ಕಂಪ್ಲಿ: ನಾಪತ್ತೆಯಾಗಿದ್ದ ಮಗು ಬರೋಬ್ಬರಿ 3 ವರ್ಷಗಳ ಬಳಿಕ ಪ್ರತ್ಯಕ್ಷ!

By Web Desk  |  First Published Nov 23, 2019, 9:09 AM IST

ದೇವಸಮುದ್ರ ಗ್ರಾಮದ ಬಲಕುಂದೆಪ್ಪ ತಾತನ ದೇವಸ್ಥಾನ ಬಳಿ ನಾಪತ್ತೆಯಾಗಿದ್ದ ಬಾಲಕಿ| ಗುರುವಾರ ರಾತ್ರಿ ಅದೇ ಸ್ಥಳದಲ್ಲಿ ಪತ್ತೆ|ಮಗು ಒಂದೊಂದು ಬಾರಿ ಒಂದೊಂದು ವಿವರ ನೀಡುತ್ತಿದ್ದಾಳೆ|ಎಲ್ಲಿಗೆ ಮಗುವನ್ನು ಅಪಹರಿಸಿ ಕರೆದೊಯ್ಯಲಾಗಿತ್ತು| ಮರಳಿ ಬಿಡಲು ಕಾರಣವೇನೆಂಬ ಬಗ್ಗೆ ಮಾಹಿತಿ ಲಭಿಸಿಲ್ಲ|


ಕಂಪ್ಲಿ(ನ.23): ತಾಯಿ ತವರು ಮನೆಗೆ ಹೆರಿಗೆಗೆ ಹೋದ ಸಂದರ್ಭದಲ್ಲಿ ತಾಯಿಯ ಜೊತೆಯೇ ತೆರಳಿದ್ದ 2 ವರ್ಷದ ಮಗು ದಿಢೀರನೆ ನಾಪತ್ತೆಯಾಗಿದ್ದು, ಮೂರು ವರ್ಷದ ಬಳಿಕ ಗುರುವಾರ ಸಂಜೆ ಪತ್ತೆಯಾಗಿದ್ದಾಳೆ.
ತಾಲೂಕಿನ ದೇವಸಮುದ್ರ ಗ್ರಾಮದ ಬಲಕುಂದೆಪ್ಪ ತಾತನ ದೇವಸ್ಥಾನ ಬಳಿ ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಈ ಮಗು ಪ್ರತ್ಯಕ್ಷಳಾಗಿದ್ದಾಳೆ.

ದೇವಲಾಪುರ ಗ್ರಾಮದ ಗುಬಾಜಿ ಯಲ್ಲಪ್ಪನ ಪತ್ನಿ ಮಲ್ಲಮ್ಮ 3 ವರ್ಷಗಳ ಹಿಂದೆ ತನ್ನ 2ನೇ ಮಗುವಿನ ಹೆರಿಗೆಗೆಂದು ತವರು ಮನೆ ದೇವಸಮುದ್ರ ಗ್ರಾಮಕ್ಕೆ ಬಂದಿದ್ದ ಸಂದರ್ಭದಲ್ಲಿ 2 ವರ್ಷ, 2 ತಿಂಗಳ ಚೊಚ್ಚಲ ಹೆಣ್ಣು ಮಗು ಉಮಾದೇವಿ ನಾಪತ್ತೆಯಾಗಿದ್ದಳು. ಈ ಕುರಿತು ಆಗ ಕಂಪ್ಲಿ ಪೊಲೀಸ್‌ ಠಾಣೆಗೆ ದೂರು ನೀಡಲಾಗಿತ್ತು.

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಗುರುವಾರ ರಾತ್ರಿ ಅಪರಿಚಿತರು ದೇವಸ್ಥಾನದ ಬಳಿ ಮಗುವನ್ನು ಬಿಟ್ಟು ಹೋಗಿದ್ದು, ಗ್ರಾಮಸ್ಥರು ಬಾಲಕಿ ಧರಿಸಿದ್ದ ಉಡುಪಿನ ಮೇಲೆ ಪಿನ್‌ ಮಾಡಿರುವ 100 ನೋಟು, ಚೀಟಿ ಮತ್ತು ಕೈನಲ್ಲಿ ತಿಂಡಿ, ತಿನಿಸು ಇರುವುದನ್ನು ಗಮನಿಸಿ ಆಕೆಯನ್ನು ವಿಚಾರಿಸಿದ್ದಾರೆ. ಆಗ ಬಾಲಕಿ ನಾನು ದೀಪಿಕಾ ಹಿರೇಮಠ, ತಾಯಿ ವೀಣಾ, ಊರು ಗಂಗಾವತಿ ಎಂದು ಹೇಳಿದ್ದಾಳೆ. 

ತರುವಾಯ ಗ್ರಾಮಸ್ಥರು ಬಾಲಕಿ ಎದೆ ಮೇಲಿದ್ದ ಚೀಟಿಯನ್ನು ನೋಡಿದಾಗ, ಅದರಲ್ಲಿ ಈ ಮಗುವನ್ನು ಇದೇ ಗ್ರಾಮದಿಂದ ಮೂರು ವರ್ಷದ ಹಿಂದೆ ಕರೆದುಕೊಂಡು ಹೋಗಿದ್ದಾಗಿ ಮತ್ತು ಮಗುವನ್ನು ತಂದೆ-ತಾಯಿಯಿಂದ ದೂರ ಮಾಡಬಾರದು ಎಂದು ಮರಳಿ ಬಿಟ್ಟು ಹೋಗಿರುವುದಾಗಿ ಮಾಹಿತಿ ಇತ್ತು. ಅಲ್ಲಿ ಕಳೆದುಹೋದ ಮಕ್ಕಳ ಕುರಿತು ಗ್ರಾಮಸ್ಥರು ಪರಿಶೀಲಿಸಿದಾಗ ದೇವಲಾಪುರ ಗ್ರಾಮದ ಗುಬಾಜಿ ಯಲ್ಲಪ್ಪನ ಮಗಳು ಕಾಣೆಯಾಗಿದ್ದು ತಿಳಿದು ಬಂದಿದೆ. ನಂತರ ಈ ಬಾಲಕಿಯ ಬಗ್ಗೆ ದೇವಸಮುದ್ರ ಗ್ರಾಮದ ತಾಯಿಯ ತವರು ಮನೆಯವರಿಗೆ ವಿಷಯ ತಿಳಿದು ಮಗುವನ್ನು ಕರೆದುಕೊಂಡು ಹೋಗಿದ್ದಾರೆ.

ನಂತರ ದೇವಲಾಪುರ ಗ್ರಾಮದ ಈ ಬಾಲಕಿಯ ತಂದೆ ಗುಬಾಜಿ ಯಲ್ಲಪ್ಪ ದೇವಸಮುದ್ರಕ್ಕೆ ಆಗಮಿಸಿ, ಮಗುವನ್ನು ತಮ್ಮ ಗ್ರಾಮಕ್ಕೆ ಕರೆದುಕೊಂಡು ಹೋಗಿದ್ದಾರೆ. ನನ್ನ ಹೆಂಡತಿ ಮಲ್ಲಮ್ಮ 2016ರಲ್ಲಿ ತನ್ನ ತವರು ಮನೆ ದೇವಸಮುದ್ರ ಗ್ರಾಮಕ್ಕೆ ಹೆರಿಗೆಗೆ ಹೊಗಿದ್ದ ಸಂದರ್ಭದಲ್ಲಿ ನನ್ನ ಮಗಳು ಉಮಾದೇವಿ ಕಳೆದು ಹೋಗಿದ್ದಳು. ಆ ಸಂದರ್ಭದಲ್ಲಿ ಕಂಪ್ಲಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದೆವು. ನಂತರ ಮಗಳಿಗಾಗಿ ಹುಡುಕಾಟ ನಡೆಸಿದೆವು. ಆದರೆ, ಆಗ ಮಗಳು ಸಿಗಲಿಲ್ಲ. ಈಗ ಸಿಕ್ಕಿದ್ದಾಳೆ. ಈ ಕುರಿತು ಕಂಪ್ಲಿ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದೇವೆ ಎಂದು ಗುಬಾಜಿ ಯಲ್ಲಪ್ಪ ತಿಳಿಸಿದ್ದಾರೆ.

ಈ ಮಗು ಒಂದೊಂದು ಬಾರಿ ಒಂದೊಂದು ವಿವರ ನೀಡುತ್ತಿದ್ದಾಳೆ. ಒಮ್ಮೆ ಗಂಗಾವತಿಯಲ್ಲಿದ್ದೆ ಎಂದರೆ, ಮತ್ತೊಮ್ಮೆ ಬಳ್ಳಾರಿ ಎನ್ನುತ್ತಾಳೆ, ಮಗದೊಮ್ಮೆ ದಾವಣಗೆರೆ ಎನ್ನುತ್ತಿದ್ದಾಳೆ. ಆದರೆ ತನ್ನ ತಾಯಿ ಮಾತ್ರ ವೀಣಾ ಎಂದು ಹೇಳುತ್ತಿದ್ದು, ಮನೆಯವರು ವಿಚಾರಿಸುತ್ತಿದ್ದಾರೆ. ಗಾಬರಿಯಾಗಿರುವ ಮಗು ಗಳಿಗೆಗೊಂದು ಉತ್ತರ ನೀಡುತ್ತಿರುವುದರಿಂದ ನಿಖರವಾಗಿ ಎಲ್ಲಿಗೆ ಮಗುವನ್ನು ಅಪಹರಿಸಿ ಕರೆದೊಯ್ಯಲಾಗಿತ್ತು. ಇದೀಗ ಮರಳಿ ಬಿಡಲು ಕಾರಣವೇನೆಂಬ ಬಗ್ಗೆ ಮಾಹಿತಿ ಲಭಿಸಿಲ್ಲ. ಪೊಲೀಸರು ಸಹ ಈ ಕುರಿತು ವಿಚಾರಣೆ ಮಾಡಿಲ್ಲ ಎನ್ನಲಾಗಿದೆ.
 

click me!