ಪಾರ್ಕ್ ಗೆ ಸೋವೇನಹಳ್ಳಿಯ 27 ಎಕರೆ ಜಮೀನು ಬಳಕೆ| ಮಹಿಳಾ ಸ್ವಸಹಾಯ ಸಂಘಗಳ ಮೂಲಕ ನಿರ್ವಹಣೆ| ಇಕೋ ಪಾರ್ಕ್ ನಲ್ಲಿ ವನ್ಯ ಜೀವಿಗಳ ಆಕೃತಿ, ಸುಂದರ ಪರಿಸರ ನಿರ್ಮಾಣ| ತೋಟಗಾರಿಕೆಯಿಂದ ಗುಲಾಬಿ, ಮಲ್ಲಿಗೆ, ಕರಡಿ, ನೀರು ನಾಯಿ, ಕಲ್ಯಾಣಿ ನಿರ್ಮಾಣ| ಎರಡು ಕಡೆಗಳಲ್ಲಿ ನೀರಿನ ಟ್ಯಾಂಕ್ ನಿರ್ಮಾಣ
ಚಂದ್ರು ಕೊಂಚಿಗೇರಿ
ಹೂವಿನಹಡಗಲಿ(ನ.23): ರಾಜ್ಯದಲ್ಲೇ ಮೊದಲ ಬಾರಿಗೆ ನರೇಗಾ ಯೋಜನೆಯಡಿ ಪಶ್ಚಿಮ ಬಂಗಾಳ ಮಾದರಿ ಇಕೋ ಪಾರ್ಕ್ ಬಹುತೇಕ ನಿರ್ಮಾಣವಾಗಿ ವಿವಿಧ ಹಣ್ಣು, ಹೂವಿನ ಗಿಡಗಳು ಕಂಗೊಳಿಸುತ್ತಿವೆ.
ರಾಜ್ಯದಲ್ಲಿ ನಿರ್ಮಾಣಗೊಂಡಿರುವ ಇಕೋ ಪಾರ್ಕ್ ಗೆ ಹೋಲಿಸಿದರೆ ಸೋವೇನಹಳ್ಳಿ ಇಕೋ ಪಾರ್ಕ್ ಅತಿ ದೊಡ್ಡದಾಗಿದ್ದು, ಈ ವರೆಗೂ 1.16 ಕೋಟಿ ಕಾಮಗಾರಿ ಪೂರ್ಣಗೊಂಡಿದ್ದು, ಉಳಿದಂತೆ ಪೇರಲ, ನೇರಳೆ ಮತ್ತು ಮಾವು ತೋಪಿಗೆ ತೋಟಗಾರಿಕೆ ಇಲಾಖೆಯಿಂದ ಹನಿ ನೀರಾವರಿ ವ್ಯವಸ್ಥೆ, ಎತ್ತರ ಪ್ರದೇಶದಲ್ಲಿ ಇಡೀ ಇಕೋ ಪಾರ್ಕ್ ಪಕ್ಷಿ ನೋಟದ ಮನೆ ನಿರ್ಮಾಣ, ಮಹಿಳಾ ಸ್ವ ಸಹಾಯ ಗುಂಪುಗಳಿಗೆ ಪಶು ಇಲಾಖೆಯಿಂದ ಪಶುಗಳನ್ನು ನೀಡಿ ಸಾಮೂಹಿಕ ಹೈನುಗಾರಿಕೆ, ಪಶುಗಳ ಸಗಣಿಯಿಂದ ಗೋಬರ್ ಗ್ಯಾಸ್ ಉತ್ಪಾದನೆ, ಇದರಿಂದ ಹೊರ ಬರುವ ಜೈವಿಕ ಗೊಬ್ಬರವನ್ನು ತೋಪುಗಳಿಗೆ ಬಳಕೆ, ಹೀಗೆ ಇನ್ನೂ ಹತ್ತಾರು ಯೋಜನೆಗಳನ್ನು ಇದರಲ್ಲಿ ಹೆಚ್ಚುವರಿಯಾಗಿ ಸೇರ್ಪಡೆ ಮಾಡಲಾಗುತ್ತಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಇಕೋ ಪಾರ್ಕ್ನ ನಲ್ಲಿ ರಾಕ್ ಗಾರ್ಡನ್, ವನ್ಯ ಜೀವಿಗಳ ಆಕೃತಿಗಳ ನಿರ್ಮಾಣ, ಹಣ್ಣಿನ ಗಿಡಗಳು, ಔಷಧಿ ಸಸ್ಯಗಳು, ಹೂವಿನ ಗಿಡಗಳು, ತರಕಾರಿ, ತೋಟಗಾರಿಕೆ ಬೆಳೆಗಳು, ಕೃಷಿ ಹೊಂಡ, ಎರೆ ಹುಳ ತೊಟ್ಟಿ, ಬೆಲೆ ಬಾಳುವ ಗಿಡ ಮರ ಸೇರಿದಂತೆ ಅಳುವಿನಂಚಿನ ಗಿಡ ಮರಗಳನ್ನು ಬೆಳೆಸಲು ಪ್ರತಿಯೊಂದು ಇಲಾಖೆಗೂ 5 ಎಕರೆ ಪ್ರದೇಶ ಮೀಸಲು ಇಡಲಾಗಿದೆ.
ಸೋವೇನಹಳ್ಳಿಯ 27 ಎಕರೆಗೆ ಜೀವಂತ ಬೇಲಿಯನ್ನು ಗ್ರಾಮ ಪಂಚಾಯಿತಿಯಿಂದ 47.77 ಲಕ್ಷ, ಪ್ರಾದೇಶಿಕ ಅರಣ್ಯ ಮತ್ತು ಸಾಮಾಜಿಕ ಅರಣ್ಯ ಇಲಾಖೆಯಿಂದ 38 ಲಕ್ಷ, ಕೃಷಿ ಇಲಾಖೆಗೆ 5.34 ಲಕ್ಷ, ತೋಟಗಾರಿಕೆ ಇಲಾಖೆಗೆ 25.43 ಲಕ್ಷ ಸೇರಿದಂತೆ 1.16 ಕೋಟಿ ಅನುದಾನ ನರೇಗಾ ಯೋಜನೆಯಡಿ ನೀಡಲಾಗಿದೆ.
ಈ ಇಕೋ ಪಾರ್ಕ್ ನಲ್ಲಿ ವನ್ಯ ಜೀವಿಗಳ ಆಕೃತಿ, ಸುಂದರ ಪರಿಸರ ನಿರ್ಮಾಣ, ತೋಟಗಾರಿಕೆಯಿಂದ ಗುಲಾಬಿ, ಮಲ್ಲಿಗೆ, ಕರಡಿ, ನೀರು ನಾಯಿ, ಕಲ್ಯಾಣಿ ನಿರ್ಮಾಣ, ಎರಡು ಕಡೆಗಳಲ್ಲಿ ನೀರಿನ ಟ್ಯಾಂಕ್ ನಿರ್ಮಾಣ, ನಿರಂತರ ನೀರು ಹರಿಯುವ ಫಾಲ್ಸ್, ಮಕ್ಕಳ ಆಟಿಕೆ, ಹಸಿರು ಉದ್ಯಾನ ವನ ನಿರ್ಮಿಸಿ ಪಾರ್ಕ್ ಸೌಂದರ್ಯ ಹೆಚ್ಚಿಸಲು ವಿವಿಧ ವಿನ್ಯಾಸಗಳ ಪಾದಚಾರಿ ರಸ್ತೆ ಮಾಡಲಾಗುತ್ತಿದೆ.
ಇಕೋ ಪಾರ್ಕ್ ನಿರ್ವಹಣೆಯ ಹೊಣೆಯನ್ನು ಸೋವೇನಹಳ್ಳಿ, ಕಂದಗಲ್ಲು, ಮುದ್ಲಾಪುರ ಸಣ್ಣತಾಂಡಾ, ಮುದ್ಲಾಪುರ ದೊಡ್ಡ ತಾಂಡ ವ್ಯಾಪ್ತಿಯ ಮಹಿಳಾ ಸ್ವ ಸಹಾಯ ಸಂಘಗಳಿಗೆ ವಹಿಸಲಾಗುತ್ತಿದೆ. ಪಾರ್ಕ್ ನ ತಲಾ 5 ಎಕರೆ ನಿರ್ವಹಣೆಯನ್ನು ಮಹಿಳಾ ಸ್ವಸಹಾಯ ಸಂಘಗಳಿಂದ ಬರುವ ಆದಾಯದ ಶೇ. 80 ರಷ್ಟು ಮಹಿಳಾ ಸಂಘಕ್ಕೆ ಉಳಿದ 20ರಷ್ಟುಆದಾಯವನ್ನು ಗ್ರಾಮ ಪಂಚಾಯಿತಿಗೆ ನೀಡುವ ಮೂಲಕ ಆರ್ಥಿಕ ಚಟುವಟಿಕೆ ಹೆಚ್ಚಿಸಲು ಮುಂದಾಗುತ್ತಿದೆ.
ಈ ಬಗ್ಗೆ ಮಾಹಿತಿ ನೀಡಿದ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಯು.ಎಚ್. ಸೋಮಶೇಖರ ಅವರು, ಸೋವೇನಹಳ್ಳಿಯ 27 ಎಕರೆ ಜಾಗದಲ್ಲಿ ಪಶ್ಚಿಮ ಬಂಗಾಳ ಮಾದರಿಯಂತೆ ಇಕೋ ಪಾರ್ಕ್ ನಿರ್ಮಿಸಲು ನರೇಗಾ ಯೋಜನೆಯಡಿ 1.16 ಕೋಟಿ ಕ್ರಿಯಾ ಯೋಜನೆ ಪ್ರಕಾರ ಕಾಮಗಾರಿ ಪ್ರಗತಿಯಲ್ಲಿದೆ. ಈ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.