
ಸೋಮರಡ್ಡಿ ಅಳವಂಡಿ
ಕೊಪ್ಪಳ : ಹೇಳುವುದಕ್ಕಿಂತ ಮಾಡಿ ತೋರಿಸುವುದು ಶ್ರೇಷ್ಠ ಎನ್ನುವ ತತ್ವ ಮೈಗೂಡಿಸಿಕೊಂಡಿರುವ ಗವಿಸಿದ್ಧೇಶ್ವರ ಶ್ರೀ ಜಾತ್ರಾ ಮಹೋತ್ಸವದ ಮಹಾದಾಸೋಹದಲ್ಲಿ ಬೆಳ್ಳಂಬೆಳಗ್ಗೆ ಯಾರಿಗೂ ಹೇಳದೆ ತಾವೇ ಸ್ವಯಂ ಪ್ರೇರಣೆಯಿಂದ ಕಸಗುಡಿಸಿ, ಊಟ ಬಡಿಸುವ ಟೇಬಲ್ ತೊಳೆದು ಎಲ್ಲರನ್ನು ಸೇವಾ ಕಾರ್ಯಕ್ಕೆ ಹೊಸ ಭಾಷ್ಯ ಬರೆದಿದ್ದಾರೆ.
ಗವಿಸಿದ್ಧೇಶ್ವರ ಜಾತ್ರಾಮಹೋತ್ಸವದ ಎರಡನೇ ದಿನವಾದ ಮಂಗಳವಾರ ದಾಸೋಹ ಬಂದ್ ಮಾಡಿದ್ದೇ ತಡರಾತ್ರಿ. ಕಾರ್ಯಕ್ರಮದ ನಂತರವೂ ಮಹಾದಾಸೋಹ ರಾತ್ರಿ 1 ಗಂಟೆಯವರೆಗೂ ನಡೆಯಿತು. ಕಾರ್ಯಕ್ರಮದ ಬಳಿಕ ಮಹಾದಾಸೋಹದಲ್ಲಿ 12.20 ವರೆಗೂ ಶ್ರೀಗಳು ಸುತ್ತಾಡಿ ನಂತರ ತೆರಳಿದರು.
ಗವಿಸಿದ್ಧೇಶ್ವರ ಶ್ರೀ ಸ್ನಾನ, ಪೂಜೆ ಪ್ರಸಾದ ಮಾಡಿಕೊಂಡು ಮಲಗಿದ್ದೇ ತಡರಾತ್ರಿ 1.30ಕ್ಕೆ, ಹೀಗೆ ತಡವಾಗಿ ಪವಡಿಸಿದ ಶ್ರೀಗಳು ಬೆಳಗ್ಗೆ 4 ಗಂಟೆಗೆ ಎದ್ದಿದ್ದಾರೆ. ತಕ್ಷಣ ಬೆಳಗಿನ ಕರ್ಮಾದಿ ಪೂರ್ಣಗೊಳಿಸಿ ನಂತರ 4.50ಕ್ಕೆ ಮಹಾದಾಸೋಹಕ್ಕೆ ತೆರಳಿದ್ದಾರೆ.
ಅಲ್ಲಿ ಮಹಾದಾಸೋಹದ ಅಂಗಳದ ಕಸ ಗುಡಿಸಲಾರಂಭಿಸಿದ್ದಾರೆ. ಇವರು ಕಸಗುಡಿಸಲು ಪ್ರಾರಂಭಿಸುತ್ತಿದ್ದಂತೆ ಅನೇಕರು ಅವರ ಜೊತೆ ಕೈ ಜೋಡಿಸಿದ್ದಾರೆ.
ಅದಾದ ಬಳಿಕ ತಕ್ಷಣ ಊಟ ಬಡಿಸುವ ಟೇಬಲ್ ಮೇಲಿದ್ದ ಎಲ್ಲ ಮುಸರಿ ತೆಗೆದು, ಅದನ್ನು ನೀರು ಹಾಕಿ ನೀಟಾಗಿ ತೊಳೆಯುವ ಕಾರ್ಯ ಮಾಡಿದ್ದಾರೆ. ಬಳಿಕ ಮಹಾದಾಸೋಹದ ಅಡುಗೆ ಮನೆಗೆ ಹೋಗಿ, ಅಲ್ಲಿ ಬೇಗನೆ ಪ್ರಾರಂಭಿಸುವಂತೆ ಎಲ್ಲರನ್ನು ಹುರಿದುಂಬಿಸಿದ್ದಾರೆ. ಹಳ್ಳಿ ಹಳ್ಳಿಗಳಿಂದ ರಾತ್ರಿ ಪೂರ್ತಿ ನಡೆದುಕೊಡು ಪಾದಯಾತ್ರೆ ಬರುತ್ತಾರೆ. ಅವರು ಬರುವ ವೇಳೆಗೆ ಪ್ರಸಾದ ವಿತರಣೆ ಆರಂಭವಾಗಬೇಕು. ಜಾತ್ರೆಯಲ್ಲಿ ವಾಸ್ತವ್ಯ ಮಾಡಿದವರು ಬೆಳಗ್ಗೆ ಬೇಗನೆ ಪ್ರಸಾದಕ್ಕೆ ಬರಬಹುದು ಎಂದು ಬೆಳಗ್ಗೆ 6 ಗಂಟೆಗೆ ಪ್ರಸಾದ ಪ್ರಾರಂಭಿಸಿದ್ದಾರೆ.
ಅಲ್ಲಿಂದ ತಕ್ಷಣ ಎಲ್ಲ ಶೌಚಾಲಯ ಸುತ್ತಾಡಿ ನೋಡಿದ್ದಾರೆ. ಜಾತ್ರೆಯ ಮೈದಾನ ಸುತ್ತಾಡಿ, ಅಲ್ಲಿದ್ದ ಕಸವನ್ನು ಸಹ ತಾವೇ ತೆಗೆಯುವ ಮೂಲಕ ಸ್ವಚ್ಛವಾಗಿಟ್ಟುಕೊಳ್ಳುವ ಸಂದೇಶ ರವಾನಿಸಿದ್ದಾರೆ.
ವಿಶ್ವಪ್ರಸಿದ್ಧ ತಿರುಪತಿ ದೇವಸ್ಥಾನದಲ್ಲಿಯೂ ವಾಸ್ತವ್ಯಕ್ಕೆ ಅವಕಾಶ ಸಿಗದವರು ಹಾದಿ, ಬೀದಿಯಲ್ಲಿ ಸೇರಿದಂತೆ ಎಲ್ಲೆಂದರಲ್ಲಿ ಮಲುಗುವುದು ಸರ್ವೆ ಸಾಮಾನ್ಯ. ಕಳೆದ ಮೂರು ದಿನಗಳಿಂದ ಕೊಪ್ಪಳ ಗವಿಮಠದ ಆವರಣದಲ್ಲಿಯೂ ಜಾತ್ರೆಗೆ ಬಂದಿರುವ ಭಕ್ತರು ಗುಡ್ಡ, ಮೈದಾನ, ಗವಿಮಠದ ಆವರಣದಲ್ಲಿ ಎಲ್ಲೆಂದರಲ್ಲಿ ಮಲಗುತ್ತಿರುವುದು ಕಂಡು ಬಂದಿತು.
ತಡರಾತ್ರಿಯವರೆಗೂ ಕಾರ್ಯಕ್ರಮ ನೋಡಿದವರು, ಜಾತ್ರೆ ಮಾಡಿದವರು ಬಳಿಕ ಇದ್ದಲ್ಲಿಯೇ ಹಾಸಿಕೊಂಡು ಮಲಗುತ್ತಿರುವ ದೃಶ್ಯ ಸರ್ವೆ ಸಾಮಾನ್ಯವಾಗಿ ಕಂಡು ಬಂದಿತು.
ಗವಿಮಠವು ಹತ್ತಾರು ಸಾವಿರ ಜನರಿಗೆ ವಾಸ್ತವ್ಯಕ್ಕೆ ಅವಕಾಶ ಮಾಡಿದೆಯಾದರೂ ಬರುವ ಭಕ್ತರ ಸಂಖ್ಯೆ ಮಿತಿಮೀರುತ್ತಿರುವುದರಿಂದ ಎಲ್ಲೆಂದರಲ್ಲಿ ಮಲಗುವಂತಾಗಿದೆ.