
ಬೆಂಗಳೂರು(ಅ.21): ಬೆಳಕಿನ ಹಬ್ಬ ದೀಪಾವಳಿ ಸಂದರ್ಭದಲ್ಲಿ ಸಂಭವಿಸಬಹುದಾದ ಕಣ್ಣಿಗೆ ಸಂಬಂಧಪಟ್ಟ ಅವಘಡಗಳಿಗೆ ಚಿಕಿತ್ಸೆ ನೀಡಲು ಪ್ರಾದೇಶಿಕ ನೇತ್ರ ಚಿಕಿತ್ಸಾ ಸಂಸ್ಥೆ ಮಿಂಟೋ ಕಣ್ಣಾಸ್ಪತ್ರೆ ಎಲ್ಲಾ ರೀತಿಯಲ್ಲೂ ಸನ್ನದ್ಧವಾಗಿದೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ. ಸುಜಾತಾ ರಾಥೋಡ್ ಹೇಳಿದ್ದಾರೆ. ಸುರಕ್ಷಿತ ದೀಪಾವಳಿ ಆಚರಣೆ, ಮುನ್ನೆಚ್ಚರಿಕೆ ಮತ್ತು ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಗೆ ಕೈಗೊಂಡಿರುವ ಕ್ರಮಗಳ ಕುರಿತು ಇಂದು(ಶುಕ್ರವಾರ) ಸುದ್ದಿಗೋಷ್ಠಿಯಲ್ಲಿ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದ ಅವರು, ಪಟಾಕಿ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಭಿತ್ತಿ ಪತ್ರಗಳನ್ನು ಬಿಡುಗಡೆ ಮಾಡಿದರು. ಪಟಾಕಿ ಸಿಡಿತದಿಂದ ಗಾಯಗೊಳ್ಳುವವರ ಪೈಕಿ ಶೇ 40 ರಷ್ಟು 14 ವಯೋಮಿತಿಯ ಮಕ್ಕಳಾಗಿದ್ದು, ಮೂರು ಪಟ್ಟು ಗಂಡು ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಗಾಯಗೊಳಾಗುತ್ತಾರೆ. ಹೀಗಾಗಿ ಹಬ್ಬದ ಸಂದರ್ಭದಲ್ಲಿ ಪಟಾಕಿಗಳನ್ನು ಹಚ್ಚಿ ಗಾಯಗೊಳ್ಳುವ ಮುನ್ನ ಎಚ್ಚರಿಕೆ ವಹಿಸುವುದು ಸೂಕ್ತ ಎಂದರು.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಒಂದು ವಾರ ದಿನದ 24 ಗಂಟೆಗಳ ಕಾಲ ಆಸ್ಪತ್ರೆಯ ನೆಲಮಹಡಿ ಮತ್ತು ಮೊದಲ ಮಹಡಿಯಲ್ಲಿ ಮಹಿಳೆಯರು ಮತ್ತು ಪುರುಷರಿಗಾಗಿ ಪ್ರತ್ಯೇಕ ವಾರ್ಡ್ ಗಳನ್ನು ತೆರೆಯಲಾಗಿದ್ದು, ಚಿಕಿತ್ಸೆಗಾಗಿ ಅಗತ್ಯ ಆಧುನಿಕ ಸಲಹಕರಣೆ ಮತ್ತು ಸೂಕ್ತ ಪ್ರಮಾಣದ ದಾಸ್ತಾನು ಮಾಡಲಾಗಿದೆ. ಮಿಂಟೋ ಕಣ್ಣಾಸ್ಪತ್ರೆ 300 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆಯಾಗಿದ್ದು, ವೈದ್ಯರು, ಪಿ.ಜಿ. ವಿದ್ಯಾರ್ಥಿಗಳು ಒಳಗೊಂಡಂತೆ ಸುಮಾರು 100 ಮಂದಿ ಚಿಕಿತ್ಸೆ ನೀಡಲು ಸಜ್ಜಾಗಿದ್ದಾರೆ. ಒಂದು ವಾರ ಯಾವುದೇ ಸಿಬ್ಬಂದಿಗೆ ರಜೆ ನೀಡುತ್ತಿಲ್ಲ ಎಂದು ಹೇಳಿದರು.
ನಾಳೆಯಿಂದ 10 ದಿನ ಮಂಗ್ಳೂರು KSRTC ದೀಪಾವಳಿ ಪ್ಯಾಕೆಜ್ ಟೂರ್!
ಪಟಾಕಿ ಸಿಡಿತದಿಂದ ಕಣ್ಣು ಕಳೆದುಕೊಳ್ಳುವ, ಅಂಗವಿಕಲರಾಗುವವರಿಗೆ ಯಾವುದೇ ಪರಿಹಾರ ದೊರೆಯುವುದಿಲ್ಲ. ಹೀಗಾಗಿ ದರಂತಕ್ಕೆ ಆಸ್ಪದ ಬೇಡ. ಈ ಬಾರಿ ವಿಷಕಾರಿ ಹೊಗೆ ಲ್ಲದ ಪರಿಸರ ಸ್ನೇಹಿ, ಸ್ವಚ್ಛ ದೀಪಾವಳಿಯನ್ನು ಆಚರಿಸಲು ಪ್ರತಿಜ್ಞೆ ಕೈಗೊಳ್ಳೋಣ ಎಂದರು.
‘ತಮಸೋಮಾ ಜ್ಯೋತಿರ್ಗಮಯ’ ಎಂಬುದು ನಮ್ಮ ಸಂಪ್ರದಾಯ. ದೀಪಾವಳಿ ಸಂದರ್ಭದಲ್ಲಿ ದೀಪದಿಂದ ದೀಪ ಹಚ್ಚಬೇಕು. ಪಟಾಕಿಯಿಂದ ದೂರ ಇರಬೇಕು. ಪಟಾಕಿ ಬದುಕನ್ನು ಕತ್ತಲು ಮಾಡಬಾರದು. ಕೋವಿಡ್ ಸಂದರ್ಭವಾದ ಕಳೆದ ವರ್ಷ ಕೂಡ ಪಟಾಕಿಯಿಂದ ಸುಮಾರು 34 ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು.ಪ್ರತಿವರ್ಷ 40 ರಿಂದ 50 ಮಂದಿ ಗಾಯಗೊಳ್ಳುತ್ತಿದ್ಧಾರೆ. ಕೆಲವ ಕಣ್ಣಿಗೆ ತೀವ್ರವಾದ ಗಾಯಗಳಾಗಿ ಕಣ್ಣು ಕಳೆದುಕೊಳ್ಳುವ ಪ್ರಕರಣಗಳನ್ನು ನೋಡಿದ್ದೇವೆ. ಪಟಾಕಿಯಿಂದ ಕಣ್ಣಿಗಷ್ಟೇ ಅಪಾಯವಲ್ಲ, ವಾಯು ಮಾಲೀನ್ಯ, ಶಬ್ದ ಮಾಲೀನ್ಯದ ಜೊತೆಗೆ ರಾಸಾಯನಿಕ ಅಂಶದ ಕಸದ ರಾಶಿ ನಿರ್ಮಾಣವಾಗಿ ಅನಾರೋಗ್ಯಕ್ಕೆ ನಾಂದಿಯಾಗುತ್ತದೆ. ಇದನ್ನು ತಪ್ಪಿಸಲು ಹಸಿರು ದೀಪಾವಳಿ ಆಚರಣೆಯತ್ತ ಗಮಹರಿಸಬೇಕು ಎಂದು ಸಲಹೆ ನೀಡಿದರು.
ದೇಗುಲಗಳಲ್ಲಿ ದೀಪಾವಳಿ ದಿನ ಸರ್ಕಾರಿ ಗೋಪೂಜೆ!
ಹಸಿರು ಪಟಾಕಿ ಹಚ್ಚುವಾಗಲೂ ಮುನ್ನೆಚ್ಚರಿಕೆ ಕ್ರಮ ಅನುಸರಿಸಬೇಕಾಗುತ್ತದೆ. ಪಟಾಕಿ ಕಣ್ಣಿಗೆ ಸಿಡಿದರೆ ತಕ್ಷಣವೇ ಕಣ್ಣು ಉಜ್ಜಬಾರದು. ಕಣ್ಣಿನ ಸೂಕ್ಷ್ಮ ಭಾಗಕ್ಕೆ ಪಟಾಕಿ ರಾಸಾಯನಿಕಗಳು ಹಾನಿ ಉಂಟು ಮಾಡಬಹುದು. ಹಾಗಾಗಿ ಶುದ್ಧ ನೀರಿನಿಂದ ಮೊದಲು ಕಣ್ಣುಗಳನ್ನು ತೊಳೆದು ಹತ್ತಿಬಟ್ಟೆಯನ್ನು ಕಣ್ಣಿನ ಮೇಲಿಟ್ಟು ಆಸ್ಪತ್ರೆಗೆ ಕರೆತರಬೇಕು. ಎಲ್ಲಕ್ಕಿಂತ ಮೊದಲಿಗೆ ಪಟಾಕಿ ಅನಾಹುತಗಳ ಬಗ್ಗೆ ಮಕ್ಕಳಿಗೆ ಸೂಕ್ತ ಸಲಹೆ ಮತ್ತು ಸೂಚನೆ ನೀಡಬೇಕು. 5 ವರ್ಷದೊಳಗಿನ ಮಕ್ಕಳನ್ನು ಪಟಾಕಿ ಹೊಡೆಯಲು ಬಿಡಬಾರದು. ಸುಟ್ಟ ಪಟಾಕಿಗಳನ್ನು ಮತ್ತೆ ಸುಡಲು ಪ್ರಯತ್ನಿಬಾರದು. ಇದರಿಂದ ಅನಾಹುತ ಇನ್ನಷ್ಟು ಹೆಚ್ಚಾಗುತ್ತದೆ ಎಂದರು.
ಪಟಾಕಿಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿ, ಎಚ್ಚರಿಕೆಯಿಂದ ನಿಭಾಯಿಸಬೇಕು. ವಾಹನಗಳಿಂದ ದೂರ ಪಟಾಕಿ ಹೊತ್ತಿಸಿದರೆ ವಾಹನಗಳು ಪಟಾಕಿ ಕಿಡಿಗೆ ಆಹುತಿಯಾಗುವುದನ್ನು ತಪ್ಪಿಸಬಹುದು, ಎಲ್ಲಕ್ಕಿಂತ ಮಿಗಿಲಾಗಿ ದುರಂತಗಳನ್ನು ತಪ್ಪಿಸಿದಂತಾಗುತ್ತದೆ. ಪಟಾಕಿ ಹಚ್ಚುವಾಗ ಪ್ರತಿಯೊಬ್ಬರೂ ಹತ್ತಿ ಬಟ್ಟೆಗಳನ್ನು ಧರಿಸುವುದು ಸೂಕ್ತ ಎಂದು ಡಾ. ಸುಜಾತಾ ರಾಥೋಡ್ ಸಲಹೆ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಮಿಂಟೋ ವೈದ್ಯಕೀಯ ಅಧೀಕ್ಷರಾದ ಬಿ.ಎನ್. ಕಲ್ಪನಾ, ನಿವಾಸಿ ವೈದ್ಯಾಧಿಕಾರಿ ಹರೀಶ್ ಉಪಸ್ಥಿತರಿದ್ದರು.