ಶಾಸಕ ಭೀಮಾ ನಾಯ್ಕ ರಾಬಕೊ ಹಾಲು ಒಕ್ಕೂಟದ ಅಧ್ಯಕ್ಷಗಿರಿಗೆ ಕುತ್ತು

By Kannadaprabha NewsFirst Published Oct 7, 2020, 12:55 PM IST
Highlights

ಅಡವಿ ಆನಂದದೇವನಹಳ್ಳಿ ಹಾಲು ಒಕ್ಕೂಟದ ಸದಸ್ಯತ್ವ ರದ್ದು| ಹೊಸಪೇಟೆ ಉಪ ವಿಭಾಗದ ಸಹಕಾರ ಸಂಘಗಳ ನಿಬಂಧಕರ ಆದೇಶ| ಬಿಜೆಪಿ ನಾಯಕರ ಹುನ್ನಾರದಿಂದಾಗಿದೆ. ಮಾಜಿ ಶಾಸಕರೊಬ್ಬರು ನೇರವಾಗಿ ಚುನಾವಣೆ ಎದುರಿಸಲಾಗದೆ ಈ ರೀತಿಯ ಹುನ್ನಾರ ನಡೆಸಿದ್ದಾರೆ. ಹೈಕೋರ್ಟ್‌ ಮೊರೆ ಹೋಗುವೆ. ನ್ಯಾಯ ಸಿಗುವ ವಿಶ್ವಾಸವಿದೆ ಎಂದ ಭೀಮಾ ನಾಯ್ಕ| 

ಬಳ್ಳಾರಿ(ಅ.07): ಹಗರಿಬೊಮ್ಮನಹಳ್ಳಿ ತಾಲೂಕಿನ ಅಡವಿ ಆನಂದ ದೇವನಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘದ ಪ್ರಾಥಮಿಕ ಸದಸ್ಯತ್ವ ಕುರಿತಾದ ವಿವಾದ ತಾರ್ಕಿಕ ಅಂತ್ಯ ತಲುಪಿದ್ದು, ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ ಅವರ ಸದಸ್ಯತ್ವ ರದ್ದುಪಡಿಸಿ ಹೊಸಪೇಟೆ ಉಪ ವಿಭಾಗದ ಸಹಕಾರ ಸಂಘಗಳ ನಿಬಂಧಕರು ಮಂಗಳವಾರ ಮಹತ್ವದ ಆದೇಶ ಹೊರಡಿಸಿದ್ದಾರೆ.

ಶಾಸಕ ಭೀಮಾನಾಯ್ಕ ಪ್ರಾಥಮಿಕ ಸದಸ್ಯತ್ವದ ಅನರ್ಹತೆ ಕುರಿತು ಕೆ. ಬಸವರಾಜ್‌ ಮತ್ತು ಆರ್‌. ನಾಗನಗೌಡ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಸಹಕಾರ ಸಂಘಗಳ ಸಹಾಯಕ ನಿಬಂಧಕರು ಎತ್ತಿ ಹಿಡಿದಿದ್ದಾರೆ. ಇದರಿಂದ ರಾಬಕೊ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರಾಗಿದ್ದ ಭೀಮಾ ನಾಯ್ಕರವರು ಅಡವಿ ಆನಂದದೇವನಹಳ್ಳಿ ಗ್ರಾಮದ ಕಾಯಂ ನಿವಾಸಿಯಲ್ಲ ಎಂಬುದು ದೃಢಪಟ್ಟಂತಾಗಿದೆ.

ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959ರ ಪ್ರಕರಣ 16 ಮತ್ತು ಅಡವಿ ಆನಂದದೇವನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ ಉಪವಿಧಿ ಸಂ.17 ಪ್ರಕಾರ ಸದಸ್ಯತ್ವ ಪಡೆಯಲು ಅರ್ಹತೆ ಇರುವುದಿಲ್ಲ, ಸಂಘದಲ್ಲಿ ಹೊಂದಿರುವ ಸದಸ್ಯತ್ವ ತಕ್ಷಣವೇ ನಿಂತು ಹೋಗಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಈ ಸರ್ಕಾರಗಳು ಯಾವಾಗ ಇರುತ್ತೋ, ಯಾವಾಗ ಹೋಗುತ್ತೋ ಗೊತ್ತಿಲ್ಲ: ಹೊಸ ಬಾಂಬ್ ಸಿಡಿಸಿದ ಸಚಿವ

ಶಾಸಕ ಭೀಮಾನಾಯ್ಕ ಅವರು ಅಡವಿ ಆನಂದದೇವನಹಳ್ಳಿ ಹಾಲು ಉತ್ಪಾದಕರ ಸಂಘದ ಸದಸ್ಯತ್ವ ಪಡೆಯುವ ಮೂಲಕ ರಾಬಕೊ ಹಾಲು ಉತ್ಪಾದಕರ ಒಕ್ಕೂಟ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಪಡೆದರಲ್ಲದೆ, ಚುನಾವಣೆಯಲ್ಲಿ ಗೆದ್ದು ಒಕ್ಕೂಟದ ಅಧ್ಯಕ್ಷರಾದರು. ಕಳೆದ ಕಾಂಗ್ರೆಸ್‌ ಸರ್ಕಾರದಲ್ಲಿ ಕೆಎಂಎಫ್‌ ಅಧ್ಯಕ್ಷರಾಗಲು ಶತಾಯಗತಾಯ ಪ್ರಯತ್ನ ನಡೆಸಿದ್ದರು.

ನ್ಯಾಯಾಲಯದ ಮೊರೆ ಹೋಗುವೆ...

ಅಡವಿಆನಂದ ದೇವನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯತ್ವ ರದ್ದು ಕುರಿತು ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿದ ಶಾಸಕ ಭೀಮಾನಾಯ್ಕ ಅವರು, ಇದು ಬಿಜೆಪಿ ನಾಯಕರ ಹುನ್ನಾರದಿಂದಾಗಿದೆ. ಮಾಜಿ ಶಾಸಕರೊಬ್ಬರು ನೇರವಾಗಿ ಚುನಾವಣೆ ಎದುರಿಸಲಾಗದೆ ಈ ರೀತಿಯ ಹುನ್ನಾರ ನಡೆಸಿದ್ದಾರೆ. ಹೈಕೋರ್ಟ್‌ ಮೊರೆ ಹೋಗುವೆ. ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಹೇಳಿದ್ದಾರೆ. 
 

click me!