ಗಂಧದಗುಡಿ ಬಿಡುಗಡೆ: ಕಪ್ಪು ಚಿರತೆ ದತ್ತು ಪಡೆದ ಶಾಸಕ ಹರ್ಷವರ್ಧನ್‌

By Kannadaprabha News  |  First Published Oct 28, 2022, 8:04 PM IST

ಚಲನಚಿತ್ರ ನಟ ಡಾ. ಪುನೀತ್‌ ರಾಜ್‌ಕುಮಾರ್‌ ಅಭಿನಯದ ಗಂದಧಗುಡಿ ಚಲನಚಿತ್ರದ ಬಿಡುಗಡೆ ಹಾಗೂ ದಲಿತ್‌ ಪ್ಯಾಂಥರ್ಸ್‌ ಸಂಘಟನೆಯ ಸ್ಮರಣಾರ್ಥ ಶಾಸಕ ಬಿ.ಹರ್ಷವರ್ಧನ್‌ ನಂಜನಗೂಡಿನ ಜನತೆಯ ಹೆಸರಿನಲ್ಲಿ ಮೈಸೂರು ಮೃಗಾಲಯದ ಕಪ್ಪು ಚಿರತೆಯನ್ನು ದತ್ತು ಸ್ವೀಕರಿಸಿದ್ದಾರೆ. 


ನಂಜನಗೂಡು (ಅ.28): ಚಲನಚಿತ್ರ ನಟ ಡಾ. ಪುನೀತ್‌ ರಾಜ್‌ಕುಮಾರ್‌ ಅಭಿನಯದ ಗಂದಧಗುಡಿ ಚಲನಚಿತ್ರದ ಬಿಡುಗಡೆ ಹಾಗೂ ದಲಿತ್‌ ಪ್ಯಾಂಥರ್ಸ್‌ ಸಂಘಟನೆಯ ಸ್ಮರಣಾರ್ಥ ಶಾಸಕ ಬಿ. ಹರ್ಷವರ್ಧನ್‌ ನಂಜನಗೂಡಿನ ಜನತೆಯ ಹೆಸರಿನಲ್ಲಿ ಮೈಸೂರು ಮೃಗಾಲಯದ ಕಪ್ಪು ಚಿರತೆಯನ್ನು ದತ್ತು ಸ್ವೀಕರಿಸಿದ್ದಾರೆ. 2022ರ ಅಕ್ಟೋಬರ್‌ 28ರಿಂದ ಮುಂದಿನ ವರ್ಷ 2023ರ ಅಕ್ಟೋಬರ್‌ 27ರವರೆಗೆ ಬ್ಲಾಕ್‌ ಪ್ಯಾಂಥರ್‌ (ಕಪ್ಪುಚಿರತೆ) ದತ್ತು ಪಡೆದಿರುವ ಅವರು ಈ ಸಂಬಂಧ ಮೃಗಾಲಯ ಪ್ರಾಧಿಕಾರಕ್ಕೆ 50 ಸಾವಿರ ರು. ಗಳ ಚೆಕ್‌ ಪಾವತಿಸಿದ್ದಾರೆ.

ಈ ಕುರಿತು ಗುರುವಾರ ಮಾಹಿತಿ ನೀಡಿದ ಅವರು, ಚಿತ್ರನಟ ಡಾ. ಪುನೀತ್‌ ರಾಜ್‌ಕುಮಾರ್‌ ಕನ್ನಡನಾಡು ನುಡಿಯ ಹಿರಿಮೆಯನ್ನು ಸಾರುವ ಜೊತೆಗೆ ಅಮೂಲ್ಯ ವನ್ಯಜೀವಿ ಹಾಗೂ ಪ್ರಕೃತಿ ಸಂಪತ್ತಿನ ಸಂರಕ್ಷಣೆ ಬಗ್ಗೆ ಅಪಾರ ಕಾಳಜಿ ತೋರಿದ್ದರು. ಅವರು ಅಭಿನಯಿಸಿರುವ ಕೊನೆಯ ಚಿತ್ರ ಗಂದಧಗುಡಿ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

Tap to resize

Latest Videos

ಕಾಂಗ್ರೆಸ್‌ ಮುಖಂಡ ಬಾಬು ಬಿಜೆಪಿ ಸೇರ್ಪಡೆಗೆ ನಿರ್ಧಾರ

ಇದರ ಸವಿ ನೆನಪಿನಲ್ಲಿ ಹಾಗೂ 70ರ ದಶಕದಲ್ಲಿ ಮಹಾರಾಷ್ಟ್ರದಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಚಿಂತನೆಗಳಿಂದ ಪ್ರೇರೇಪಿತರಾಗಿದ್ದ ಯುವ ಜನರು ದಲಿತ ಪ್ಯಾಂಥರ್‌ ಮೂವ್ಮೆಂಟ್‌(ಡಿಪಿಎಂ) ಪ್ರಾರಂಭಿಸಿ ದಲಿತರ ಮೇಲಿನ ದೌರ್ಜನ್ಯಗಳ ವಿರುದ್ಧ ಪ್ರತಿರೋಧ ತೋರಿ ಭಾರತದ ರಾಜಕೀಯದಲ್ಲಿ ಮಹತ್ವದ ಹೆಜ್ಜೆ ಗುರುತು ಮೂಡಿಸಿದ್ದರು, ಹೀಗಾಗಿ ದಲಿತ ಪ್ಯಾಂಥರ್‌ ಸಂಘಟನೆಯ ಸ್ಮರಣಾರ್ಥ ಮೈಸೂರು ಮೃಗಾಲಯದಲ್ಲಿ ಬ್ಲಾಕ್‌ ಪ್ಯಾಂಥರ್‌ (ಕಪ್ಪುಚಿರತೆ) ಪ್ರಾಣಿಯನ್ನು ನಂಜನಗೂಡು ವಿಧಾನಸಭಾ ಕ್ಷೇತ್ರದ ಜನರ ಹೆಸರಿನಲ್ಲಿ ದತ್ತು ಸ್ವೀಕರಿಸಿದೆ ಎಂದು ತಿಳಿಸಿದರು.

ಚಿರತೆ ದತ್ತು ನವೀಕರಿಸಿದ ವೇದಾ ಕೃಷ್ಣಮೂರ್ತಿ: ಭಾರತ ಕ್ರಿಕೆಟ್‌ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಅವರು ಶ್ರೀ ಚಾಮರಾಜೇಂದ್ರ ಮೃಗಾಲಯದ ಚಿರತೆ (ಭಾವನ) ದತ್ತು ಸ್ವೀಕರವನ್ನು ನವೀಕರಿಸಿಕೊಂಡಿದ್ದಾರೆ. 50 ಸಾವಿರ ಪಾವತಿಸಿರುವ ಅವರು 2023ರ ಜೂ. 22 ರವರೆಗೆ ದತ್ತು ನವೀಕರಿಸಿಕೊಂಡಿದ್ದು, ಪ್ರಾಣಿಗಳ ಬಗ್ಗೆ ಅವರು ತೋರಿಸುತ್ತಿರುವ ಪ್ರೀತಿ, ಕಾಳಜಿ ಇತರರಿಗೆ ಮಾದರಿಯಾಗಿದ್ದು, ಇವರ ಕಾಳಜಿ ಹೀಗೆಯೇ ಮುಂದುವರೆಯಲಿ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್‌ ಕುಲಕರ್ಣಿ ಹೇಳಿದ್ದಾರೆ.

'ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ ವಿಜಯ ಪತಾಕೆ ಹಾರಿಸುವುದು ಖಚಿತ'

ಚಿರತೆ ದತ್ತು ಸ್ವೀಕರಿಸಿದ ನಟ ಚಿಕ್ಕಣ್ಣ: ಚಲನಚಿತ್ರ ಹಾಸ್ಯನಟ ಚಿಕ್ಕಣ್ಣ ಮತ್ತು ಸ್ನೇಹಿತರು ಮೈಸೂರಿನ ಶ್ರೀಚಾಮರಾಜೇಂದ್ರ ಮೃಗಾಲಯದಲ್ಲಿ ವಿವಿಧ ಪ್ರಾಣಿ, ಪಕ್ಷಿಗಳನ್ನು ದತ್ತು ಸ್ವೀಕರಿಸಿದ್ದಾರೆ. ಚಿಕ್ಕಣ್ಣ .35 ಸಾವಿರ ಪಾವತಿಸಿ ಚಿರತೆ, ಅವರ ಸ್ನೇಹಿತರಾದ ಸಿದ್ದೇಗೌಡ 3500 ಪಾವತಿಸಿ ಕಾಳಿಂಗ ಸರ್ಪ, ಎಂ.ಮೋಹನಕುಮಾರ್‌ 17500 ಪಾವತಿಸಿ 5 ಬಿಳಿ ನವಿಲು, ಡೆನ್‌ ತಿಮ್ಮಯ್ಯ 14 ಸಾವಿರ ಪಾವತಿಸಿ ನಾಲ್ಕು ನವಿಲು, ಯಶಸ್‌ ಸೂರ್ಯ 13500 ಪಾವತಿಸಿ ಕಾಳಿಂಗ ಸರ್ಪ ಮತ್ತು ಹಸಿರು ಅನಕೊಂಡ ಹಾವು, ಬಿ.ಎಸ್‌.ಲೋಕೇಶ್‌ 3,500 ಪಾವತಿಸಿ ಕಾಳಿಂಗ ಸರ್ಪ ದತ್ತು ಸ್ವೀಕರಿಸಿದ್ದಾರೆ. ಪ್ರಾಣಿ ಸಂರಕ್ಷಣೆಗೆ ನೀಡಿರುವ ಈ ಸತ್ಕಾರ್ಯ ಮತ್ತು ಬೆಂಬಲಕ್ಕೆ ಮೃಗಾಲಯ ಅಭಿನಂದಿಸಿದ್ದು, ಇತರೆ ವ್ಯಕ್ತಿಗಳು ಮತ್ತು ಸಂಘ ಸಂಸ್ಥೆಗಳಿಗೆ ಇದು ಪ್ರೇರಕವಾಗಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್‌ ಎಂ.ಕುಲಕರ್ಣಿ ತಿಳಿಸಿದ್ದಾರೆ.

click me!