ಕೊರಟಗೆರೆಯಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗ: ರೈತರಲ್ಲಿ ಆತಂಕ

By Kannadaprabha NewsFirst Published Oct 28, 2022, 7:46 PM IST
Highlights

ಒಂದೆಡೆ ಮಳೆ ಆರ್ಭಟದಿಂದ ಬೆಳೆ ನಷ್ಟಮತ್ತು ಮೇವಿನ ತೊಂದರೆ ಅನುಭವಿಸುತ್ತಿರುವ ತಾಲೂಕಿನ ರೈತರಿಗೆ ಗಾಯದ ಮೇಲೆ ಬರೆ ಎಂಬಂತೆ ಜೀವನಾಡಿ ರಾಸುಗಳಲ್ಲಿ ವ್ಯಾಪಕವಾಗಿ ಹರಡುತ್ತಿರುವ ಚರ್ಮಗಂಟು ರೋಗ ಕಾಣಿಸಿಕೊಂಡಿರುವುದು ತಾಲೂಕಿನ ರೈತಾಪಿ ವರ್ಗಕ್ಕೆ ಮತ್ತೊಂದು ಆಘಾತವಾಗಿದೆ. 

ಜಿ.ಎಲ್‌.ಸುರೇಶ್‌

ಕೊರಟಗೆರೆ (ಅ.28): ಒಂದೆಡೆ ಮಳೆ ಆರ್ಭಟದಿಂದ ಬೆಳೆ ನಷ್ಟಮತ್ತು ಮೇವಿನ ತೊಂದರೆ ಅನುಭವಿಸುತ್ತಿರುವ ತಾಲೂಕಿನ ರೈತರಿಗೆ ಗಾಯದ ಮೇಲೆ ಬರೆ ಎಂಬಂತೆ ಜೀವನಾಡಿ ರಾಸುಗಳಲ್ಲಿ ವ್ಯಾಪಕವಾಗಿ ಹರಡುತ್ತಿರುವ ಚರ್ಮಗಂಟು ರೋಗ ಕಾಣಿಸಿಕೊಂಡಿರುವುದು ತಾಲೂಕಿನ ರೈತಾಪಿ ವರ್ಗಕ್ಕೆ ಮತ್ತೊಂದು ಆಘಾತವಾಗಿದೆ. 

ಕೊರಟಗೆರೆ ಪಶುಪಾಲನಾ ಇಲಾಖೆಯ ಮಾಹಿತಿಯಂತೆ ಅ.22ರ ಮಾಹಿತಿ ಪ್ರಕಾರ ರೋಗ ಕಂಡುಬಂದ ಗ್ರಾಮಗಳ ಒಟ್ಟು ಸಂಖ್ಯೆ 51, ರೋಗಕ್ಕೆ ತುತ್ತಾದ ಜಾನುವಾರುಗಳ ಸಂಖ್ಯೆ 100, ಚಿಕಿತ್ಸೆಯಿಂದ ಗುಣಮುಖ ಹೊಂದಿದ ಜಾನುವಾರುಗಳ ಸಂಖ್ಯೆ 26, ರೋಗದಿಂದ ಮರಣ ಹೊಂದಿದ ಜಾನುವಾರುಗಳ ಸಂಖ್ಯೆ 4, ಇದುವರೆಗೆ ಐಎಎಚ್‌ ಹಾಗೂ ವಿ.ಬಿ ಯಿಂದ ಸರಬರಾಜಾದ ಲಸಿಕೆ ಪ್ರಮಾಣ ಸಂಖ್ಯೆ 7000, ಲಸಿಕೆ ಹಾಕಿದ ಜಾನುವಾರುಗಳ ಸಂಖ್ಯೆ 5899 ಆಗಿದೆ ಎಂದು ತಾಲೂಕಿನ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ.ಸಿದ್ದನಗೌಡ ಕನ್ನಡಪ್ರಭಗೆ ಮಾಹಿತಿ ನೀಡಿದ್ದಾರೆ.

ಅ.30ರಂದು ಬಿಜೆಪಿ ಓಬಿಸಿ ಸಮಾವೇಶ: ಶಾಸಕ ತೇಲ್ಕೂರ

ರೋಗದ ಲಕ್ಷಣಗಳು ಕಂಡು ಬರುವುದು ಹೇಗೆ?: ಅತಿಯಾದ ಜ್ವರ, ಕಣ್ಣುಗಳಿಂದ ನೀರು ಸೋರುವುದು, ನಿಶಕ್ತಿ, ಕಾಲುಗಳಲ್ಲಿ ಬಾವು ಮತ್ತು ಕುಂಟುವುದು, ಜಾನುವಾರುಗಳ ಚರ್ಮದ ಮೇಲೆ 2-5 ಸೆ.ಮೀ.ನಷ್ಟುಅಗಲವಿರುವ ಗಂಟು ಕಾಣಿಸಿಕೊಂಡು ನಂತರ ಒಡೆದು ಗಾಯವಾಗಿ ನೋವುಂಟಾಗುತ್ತದೆ. ಸೂಕ್ತ ಚಿಕಿತ್ಸೆ ನೀಡದಿದ್ದಲ್ಲಿ ನೊಣಗಳಿಂದ ಹುಳುಗಳು ಬಿದ್ದು ಹುಣ್ಣಾಗುತ್ತದೆ. ಹಾಲಿನ ಇಳುವರಿ ಕಡಿಮೆಯಾಗುವುದು, ಕೆಲಸದ ಸಾಮರ್ಥ್ಯ ಕುಂಠಿತವಾಗುತ್ತದೆ. ಕರುಗಳು ತೀವ್ರವಾಗಿ ಬಳಲಿ ಸಾವಿಗೀಡಾಗಬಹುದು. ಮಿಶ್ರತಳಿ, ಜರ್ಸಿ, ಎಚ್‌ಎಫ್‌, ರಾಸುಗಳು ಹಾಗೂ ಕರುಗಳು ಈ ರೋಗದಿಂದ ಹೆಚ್ಚು ಬಳಲುತ್ತವೆ.

ರೋಗ ಹರಡುವುದು ಹೇಗೆ?: ಸೊಳ್ಳೆ, ನೊಣ ಹಾಗೂ ವಿವಿಧ ಕಚ್ಚುವ ಕೀಟಗಳಿಂದ, ಕಲುಷಿತಗೊಂಡ ನೀರು ಹಾಗೂ ಆಹಾರದಿಂದ, ಜಾನುವಾರುಗಳ ನೇರ ಸಂಪರ್ಕದಿಂದ ರೋಗ ಹರಡುವಿಕೆ ಪ್ರಮಾಣ ಶೇ.10- 20ರಷ್ಟುಹಾಗೂ ರೋಗದ ಸಾವಿನ ಪ್ರಮಾಣ 1-5 ರಷ್ಟುಇರುತ್ತದೆ.

ಈ ರೋಗಕ್ಕೆ ಚಿಕಿತ್ಸೆ ಹಾಗೂ ತಡೆಗಟ್ಟುವುದು ಹೇಗೆ?: ಈ ರೋಗವು ವೈರಾಣು ರೋಗವಾಗಿರುವುದರಿಂದ ನಿರ್ದಿಷ್ಟವಾದ ಚಿಕಿತ್ಸೆ ಇರುವುದಿಲ್ಲ. ಜಾನುವಾರುಗಳಿಗೆ ರೋಗದ ಲಕ್ಷಣಗಳಿಗೆ ತಕ್ಕಂತೆ ಚಿಕಿತ್ಸೆ ನೀಡಬೇಕಾಗುತ್ತದೆ. ದೇಹವನ್ನು ತಂಪಾಗಿಸಲು ಮೈಮೇಲೆ ಹಸಿ ಬಟ್ಟೆಹಾಕುವುದು ಹಾಗೂ ತಂಪಾದ ಜಾಗದಲ್ಲಿ ಕಟ್ಟುವುದು, ಚರ್ಮದ ಮೇಲಿನ ಗಾಯಗಳಿಗೆ ಪೊಟ್ಯಾಸಿಯಂ ಪರಮಾಂಗನೇಟ್‌ ದ್ರಾವಣದಿಂದ ತೊಳೆದು ಐಯೋಡಿನ್‌ ದ್ರಾವಣ, ಮುಲಾಮು ಹಾಗೂ ಬೇವಿನ ಎಣ್ಣೆ ಲೇಪಿಸಬೇಕು, ರೋಗ ಹರಡುವುದನ್ನು ತಡೆಯಲು ರೋಗಗ್ರಸ್ತ ಜಾನುವಾರುಗಳನ್ನು ಬೇರ್ಪಡಿಸಬೇಕು.

ರೋಗಗ್ರಸ್ತ ಜಾನುವಾರುಗಳಿಗೆ ಉಪಯೋಗಿಸಿದ ಎಲ್ಲಾ ಸಾಮಾಗ್ರಿಗಳನ್ನು ಸ್ವಚ್ಛಗೊಳಿಸಬೇಕು, ಹಸಿರು ಮೇವು, ಪೌಷ್ಠಿಕ ಆಹಾರ ಹಾಗೂ ಲವಣ ಮಿಶ್ರಣ ನೀಡಬೇಕು, ಕುಡಿಯುವ ನೀರಿನಲ್ಲಿ ಬೆಲ್ಲ.ಉಪ್ಪು ಹಾಗೂ ಅಡುಗೆ ಸೋಡಾ ಹಾಕಿ ದಿನಕ್ಕೆ 6 ಬಾರಿ ಕುಡಿಸಬೇಕು , ಕೀಟಗಳ ಹಾವಳಿ ತಪ್ಪಿಸಲು ಹಸಿಬೇವಿನ ಸೊಪ್ಪಿನ ಹೊಗೆ ಹಾಕಬೇಕು, ಕೊಟ್ಟಿಗೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಬೇಕು, ರೋಗಗ್ರಸ್ತ ಜಾನುವಾರು ಮರಣ ಹೊಂದಿದಲ್ಲಿ ಆಳವಾದ ಗುಂಡಿಯಲ್ಲಿ ಹೂಳಬೇಕು.

ತೆಂಗಿನ ಚಿಪ್ಪಿನ ಸೌಟ್‌ನಲ್ಲಿ ಆಹಾರ ವಿತರಣೆ; ಪ್ರತಿಭಟನೆ

ಚರ್ಮಗಂಟು ರೋಗ ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಕ್ಯಾಪ್ರಿಫಾಕ್ಸ್‌ ಎಂಬ ವೈರಾಣುವಿನಿಂದ ಬರುತ್ತದೆ. ದನ, ಎಮ್ಮೆಗಳಲ್ಲಿ ಅದರಲ್ಲೂ ಮಿಶ್ರತಳಿ ರಾಸುಗಳಲ್ಲಿ, ಕರುಗಳಲ್ಲಿ ಅತಿ ಹೆಚ್ಚಾಗಿ ಹಾಗೂ ತೀಕ್ಷ್ಣವಾಗಿ ಕಾಣಿಸಿಕೊಳ್ಳುತ್ತದೆ. ಈ ರೋಗವು ಮುಖ್ಯವಾಗಿ ದನಗಳಿಗೆ ಕಚ್ಚುವ ಕೀಟಗಳಿಂದ (ಸೊಳ್ಳೆ ,ನೊಣ, ಉಣ್ಣೆ ) ಬಹುಬೇಗ ಹರಡುತ್ತದೆ. ಮಳೆಗಾಲದಲ್ಲಿ ಮತ್ತು ನಂತರದ ದಿನಗಳಲ್ಲಿ ಹೆಚ್ಚಾಗಿ ಈ ರೋಗವು ಪಸರಿಸುತ್ತದೆ.
-ಡಾ.ಸಿದ್ದನಗೌಡ, ಪಶು ಇಲಾಖೆಯ ಸಹಾಯಕ ನಿರ್ದೇಶಕರು, ಕೊರಟಗೆರೆ.

click me!