
ಬೆಂಗಳೂರು (ಮೇ 11): ಘನತ್ಯಾಜ್ಯ ನಿರ್ವಹಣೆ ಟೆಂಡರ್‌ನಲ್ಲಿ ಇಬ್ಬರು ಐಎಎಸ್ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದಿರುವ ಬೆನ್ನಲ್ಲೇ ನಗರಾಭಿವೃದ್ಧಿ ಇಲಾಖೆಯಿಂದ ಹೊರಡಿಸಲಾಗಿರುವ ಸಮಗ್ರ ಘನತ್ಯಾಜ್ಯ ನಿರ್ವಹಣಾ (ಐಎಸ್‌ಡಬ್ಲುಎಂ) ಟೆಂಡರ್‌ನಲ್ಲಿ ವ್ಯಾಪಕವಾಗಿ ಭ್ರಷ್ಟಾಚಾರ ನಡೆದಿರುವ ಕುರಿತು ಶಾಸಕ ಬಸನಗೌಡ ಪಾಟೀಲ ಯತ್ನಾಳ, ಲೋಕಾಯುಕ್ತ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಭೂಸ್ವಾಧೀನ, ಟೆಂಡರ್ ಪ್ರಕ್ರಿಯೆ ನಡೆಯುತ್ತಿರುವ ನಡುವೆಯೂ ಮುಖ್ಯ ಇಂಜಿನಿಯರ್‌ಗಳ ವರ್ಗಾವಣೆ ಮಾಡಲಾಗಿದೆ. ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿನ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆ ಉಲ್ಲಂಘಿಸಿ ನಿರ್ದಿಷ್ಟ ಸಂಸ್ಥೆಗೆ ಅನುಕೂಲವಾಗುವಂತೆ ಬಿಡ್ ಪರಿಷ್ಕರಣೆ ಮಾಡಲಾಗಿದೆ. ಹಾಗಾಗಿ, ಬೃಹತ್ ಟೆಂಡರ್‌ನಲ್ಲಿ ಆಗಿರುವ ಕಾರ್ಯವಿಧಾನದ ಲೋಪ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಬೇಕು ಎಂದು ಲೋಕಾಯುಕ್ತ ಮತ್ತು ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಅವರಿಗೆ ಶಾಸಕರು ಮನವಿ ಮಾಡಿದ್ದಾರೆ.
ಈ ಕುರಿತು ' ಎಕ್ಸ್' ನಲ್ಲಿ ಬರೆದುಕೊಂಡಿರುವ ಶಾಸಕರು, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ( ಜಿಬಿಎ)ಉತ್ತರ ಮತ್ತು ದಕ್ಷಿಣ ವ್ಯಾಪ್ತಿಯಲ್ಲಿ ಪುರಸಭೆ ಘನತ್ಯಾಜ್ಯ ವಿಲೇ ಮತ್ತು ಸಾಗಿಸುವ ಕುರಿತು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ ( ಬಿಎಸ್‌ಡಬ್ಲುಎಂಎಲ್) ಕರೆದಿರುವ ಸಮಗ್ರ ಘನತ್ಯಾಜ್ಯ ನಿರ್ವಹಣಾ ಪ್ಯಾಕೇಜ್ ಟೆಂಡರ್‌ನಲ್ಲಿ ಬೃಹತ್ ಅಕ್ರಮವಾಗಿದೆ. ನಿಯಮ ಉಲ್ಲಂಘಿಸಿ ರಾಮ್ಕಿ ಇಂಫ್ರಾಸ್ಟ್ರಕ್ಚರ್ ಪ್ರೈವೆಟ್ ಲಿಮಿಟೆಡ್‌ಗೆ ಟೆಂಡರ್ ನೀಡಲು ಅಧಿಕಾರಿಗಳು ಹುನ್ನಾರ ನಡೆಸಿದ್ದಾರೆ. ಈ ಬಗ್ಗೆ ಲೋಕಾಯುಕ್ತರಿಗೆ, ಮುಖ್ಯ ಕಾರ್ಯದರ್ಶಿಗಳಿಗೆ ಸ್ವ ವಿವರವಾಗಿ ಪತ್ರ ಬರೆದು ತನಿಖೆಗೆ ಒತ್ತಾಯಿಸಿದ್ದೇನೆ ಎಂದಿದ್ದಾರೆ.
ಟೆಂಡರ್‌ನಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡಿರುವ ಅಧಿಕಾರಿಗಳ ಪಾತ್ರ, ಕೆಟಿಪಿಪಿ ಉಲ್ಲಂಘನೆ ಆಗಿರುವುದು, ಹಣಕಾಸಿನ ಮಾರ್ಗಸೂಚಿಗಳು, ಯೋಜನಾ ವೆಚ್ಚ ಬದಲಾವಣೆ ಮತ್ತು ಬಿಡ್ಡರ್‌ನಲ್ಲಿ ಆಯ್ಕೆಯಾದ ಕಂಪನಿಗಳು ಸೇರಿ ಇತ್ಯಾದಿ ಅಂಶಗಳ ಕುರಿತು ತನಿಖೆ ನಡೆಸುವಂತೆ ಲೋಕಾಯುಕ್ತರಿಗೆ ಶಾಸಕರು ಮನವಿ ಮಾಡಿದ್ದಾರೆ.