ಬಿಡಿಎನಲ್ಲಿ ಅಧ್ಯಕ್ಷರಿಗೆ ಉಸಿರು ಕಟ್ಟಿಸುವ ವಾತಾವರಣ ಇದೆ: ಸಚಿವ ಎಸ್‌ಟಿಎಸ್‌

By Kannadaprabha NewsFirst Published Feb 11, 2021, 7:11 AM IST
Highlights

ಭವಾನಿ ಸೂಸೈಟಿಗೆ ನಿವೇಶನ ಹಂಚಿಕೆಯಲ್ಲಿ ಅಕ್ರಮವಾಗಿದ್ದರೆ ತನಿಖೆ ನಡೆಸಲಿ| ಇಂತಹ ಅಹಂಕಾರದ ಅಧಿಕಾರಿ ಬಿಡಿಎನಲ್ಲಿ ಇರಬಾರದು| ಆಯುಕ್ತರ ಬದಲಾವಣೆ ಮಾಡಬೇಕಾ ಅಥವಾ ಬಿಡಬೇಕಾ ಎಂಬುದು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ ಎಂದ ಸಚಿವ ಎಸ್‌.ಟಿ.ಸೋಮಶೇಖರ್‌| 

ಬೆಂಗಳೂರು(ಫೆ.11): ನಗರದ ಭವಾನಿ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ನಿವೇಶನ ಹಂಚಿಕೆ ಅಕ್ರಮವಾಗಿದ್ದರೆ ರದ್ದುಪಡಿಸಿ, ಎಸ್‌ಐಟಿ ತನಿಖೆ ನಡೆಸಲಿ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಒತ್ತಾಯಿಸಿದ್ದಾರೆ.
ಬಿಡಿಎನಲ್ಲಿ ಅಧ್ಯಕ್ಷರಿಗೆ ಉಸಿರು ಕಟ್ಟಿಸುವ ವಾತಾವರಣ ಇದೆ ಎಂದು ಅನಿಸಿತು. ಆಯುಕ್ತರ ಹುದ್ದೆ ಸೂಟುಬೂಟು ಹಾಕಿಕೊಂಡು ಎಸಿ ರೂಮ್‌ನಲ್ಲಿ ಕೂರುವ ಹುದ್ದೆ ಅಲ್ಲ ಎಂದೂ ಅವರು ಹೇಳಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಬಿಡಿಎಯು ಭವಾನಿ ಗೃಹ ನಿರ್ಮಾಣ ಸಹಕಾರ ಸಂಘದ ಜಮೀನನ್ನು ಸ್ವಾಧೀನಪಡಿಸಿಕೊಂಡಿದ್ದಕ್ಕೆ ಪ್ರತಿಯಾಗಿ ಸೊಸೈಟಿಗೆ ಬೇರೆ ಜಮೀನು ಕೊಡುವಂತೆ ನ್ಯಾಯಾಲಯ ಆದೇಶಿಸಿತ್ತು. ಅದರಂತೆ ನಾನು ಬಿಡಿಎ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಆಡಳಿತ ಮಂಡಳಿ ಸಭೆಯಲ್ಲಿ ಭವಾನಿ ಸೊಸೈಟಿಗೆ ಜಮೀನು ನೀಡುವಂತೆ ಬಿಡಿಎಗೆ ಶಿಫಾರಸ್ಸು ಮಾಡಿ ಕಳುಹಿಸಲಾಗಿತ್ತು. ಆದರೆ, ಭೂಮಿ ಹಂಚಿಕೆ ಬಗ್ಗೆ ಬಿಡಿಎ ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ ಎಂದು ತಿಳಿಸಿದರು.

ಭವಾನಿ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ನಿವೇಶನ ಹಂಚಿಕೆ ಅಕ್ರಮವಾಗಿದ್ದರೆ ರದ್ದುಪಡಿಸಿ ತನಿಖೆ ನಡೆಸಲಿ. ಅಗತ್ಯವಿದ್ದರೆ ಎಸ್‌ಐಟಿ ಮಾದರಿಯ ತನಿಖೆಯನ್ನೂ ಮಾಡುವಂತೆ ಬಿಡಿಎ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌ ಅವರಿಗೆ ಹೇಳಿದ್ದೇನೆ. ಒಂದು ವೇಳೆ ನ್ಯಾಯಾಲಯದ ಆದೇಶ ಪಾಲನೆಯಾಗಿದ್ದರೆ ಅದು ಅಕ್ರಮವಲ್ಲ. ಈ ಬಗ್ಗೆ ಸರ್ಕಾರ ಮುಂದೇನು ಮಾಡಬೇಕೆಂಬುದನ್ನು ತಿಳಿಸಲಿ ಎಂದರು.

ಸಿಎಂ ಆದೇಶಕ್ಕೂ ಡೋಂಟ್‌ ಕೇರ್‌: ಬಿಡಿಎ ಸಗಟು ಸೈಟ್‌ ಹಂಚಿಕೆಗೆ ತರಾತುರಿ

ಸೈಟ್‌ ಮಾರಲು ಇವರೇ ಬೇಕಾ?:

ಕೆಂಪೇಗೌಡ, ಅರ್ಕಾವತಿ ಬಡಾವಣೆ ಯೋಜನೆಗಳು ಇಂದಿಗೂ ಪೂರ್ಣಗೊಂಡಿಲ್ಲ. ರೈತರಿಗೆ ಪರಿಹಾರ, ನಿವೇಶನ ಹಂಚಿಕೆಯೂ ಪೂರ್ಣಗೊಂಡಿಲ್ಲ. ಈ ಬಗ್ಗೆ ಆಯುಕ್ತರು ರೈತರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಬೇಕು. ಅದು ಬಿಟ್ಟು ಎಸಿ ರೂಮ್‌ನಲ್ಲಿ ಕುಳಿತು ಕೆಲಸ ಮಾಡುವುದಕ್ಕೆ ಇವರೇ ಬೇಕಾ, ಸಿಎ ನಿವೇಶನಗಳನ್ನು ಮಾರಾಟ ಮಾಡಿ ಬಿಡಿಎ ನಡೆಸಲು ಇವರೇ ಬೇಕಾ ಎಂದು ಸೋಮಶೇಖರ್‌ ವ್ಯಂಗ್ಯವಾಡಿದರು.

ಇಂತಹ ಅಹಂಕಾರಿ ಬಿಡಿಎನಲ್ಲಿ ಇರಬಾರ್ದು

ಈಗಿನ ಆಯುಕ್ತರಿಗೆ ಸೌಜನ್ಯವೇ ಇಲ್ಲ. ಬಿಡಿಎ ಆಯುಕ್ತರ ನಡೆ ಕುರಿತು ಬಜೆಟ್‌ ಸಭೆಯ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಮಾತನಾಡುತ್ತೇನೆ. ಇಂತಹ ಅಹಂಕಾರದ ಅಧಿಕಾರಿ ಬಿಡಿಎನಲ್ಲಿ ಇರಬಾರದು. ಆಯುಕ್ತರ ಬದಲಾವಣೆ ಮಾಡಬೇಕಾ ಅಥವಾ ಬಿಡಬೇಕಾ ಎಂಬುದು ಮುಖ್ಯಮಂತ್ರಿಗಳಿಗೆ ಬಿಟ್ಟವಿಚಾರ ಎಂದು ಹೇಳಿದರು.
 

click me!