ಟಾಂಗಾ ಸವಾರಿ ಬಳಿಕ ಟಾಂಗಾ ಮಾಲೀಕರಿಗೆ ಉಡುಗೊರೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್
ಮೈಸೂರು(ಅ.01): ಟಾಂಗಾದಲ್ಲಿ ಸವಾರಿ ಮಾಡುವ ಮೂಲಕ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರು ದಸರಾ ದೀಪಾಲಂಕಾರ ವೀಕ್ಷಿಸಿದರು.
ಸರ್ಕಾರಿ ಅತಿಥಿ ಗೃಹದಿಂದ ಹೇಮಚಂದ್ರ ಸರ್ಕಲ್, ಹಾರ್ಡಿಂಜ್ ವೃತ್ತ, ಆಲ್ಬರ್ಟ್ ವಿಕ್ಟರ್ ರಸ್ತೆ, ಚಾಮರಾಜ ವೃತ್ತ, ಕೆ.ಆರ್. ವೃತ್ತ, ಸಯ್ಯಾಜಿರಾವ್ ರಸ್ತೆ, ವಿಶ್ವೇಶ್ವರಯ್ಯ ವೃತ್ತ, ಇರ್ವಿನ್ ರಸ್ತೆ, ನೆಹರು ವೃತ್ತ ಮೂಲಕ ಮತ್ತೆ ಅತಿಥಿ ಗೃಹಕ್ಕೆ ತಲುಪಿದರು. ಟಾಂಗಾ ಸವಾರಿ ಬಳಿಕ ಟಾಂಗಾ ಮಾಲೀಕರಿಗೆ ಉಡುಗೊರೆ ನೀಡಲಾಯಿತು.
ಚಾಮುಂಡಿ ಬೆಟ್ಟಕ್ಕೆ ಹೋದಾಗ ಉತ್ತನಳ್ಳಿ ಮಾರಮ್ಮನ ದರ್ಶನ ಮರೀಬೇಡಿ
ಈ ವೇಳೆ ಸಚಿವರು ಮಾತನಾಡಿ, ದಸರಾ ವೀಕ್ಷಣೆಗೆ ದೇಶ ವಿದೇಶಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಈ ಬಾರಿ ಅದ್ಧೂರಿ ದೀಪಾಲಂಕಾರ ಮಾಡಲಾಗಿದೆ. ಟಾಂಗಾದಲ್ಲಿ ಸವಾರಿ ಮಾಡಿ ದೀಪಾಲಂಕಾರ ವೀಕ್ಷಣೆ ಮಾಡುವುದರಿಂದ ದೀಪದ ಬೆಳಕಿನ ಸೊಬಗನ್ನು ಕಣ್ತುಂಬಿಕೊಳ್ಳುವುದರ ಜೊತೆಗೆ ಟಾಂಗಾ ಸವಾರಿಗೂ ಉತ್ತೇಜನ ನೀಡಿದಂತಾಗುತ್ತದೆ ಎಂಬ ಉದ್ದೇಶದಿಂದ ಟಾಂಗಾ ಸವಾರಿ ಮಾಡಿದ್ದಾಗಿ ಹೇಳಿದರು. ಸಚಿವರೊದಿಗೆ ಶಾಸಕ ಎಲ್. ನಾಗೇಂದ್ರ, ಮೇಯರ್ ಶಿವಕುಮಾರ್, ಎಂಡಿಎ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್ ಮೊದಲಾದವರು ಇದ್ದರು.