ಯತ್ನಾಳ ಆ ರೀತಿ ಮಾತನಾಡಲು ದೊರೆಸ್ವಾಮಿ ಹೇಳಿಕೆಗಳೇ ಕಾರಣ| ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧವೂ ವಸತಿ ಸಚಿವ ವಾಗ್ದಾಳಿ| ಯಡಿಯೂರಪ್ಪ ನಾಲ್ಕು ಬಾರಿ ಮುಖ್ಯಮಂತ್ರಿ ಆಗುತ್ತೇನೆ ಎಂದು ಕನಸು ಕಂಡಿರಲಿಲ್ಲ|
ಕೊಪ್ಪಳ(ಫೆ.27): ಸ್ವಾತಂತ್ರ್ಯ ಹೋರಾಟಗಾರರು, ಹಿರಿಯರೂ ಆದ ದೊರೆಸ್ವಾಮಿ ಅವರ ಬಗ್ಗೆ ಅಪಾರವಾದ ಗೌರವವಿದೆ. ಅವರು ನನ್ನೂರಿನವರು. ಅವರ ಕುಟುಂಬ ನನಗೆ ಹತ್ತಿರದಿಂದ ಪರಿಚಯ. ಆದರೆ, ಅವರೂ ಸರಿಯಾಗಿ ಮಾತನಾಡಬೇಕು. ನಾಲಿಗೆಯನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು ಎಂದು ವಸತಿ ಖಾತೆ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ದೊರೆಸ್ವಾಮಿ ಅವರ ಬಗ್ಗೆ ಶಾಸಕ ಬಸನಗೌಡ ಯತ್ನಾಳ್ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಸೋಮಣ್ಣ, ಯತ್ನಾಳ ಆ ರೀತಿ ಮಾತನಾಡುವಂತೆ ಮಾಡಿದ್ದು ಯಾರು? ಹಿರಿಯರಾದವರು ಗೌರವದಿಂದ ಮಾತನಾಡಿದ್ದರೆ, ಈ ದೇಶದ ಘನತೆಯನ್ನು ನೋಡಿಕೊಂಡು ಮಾತನಾಡಿದ್ದರೆ, ಯೋಚಿಸಿ ಮಾತನಾಡಿದ್ದರೆ ಯತ್ನಾಳ ಈ ರೀತಿ ಮಾತನಾಡುವ ಪ್ರಶ್ನೆಯೇ ಬರುತ್ತಿರಲಿಲ್ಲ. ಯತ್ನಾಳ ಭಾವನಾತ್ಮಕವಾಗಿ ಮಾತನಾಡಿರಬಹುದು ಎಂದು ಸೋಮಣ್ಣ ಹೇಳಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆಯೂ ಕಿಡಿ ಕಾರಿದ ಸೋಮಣ್ಣ, ಅವರು ಮಾಜಿ ಆದ ಮೇಲೆ ಸರಿಯಾಗಿ ಮಾತನಾಡುತ್ತಿಲ್ಲ. ಐದು ವರ್ಷ ಮುಖ್ಯಮಂತ್ರಿ ಆಗಿದ್ದವರು ಮಾತನಾಡುವ ರೀತಿಯಲ್ಲಿ ಮಾತನಾಡುತ್ತಿಲ್ಲ. ಅವರು ಪದೇ ಪದೆ ಯಾಕೆ ಪ್ರತಿಭಟನೆಗೆ ಕರೆ ಕೊಡುತ್ತಾರೆ ಎಂದು ಪ್ರಶ್ನೆ ಮಾಡಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ನನ್ನ ಬಗ್ಗೆ ಅವರೇನು (ಸಿದ್ದರಾಮಯ್ಯ) ಮಾತನಾಡುತ್ತಾರೆ. ಅವರನ್ನು ನಾನು ನೋಡಿಲ್ಲವೇ?, ನಾನೂ ಹಲವು ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ಅನೇಕ ಮುಖ್ಯಮಂತ್ರಿಗಳನ್ನು ನೋಡಿದ್ದೇನೆ. ಆದರೆ ಸಿದ್ದರಾಮಯ್ಯ ಅವರ ರೀತಿ ಮಾತನಾಡುವವರನ್ನು ನಾನು ನೋಡಿಲ್ಲ ಎಂದರು.
ಬಿಎಸ್‌ವೈ ಪುತ್ರನಾಗಿ ಹುಟ್ಟಿದ್ದೇ ತಪ್ಪಾ ? ವಿಜಯೇಂದ್ರ ಪರ ಸೋಮಣ್ಣ ಬ್ಯಾಟಿಂಗ್
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ, ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಜಯೇಂದ್ರ ಪರ ವಸತಿ ಸಚಿವ ಸೋಮಣ್ಣ ಮತ್ತೊಮ್ಮೆ ಬ್ಯಾಟ್ ಬೀಸಿದ್ದಾರೆ. ವಿಜಯೇಂದ್ರ ಪರ ಪದೇ ಪದೆ ಇಲ್ಲದ ವಿವಾದ ಹುಟ್ಟು ಹಾಕಲಾಗ್ತುತದೆ. ಅಷ್ಟಕ್ಕೂ ವಿಜಯೇಂದ್ರ ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರನಾಗಿ ಹುಟ್ಟಿದ್ದೇ ತಪ್ಪಾ ಎಂದು ಸೋಮಣ್ಣ ಪ್ರಶ್ನಿಸಿದರು.
ವಿಜಯೇಂದ್ರ ಏನ್ ತಪ್ಪು ಮಾಡಿದ್ದಾನೆ? ಸುಮ್ಮನೆ ಅಪಪ್ರಚಾರ ಯಾಕೆ ಮಾಡಲಾಗುತ್ತದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅತ್ಯುತ್ತಮವಾಗಿಯೇ ಆಡಳಿತ ನಡೆಸುತ್ತಿದ್ದಾರೆ. ಇನ್ನು ಮೂರು ವರ್ಷ ಮೂರು ತಿಂಗಳು ಅವರೇ ಮುಖ್ಯಮಂತ್ರಿ ಮುಂದಿನ ಚುನಾವಣೆ ಬಳಿಕ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಸೋಮಣ್ಣ ಹೇಳಿದರು.
ವಿಜಯೇಂದ್ರ ಅವರು ಬೆಳೆಯುತ್ತಿದ್ದಾರೆ. ಅವರ ಪಾಡಿಗೆ ಬೆಳೆಯಲಿ ಬಿಡಿ, ಇವತ್ತಾಗದಿದ್ದರೂ ಮುಂದಿನ 10-20 ವರ್ಷಗಳಲ್ಲಿ ಅವರು ಏನಾಗುತ್ತಾರೋ ಯಾರು ಕಂಡಿದ್ದಾರೆ. ಸುಮ್ಮನೇ ಅವರ ಕುರಿತು ಇಲ್ಲದ್ದು ಮಾತನಾಡುವುದು ಸರಿಯಲ್ಲ. ಯಡಿಯೂರಪ್ಪ ಅವರು ನಾಲ್ಕು ಬಾರಿ ಮುಖ್ಯಮಂತ್ರಿ ಆಗುತ್ತೇನೆ ಎಂದು ಕನಸು ಕಂಡಿರಲಿಲ್ಲ. ಯಾರು ಹಣೆಬರಹದಲ್ಲಿ ಏನಿರುತ್ತದೆಯೋ ಅದಾಗುತ್ತಾರೆ ಎಂದರು.