಿವಾಸಕ್ಕೆ ಗುರುವಾರ ಬೆಳಗ್ಗೆ 8.30ಕ್ಕೆ ಬರಲಿದ್ದಾರೆ. ಚಂದ್ರು ಸ್ಮರಣಾರ್ಥ ಶಿಕ್ಷಣ, ಕ್ರೀಡಾ ಪ್ರತಿಭೆಗಳಿಗೆ ಪುರಸ್ಕಾರ ಸಮಾರಂಭ ಆಯೋಜಿಸಿದ್ದೇವೆ. ಮಧ್ಯಾಹ್ನ ಪಟ್ಟಣದ ಅಗಳ ಮೈದಾನಲ್ಲಿನ ವೇದಿಕೆಯಲ್ಲಿ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಸುಮಾರು 900 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವಿದೆ ಎಂದು ತಿಳಿಸಿದರು. ಶುಕ್ರವಾರ ಬೆಳಗ್ಗೆ ಕನಕ ಜಯಂತಿ ಕಾರ್ಯಕ್ರಮದ ನಂತರ ಮಧ್ಯಾಹ್ನ ಸುಮಾರು 4 ಸಾವಿರ ಮಂದಿಗೆ ವಿವಿಧ ಸೌಲಭ್ಯಗಳ ವಿತರಣೆ ಕಾರ್ಯಕ್ರಮವಿದೆ ಹಾಗೂ ಶನಿವಾರ ತಾಲೂಕಿನ ಕುಂಬಳೂರಿನಲ್ಲಿ ಗ್ರಾಮ ವಾಸ್ತವ್ಯಇರಲಿದೆ ಎಂದರು.
ಚಂದ್ರು ಸಾವಿನ ಪ್ರಕರಣದ ತನಿಖೆ ಸಿಬಿಐಗೆ ಒಪ್ಪಿಸಿ
ಈ ಸಂದರ್ಭದಲ್ಲಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಮಾತನಾಡಿದರು. ವಾಲ್ಮೀಕಿ ಸಮಾಜದ ಹಿರಿಯ ಮುಖಂಡ ಚಂದ್ರಪ್ಪ, ಸಮಾಜದ ಮುಖಂಡರು, ಜಿಪಂ ಮಾಜಿ ಉಪಾಧ್ಯಕ್ಷ ಸುರೇಂದ್ರ ನಾಯ್ಕ, ಕೆಎಸ್‌ಡಿಎಲ್ ನಿರ್ದೇಶಕ ಶಿವು ಹುಡೇದ್, ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಕೆ. ಸುರೇಶ್ ಸೇರಿ ಅನೇಕ ಮುಖಂಡರಿದ್ದರು.