
ನಂಜನಗೂಡು: ಯುವಕನಿಂದ ನಿರಂತರವಾಗಿ ಪ್ರೀತಿಸುವಂತೆ ನೀಡಲಾಗುತ್ತಿದ್ದ ಕಿರುಕುಳಕ್ಕೆ ಮನನೊಂದು, ಅಪ್ರಾಪ್ತ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ಪಟ್ಟಣದಲ್ಲಿ ನಡೆದಿದೆ. ಮೃತ ಯುವತಿಯನ್ನು ದಿವ್ಯ (17) ಎಂದು ಗುರುತಿಸಲಾಗಿದೆ. ನಂಜನಗೂಡು ಪಟ್ಟಣದ ನೀಲಕಂಠ ನಗರ ನಿವಾಸಿಯಾಗಿದ್ದು, ನಂಜನಗೂಡಿನ ಸರ್ಕಾರಿ ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯುಸಿ ವಿದ್ಯಾರ್ಥಿನಿ ಆಗಿದ್ದಳು.
ಮಾಹಿತಿಯಂತೆ, ದೇಬೂರು ಗ್ರಾಮದ ಆದಿತ್ಯ ಎಂಬ ಯುವಕ, ದಿವ್ಯಳನ್ನು ಪ್ರೀತಿಸುವಂತೆ ನಿರಂತರವಾಗಿ ದುಂಬಾಲು ಬಿದ್ದು ಕಿರುಕುಳ ನೀಡುತ್ತಿದ್ದಾನೆ ಎಂಬ ಆರೋಪವಿದೆ. ಈ ಕಿರುಕುಳದಿಂದ ಮಾನಸಿಕವಾಗಿ ನೊಂದ ದಿವ್ಯ, ತನ್ನ ಮೇಲೆ ನಡೆಯುತ್ತಿದ್ದ ಅಸಹ್ಯ ವರ್ತನೆ ಕುರಿತು ಪೋಷಕರಿಗೆ ಮಾಹಿತಿ ನೀಡಿದ್ದಳು. ಹೀಗಾಗಿ ದಿವ್ಯಳ ತಂದೆ ಗುರುಮೂರ್ತಿ, ಆದಿತ್ಯನನ್ನು ಕರೆದು ಕಿವಿಮಾತು ಹೇಳಿ, ಮಗಳೊಂದಿಗೆ ಇನ್ನು ಮುಂದೆ ಸಂಪರ್ಕಿಸಬಾರದು ಎಂದು ಎಚ್ಚರಿಕೆ ನೀಡಿದ್ದರು. ಆದರೂ ಆದಿತ್ಯ ತನ್ನ ವರ್ತನೆಯನ್ನು ಬದಲಿಸಿಕೊಳ್ಳದೇ, ನಿರಂತರವಾಗಿ ದಿವ್ಯಳಿಗೆ ಕಿರುಕುಳ ನೀಡುತ್ತಿದ್ದಾನೆ.
ಈ ನಿರಂತರ ಮಾನಸಿಕ ಕಿರುಕುಳದಿಂದ ತೀವ್ರವಾಗಿ ಮನನೊಂದ ದಿವ್ಯ, ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮ*ಹತ್ಯೆಗೆ ಶರಣಾಗಿದ್ದಾಳೆ. ವಿಷಯ ತಿಳಿದ ಕುಟುಂಬಸ್ಥರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆ ಸ್ಥಳಕ್ಕೆ ಭೇಟಿ ನೀಡಿದ ನಂಜನಗೂಡು ಪಟ್ಟಣ ಪೊಲೀಸರು ಮೃತದೇಹವನ್ನು ಪರಿಶೀಲಿಸಿ, ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ, ಮೃತ ಯುವತಿಯ ತಂದೆ ಗುರುಮೂರ್ತಿ ನೀಡಿದ ದೂರಿನ ಮೇರೆಗೆ, ಆದಿತ್ಯ ವಿರುದ್ಧ ಪ್ರೀತಿಸುವಂತೆ ಕಿರುಕುಳ ನೀಡಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.