ಬಿಜೆಪಿ ಕೇವಲ ಬಲಾಢ್ಯ ಜಾತಿ, ಸಮುದಾಯಕ್ಕೆ ಮಣೆ ಹಾಕುತ್ತಿದೆ: ರಾಜ್ಯದ ಎಸ್‌ಸಿಎಸ್‌ಟಿ ಮೀಸಲಾತಿ ಹೆಚ್ಚಳ ಬಿಜೆಪಿಯ ಚುನಾವಣಾ ಗಿಮಿಕ್: ಪ್ರಣವಾನಂದ ಸ್ವಾಮೀಜಿ ಆರೋಪ
ಬೀದರ್(ಅ.21): ಹಿಂದುಳಿದ ಸಮುದಾಯಗಳ ಸ್ವಾಮೀಜಿಗಳಿಗೆ ಬಿಜೆಪಿ ಸರ್ಕಾರದ ಸಚಿವರಿಂದ ಬೆದರಿಕೆಗಳು ಬರುತ್ತಿವೆ. ಸರ್ಕಾರವನ್ನು ಟೀಕಿಸುವ ಸ್ವಾಮೀಜಿಗಳಿಗೆ ಆಮೀಷವೊಡ್ಡಿ ಬಾಯಿ ಮುಚ್ಚಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಕಲಬುರಗಿ ಚಿತ್ತಾಪೂರದ ಶ್ರೀ ನಾರಾಯಣ ಗುರುಗಳ ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ ಆರೋಪಿಸಿದರು. ನಗರದಲ್ಲಿ ಗುರುವಾರ ಸುದ್ದಿಗಾರರಿಗೆ ಮಾತನಾಡಿದ ಅವರು, ಈ ಸರ್ಕಾರದ ಅವಧಿಯಲ್ಲಿ ಬ್ರಾಹ್ಮಣಶಾಹಿ ಆಡಳಿತವು ಹಿಂದುಳಿತ ಸಮುದಾಯಗಳ ಮುಖಂಡರನ್ನು ಮುಂದಿಟ್ಟುಕೊಂಡು ಅವರನ್ನು ಎತ್ತಿಕಟ್ಟಿರಾಜಕೀಯ ಮಾಡುತ್ತ ಹಿಂದುಳಿದ ಸಮಾಜವನ್ನು ಒಡೆಯುವ ಪ್ರಯತ್ನವನ್ನೂ ಮಾಡುತ್ತಿದೆ ಎಂದರು.
ರಾಜ್ಯದ ಬಿಜೆಪಿ ಸರ್ಕಾರ ಸಾಗರದಲ್ಲಿರುವ ಈಡಿಗ ಸಮುದಾಯದ ಸಿಗಂದರ ಚೌಡೇಶ್ವರಿ ದೇವಸ್ಥಾನವನ್ನು ಅಧೀನಕ್ಕೆ ತೆಗೆದುಕೊಳ್ಳುವ ಯತ್ನ ನಡೆಸಿದೆ. ಆದರೆ, ಇದೇ ರೀತಿಯಾಗಿ ಬ್ರಾಹ್ಮಣರ ಮಠಗಳನ್ನು ತೆಗೆದುಕೊಳ್ಳುವ ತಾಕತ್ತು ಇದೆಯಾ ಎಂದು ಪ್ರಶ್ನಿಸಿದ ಅವರು, ಈ ಬಿಜೆಪಿ ಸರ್ಕಾರ ಕೇವಲ ಬಲಾಢ್ಯ ಜಾತಿ, ಸಮುದಾಯಕ್ಕೆ ಮಣೆ ಹಾಕುತ್ತಿದೆ ಎಂದು ಕಿಡಿ ಕಾರಿದರು.
undefined
ಕುಲ ಕಸಬು ಕಸಿದ ವಚನ ಭ್ರಷ್ಟ ಸರ್ಕಾರ: ಪ್ರಣವಾನಂದ ಶ್ರೀ
ಬ್ರಾಹ್ಮಣ ಅಭಿವೃದ್ಧಿ ನಿಗಮ, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಹಾಗೂ ಮರಾಠ ಅಭಿವೃದ್ಧಿ ನಿಗಮ ಮಾಡಿರುವ ಈ ಸರ್ಕಾರ ಆರ್ಯ ಈಡಿಗ ಸಮಾಜ ಅಭಿವೃದ್ಧಿ ನಿಗಮ ಸ್ಥಾಪನೆಗೆ ನಾವು ಹಲವಾರು ವರ್ಷಗಳಿಂದ ಮನವಿಸುತ್ತಿದ್ದರೂ ಅತ್ತ ಕ್ಯಾರೆ ಎನ್ನುತ್ತಿಲ್ಲ ಎಂದು ಆರೋಪಿಸಿದರು.
ರಾಜ್ಯದ ಬಿಜೆಪಿ ಸರ್ಕಾರ ಇತ್ತೀಚೆಗೆ ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳದ ಆದೇಶ ಮಾಡಿರವುದು ಚುನಾವಣೆಯ ಗಿಮಿಕ್. ಚುನಾವಣೆ ನಂತರ ಇದೇ ಬಿಜೆಪಿಯವರು ಶೇ.50ಕ್ಕಿಂತ ಹೆಚ್ಚು ಮೀಸಲಾತಿ ಆಗುತ್ತಿದೆ ಎಂದು ಸುಪ್ರೀಂ ಕೋರ್ಚ್ ಮೊರೆ ಹೋಗಿ ಮೀಸಲಾತಿ ಹೆಚ್ಚಳ ರದ್ದುಗೊಳಿಸಲೂಬಹುದು ಎಂದು ಭವಿಷ್ಯ ನುಡಿದರು.
ಈಡಿಗ ಸಮುದಾಯವನ್ನು ಪ್ರವರ್ಗ 1ಕ್ಕೆ ಸೇರಿಸುವಂತೆ ಒತ್ತಾಯಿಸಿ ಬರುವ ಜ. 6ರಂದು ಕುದ್ರೋಳಿಯಿಂದ ಗೋಕರ್ಣ ಮಾರ್ಗವಾಗಿ ಬೆಂಗಳೂರಿಗೆ 35 ದಿನಗಳ ಕಾಲ 658ಕಿಮ ಪಾದಯಾತ್ರೆ ನಡೆಸಲು ತೀರ್ಮಾನಿಸಿದ್ದು, ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದಲ್ಲಿ ಕೊನೆ ದಿನ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆಮರಣ ಉಪವಾಸ ಸತ್ಯಾಗ್ರಹ ನಡೆಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಮುಖ್ಯಮಂತ್ರಿ ಬಸವಾಜ ಬೊಮ್ಮಾಯಿ ಅವರಿಗೂ ಮನವಿ ಸಲ್ಲಿಸಲಾಗುವದು. ಈಡಿಗ ಸಮಾಜದ ಶಾಸಕರು ಹಾಗೂ ಸಚಿವರೂ ಸಹ ಈ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಸ್ವಾಮೀಜಿ ಕರೆ ನೀಡಿದರು.