ಬಡವರಿಗೆ ಸೂರು ಕಲ್ಪಿಸುವುದು ಪುಣ್ಯದ ಕೆಲಸ: ಸಚಿವ ವಿ. ಸೋಮಣ್ಣ

By Kannadaprabha NewsFirst Published Nov 12, 2020, 2:27 PM IST
Highlights

ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ಎರಡನೇ ಹಂತದ ಮನೆಗಳ ನಿರ್ಮಾಣಕ್ಕಾಗಿ ಒಂದು ತಿಂಗಳಲ್ಲಿಯೇ ಆದೇಶ ಹೊರಡಿಸಿ ಟೆಂಡರ್‌ ಪ್ರಕ್ರಿಯೆ ಕೈಗೊಳ್ಳಲಾಗುವುದು| ವಸತಿ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿದ ವಸತಿ ಸಚಿವ ವಿ. ಸೋಮಣ್ಣ| 

ವಿಜಯಪುರ(ನ.12): ಬಡವರಿಗೆ ಸೂರು ಒದಗಿಸುವುದೇ ಒಂದು ಪುಣ್ಯದ ಕಾರ್ಯ. ಬಡವರ ಕೆಲಸ ಎಂದರೆ ದೇವರ ಕೆಲಸ ಇದ್ದಂತೆ. ಪ್ರಥಮ ಹಂತದಲ್ಲಿ 1489 ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ಮನೆಗಳನ್ನು ನಿರ್ಮಿಸಲಾಗುತ್ತಿದ್ದು, ಎರಡನೇ ಹಂತದ ಮನೆಗಳ ನಿರ್ಮಾಣಕ್ಕಾಗಿ ಶೀಘ್ರದಲ್ಲಿಯೇ ಆದೇಶ ಹೊರಡಿಸಲಾಗುವುದು ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು.

ಬುಧವಾರ ನಗರದ ಅಲ್‌-ಅಮೀನ್‌ ಆಸ್ಪತ್ರೆಯ ಹಿಂಭಾಗದಲ್ಲಿರುವ ಮಹಾನಗರ ಪಾಲಿಕೆಯ ಜಮೀನಿನಲ್ಲಿ ಪ್ರಧಾನಮಂತ್ರಿ ಆವಾಸ್‌ ಯೋಜನೆಯ ಹೌಸಿಂಗ್‌ ಫಾರ್‌ ಆಲ್‌ 2020 ಯೋಜನೆಯಡಿ ಪ್ರಥಮ ಹಂತವಾಗಿ 1493 ಮನೆಗಳ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ಎರಡನೇ ಹಂತದ ಮನೆಗಳ ನಿರ್ಮಾಣಕ್ಕಾಗಿ ಒಂದು ತಿಂಗಳಲ್ಲಿಯೇ ಆದೇಶ ಹೊರಡಿಸಿ ಟೆಂಡರ್‌ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದರು.

ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮನವಿ ಮಾಡಿಕೊಂಡಂತೆ ರಜಪೂತ ಗಲ್ಲಿ, ಎಪಿಎಂಸಿ ಜಾಗದಲ್ಲಿ ಆಶ್ರಯ ಮನೆಗಳ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಇಂದಿನ ದಿನಗಳಲ್ಲಿ ಸರ್ಕಾರಿ ಜಾಗ ಸಿಗುವುದು ಅಪರೂಪ. ಈ ಕಾರಣಕ್ಕಾಗಿ ಅಲ್ಲಿ ಜಿಪ್ಲಸ್‌1 ಮಾದರಿಯ ಮನೆಗಳ ಬದಲು ಜಿಪ್ಲಸ್‌2 ಮನೆಗಳನ್ನು ನಿರ್ಮಿಸಿದರೆ ಇನ್ನೂ ಹೆಚ್ಚು ಬಡವರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

'ನನ್ನನ್ನು ಮುಗಿಸಲು ವಿಜಯಪುರದಿಂದ ಬೆಂಗಳೂರಿನವರೆಗೆ ಕಾಯ್ತಿದ್ದಾರೆ'

ಈ ನಿವೇಶನಗಳ ಬಡಾವಣೆಗೆ ‘ನಮೋ ನಗರ’ ಎಂದು ಹೆಸರು ಇರಿಸಿರುವುದು ಅತ್ಯಂತ ಸೂಕ್ತವಾಗಿದೆ. ಈ ಬಡಾವಣೆಗೆ ಸಂಪರ್ಕ ಕಲ್ಪಿಸುವ ರಸ್ತೆ ಅಗಲೀಕರಣಗೊಳಿಸಿ, ಕನಿಷ್ಠ 50 ಫäಟ್‌ ರಸ್ತೆಯನ್ನಾದರೂ ನಿರ್ಮಿಸುವಂತೆ ಜಿಲ್ಲಾಧಿಕಾರಿ ಹಾಗೂ ಮಹಾನಗರ ಪಾಲಿಕೆ ಆಯುಕ್ತರಿಗೆ ಸಚಿವ ಸೋಮಣ್ಣ ಸಲಹೆ ನೀಡಿದರು.

ವಿಜಯಪುರ ನಗರ ಶಾಸಕ ಯತ್ನಾಳ ಅವರು ಮಗುವಿನಂತಹ ಮನಸ್ಸಿನ ವ್ಯಕ್ತಿ. ಅವರ ಮನಸ್ಸಿನಲ್ಲಿ ಕಲ್ಮಶವಿಲ್ಲ, ನಾವು ಕೆಲವೊಂದು ಸಾರಿ ಜಗಳಾಡುತ್ತೇವೆ. ನಂತರ ಮಾತನಾಡುತ್ತೇವೆ. ಅವರು ಮಾಡಿದ ಗೋಶಾಲೆ ಮೊದಲಾದ ಜನಪರ ಕಾರ್ಯಗಳನ್ನು ಗಮನಿಸಿದರೆ ಜನಪರ ಕಳಕಳಿ, ದೃಢಸಂಕಲ್ಪ, ಕಾರ್ಯತತ್ಪರತೆ ಹಾಗೂ ಬದ್ಧತೆ ಎಂತಹದ್ದು ಎಂದು ತೋರಿಸುತ್ತದೆ ಎಂದು ಬಣ್ಣಿಸಿದರು.

ಯತ್ನಾಳರಿಗೆ ಕೋಟಿ ನಮಸ್ಕಾರ!

ನಗರದ ಹೃದಯ ಭಾಗದಲ್ಲಿ ಈ ರೀತಿಯ ಜಾಗವನ್ನು ಬಡವರಿಗೆ ಹಂಚಿಕೆ ಮಾಡಲು ದೊಡ್ಡ ಮನಸ್ಸು ಬೇಕು. ಈ ದೊಡ್ಡ ಮನಸ್ಸು ಮಾಡಿದ ಯತ್ನಾಳರಿಗೆ ನಾನು ಕೋಟಿ ಕೋಟಿ ನಮಸ್ಕಾರ ಮಾಡುತ್ತೇನೆ ಎಂದು ಸಚಿವ ಸೋಮಣ್ಣ ಭಾವುಕರಾಗಿ ಯತ್ನಾಳರನ್ನು ಅಭಿನಂದಿಸಿದರು.

ಬೇರೆಯವರಾಗಿದ್ದರೆ ಈ ಅಮೂಲ್ಯ ಜಾಗವನ್ನು ಜಿಲ್ಲಾಧಿಕಾರಿಗಳಿಗೆ ಹೆದರಿಸಿಯಾದರೂ ಕಬಳಿಸುವ ಸಾಧ್ಯತೆ ಇತ್ತು. ಆದರೆ ಯತ್ನಾಳ ಈ ಜಾಗವನ್ನು ಬಡವರಿಗೆ ಹಂಚಿಕೆ ಮಾಡಿದ್ದಾರೆ. ಈ ರೀತಿಯ ದೊಡ್ಡತನ ಕೆಲವರಲ್ಲಿ ಮಾತ್ರ ಇರುತ್ತದೆ. ಅದು ಯತ್ನಾಳ ಅವರಲ್ಲಿ ಧಾರಾಳವಾಗಿದೆ ಎಂದರು.

ಈ ಕಾರ್ಯಕ್ರಮಕ್ಕೆ ತೆರಳುವ ಮುನ್ನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದೆ. ಏನಪ್ಪ ತರಾತುರಿಯಲ್ಲಿ ಕಾರ್ಯಕ್ರಮ ಫಿಕ್ಸ್‌ ಮಾಡಿದೆಯಲ್ಲ ಎಂದು ತಮಾಷೆ ಮಾಡಿದರು. ಆಗ ನಾನು ಯತ್ನಾಳರು ಎಕೆ-47 ಇದ್ದಂತೆ. ಪದೇ ಪದೇ ಕಾರ್ಯಕ್ರಮ ಮುಂದು ಹಾಕಲು ಆಗುವುದಿಲ್ಲ ಎಂದೆ. ಆಗ ಮುಖ್ಯಮಂತ್ರಿಗಳು ಸಹ ಖುಷಿಯಾಗಿ ಬಸನಗೌಡ ಪಾಟೀಲ ಯತ್ನಾಳ ಖುಷಿಯಾದರೆ ನಾವೆಲ್ಲರೂ ಖುಷಿ ಆದಂತೆ ಎಂಬ ಸಂದೇಶ ನೀಡಿ ನನಗೆ ಕಳುಹಿಸಿದ್ದಾರೆ ಎಂದರು.

ನಾನು ಪ್ರೌಢ-ಮಾಧ್ಯಮಿಕ ಶಿಕ್ಷಣ ಸಚಿವ ಸ್ಥಾನ ನೀಡಿ ಎಂದು ಕೋರಿದ್ದರೆ, ನನಗೆ ಹಲವಾರು ಬಾರಿ ವಸತಿ ಸ್ಥಾನವೇ ದೊರಕಿದೆ. ಬಡತನದ ನೋವು ಗೊತ್ತಿರುವ ನನಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಈ ಜವಾಬ್ದಾರಿ ವಹಿಸುತ್ತಿದ್ದಾರೆ ಎನ್ನುವ ಸಂತೃಪ್ತಿ ಇದೆ ಎಂದರು.

ಪರಿಚಯ ಪತ್ರದ ಪ್ರಕ್ರಿಯೆಯನ್ನೇ ರದ್ದುಗೊಳಿಸಲಾಗಿದ್ದು, ಎಲ್ಲರಿಗೂ ಹಕ್ಕು ಪತ್ರ ವಿತರಿಸಲು ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ಆಹಾರ ನಿಗಮದ ಅಧ್ಯಕ್ಷ, ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ, ಸಿಂದಗಿ ಶಾಸಕ ಎಂ.ಸಿ. ಮನಗೂಳಿ, ನಾಗಠಾಣ ಶಾಸಕ ಡಾ. ದೇವಾನಂದ ಚವ್ಹಾಣ, ವಿಡಿಎ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಜಿಲ್ಲಾ ಪಂಚಾಯತಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಜಿಲ್ಲಾಧಿಕಾರಿ ಪಿ. ಸುನೀಲಕುಮಾರ, ಜಿ.ಪಂ. ಸಿಇಒ ಗೋವಿಂದ ರೆಡ್ಡಿ, ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ, ಪಾಲಿಕೆ ಆಯುಕ್ತ ಶ್ರೀಹರ್ಷ ಶೆಟ್ಟಿ, ರಾಜೀವಗಾಂಧಿ ವಸತಿ ನಿಗಮದ ಪ್ರಧಾನ ವ್ಯವಸ್ಥಾಪಕ ಮಹಾದೇವ ಪ್ರಸಾದ್‌, ಗುತ್ತಿಗೆದಾರ ಅಶೋಕ ಬಂಡಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿಜಯಕುಮಾರ ಮೆಕ್ಕಳಕಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್‌.ಎಸ್‌. ಪಾಟೀಲ ಕೂಚಬಾಳ, ಶಿವರುದ್ರ ಬಾಗಲಕೋಟ, ಶ್ರೀನಿವಾಸ ಬೆಟಗೇರಿ, ಗುರು ಗಚ್ಚಿನಮಠ, ಮಲ್ಲಮ್ಮ ಜೋಗೂರ, ಗೀತಾ ಕೂಗನೂರ, ವಿಕ್ರಂ ಗಾಯಕವಾಡ, ಲಕ್ಷ್ಮಣ ಜಾಧವ ಮುಂತಾದವರು ಇದ್ದರು.

click me!