ಜಾತಿ ರಾಜಕಾರಣ ತೊರೆದು ಪ್ರಜಾಪ್ರಭುತ್ವಕ್ಕೆ ಮಹತ್ವ ನೀಡಿದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ| ಕೃಷಿ ಕಾಯ್ದೆಗಳ ತಿದ್ದುಪಡಿ ಹಿಂಪಡೆಯಲು ಶಾಸಕ ಗಣೇಶ ಆಗ್ರಹ| ಗ್ಯಾಸ್, ಅಡುಗೆ ಎಣ್ಣೆ, ಪೆಟ್ರೋಲ್, ಡೀಸೆಲ್, ದರ ಹೆಚ್ಚಿಸುವ ಮೂಲಕ ಬಡಜನರ ಹೊಟ್ಟೆಯ ಮೇಲೆ ಹೊಡೆಯುವಂತಹ ಕಾರ್ಯ ಸರ್ಕಾರ ಮಾಡುತ್ತಿದೆ|
ಕಂಪ್ಲಿ(ಜ.21): ಬಿಜೆಪಿ ಸರ್ಕಾರ ಎಲ್ಲಿಯವರೆಗೂ ಅಧಿಕಾರದಲ್ಲಿರುತ್ತದೆಯೋ ಅಲ್ಲಿಯವರೆಗೆ ರೈತರಿಗೆ ಉಳಿಗಾಲವಿಲ್ಲ. ಜಾತಿ ರಾಜಕಾರಣ ತೊರೆದು ಪ್ರಜಾಪ್ರಭುತ್ವಕ್ಕೆ ಮಹತ್ವ ನೀಡಿದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯವೆಂದು ಶಾಸಕ ಜೆ.ಎನ್. ಗಣೇಶ ತಿಳಿಸಿದ್ದಾರೆ.
ಕೃಷಿ ಕಾಯ್ದೆಗಳ ತಿದ್ದುಪಡಿ ಹಿಂಪಡೆಯುವಂತೆ ಆಗ್ರಹಿಸಿ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿ, ರಾಷ್ಟ್ರಪತಿಗಳಿಗೆ ಬರೆದ ಮನವಿ ಪತ್ರವನ್ನು ಬುಧವಾರ ಇಲ್ಲಿನ ತಹಸೀಲ್ದಾರ್ ಗೌಸಿಯ ಬೇಗಮ್‌ಗೆ ನೀಡಿ ಮಾತನಾಡಿದರು.
ಕೇಂದ್ರ ಕೃಷಿ ಕಾಯ್ದೆ ತಿದ್ದುಪಡಿ ವಿರುದ್ಧ ರೈತ ಹೋರಾಟಕ್ಕೆ ಬೆಂಬಲಿಸಿ ರಾಜಭವನ ಮುತ್ತಿಗೆ ಹಾಕುವ ಕಾರ್ಯವನ್ನು ಡಿ.ಕೆ. ಶಿವಕುಮಾರ ಹಾಗೂ ಸಿದ್ದರಾಮಯ್ಯ ನೇತೃತ್ವದಲ್ಲಿ ಬುಧವಾರ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಇದಕ್ಕೆ ಬೆಂಬಲಿಸಲು ರಾಜ್ಯದ ಹಲವು ಜಿಲ್ಲೆಗಳಿಂದ ರಾಜಧಾನಿಗೆ ಬರುವ ರೈತರನ್ನು ಪೊಲೀಸರ ಮೂಲಕ ಸರ್ಕಾರ ತಡೆದಿದೆ ಎಂದು ಆರೋಪಿಸಿದ ಅವರು, ಭೂಸುಧಾರಣೆ ತಿದ್ದುಪಡಿ ಮೂಲಕ ಶ್ರೀಮಂತರು ರೈತರ ಭೂಮಿಯನ್ನು ಇರುವ ದರಕ್ಕಿಂತ ಅಧಿಕ ಹಣ ನೀಡಿ ಕೊಂಡುಕೊಳ್ಳುತ್ತಾರೆ. ಇದರಿಂದ ರೈತ ಆಗಿನ ಸಂದರ್ಭದಲ್ಲಿ ಮಾತ್ರ ತೃಪ್ತನಾಗುತ್ತಾನೆ. ಆದರೆ ಕೆಲ ದಿನಗಳ ನಂತರ ರೈತ ಭೂಮಿ ಇಲ್ಲದೆ ನಿರ್ಗತಿಕನಾಗಿ ಮಾಲೀಕನ ಮನೆಯಲ್ಲಿ ಕೂಲಿ ನಡೆಸುವ ಸಂದರ್ಭವನ್ನು ಸರ್ಕಾರ ಸೃಷ್ಟಿಸಲು ಹೊರಟಿದೆ ಎಂದು ಕಿಡಿಕಾರಿದರು.
undefined
ಬಳ್ಳಾರಿ: ಯುವತಿಯೊಂದಿಗೆ ಪರಾರಿ ಕೇಸ್ ಮಾಸುವ ಮುನ್ನವೇ ಮತ್ತೊಬ್ಬ ಫಾದರ್‌ನ ಕರ್ಮಕಾಂಡ..!
ಸರ್ಕಾರ ಬೆಂಬಲ ಬೆಲೆಯಡಿ ಖರೀದಿ ಕೇಂದ್ರಗಳನ್ನು ಯಾವ ಸಂದರ್ಭದಲ್ಲಿ ತೆರೆಯಬೇಕೆಂಬ ಪರಿಜ್ಞಾನ ಸಹ ಇಲ್ಲ. ರೈತರು ತಮ್ಮ ಶೇ. 70ರಷ್ಟು ಬೆಳೆ ಮಾರಿದ ನಂತರ ಖರೀದಿ ಕೇಂದ್ರ ತೆರೆಯುವುದರಿಂದ ರೈತರಿಗೆ ಪ್ರಯೋಜವಿಲ್ಲ. ಸರ್ಕಾರ ಕೂಡಲೇ ಎಚ್ಚೆತ್ತು ಕೃಷಿ ತಿದ್ದುಪಡಿ ಹಿಂಪಡೆಯಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ಅಂತ್ಯಗೊಳ್ಳುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡ ಅಬೀಬ್ ರೆಹಮನ್ ಮಾತನಾಡಿ, ಕೃಷಿ ಸೇರಿದಂತೆ ಇತರೆ ಕಾಯ್ದೆಗಳ ತಿದ್ದುಪಡಿಯಿಂದ ರೈತರನ್ನು ಹಾಗೂ ಗ್ಯಾಸ್, ಅಡುಗೆ ಎಣ್ಣೆ, ಪೆಟ್ರೋಲ್, ಡೀಸೆಲ್, ದರ ಹೆಚ್ಚಿಸುವ ಮೂಲಕ ಬಡಜನರ ಹೊಟ್ಟೆಯ ಮೇಲೆ ಹೊಡೆಯುವಂತಹ ಕಾರ್ಯವನ್ನು ಸರ್ಕಾರ ಮಾಡುತ್ತಿದೆ. ರೈತರ ಸಮಸ್ಯೆಯನ್ನು ಅರಿತು ಅವರ ಹಲವು ಕಾಯ್ದೆ ತಿದ್ದುಪಡಿಗಳನ್ನು ಹಿಂಪಡೆಯಬೇಕು ಎಂದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಟಗಿ ಬಸವರಾಜ್‌ಗೌಡ, ಪುರಸಭೆ ಸದಸ್ಯರಾದ ಉಸ್ಮಾನ್, ಪಿ. ಮೌಲ, ಲಡ್ಡು ಹೊನ್ನೂರ ವಲಿ, ತಾಪಂ ಉಪಾಧ್ಯಕ್ಷ ಓಬಳೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಜಗನ್ನಾಥ, ಪ್ರಮುಖರಾದ ಬಿ. ಜಾಫರ್, ಗುರು, ಶಶಿ, ರಾಮಕೃಷ್ಣ, ವೀರೇಶ, ಅಮಿತ್, ತಿಮ್ಮಯ್ಯ ಉಪಸ್ಥಿತರಿದ್ದರು.