ಅನೇಕ ಕಡೆ ಇನ್ನೂ ಜಾರಿಯಲ್ಲಿ ಇರುವ ದೇವದಾಸಿ ಪದ್ಧತಿ ಬಗ್ಗೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ. ದೇವದಾಸಿ ಮಾಡಿದಲ್ಲಿ ಕಠಿಣ ಕ್ರಮ ಎಚ್ಚರಿಕೆ ನೀಡಲಾಗಿದೆ.
ದಾವಣಗೆರೆ (ಜ.21): ದೇವದಾಸಿಯಂತಹ ಅನಿಷ್ಠ, ಅಮಾನವೀಯ ಪದ್ಧತಿ ಇಲ್ಲಿಗೆ ಮುಗಿಯಬೇಕು. ಇದು ನಿಮ್ಮ ಮುಂದಿನ ಪೀಳಿಗೆಗೆ ಮುಂದುವರಿಯಬಾರದು ಎಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ವಿ. ಟೆಂಗಳಿ ಹೇಳಿದರು.
ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಿಮ್ಮ ಮುಂದಿನ ಪೀಳಿಗೆಗೆ ಒಳ್ಳೆಯ ವಿದ್ಯೆ ನೀಡಿ, ದೇಶದ ಆಸ್ತಿಯಾಗಿ ಮಕ್ಕಳನ್ನು ರೂಪಿಸಿ ಎಂದರು.
ದೇವದಾಸಿ ಪದ್ಧತಿ ನಿರ್ಮೂಲನೆಗೆ ಈಗಾಗಲೇ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ, ಸ್ವಉದ್ಯೋಗ ಕೈಗೊಳ್ಳಲು .50 ಸಾವಿರ ಸಾಲ, .50 ಸಾವಿರ ಸಬ್ಸಿಡಿ ಸೌಲಭ್ಯ ನೀಡಲಾಗುತ್ತಿದೆ. 1985ರ ಕಾಯ್ದೆ ಪ್ರಕಾರ ಮುತ್ತು ಕಟ್ಟುವುದು, ದೇವರಿಗೆ ಬಿಡುವುದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧ. 2008-08ರಿಂದ ಮಾಜಿ ದೇವದಾಸಿ ಸಮೀಕ್ಷೆ ನಿಲ್ಲಿಸಲಾಗಿದೆ. ದೇವದಾಸಿ ಪದ್ಧತಿ ನಿರ್ಮೂಲನೆ ಆಗಬೇಕೆಂಬ ಸದುದ್ದೇಶದಿಂದ ಪುನರ್ ಸರ್ವೇ ನಿಲ್ಲಿಸಿದೆ. ರಾಜ್ಯದ 14 ಜಿಲ್ಲೆಗಳಲ್ಲಿ 44660 ಮಾಜಿ ದೇವದಾಸಿಯರಿದ್ದು, 24184 ಜನರಿಗೆ ವಸತಿ ಕಲ್ಪಿಸಲಾಗಿದೆ ಎಂದರು.
ಆ ವೈಷಮ್ಯ ಚಿರ ಯುವಕನ ಪ್ರಾಣವನ್ನೇ ಬಲಿ ಪಡೆಯಿತು .
ಅನಿಷ್ಠ ದೇವದಾಸಿ ಪದ್ಧತಿ ನಿರ್ಮೂಲನೆಗಾಗಿ ಹಾಗೂ ಮಾಜಿ ದೇವದಾಸಿಯರ ಮಕ್ಕಳ ಸ್ವಾವಲಂಬನೆಗೆ ನಿಗಮ ಹೊಸ ಯೋಜನೆ ರೂಪಿಸಿದೆ. 2-3 ಜಿಲ್ಲೆಗಳಲ್ಲಿ ಯೋಜನೆ ಜಾರಿಗೊಂಡಿದೆ. ದೇವದಾಸಿಯರ ದೇವಸ್ಥಾನಗಳ ಆವರಣದಲ್ಲಿ ತರಬೇತಿ ಕೇಂದ್ರ ಸ್ಥಾಪನೆ, ಮಾಜಿ ದೇವದಾಸಿಯರ ಮಕ್ಕಳಿಗೆ ಹೊಲಿಗೆ ಮತ್ತು ಕಂಪ್ಯೂಟರ್ ತರಬೇತಿ ನೀಡಲಾಗುವುದು. ರಾಯಚೂರು, ಕೊಪ್ಪಳ ಭಾಗದಲ್ಲಿ ಮಾಜಿ ದೇವದಾಸಿಯರ ಸಂಖ್ಯೆ ಹೆಚ್ಚಿದೆ. ಆ ಜಿಲ್ಲೆಗಳ ದೇವಸ್ಥಾನದ ಮುಂದೆ ತರಬೇತಿ ಕೇಂದ್ರ ಸ್ಥಾಪಿಸಲಾಗಿದೆ.
ಇಲ್ಲಿಯೂ ಮಾಜಿ ದೇವದಾಸಿ ಮಹಿಳೆಯರು ಆಸಕ್ತಿ ತೋರಿದರೆ ಕೇಂದ್ರವನ್ನು ನಿಗಮದಿಂದಲೇ ಸ್ಥಾಪಿಸುತ್ತೇವೆ ಎಂದ ಅವರು, ಮುತ್ತು ಕಟ್ಟಿಸುವುದು, ದೇವರಿಗೆ ಬಿಡುವುದು ಕಂಡುಬಂದರೆ ಸಮೀಪದ ಮಹಿಳಾ ಮತ್ತು ಮಕ್ಕಳ ಇಲಾಖೆ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಮನಕ್ಕೆ ತರಬೇಕು. ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.