ಅನ್ಯಾಯ ಮಾಡಲು ಬಂದವ್ರನ್ನ ಸುಮ್ನೆ ಬಿಡಲ್ಲ: ವಿರೋಧಿಗಳ ವಿರುದ್ಧ ಗುಡುಗಿದ ಲಕ್ಷ್ಮಣ ಸವದಿ

Published : May 11, 2026, 09:54 PM IST
Laxman Savadi

ಸಾರಾಂಶ

ನಾನು ಹಳ್ಳಿಯಲ್ಲಿ ಚಿನ್ನಿದಾಂಡು ಆಡುತ್ತ, ಕನ್ನಡ ಶಾಲೆಯಲ್ಲಿ ಕಲಿತು ಬೆಳೆದಿದ್ದೇನೆ, ನಾನು ರೈತನ ಮಗ ಆಗಿರುವುದರಿಂದ ನೇಗಿಲು ಹೊಡಿತೀನಿ ಎಂದು ಶಾಸಕ ಲಕ್ಷ್ಮಣ ಸವದಿ ವೇದಿಕೆಯ ಮೇಲೆ ವಿರೋಧಿಗಳ ವಿರುದ್ಧ ಗುಡುಗಿದರು.

ಅಥಣಿ (ಬೆಳಗಾವಿ) (ಮೇ.11): ನಾನು ಹಳ್ಳಿಯಲ್ಲಿ ಚಿನ್ನಿದಾಂಡು ಆಡುತ್ತ, ಕನ್ನಡ ಶಾಲೆಯಲ್ಲಿ ಕಲಿತು ಬೆಳೆದಿದ್ದೇನೆ, ನಾನು ರೈತನ ಮಗ ಆಗಿರುವುದರಿಂದ ನೇಗಿಲು ಹೊಡಿತೀನಿ, ಟ್ರ್ಯಾಕ್ಟರ್ ಕೂಡ ಹೊಡಿತೀನಿ, ಪ್ರಸಂಗ ಬಂದ್ರೆ ಅನ್ಯಾಯ ಮಾಡಲು ಬಂದವನಿಗೆ ಮೆಟ್ಟಿನಿಂದ ಹೊಡಿತೀನಿ ಎಂದು ಶಾಸಕ ಲಕ್ಷ್ಮಣ ಸವದಿ ವೇದಿಕೆಯ ಮೇಲೆ ವಿರೋಧಿಗಳ ವಿರುದ್ಧ ಗುಡುಗಿದರು.

ಅಥಣಿ ಮತಕ್ಷೇತ್ರದ ತೆಲಸಂಗ ಗ್ರಾಮದಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಮಾತನಾಡಿದ ಶಾಸಕ ಲಕ್ಷ್ಮಣ ಸವದಿ, ನನ್ನ ಪ್ರೀತಿಯ ಸ್ನೇಹಿತ ಎಂದು ಹೇಳುವ ಮೂಲಕ ಹೆಸರು ಪ್ರಸ್ತಾಪಿಸದೇ ಪರೋಕ್ಷವಾಗಿ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೆಲ ದಿನಗಳ ಹಿಂದೆ ಅಥಣಿ ಮತಕ್ಷೇತ್ರಕ್ಕೆ ಆಗಮಿಸಿದ್ದ ರಮೇಶ ಜಾರಕಿಹೊಳಿ ಲಕ್ಷ್ಮಣ ಸವದಿಯನ್ನು ಬರುವ ಚುನಾವಣೆಯಲ್ಲಿ ಸೋಲಿಸಿ ಟ್ರ್ಯಾಕ್ಟರ್ ಓಡಿಸಲು ಕಳಿಸುತ್ತೇವೆ ಎಂದು ಹೇಳುವ ಮೂಲಕ ತಮ್ಮ ನಾಲಿಗೆಯನ್ನು ಹರಿಬಿಟ್ಟಿದ್ದರು.

ಈ ಅತಿರೇಕದ ಮಾತಿಗೆ ತಿರುಗೇಟು ನೀಡಿದ ಶಾಸಕ ಲಕ್ಷ್ಮಣ ಸವದಿ ಸಾರ್ವಜನಿಕ ವೇದಿಕೆಯಲ್ಲಿಯೇ ನಾನೊಬ್ಬ ರೈತನ ಮಗ, ಎತ್ತು-ಟ್ರ್ಯಾಕ್ಟರ್ ಓಡಿಸೋದು ನನ್ನ ಬದುಕು, ನನ್ನ ಸ್ವಾಭಿಮಾನಕ್ಕೆ ಮತ್ತು ನನ್ನ ಕ್ಷೇತ್ರದ ಜನರಿಗೆ ಅನ್ಯಾಯವಾಗಲು ನಾನು ಬಿಡುವುದಿಲ್ಲ. ನಾನು ರೈತನ ಮಗ ಆಗಿರುವುದರಿಂದ ನೇಗಿಲು ಹೊಡಿತೀನಿ, ಟ್ರ್ಯಾಕ್ಟರ್ ಕೂಡ ಹೊಡಿತೀನಿ, ಪ್ರಸಂಗ ಬಂದ್ರೆ ಅನ್ಯಾಯ ಮಾಡಲು ಬಂದವನಿಗೆ ಮೆಟ್ಟಿನಿಂದ ಹೊಡಿತೀನಿ ಎಂದು ಗುಡುಗಿದರು.

ತಮ್ಮ ತಾಲೂಕಿನಂತೆ ಅಥಣಿ ತಾಲೂಕನ್ನು ಮಾಡುವ ಕನಸು ಕಾಣುವವರಿಗೆ ಇಲ್ಲಿ ಅವಕಾಶ ಇಲ್ಲ. ಇಲ್ಲಿ ಕೇವಲ ರೈತರಲ್ಲ, ವಿಜ್ಞಾನಿಗಳು ಇದ್ದಾರೆ, ಪ್ರಜ್ಞಾವಂತರು ಇದ್ದಾರೆ. ಶಿವಯೋಗಿಗಳು ನಾಡಿನ ಜನ ಎಂದಿಗೂ ಅನ್ಯಾಯದ ಪರ ನಿಲ್ಲುವುದಿಲ್ಲ. ಅಧಿಕ ಪ್ರಸಂಗದ ಮಾತುಗಳನ್ನು ಆಡುವ ಜನರಿಗೆ ಕ್ಷೇತ್ರದ ಜನರೇ ತಕ್ಕ ಉತ್ತರ ನೀಡುತ್ತಾರೆ. ನಾನು ಅವರಂತೆ ಮಾತನಾಡಬಲ್ಲೆ, ಆದರೆ ಅವರಿಗೂ ನಮಗೂ ಯಾವುದೇ ವ್ಯತ್ಯಾಸವಿರುವುದಿಲ್ಲ, ಕ್ಷೇತ್ರದ ಜನರು ಇದನ್ನು ಸೂಕ್ಷ್ಮವಾಗಿ ಆಲಿಸುತ್ತಿರುತ್ತಾರೆ.

ಯಾವಾಗಲೂ ಶ್ರೀರಕ್ಷೆ

ಇವತ್ತು ಹೇಳುವ ಪ್ರಸಂಗ ಬಂದಿದೆ, ಆದ್ದರಿಂದ ಈ ಎಚ್ಚರಿಕೆಯ ಮಾತನ್ನು ನಾನು ಹೇಳುತ್ತಿದ್ದೇನೆ. ಕ್ಷೇತ್ರದ ಜನರು ನನಗೆ ಯಾವಾಗಲೂ ಶ್ರೀರಕ್ಷೆಯಾಗಿದ್ದಾರೆ. ನಾನು ಯುದ್ಧಕ್ಕೆ ಹೊರಡುವಾಗ ಯಾವುದೇ ಡಾಲ್ ಮತ್ತು ಕವಚ ಹಾಕಿಕೊಳ್ಳದೆ ರಣರಂಗಕ್ಕೆ ಇಳಿಯುತ್ತೇನೆ. ನನ್ನ ಕ್ಷೇತ್ರದ ಮತದಾರರೇ ನನಗೆ ಶ್ರೀರಕ್ಷೆ ಮತ್ತು ಕವಚವಾಗಿದ್ದಾರೆ. ವಿರೋಧಿಗಳ ಯಾವುದೇ ಕುತಂತ್ರ ಇಲ್ಲಿ ನಡೆಯುವುದಿಲ್ಲ ಎಂದು ಶಾಸಕ ಲಕ್ಷ್ಮಣ ಸವದಿ ಪರೋಕ್ಷವಾಗಿ ಎಚ್ಚರಿಕೆ ನೀಡಿದರು.

PREV
Read more Articles on
click me!

Recommended Stories

ಬೆಂಗಳೂರು ಕಸದ ಟೆಂಡರ್‌ನಲ್ಲಿ IAS ಅಧಿಕಾರಗಳ ಭ್ರಷ್ಟಾಚಾರ ಆರೋಪ: ಲೋಕಾಯುಕ್ತಕ್ಕೆ ದೂರು ನೀಡಿದ ಶಾಸಕ ಯತ್ನಾಳ್!
ಕುರ್ಚಿ ಕಿತ್ತಾಟದ ಬಗ್ಗೆ ಪ್ರಧಾನಿ ಮೋದಿ ಹೇಳುವುದು ಸ್ವಾಭಾವಿಕ: ಸಚಿವ ಸತೀಶ್ ಜಾರಕಿಹೊಳಿ