ಕಾರವಾರ ನಗರಪಾಲಿಕೆ ಆದಾಯದ ದೃಷ್ಠಿಯಿಂದ ಅಂಗಡಿಗಳನ್ನು ನಿರ್ಮಾಣ ಮಾಡಿದೆ. ಇದನ್ನು ಬಾಡಿಗೆಗೆ ನೀಡುವ ವ್ಯವಸ್ಥೆಯನ್ನು ಕೂಡಾ ಮಾಡಲಾಗುತ್ತಿದೆ. ಆದರೆ, ಮಾಜಿ ಸಚಿವ ಆನಂದ್ ಆಸ್ನೋಟಿಕರ್ ಮಾತ್ರ ಈ ಅಂಗಡಿಗಳ ಹರಾಜು ಪ್ರಕ್ರಿಯೆಯಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತದೆ ಎಂದು ಆರೋಪಿಸಿದ್ದಾರೆ.
ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಉತ್ತರ ಕನ್ನಡ (ನ.06): ಕಾರವಾರ ನಗರಪಾಲಿಕೆ ಆದಾಯದ ದೃಷ್ಠಿಯಿಂದ ಅಂಗಡಿಗಳನ್ನು ನಿರ್ಮಾಣ ಮಾಡಿದೆ. ಇದನ್ನು ಬಾಡಿಗೆಗೆ ನೀಡುವ ವ್ಯವಸ್ಥೆಯನ್ನು ಕೂಡಾ ಮಾಡಲಾಗುತ್ತಿದೆ. ಆದರೆ, ಮಾಜಿ ಸಚಿವ ಆನಂದ್ ಆಸ್ನೋಟಿಕರ್ ಮಾತ್ರ ಈ ಅಂಗಡಿಗಳ ಹರಾಜು ಪ್ರಕ್ರಿಯೆಯಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತದೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಪ್ರಕ್ರಿಯಿಸಿರುವ ಕಾರವಾರ ನಗರಸಭಾಧ್ಯಕ್ಷರು ಸಾಕ್ಷಿ ಇದ್ದರೆ ತೋರಿಸಲಿ ಎಂದು ಪ್ರತಿಕ್ರಯಿಸಿದ್ದಾರೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ. ಹೌದು, ಉತ್ತರ ಕನ್ನಡ ಜಿಲ್ಲೆಯ ಕಾರವಾರದ ನಗರಪಾಲಿಕೆ ನಗರಾಭಿವೃದ್ಧಿಗೆ ಆದಾಯ ಸಂಗ್ರಹಿಸುವ ಉದ್ದೇಶದಿಂದ ಅಂಗಡಿಗಳನ್ನು ನಿರ್ಮಾಣ ಮಾಡಿರಿಸಿದೆ.
ಈ ಹಿಂದೆ ನಿರ್ಮಾಣ ಮಾಡಿರಿಸಿದ್ದ ಅಂಗಡಿಗಳನ್ನು ಒಂದು ಬಾರಿ ಹರಾಜು ಮಾಡಲಾಗಿದ್ದರೂ, ಅತೀ ಹೆಚ್ಚು ಬಾಡಿಗೆ ನಿಗದಿಯಾಗಿದ್ದರಿಂದ ಹರಾಜಿನಲ್ಲಿ ಭಾಗವಹಿಸಿದ್ದವರು ಯಾರೂ ಬಂದಿರಲಿಲ್ಲ. ಬಳಿಕ ಎರಡನೇ ಬಾರಿಗೆ ಹರಾಜು ಮಾಡಲಾಗಿತ್ತು. ಈ ಹರಾಜಿನಲ್ಲಿ ಅವ್ಯವಹಾರ ಮಾಡಲಾಗಿದೆ ಎಂಬ ಆರೋಪ ಕೂಡಾ ಕೇಳಿಬಂದಿತ್ತು. ನಂತರ ಎರಡನೇ ಬಾರಿ ನಿರ್ಮಾಣ ಮಾಡಿದ್ದ ಅಂಗಡಿಗಳ ಹರಾಜು ಪ್ರಕ್ರಿಯೆ ಮಾತ್ರ ಇನ್ನೂ ನಡೆಸಿಲ್ಲವಾದ್ರೂ ಈಗಾಗಲೇ ಟೆಂಡರ್ ಕರೆಯಲಾಗಿದೆ. ಆದರೆ, ಈ ಬಾರಿ ಮಾಜಿ ಸಚಿವ ಆನಂದ್ ಆಸ್ನೋಟಿಕರ್ ಕಾರವಾರ ನಗರಸಭೆಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಕಬ್ಬು ಬೆಳೆಗಾರರ ಬೇಡಿಕೆ ಈಡೇರದಿದ್ದರೆ ಸಿಎಂ ಮನೆ ಎದುರು ಧರಣಿ: ಮುತಾಲಿಕ್
ತಮ್ಮ ವ್ಯಾಪ್ತಿಯಲ್ಲಿ ಅಂಗಡಿಗಳನ್ನು ಮಾಡಿ ಹರಾಜಿನಲ್ಲಿ ತಮ್ಮದೇ ಜನರಿಗೆ ಅಂಗಡಿಗಳನ್ನು ಸಿಗುವಂತೆ ಮಾಡಿ ಕಮಿಷನ್ ತಿನ್ನುತ್ತಾರೆ ಅಂತಾ ಗಮನಕ್ಕೆ ಬಂದಿದೆ. ಈ ಪ್ರಕ್ರಿಯೆಯನ್ನು ನ್ಯಾಯಯುತವಾಗಿ ನಡೆಸಿ ಅರ್ಹರಿಗೆ ದೊರಕುವಂತಾಗಬೇಕೆಂದು ಎಂದು ತಿಳಿಸಿದ್ದಾರೆ. ಮಾಜಿ ಸಚಿವ ಆನಂದ್ ಆಸ್ನೋಟಿಕರ್ ಹೇಳಿಕೆಗೆ ಕಾರವಾರ ನಗರಸಭಾಧ್ಯಕ್ಷ ಡಾ. ನಿತಿನ್ ಪಿಕಳೆ ಪ್ರತಿಕ್ರಯಿಸಿದ್ದಾರೆ. ಮಾಜಿ ಸಚಿವ ಆನಂದ್ ಆಸ್ನೋಟಿಕರ್ ಈ ರೀತಿ ಆರೋಪ ಯಾಕೆ ಮಾಡಿದ್ದಾರೆಂದು ತಿಳಿಯುತ್ತಿಲ್ಲ. ಅವ್ಯವಹಾರಗಳು ನಡೆದಿದ್ದರೆ ಅವರು ಮುಂದೆ ಬಂದು ತೋರಿಸಲಿ. ಇಂತಹ ವಿಷಯ ನಡೆದಿದ್ದರೆ ಕೂಡಲೇ ಟೆಂಡರ್ ರದ್ದು ಪಡಿಸಲಾಗುವುದು. ಅಂಗಡಿಗಳ ಹರಾಜು ಪ್ರಕ್ರಿಯೆಯಲ್ಲಿ ಈ ಹಿಂದೆಯೂ ಅವ್ಯವಹಾರಗಳಾಗಿಲ್ಲ. ಮುಂದೆಯೂ ನಡೆಯುವುದಿಲ್ಲ.
ಉತ್ತರ ಕನ್ನಡ: ಎಸ್‌ಪಿ ವರ್ಗಾವಣೆ ವಿರೋಧಿಸಿ ಅರೆ ಬೆತ್ತಲೆ ಪ್ರತಿಭಟನೆ
ನಾವು ಯಾವುದಕ್ಕೂ ಆಸ್ಪದ ನೀಡಿಲ್ಲ. ಅವರು ನೀಡಿದ ಹೇಳಿಕೆ ಸಾಕ್ಷಿ ಒದಗಿಸಲಿ. ಕಾರವಾರ ನಗರಸಭೆಯಲ್ಲಿ ಎಲ್ಲಾ ಪ್ರಕ್ರಿಯೆಗಳನ್ನು ಪಾರದರ್ಶಕವಾಗಿ ನಡೆಸಲಾಗುತ್ತಿದೆ ಎಂದು ನಗರಸಭಾಧ್ಯಕ್ಷರು ತಿಳಿಸಿದ್ದಾರೆ. ಒಟ್ಟಿನಲ್ಲಿ ಕಾರವಾರ ನಗರಸಭೆಯ ಅಂಗಡಿ ಹರಾಜು ವಿಚಾರದಲ್ಲಿ ಮಾಜಿ ಸಚಿವರು ನೀಡಿದ ವಿವಾದಾತ್ಮಕ ಹೇಳಿಕೆ ಕಾರವಾರ ನಗರಸಭೆಯನ್ನು ಎಚ್ಚರಗೊಳಿಸಿದ್ದಂತೂ ಸತ್ಯ. ಅವ್ಯವಹಾರ ನಡೆಯುತ್ತಿದ್ದರೂ, ನಡೆಯದಿದ್ದರೂ ಮಾಜಿ ಸಚಿವರ ಹೇಳಿಕೆ ಕಾರವಾರ ನಗರಸಭೆಯನ್ನು ಈ ಬಾರಿ ಹೆಚ್ಚು ಪಾರದರ್ಶಕವಾಗಿ ಕೆಲಸ ಮಾಡುವಂತೆ ಪ್ರೇರೇಪಿಸುವುದರಲ್ಲಿ ಎರಡು ಮಾತಿಲ್ಲ.